ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ ಎಕ್ಸ್‌ ಫ್ಯಾಕ್ಟರ್‌’ನಲ್ಲಿ ಮತ್ತೆ ನಿಕೋಲೆ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಜನಪ್ರಿಯ ಟೀವಿ ಷೋ ‘ದ ಎಕ್ಸ್‌ ಫ್ಯಾಕ್ಟರ್‌’ನಲ್ಲಿ ಹಾಲಿವುಡ್‌ನ ಖ್ಯಾತ ಗಾಯಕಿ ನಿಕೋಲೆ ಸ್ಕೇರ್‌ಜಿಂಗರ್‌ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಆಯೋಜಕರು ಮತ್ತು ಗಾಯಕಿಯ ಮಧ್ಯ ಬಹುಕೋಟಿ ಮೌಲ್ಯದ ಒಪ್ಪಂದವೂ ಆಗಿದೆ.

‘ಟೀವಿ ಷೋಗೆ ನಿಕೋಲೆ ಮಹತ್ವದ ಆಕರ್ಷಣೆಯಾಗಿದ್ದು, ಅವರು ಮರಳಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೆಲಸದ ಬಗೆಗೆ ಅವರಿಗಿರುವ ಬದ್ಧತೆಯೂ ನಮಗೆ ಅಷ್ಟೇ ಮುಖ್ಯವಾಗಿದೆ’ ಎಂದು ‘ದ ಎಕ್ಸ್‌ ಫ್ಯಾಕ್ಟರ್‌’ ತಂಡ ಹೇಳಿಕೊಂಡಿದೆ.

‘ಈ ವರ್ಷದ ಈ ಷೋ ತನ್ನ ಹಳೆಯ ಜನಪ್ರಿಯತೆಯನ್ನು ಗಳಿಸಿಕೊಂಡು ಮುಂಚೂಣಿಗೆ ಬರಬೇಕು. ಈ ಯಶಸ್ಸು ಸಾಧಿಸುವ ಕಾರ್ಯತಂತ್ರದಲ್ಲಿ ನಿಕೋಲೆ ಅವರ ಪಾತ್ರ ಬಹಳ ಮಹತ್ವದ್ದು’ ಎಂದು ಷೋ ಮುಖ್ಯಸ್ಥರು ಹೇಳಿದ್ದಾರೆ.

2010ರಲ್ಲಿ ಇದೇ ಷೋನಲ್ಲಿ ನಿಕೋಲೆ ಅತಿಥಿ ನಿರ್ಣಾಯಕಿಯಾಗಿ ಪಾಲ್ಗೊಂಡಿದ್ದರು. 2012ರಲ್ಲಿ ಮತ್ತೆ ಕಾಯಂ ನಿರ್ಣಾಯಕರ ಸಾಲಿನಲ್ಲಿ ಕೂತಿದ್ದರು. ಈ ವರ್ಷ ಮತ್ತೆ ‘ದ ಎಕ್ಸ್‌ ಫ್ಯಾಕ್ಟರ್‌’ನ ಭಾಗವಾಗಿರುವ ನಿಕೋಲೆ, ಷೋ ಯಶಸ್ವಿಯಾಗಲು ಕಾರಣರಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಬರಹಗಾರ್ತಿ, ನಟಿ, ಗಾಯಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವ ಅಮೇರಿಕಾದ ನಿಕೋಲೆ ಅವರು ಅನೇಕ ಕಿರುತೆರೆ ಸ್ಫರ್ಧೆಗಳಲ್ಲಿ ಗೆದ್ದು ಪ್ರವರ್ಧಮಾನಕ್ಕೆ ಬಂದವರು.

ಮೊದಲು ಅಮೆರಿಕದ ಬ್ಯಾಂಡ್‌ ಒಂದರಲ್ಲಿ ಗಾಯಕಿಯಾಗಿದ್ದ ಅವರು 2011ರಲ್ಲಿ ‘ಕಿಲ್ಲರ್‌ ಲವ್‌’ ಎಂಬ ಆಲ್ಬಂ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದರು. 2014ರಲ್ಲಿ ಬಿಡುಗಡೆಯಾದ ‘ಬಿಗ್‌ ಫ್ಯಾಟ್‌ ಲೈ’ ಆಲ್ಬಂ ಕೂಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT