ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕ್ಕು–ನಲಿ’ಯುವ ರಂಗದಾರಿ

ಅಂಕದ ಪರದೆ
Last Updated 30 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಟೆಲಿವಿಷನ್‌ನಲ್ಲಿ ಮೂಡಿಬರುತ್ತಿದ್ದ ಹಾಸ್ಯ ಕಾರ್ಯಕ್ರಮಗಳ ಸ್ಫೂರ್ತಿಯಿಂದ ಒಡಮೂಡಿದ ಹಾಸ್ಯ ಬರಹ ಒಂದೆಡೆಯಾದರೆ, ನಾಟಕದ ಮೇಲಿನ ಒಲವು ಮತ್ತೊಂದೆಡೆ. ಇವನ್ನು ಒಗ್ಗೂಡಿಸಿ ಏನಾದರೂ ಸಾಧಿಸಬೇಕೆನ್ನುವ ಹೆಬ್ಬಯಕೆಯಿಂದ ರೂಪತಳೆದದ್ದು ‘ನಕ್ಕು–ನಲಿ’ ಹವ್ಯಾಸಿ ರಂಗತಂಡ.

ಯುವಕರ ಗುಂಪೇ ರಂಗತಂಡ ಕಟ್ಟುವ ಕನಸು ಕಾಣುವ ಈ ದಿನಗಳಲ್ಲಿ ಯುವತ್ವದ ಪರಿಧಿ ದಾಟಿದವರ ಬಳಗವೊಂದು ತಂಡ ಕಟ್ಟಿ ನಾಟಕಗಳನ್ನು ಪದರ್ಶಿಸುತ್ತಿರುವುದು ಸವಾಲಿನ ವಿಷಯವೇ ಸರಿ.

ನಾಟಕ, ಹಾಸ್ಯ ಬರಹದ ಗೀಳು ಬೆಳೆಯುತ್ತಲೇ ನಾಗವೇಣಿ ರಂಗನ್‌ ಅವರು ಐದು ವರ್ಷಗಳ ಹಿಂದೆ ಈ ರಂಗತಂಡವನ್ನು ಪ್ರಾರಂಭಿಸಿದರು. ಅದಕ್ಕೆ ಸಾಥ್ ನೀಡಿದವರು ಪ್ರೇಮಾ ಶ್ರೀನಿವಾಸನ್‌, ಲಕ್ಷ್ಮೀ ಶ್ರೀನಿವಾಸನ್‌, ಶೋಭಾ ಮಹೇಶ್‌, ವಿಜಯ್‌ ಭರ್ತೂರ್‌, ಶ್ರೀಧರ್‌, ಪಲ್ಲವಿ, ಲಕ್ಷ್ಮೀ ಗಂಗಾಧರ್‌ ಹಾಗೂ ಮತ್ತಿತರರು.

ಮಲೆನಾಡಿನಲ್ಲಿ ಹುಟ್ಟಿ ಬೆಳೆದು, ಮದುವೆಯಾಗಿ ಮೈಸೂರಿಗೆ ಸೇರಿದ ನಾಗವೇಣಿ ಅವರು ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುತ್ತಾ ಓದಿನಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದರು. ಇವರಿಗೆ ಆಗಿನಿಂದಲೂ ಹಾಸ್ಯ ಬರಹಗಳಲ್ಲಿ ಒಲವಿತ್ತು. ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಈ ಒಲವು ಹೊರಬಂದದ್ದು ನಿವೃತ್ತಿಯ ನಂತರ.

ಸದ್ಯ ಈ ರಂಗತಂಡದಲ್ಲಿ ನಾಟಕ ಬರಹ, ನಿರ್ದೇಶನ, ರಂಗ ತಾಲೀಮು ಹೀಗೆ ಎಲ್ಲವನ್ನೂ ನಿರ್ವಹಿಸುತ್ತಿರುವುದು ನಾಗವೇಣಿಯವರೇ.
ಕೆಲವೇ ಗಂಟೆಗಳಲ್ಲಿ ರಚಿಸಿ ಪ್ರದರ್ಶಿಸಿದ ‘ಅಪ್ಲಿಕೇಶನ್‌ ಅವಾಂತರ’ ಹಾಸ್ಯ ನಾಟಕ ನಕ್ಕು–ನಲಿ ತಂಡದ ಮೊದಲ ಪ್ರದರ್ಶನ. ಈ ನಾಟಕದಿಂದ ದೊರೆತ ಮನ್ನಣೆ, ಪ್ರೇಕ್ಷಕರ ಪ್ರೋತ್ಸಾಹ ಹಾಸ್ಯ ನಾಟಕಗಳನ್ನೇ ಮಾಡಲು ಪ್ರೇರಣೆಯಾಯಿತು.

ಕಲಾವಿದರ ನಿರ್ವಹಣೆ
ಈ ಹವ್ಯಾಸಿ ರಂಗ ತಂಡದಲ್ಲಿ 10  ಮಂದಿ ಶಾಶ್ವತ ಸದಸ್ಯರು ಇದ್ದಾರೆ. ಇನ್ನೂ ಕೆಲವರು ಅವಶ್ಯವಿದ್ದಾಗ ಸೇರ್ಪಡೆಗೊಳ್ಳುತ್ತಾರೆ. ಹೀಗೆ ಕಲಾ ಆಸಕ್ತಿಯಿರುವ ಅನೇಕರು ಈ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ‘ರಂಗತಂಡವೊಂದನ್ನು ರೂಪಿಸಿ ನಡೆಸುವುದು ನಿಜಕ್ಕೂ ಸವಾಲು ಎನ್ನಿಸಿತ್ತು. ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವವರನ್ನು ಒಗ್ಗೂಡಿಸಿ ನಾಟಕ ತಂಡವೊಂದನ್ನು ರಚಿಸುವುದು ನಿಜಕ್ಕೂ ಸಾಹಸ. ಆದರೆ ಸಮಾನ ಮನಸ್ಕರು ನನ್ನೊಂದಿಗಿದ್ದಿದ್ದರಿಂದ  ಅಷ್ಟು ಕಷ್ಟವೆನಿಸಲಿಲ್ಲ. ಇದನ್ನು ಇನ್ನೂ ಉತ್ತಮ ತಂಡವನ್ನಾಗಿಸುವಲ್ಲಿ ಮಾತ್ರ ಸವಾಲಿದೆ’ ಎನ್ನುತ್ತಾರೆ ತಂಡ ಕಟ್ಟಿದ ನಾಗವೇಣಿ.

ಎಲ್ಲೆಲ್ಲಿ ಪ್ರದರ್ಶನ
ರಂಗಭೂಮಿ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಈ ತಂಡ ಇದುವರೆಗೂ ನಾಟಕಗಳನ್ನು ಪ್ರದರ್ಶಿಸಿದ್ದು ಮಹಿಳಾ ಕ್ಲಬ್‌, ಶಿಬಿರ, ಖಾಸಗಿ ಕೌಟಂಬಿಕ ಕಾರ್ಯಕ್ರಮಗಳಲ್ಲಿ. ‘ಇಲ್ಲಿಯವರೆಗೂ ನಾವು ಮಾಡಿದ್ದೆಲ್ಲ ಉಚಿತ ಪ್ರದರ್ಶನವೇ. ನಮ್ಮ ಕಾರ್ಯಕ್ರಮದಲ್ಲಿ ನಿಮ್ಮದೊಂದು ನಾಟಕ ಪ್ರದರ್ಶಿಸಬೇಕು ಎಂದು ಸ್ನೇಹಿತರು ಕೇಳಿಕೊಂಡಾಗ ಹೊಸದೊಂದು ನಾಟಕ ಬರೆದು, ಅದನ್ನು ಪ್ರದರ್ಶಿಸುತ್ತೇವೆ’ ಎನ್ನುತ್ತಾರೆ ನಾಗವೇಣಿ.

ಆಸಕ್ತರಿಗೆ ಅವಕಾಶ
‘ರಂಗ ಚಟುವಟಿಕೆಗಳ ಬಗ್ಗೆ ಪೂರ್ಣ ತಿಳಿವಳಿಕೆ ಇಲ್ಲದ, ಆಸಕ್ತಿ ಇರುವವರಿಗೆ ನಮ್ಮೊಂದಿಗೆ ತೊಡಗಲು ಅವಕಾಶ ಇದ್ದೇ ಇರುತ್ತದೆ. ಪ್ರದರ್ಶನ ನೋಡಿ ತಂಡ ಸೇರುತ್ತೇವೆ ಎನ್ನುವವರಿಗೆ ತಂಡದ ಬಾಗಿಲು ಸದಾ ತೆರದಿರುತ್ತದೆ. ನಟನೆ ಬಾರದವರೂ ಸುಲಭವಾಗಿ ಅಭಿನಯಿಸುವಂತಹ ನಾಟಕ ರಚಿಸುವುದರಿಂದ ಅನೇಕರು ತಂಡ ಸೇರಲು ಇಚ್ಛಿಸುತ್ತಾರೆ’ ಎಂದು ಅವರು ವಿವರಿಸುತ್ತಾರೆ. ‘ಇಂದು ರಂಗಭೂಮಿಗೆ ಹೊಸಬರು ಬರುತ್ತಿರುವುದರಿಂದ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಿವೆ. ಬೆಂಗಳೂರಿನಲ್ಲಿ ರಂಗಭೂಮಿ ಆಸಕ್ತರ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ನಾಗವೇಣಿ.

ಪ್ರಯೋಗಾತ್ಮಕ ನಾಟಕಗಳು
ಕೇವಲ 10 ನಿಮಿಷಕ್ಕೆ ನಾಟಕ ರಚಿಸಿದ ಹೆಮ್ಮೆ ಈ ತಂಡಕ್ಕಿದೆ. ಎಷ್ಟು ಸಮಯವಿದೆಯೋ ಅಷ್ಟಕ್ಕೇ ಅನುಗುಣವಾಗಿ ಈ ತಂಡ ನಾಟಕ ಪ್ರದರ್ಶಿಸುತ್ತದೆ. ‘ನಮ್ಮ ಮಟ್ಟಿಗೆ ಇದು ಪ್ರಯೋಗಾತ್ಮಕವೇ’  ಎನ್ನುವ ನಾಗವೇಣಿ ಅವರಿಗೆ ಹಾಸ್ಯ ನಾಟಕಗಳನ್ನೇ ಹೆಚ್ಚು ಪ್ರದರ್ಶಿಸಬೇಕೆಂಬ ಹಂಬಲವಿದೆ. ‘ನಕ್ಕು–ನಲಿ ಎಂದು ಹೆಸರಿಟ್ಟು ಅಳಿಸುವುದಕ್ಕೇ ಸಾಧ್ಯವೇ’ ಎನ್ನುವುದು ಅವರ ಪ್ರಶ್ನೆ.
ನಾಟಕಗಳು
*ಅಪ್ಲಿಕೇಶನ್‌ ಅವಾಂತರ
*ಅಬ್ದುಲ್ಲ ಬಂದ್ರು
*ರಾಜೀ ರಾಮಾಯಣ
*ವರಲಕ್ಷ್ಮೀ ಅವಾಂತರ
*ಪುಟ್ನಂಜಿ ತಾಪತ್ರಯ
*ಹಲೋ ಏನ್ರಿ ಸಮಾಚಾರ
***
ಹಾಸ್ಯ ನಾಟಕ ತಂಡದಲ್ಲಿ ಪಾಲ್ಗೊಳ್ಳುವ ಖುಷಿ
ವರ್ಷಕ್ಕೊಮ್ಮೆ ನಾವು ಕುಟುಂಬದವರೆಲ್ಲ ಸೇರುತ್ತೇವೆ. ಆಗ ನಾಗವೇಣಿ ಅವರು ಬರೆದ ಹಾಸ್ಯ ಬರಹಗಳನ್ನು ರಂಗಭೂಮಿಗೆ ಅಳವಡಿಸಿ ಪ್ರದರ್ಶಿಸುವ ಆಲೋಚನೆ ಮೂಡಿತು. ಅಲ್ಲಿಂದ ನಮ್ಮ ರಂಗಪಯಣ ಪ್ರಾರಂಭವಾಯಿತು. ‘ಕಲಾ ಗಂಗೋತ್ರಿ’ ಹವ್ಯಾಸಿ ರಂಗತಂಡದಲ್ಲಿ ನಿರತನಾಗಿದ್ದ ನನಗೆ ಹೊಸ­ದೊಂದು ಹಾಸ್ಯ ನಾಟಕ ತಂಡದಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿ ನೀಡಿದೆ. ಇಲ್ಲಿಯವರೆಗೆ ಇದು ನಿರ್ವಿಘ್ನವಾಗಿ ಮೂಡಿ ಬಂದಿದೆ. ಎಲ್ಲರೂ ಸೇರಿ ಇದನ್ನು ಒಂದು ಬಲಾಢ್ಯ ತಂಡವನ್ನಾಗಿಸುವ ಹಂಬಲವಿದೆ.
ವಿಜಯ ಭರ್ತೂರ್‌, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT