ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಟನೆಯೇ ನನ್ನ ಧರ್ಮ’

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ನೀಳಕಾಯ, ಹಾಲುಬೆಳದಿಂಗಳಂಥ ಮೈಬಣ್ಣ, ಮೋಡಿ ಮಾಡುವ ಮೋಹಕ ನಗುವಿನ ಒಡತಿ ಕಾಜಲ್‌ ಅಗರ್‌ವಾಲ್‌. ತೆಲುಗು– ತಮಿಳು ಸಿನಿಮಾಗಳ ಮೂಲಕ ಚಿತ್ರರಂಗದ ಆಕಾಶದಲ್ಲಿ ಬೆಳಗತೊಡಗಿದ ಈ ತಾರೆ ಬಾಲಿವುಡ್‌ ಅಂಗಳದಲ್ಲಿಯೂ ಗಂಧ ಚೆಲ್ಲಿದೆ. ಮುಂಬೈ ಮೂಲದ ಈ ಬೆಡಗಿಯ ಜನಪ್ರಿಯತೆ ಉತ್ತುಂಗಕ್ಕೆ ಏರಿದ್ದು ಮಾತ್ರ ದಕ್ಷಿಣ ಭಾರತದ ಸಿನಿಮಾಗಳ ಮೂಲಕ. ಈ ವರ್ಷದ ‘ಫೆಮಿನಾ ಪವರ್‌ಲಿಸ್ಟ್‌ ಸೌತ್‌ 2016’ಗೆ ಆಯ್ಕೆಯಾಗಿರುವ ಕಾಜಲ್‌, ಪುರಸ್ಕಾರ ಪಡೆಯಲು ನಗರಕ್ಕೆ ಬಂದಿದ್ದರು. ಈ ಸಂದರ್ಭ ಅವರೊಂದಿಗೆ ನಡೆಸಿದ ಮಾತುಕತೆಯ ವಿವರ ಇಲ್ಲಿದೆ.

* ಫೆಮಿನಾ ಪವರ್‌ಲಿಸ್ಟ್‌ಗೆ ಆಯ್ಕೆಯಾಗಿರುವ ಬಗ್ಗೆ ಏನನಿಸುತ್ತದೆ?
ತುಂಬ ಸಂತೋಷವಾಗಿದೆ. ಇದು ದೊಡ್ಡ ಗೌರವ. ಈ ಖುಷಿಯ ಜತೆಗೆ ನನ್ನ ಜವಾಬ್ದಾರಿಯೂ ಹೆಚ್ಚಿದೆ.

* ‘ಪವರ್‌’ ಅನ್ನುವುದನ್ನು ನೀವು ಹೇಗೆ ಅರ್ಥೈಸುತ್ತೀರಿ?
ಒಳ್ಳೆಯ ವಿಷಯಗಳಿಗಾಗಿ ಜನರನ್ನು ಪ್ರಭಾವಿಸುವ ಸಾಮರ್ಥ್ಯವೇ ‘ಪವರ್‌’. ಕೇವಲ ಪವರ್‌ ಇದ್ದರಷ್ಟೇ ಸಾಲದು. ಅದನ್ನು ಸಮಾಜಕ್ಕೆ ಉಪಯೋಗಕಾರಿಯಾಗಿ ಬಳಸುವ ವಿವೇಚನೆಯೂ ಅವಶ್ಯ.

* ನಿಮ್ಮ ದೃಷ್ಟಿಯಲ್ಲಿ ಫೆಮಿನಿಸಂ (ಮಹಿಳಾವಾದ) ಅಂದರೇನು?
ನನ್ನ ಮಟ್ಟಿಗೆ ನನ್ನ ಇರುವಿಕೆಯೇ ಫೆಮಿನಿಸಂ. ಹೆಣ್ಣಾಗಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹೆಣ್ಣು ಮತ್ತು ಗಂಡಿನ ಸಮಾನತೆಯ ಪ್ರತಿಪಾದನೆಯೇ ಫೆಮಿನಿಸಂ. ಅವರಿಬ್ಬರೂ ಪರಸ್ಪರ ಗೌರವ ಇರಿಸಿಕೊಂಡು ಬದುಕುವ ಮುಕ್ತ ವಾತಾವರಣ ಕಲ್ಪಿಸುವುದು ಮಹಿಳಾವಾದದ ಮುಖ್ಯ ಉದ್ದೇಶ.

* ದಕ್ಷಿಣ ಭಾರತದ ಅನೇಕ ನಟಿಯರು ಬಣ್ಣದ ಬದುಕನ್ನು ರೂಪಿಸಿಕೊಳ್ಳಲು ಮುಂಬೈಗೆ ಹೋಗುತ್ತಾರೆ. ಆದರೆ ನೀವು ಮುಂಬೈನಿಂದ ಬಂದು ದಕ್ಷಿಣ ಭಾರತದಲ್ಲಿ ನೆಲೆ ನಿಂತಿದ್ದೀರಾ..
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಹೃದಯದಿಂದ ದಕ್ಷಿಣ ಭಾರತೀಯಳೇ ಆಗಿದ್ದೇನೆ. ನಾನು ಹುಟ್ಟಿದ್ದು ಪಂಜಾಬಿ ಕುಟುಂಬದಲ್ಲಿ. ಬೆಳದಿದ್ದು ಮುಂಬೈನಲ್ಲಿ. ಆದರೆ ಇಲ್ಲಿನ (ದಕ್ಷಿಣ ಭಾರತದ) ಸಂಸ್ಕೃತಿ– ಸಂಪ್ರದಾಯ, ಜೀವನ ಶೈಲಿಗೆ ಒಗ್ಗಿಹೋಗಿದ್ದೇನೆ.

* ಇತ್ತೀಚೆಗೆ ತೆರೆಕಂಡ ‘ದೋ ಲಪ್ಜೋಂಕಿ ಕಹಾನಿ’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ನಟಿಯಾಗಿ ಯಶಸ್ಸು ಮತ್ತು ಸೋಲುಗಳನ್ನು ಹೇಗೆ ಸ್ವೀಕರಿಸುತ್ತೀರಿ?
ಈ ಸಿನಿಮಾದ ಸೋಲನ್ನು ಯಾವುದೇ ಬೇಸರವಿಲ್ಲದೆ ಸ್ವೀಕರಿಸಿದ್ದೇನೆ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಖಂಡಿತ ಬೇಸರವಾಗಿದೆ. ಆದರೆ ಆ ಸೋಲನ್ನೇ ನೆನಪಿಸಿಕೊಂಡು ಕೂಡಲು ಸಾಧ್ಯವಿಲ್ಲ. ಸದ್ಯಕ್ಕೆ ಯಾವ ಸಿನಿಮಾ ಮಾಡುತ್ತಿದ್ದೇನೆಯೋ ಅದರ ಮೇಲೆ ನನ್ನ ಗಮನವಿದೆ. ಪರಿಶ್ರಮವಹಿಸಿ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ಸೋಲು–ಗೆಲುವುಗಳನ್ನು ಅತಿಯಾಗಿ ಮನಸ್ಸಿಗೆ ತೆಗೆದುಕೊಳ್ಳಬಾರದು ಎಂಬುದು ನನ್ನ ನಂಬಿಕೆ.

* ನಟಿಯಾಗಿ ಪಳಗಲು ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಎಷ್ಟು ಅವಶ್ಯ?
ಸಿದ್ಧ ಮಾದರಿಗಳನ್ನು ಮುರಿಯಬೇಕು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ನಟಿಯಾಗಿ ನನ್ನ ಬೆಳವಣಿಗೆಗೂ ಕಂಫರ್ಟ್ ಝೋನ್‌ನಿಂದ ಆಚೆ ಬಂದು ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಅಗತ್ಯ. ‘ದೋ ಲಪ್ಜೋಂಕಿ ಕಹಾನಿ’ ಸಿನಿಮಾದಲ್ಲಿನ ನನ್ನ ಪಾತ್ರವೂ ಅಂಥದ್ದೇ ಸವಾಲಿನದಾಗಿತ್ತು. ಅದಕ್ಕಾಗಿ ನಾನು ಸಾಕಷ್ಟು ತರಬೇತಿ ಪಡೆದುಕೊಂಡಿದ್ದೆ. 

* ದೋ ಲಪ್ಜೋ ಕಿ ಕಹಾನಿ ಸಿನಿಮಾದಲ್ಲಿ ಕಿಸ್ಸಿಂಗ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಿ? ಇದು ನಿಮಗೆ ಇಷ್ಟವಿರಲಿಲ್ಲ ಎಂಬ ಮಾತೂ ಇದೆ. ನಿಜವೇ?
ಇದರಲ್ಲಿ ಇಷ್ಟದ ಮಾತೇ ಇಲ್ಲ. ಕಥೆಯ ಅಗತ್ಯಕ್ಕೆ ತಕ್ಕಂತೆ ನಟಿಸುವುದು ಕಲಾವಿದರ ಜವಾಬ್ದಾರಿ. ಕಿಸ್ಸಿಂಗ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಇಂದು ಸಾಮಾನ್ಯ ಸಂಗತಿ. ಕಥೆ ನಿಜವಾಗಿಯೂ ಬೇಡುತ್ತಿದ್ದಲ್ಲಿ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಯಾವ ಹಿಂಜರಿಕೆಯೂ ಇಲ್ಲ.

* ಗಾಡ್‌ ಫಾದರ್‌ ಇದ್ದವರು ಮಾತ್ರ ಚಿತ್ರರಂಗದಲ್ಲಿ ತಳವೂರಲು ಸಾಧ್ಯ ಎಂಬ ನಂಬಿಕೆಯಿದೆ. ಅದು ಎಷ್ಟರ ಮಟ್ಟಿಗೆ ನಿಜ?
ನನಗೆ ಗಾಡ್‌ಫಾದರ್‌ಗಳ ಮೇಲೆ ನಂಬಿಕೆಯಿಲ್ಲ. ನಾನು ಯಾವ ಗಾಡ್‌ ಫಾದರ್‌ ಇಲ್ಲದೆಯೇ ಚಿತ್ರರಂಗಕ್ಕೆ ಬಂದವಳು. ಆರಂಭದಲ್ಲಿ ಕೆಲವು ದಿನ ಗಾಡ್‌ಫಾದರ್‌ ಬೆಂಬಲ ಸಹಾಯಕವಾಗಬಹುದು. ಕೊನೆಯವರೆಗೂ ನೀವು ಚಿತ್ರರಂಗದಲ್ಲಿ ಉಳಿಯಬೇಕು ಅಂದರೆ ನಿಮ್ಮ  ಪ್ರತಿಭೆಯನ್ನು ಸಾಬೀತುಪಡಿಸಲೇ ಬೇಕು.

* ದಕ್ಷಿಣ ಭಾರತ ಚಿತ್ರರಂಗದಲ್ಲಿ ಅನೇಕ ಕುತೂಹಲಕರ ಪ್ರಯೋಗಗಳು ನಡೆಯುತ್ತಿವೆ. ಈ ಕುರಿತು ನಿಮಗೆ ಏನನಿಸುತ್ತದೆ?
ಈ ಅದ್ಭುತ ಚಿತ್ರರಂಗದ ಭಾಗವಾಗಿರುವುದಕ್ಕೆ ನಿಜಕ್ಕೂ ನನಗೆ ಹೆಮ್ಮೆಯಿದೆ. ಈ ಎಲ್ಲ ಬೆಳವಣಿಗೆಗಳ ಭಾಗವಾಗಿದ್ದೇನೆ ಎಂಬುದು ಸಂತೋಷದ ವಿಷಯ.ತಾಂತ್ರಿಕವಾಗಿಯೂ–ಸೃಜನಶೀಲವಾಗಿಯೂ ದಕ್ಷಿಣ ಭಾರತದಲ್ಲಿ ಒಳ್ಳೆಯ ಸಿನಿಮಾಗಳು ರೂಪುಗೊಳ್ಳುತ್ತಿವೆ.  ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಪ್ರದಾನ ಸಿನಿಮಾಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.

* ನಿಮ್ಮ ಸೆಲೆಬ್ರಿಟಿ ಬದುಕಿನ ಗದ್ದಲದಲ್ಲಿ ಯಾವತ್ತಾದರೂ ಸಹಜ ಬದುಕನ್ನು ಮಿಸ್‌ ಮಾಡಿಕೊಳ್ಳುವುದಿದೆಯೇ?
ಇಲ್ಲ. ನಾನು ಈ ಸೆಲೆಬ್ರಿಟಿ ಬದುಕು ಮತ್ತು ವೈಯಕ್ತಿಕ ಬದುಕಿನ ನಡುವೆ ಯಾವಾಗಲೂ ಸಮತೋಲನ ಕಾಪಾಡಿಕೊಳ್ಳುತ್ತೇನೆ. ದಿನವೂ ನಾಲ್ಕರಿಂದ ಆರು ಗಂಟೆ ಕಾಲ ನನ್ನ ಸ್ನೇಹಿತರು, ಕುಟುಂಬದವರೊಂದಿಗೆ ಕಳೆಯುತ್ತೇನೆ. ಆಗ ಉಳಿದೆಲ್ಲವನ್ನೂ ಮರೆತು ಸಾಮಾನ್ಯ ಹುಡುಗಿಯಾಗಿರುತ್ತೇನೆ.

* ನಿಮ್ಮ ನೆಚ್ಚಿನ ಹವ್ಯಾಸಗಳೇನು?
ಬಿಡುವಿನ ಸಮಯದಲ್ಲಿ ಸಿನಿಮಾಗಳನ್ನು ನೋಡುತ್ತೇನೆ. ಪುಸ್ತಕಗಳನ್ನು ಓದುತ್ತೇನೆ. ಪ್ರವಾಸವೆಂದರೂ ನನಗೆ ಇಷ್ಟ. ನಾರ್ವೆ, ಬಾಲಿ, ನ್ಯೂಯಾರ್ಕ್‌ ನನ್ನ ನೆಚ್ಚಿನ ತಾಣಗಳು. ಬ್ರಿಟಿಷ್‌ ಲೇಖಕ ಅಲಿಯನ್‌ ದೇ ಬೋಥಾನ್‌ ನನ್ನ ಇಷ್ಟದ ಲೇಖಕ. ಅವರ ‘ಕೋರ್ಸ್‌ ಆಫ್‌ ಲವ್‌’ ಪುಸ್ತಕವನ್ನು ಓದುತ್ತಿದ್ದೇನೆ.

* ಕನ್ನಡ ಸಿನಿಮಾಗಳನ್ನು ನೋಡುತ್ತೀರಾ?
ನೋಡುತ್ತೇನೆ. ಪುನೀತ್‌ ರಾಜಕುಮಾರ್‌ ಸಿನಿಮಾಗಳನ್ನು ನೋಡುತ್ತೇನೆ. ಅವರ ಇತ್ತೀಚೆಗಿನ ಸಿನಿಮಾ ‘ಚಕ್ರವ್ಯೂಹ’ದಲ್ಲಿ ಒಂದು ಹಾಡನ್ನೂ ಹಾಡಿದ್ದೆ. ನಾನೇನೂ ವೃತ್ತಿಪರ ಹಾಡುಗಾರಳಲ್ಲ. ಆದರೆ ಆ ಸಿನಿಮಾಕ್ಕೆ ಹಾಡಿದ್ದು ಮಾತ್ರ ಒಳ್ಳೆಯ ಅನುಭವ.

* ಕನ್ನಡ ಸಿನಿಮಾಗಳಲ್ಲಿ ನಟಿಸುವ ಇರಾದೆ ಇದೆಯೇ?

ಖಂಡಿತವಾಗಿಯೂ ಇದೆ. ಸದ್ಯಕ್ಕೆ ಬೇರೆ ಭಾಷೆಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಅವುಗಳನ್ನು ಮುಗಿಸಿ ಇತ್ತ ಗಮನಹರಿಸುತ್ತೇನೆ.

* ನಿಮ್ಮ ಪ್ರಕಾರ ನಟನೆಯ ಅರ್ಥ...?
ನಟನೆ ನನ್ನ ಧರ್ಮ. ನಾನು ನಟಿಯಾಗಿರುವುದರ ಬಗ್ಗೆ ಹೆಮ್ಮೆಯಿದೆ. ನನಗೆ ದೇವರಲ್ಲಿ ಬಲವಾದ ನಂಬಿಕೆಯಿದೆ. ನಟನೆ ನನ್ನನ್ನು ಅಧ್ಯಾತ್ಮದ ಕಡೆಗೆ ಕರೆದೊಯ್ಯುವ ದಾರಿ ಎಂದು ನಾನು ನಂಬಿದ್ದೇನೆ. 

***
ಚಿತ್ರರಂಗದಲ್ಲಿ ಪ್ರತಿದಿನವೂ  ನನ್ನ ಪಾಲಿಗೆ ಮೊದಲ ದಿನವೇ. ಪ್ರತಿ ಸಿನಿಮಾವೂ ಮೊದಲ ಸಿನಿಮಾ ಅಂದುಕೊಂಡೇ ಸೆಟ್‌ಗೆ ಹೋಗುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT