ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂದನವನ’ದ ನಿಜಸ್ವರೂಪ

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕಳೆದ ಹನ್ನೆರಡು ವರ್ಷಗಳಿಂದ ‘ಗುಜರಾತ್ ಮಾಡೆಲ್’ ಎನ್ನುವ ಉಸಿರುಗಟ್ಟಿಸುವ ಕುಲುಮೆಯಲ್ಲಿ ಬೆಂದುಹೋದ ಗುಜರಾತ್ ರಾಜ್ಯವು ಒಂದು ‘ನಂದನವನ’ ಎನ್ನುವ ಹೈಪ್‌ನ ಅಡಿಯಲ್ಲಿ ವಾಸ್ತವದಿಂದ ವಿಮುಖವಾಗಿ ಕಣ್ಣುಪಟ್ಟಿ ಕಟ್ಟಿಕೊಂಡು ಬಸವಳಿದಿದೆ. 

ಗಗನಚುಂಬಿ ಕಟ್ಟಡಗಳು, ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ಅಭಿವೃದ್ಧಿ ಎಂದು, ಬಂಡವಾಳ ಹೂಡಿಕೆಯನ್ನು ಒಂದು ಬ್ರ್ಯಾಂಡ್ ಎನ್ನುವಂತೆ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮಾರ್ಕೆಟಿಂಗ್ ಮಾಡುತ್ತಿದ್ದರೆ  ಅದನ್ನು ಯುವ ಸಮೂಹ, ಮಧ್ಯಮ ವರ್ಗ ಬೆರಗುಗಣ್ಣಿನಿಂದ ನೋಡುತ್ತಾ ಮೆಚ್ಚುಗೆ ಸೂಚಿಸಿತು.

ಆದರೆ ಅಲ್ಲಿನ ಕೃಷಿ ವಲಯ,  ಅಲ್ಪಸಂಖ್ಯಾತರು ಹಾಗೂ ತಳ ಸಮುದಾಯಗಳೊಂದಿಗೆ ಈ ಹೂಡಿಕೆಯ ಬ್ರ್ಯಾಂಡ್ ಎನ್ನುವ ಬಂಡವಾಳಶಾಹಿ ಭೌತಿಕ ಸರಕುಗಳು ಯಾವುದೇ ಬಗೆಯಲ್ಲಿ ಸಾಂಗತ್ಯ ಸಾಧಿಸುವಲ್ಲಿ ವಿಫಲಗೊಂಡು ಇಡೀ ಅಭಿವೃದ್ಧಿ ಎನ್ನುವ ಪ್ರಕ್ರಿಯೆ ಒಂದು ರುದ್ರ ಪ್ರಹಸನದಂತಿತ್ತು.

ಗುಜರಾತ್‌ನಲ್ಲಿ  ಎಲ್ಲವೂ ಸರಿಯಿದೆ ಎಂಬ ಪ್ರಚಾರದ ಅಬ್ಬರದ ಪರದೆಯ ಹಿಂದೆ, ಯಾವುದೂ ಸರಿ ಇಲ್ಲ ಎಂದು ಪಾಟೀದಾರರ (ಪಟೇಲ್‌ ಸಮುದಾಯ) ಮೀಸಲಾತಿ ‘ಪರ’ವಾದ ಹೋರಾಟದಿಂದ ಬಯಲಾಗುತ್ತಿದೆ. ಕಳೆದ 12 ವರ್ಷಗಳಲ್ಲಿ ಅಲ್ಲಿನ ಕೃಷಿ ವಲಯದಲ್ಲಿ ಶೇಕಡ 8ರಷ್ಟು ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ತೋರಿಸುತ್ತಿದ್ದರೂ ಈ ಏರಿಕೆಯು ಶೇಕಡ 50ಕ್ಕಿಂತಲೂ ಹೆಚ್ಚಿರುವ ಸಣ್ಣ, ಅತಿಸಣ್ಣ ಕೃಷಿ ಹಿಡುವಳಿದಾರರನ್ನು, ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕೂಲಿ  ಕಾರ್ಮಿಕರನ್ನು ಒಳಗೊಂಡಿಲ್ಲ. ಅವರು ಬಡತನದಿಂದ, ಸಾಲದಿಂದ ಕುಸಿದು ಹೋಗಿದ್ದಾರೆ. ಇವರಲ್ಲಿ  ಮೇಲ್ಜಾತಿಯ ಪಾಟೀದಾರರು ಸಹ ಇರುವುದು ವಿಶೇಷ.

ಕೆಲವು ವರ್ಷಗಳಿಂದ ಗುಜರಾತ್‌ನ ವಿಖ್ಯಾತ ವಜ್ರ ವ್ಯಾಪಾರವೂ  ಸಂಕಷ್ಟದಲ್ಲಿದೆ. ವ್ಯವಹಾರದಲ್ಲಿನ ಕುಸಿತದಿಂದಾಗಿ ನೂರಾರು ವಜ್ರ ಕೈಗಾರಿಕೆಗಳ ಬಾಗಿಲು ಬಂದ್‌ ಆಗಿದೆ.  ಇದರಿಂದ ಲಕ್ಷಾಂತರ ಕುಶಲ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ ಮತ್ತು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇಡೀ ಗುಜರಾತ್‌ನ ಆರ್ಥಿಕತೆಯು ಈ ಉತ್ಪಾದನಾ ವಲಯದ ಮೇಲೆ ಅವಲಂಬಿತವಾಗಿತ್ತು. ಇಂದು ಈ ಉತ್ಪಾದನಾ ವಲಯವೂ ದಿವಾಳಿಯಾಗುತ್ತಿದೆ. ದಿನಗೂಲಿಯನ್ನು ಅರಸಿಕೊಂಡು ನಗರಕ್ಕೆ ವಲಸೆ ಬರುವವರ ಸಂಖ್ಯೆ ಏರುಮುಖದಲ್ಲಿದೆ.

ಆದರೆ ನಗರಗಳಲ್ಲಿ, ಪಟ್ಟಣಗಳಲ್ಲಿ ನಿರುದ್ಯೋಗದ ಭೀತಿ ಎದುರಾಗಿದೆ. ಆರ್ಥಿಕ ಅಸಮಾನತೆಗೆ ಕಾರಣವಾದ ಹುಸಿಯಾದ ಈ ಗುಜರಾತ್ ಮಾಡೆಲ್ ಅನ್ನು ಪ್ರಶ್ನಿಸಿದವರನ್ನು ಹಿಂದೂ ವಿರೋಧಿಗಳೆಂದು ಹಣೆಪಟ್ಟಿ ಕಟ್ಟಲಾಯಿತು. ಒಟ್ಟಿನಲ್ಲಿ ಪಾಳುಬಿದ್ದ ಈ ಮಾದರಿಯ ನಂದನವನದ ವೈಭವೀಕರಣಕ್ಕೆ ಯಾವುದೇ ಸಾಕ್ಷಿಗಳಿಲ್ಲದ ಗುಜರಾತ್‌ಗೆ ಇಂದು ದಿಢೀರನೆ 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಎನ್ನುವ ಯುವಕ ಹೊಸ ಸಾಕ್ಷಿಯಂತಿದ್ದಾರೆ.

ಸಾಂಸ್ಕೃತಿಕವಾಗಿ, ವೈಚಾರಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿದ ಗುಜರಾತ್‌ನಲ್ಲಿ ಶತಮಾನಗಳಿಂದ ದುಡ್ಡು–ಕಾಸು, ಗೌರವ–ಮರ್ಯಾದೆ ಕಂಡ, ಶ್ರೇಣಿಕೃತ ವ್ಯವಸ್ಥೆಯಲ್ಲಿ ಮೇಲಿನ ಸ್ತರದಲ್ಲಿರುವ ಬಲಾಢ್ಯ ಪಟೇಲ್ ಸಮುದಾಯಕ್ಕೆ ಹಠಾತ್ತನೆ ನೇತಾರನಾಗಿರುವ ಹಾರ್ದಿಕ್ ಪಟೇಲ್, ಪಾಟೀದಾರ್ ಸಮುದಾಯಕ್ಕೆ ಇಂದು ಹಿಂದುಳಿದವರಾಗಲು ಕರೆ ಕೊಟ್ಟಿದ್ದಾರೆ. ಈ ಪಾಟೀದಾರರು ಅಥವಾ ಪಟೇಲ್ ಸಮುದಾಯವು ‘ನಮಗೆ ಮೀಸಲಾತಿ ಕೊಡಿ, ಇಲ್ಲವೇ ಈಗಿರುವ ಮೀಸಲಾತಿಯನ್ನು ರದ್ದುಪಡಿಸಿ’ ಎಂದು ಕೂಗು ಎಬ್ಬಿಸಿದೆ. ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಪಡಿಸಿ, ಆರ್ಥಿಕ ಆಧಾರಿತ ಮೀಸಲಾತಿಯನ್ನು ಜಾರಿಗೆ ತನ್ನಿ ಎನ್ನುವ ಬೇಡಿಕೆಗಳ ಮೂಲಕ ಮೀಸಲಾತಿ ವಿರೋಧಿ ಚಳವಳಿಗೆ ಹೊಸ ನೆಲೆಯನ್ನು ಒದಗಿಸಿಕೊಟ್ಟಿದೆ.

ಗುಜರಾತ್‌ನ ಪಾಟೀದಾರರ ಈ ಜಾತಿ ಆಧಾರಿತ ಮೀಸಲಾತಿ ವಿರೋಧಿ ಚಳವಳಿ ಇಲ್ಲಿನ ಬಲಿಷ್ಠ ಜಾತಿಗಳಿಗೆ ವರವಾಗಿ ಪರಿಣಮಿಸಿದೆ. ಪಟೇಲರ ಈ ಬೇಡಿಕೆಯನ್ನು ವಿರೋಧಿಸುವ ನೆಪದಲ್ಲಿ ಇಂಡಿಯಾದ ಮಧ್ಯಮ ವರ್ಗಗಳು ಮತ್ತು ಮೇಲ್ಜಾತಿಗಳು  ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಎಂದು ಪ್ರಚಾರ ಆರಂಭಿಸಿವೆ. ಈ ಸಂದರ್ಭದ  ದುರ್ಲಾಭ ಪಡೆದು  ಸಮಾನತೆ ಆಶಯದ ವಿರುದ್ಧದ ಕಿಡಿಗಳನ್ನು ಬಿತ್ತತೊಡಗಿವೆ. ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿ ಸ್ಥಾನದಿಂದ  ಭಾರತದ ಪ್ರಧಾನಮಂತ್ರಿಯಾಗಲು ಗುಜರಾತ್ ರಾಜ್ಯ ಅಪಾರವಾದ ಬೆಲೆಯನ್ನು ತೆರಬೇಕಾಯಿತು.

ಆ ರಾಜ್ಯ ಕಳೆದ  15 ವರ್ಷಗಳಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಂತ ಹಂತವಾಗಿ ಕುಸಿಯತೊಡಗಿರುವುದಕ್ಕೆ ಈ ಪಾಟೀದಾರರ ಚಳವಳಿ ಜೀವಂತ ಸಾಕ್ಷಿಯಾಗಿದೆ. ಹಸಿದವರ ಮುಂದಿರುವ ತಟ್ಟೆಯನ್ನು ಕಸಿದುಕೊಳ್ಳುವ ಈ ಹಾರ್ದಿಕ್ ಪಟೇಲ್ ಮಾದರಿಯ ಪ್ರತಿಗಾಮಿ ಗುಂಪುಗಳು ‘ವೈಬ್ರಂಟ್ ಗುಜರಾತ್’ ಎನ್ನುವ ಮೋದಿಯವರ ರೆಡಿಮೇಡ್ ಬ್ರ್ಯಾಂಡ್‌ನ ಒಡಲೊಳಗಿಂದ ಹುಟ್ಟಿಕೊಂಡಿವೆ.

ಆದರೆ ಈ ‘ವೈಬ್ರಂಟ್ ಗುಜರಾತ್’ ಎನ್ನುವ ಕಣ್ಕಟ್ಟಿನ ಬ್ರ್ಯಾಂಡ್‌ ಅನ್ನು ಇಡೀ ಭಾರತಕ್ಕೆ ಅನ್ವಯಿಸಲು ಮೋದಿ  ಮತ್ತು ಆರ್‌ಎಸ್‌ಎಸ್‌ನವರು  ಮುಂದಾಗಿದ್ದಾರೆ. ಅಂದರೆ ಮೋದಿಯವರ ವೈಬ್ರಂಟ್ ಭಾರತದಲ್ಲಿ ತಳ ಸಮುದಾಯಗಳು ತಮ್ಮ ಎಲ್ಲಾ ಹಕ್ಕುಗಳಿಂದ ವಂಚಿತವಾಗುವ  ಮತ್ತು ದಿನನಿತ್ಯ ವಿಡಂಬನೆಯ ಸರಕಾಗುವ ಸಾಧ್ಯತೆಗಳು ಗೋಚರಿಸತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT