ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನಪ್ಪನೇ ನನಗೆ ನಾಟಕದ ದಾದಾ’

ನಿನ್ನಂಥ ಅಪ್ಪ ಇಲ್ಲ
Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಅಪ್ಪ ಎಂ.ಬಿ. ಕೃಷ್ಣರಾವ್ ಹೆಸರಾಂತ ಹಾರ್ಮೋನಿಯಂ ಮಾಸ್ಟ್ರು. ಅದು ಅವರಿಗೆ ವಂಶಪಾರಂಪರ್ಯವಾಗಿ ಬಂದ ಬಳವಳಿ. ನಮ್ಮ ಮುತ್ತಾತ ತಿಮ್ಮರಾಯಪ್ಪ- ಆ ಕಾಲಕ್ಕೆ ಊರೂರು ಸುತ್ತುತ್ತ ಚಾವಡಿ(ಡೇರೆ - ಡೇರಾ ಕಂಪನಿ) ಹಾಕ್ಕೊಂಡು ನಾಟಕ ಮಾಡೋರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಗಡಿ ಪ್ರದೇಶದ ಊರುಗಳಲ್ಲಿ ಅವರ ಕಂಪನಿ ಸಂಚರಿಸುತ್ತಿತ್ತು. ಮೂರೂ ಭಾಷೆಗಳಲ್ಲಿ ನಾಟಕ ಆಡ್ತಿದ್ದರಂತೆ. ಅದರಲ್ಲೂ ತೆಲುಗು, ಕನ್ನಡದಲ್ಲಿ ಹೆಚ್ಚು. ಅದಕ್ಕೂ ಪೂರ್ವದಲ್ಲಿ ಬೊಂಬೆಯಾಟ (ಬೊಮ್ಮಲಾಟ) ನಮ್ಮ ಕುಲಕಸುಬು. ನಾವು ಮನೆಯಲ್ಲಿ ತೆಲುಗು, ತಮಿಳು, ಕನ್ನಡ ಎಲ್ಲ ಮಾತಾಡ್ತೀವಿ. ನಮ್ಮ ಮೂಲ ಮರಾಠಿಯ ದಾಯಿತಕರ್ (ಕಿಳ್ಳೇಕ್ಯಾತರು) ಎಂಬ ಅಲೆಮಾರಿ ಜನಾಂಗದವರು. ಆಂಧ್ರದ ಸುರಭಿ ನಾಟಕ ತಂಡದವರು, ತೊಗಲುಬೊಂಬೆಯಾಟದ ಬೆಳಗಲ್ ವೀರಣ್ಣ, ಹಾರ್ಮೋನಿಯಂ ಮಾಸ್ಟರ್ ವಜ್ರಪ್ಪ - ಇವರೆಲ್ಲ ನಮಗೆ ದೂರದಿಂದ ಸಂಬಂಧಿಗಳೇ. ಹಾಗಾಗಿ ಮನೆಯಲ್ಲಿ ಮರಾಠಿಯಲ್ಲೂ ಮಾತಾಡ್ತೇವೆ.

ನಮ್ಮ ಮುತ್ತಾತನಿಗೆ ನಾಗಮ್ಮ, ರಾಮಕ್ಕ, ಲಕ್ಷ್ಮಮ್ಮ, ಕೃಷ್ಣಮ್ಮ, ಸಕ್ಕೂಬಾಯಿ, ಮುನಿಯಮ್ಮ ಅಂತ ಆರು ಮಂದಿ ಹೆಣ್ಣುಮಕ್ಕಳು. ಅವರೆಲ್ಲ ಸೇರಿ ಬಾಲ ಸರಸ್ವತಿ ನಾಟಕ ಮಂಡಳಿ ಅಂತ ಕಂಪನಿ ಮಾಡಿಕೊಂಡು ವೈಭವದಿಂದ ನಡೆಸ್ತಾರೆ. ಅದರಲ್ಲೂ ಲಕ್ಷ್ಮಮ್ಮ, ರಾಮಕ್ಕ ಕಲಾವಿದರಾಗಿ ದೊಡ್ಡ ಹೆಸರು ಮಾಡ್ತಾರೆ. ಆ ಆರೂ ಮಂದಿ ಪೈಕಿ ರಾಮಕ್ಕನಿಗೆ ಜನಿಸಿದ ನಮ್ಮಪ್ಪ ಒಬ್ಬರೇ ಗಂಡುಮಗ. ಅವರು ನಟಿಸ್ತಾ, ವಾದ್ಯ ನುಡಿಸ್ತಾ, ಹಾಡು ಹೇಳ್ತಾನೇ ಬೆಳೀತಾ ದೊಡ್ಡ ಕಲಾವಿದರಾಗ್ತಾರೆ. ನಮ್ಮಪ್ಪನಿಗೆ ನಾವು -  ಸರಸ್ವತಿ, ಪ್ರತಿಭಾ (ನಾನು), ಮಂಜುಳಾ, ಭಾಗ್ಯಶ್ರೀ, ಭಾರತಿ ಅಂತ ಐದು ಜನ ಹೆಣ್ಣುಮಕ್ಕಳು; ಭಗವಾನಬಾಬು, ವಿಜಯಕುಮಾರ್ ಅಂತ ಇಬ್ಬರು ಗಂಡುಮಕ್ಕಳು.

ನಾಟಕದಲ್ಲಿ ದುಡಿದ ದುಡ್ಡಿನಿಂದ ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ತಾಲ್ಲೂಕು ಮರಸೂರು ಗ್ರಾಮದಲ್ಲಿ ಎಂಟ್ಹತ್ತು ಎಕರೆ ಜಮೀನನ್ನ ನಮ್ಮಜ್ಜಿಯವರ ಕಾಲದಲ್ಲಿ ಕೊಂಡುಕೊಳ್ತಾರೆ. ಹಾಗಾಗಿ ನಮ್ಮ ತಂದೆ ಊರು ಮರಸೂರು. ಎಂ.ಬಿ. ಎಂದರೆ ಮರಸೂರು ಬೊಮ್ಮಲಾಟದ ಕೃಷ್ಣರಾವ್ ಅಂತ. ತಂದೆಯ ಕಾಲಕ್ಕೆ ಬೆಂಗಳೂರಿನ ಚಿನ್ನಯ್ಯನಪಾಳ್ಯದಲ್ಲೂ ಸಣ್ಣದೊಂದು ಮನೆ ಮಾಡ್ತಾರೆ. ನಾವೆಲ್ಲ ಅಲ್ಲೇ ಬೆಳೆದೆವು.

ನಾಟಕ ಕಂಪನಿ ಬೇರೆ ಬೇರೆ ಊರಲ್ಲಿ ಕ್ಯಾಂಪ್ ಮಾಡ್ತಿದ್ದರಿಂದ ಬೆಂಗಳೂರಿನಿಂದ ಅಲ್ಲಿಗೆ ಹೋಗಿ ಬಂದು ಮಾಡ್ತಾ ಇರ್‌್ತೇವೆ. ಇಲ್ಲಿ ಶಾಲೆಗೆ ಹಾಕಿರೋರು, ಆದರೆ ನಾಟಕದಲ್ಲಿ ಬಾಲಪಾತ್ರಗಳಲ್ಲಿ ಅಭಿನಯಿಸೋಕೆ, ನೃತ್ಯ ಮಾಡೋಕೆ ಬೇಕೆಂದಾಗಲೆಲ್ಲ ನಮ್ಮನ್ನ ಕರೆದುಕೊಂಡು ಹೋಗೋರು ಮತ್ತೆ ಬೆಂಗಳೂರಿಗೆ ವಾಪಸ್ ಬಂದು ಶಾಲೆಗೆ ಹೋಗ್ತಿದ್ವಿ. ಹೀಗೇ ನಡೀತಿತ್ತು. ತಂದೆ ತಾಯಿ ಕಂಪನಿಯಲ್ಲೇ ಇರೋರು. ಬೆಂಗಳೂರು ಮನೆಯಲ್ಲಿ ಅಜ್ಜಿಯರು ಇರ್‌್ತಿದ್ದರು. ಆಗಾಗ ಕಂಪನಿಗೆ ನಾನೇ ಹೆಚ್ಚಾಗಿ ಹೊಗ್ತಿದ್ದೆ. ಹಾಗಾಗಿ ನಾನೇ ನನ್ನ ತಂದೆ ಜತೆ ಹೆಚ್ಚು ಸಮಯ ಬೆಳೆದವಳು. ನನ್ನ ಆರನೇ ವಯಸ್ಸಿನಲ್ಲೇ ಅಪ್ಪ ಚಂದಾಪುರದಲ್ಲಿ ನನ್ನಿಂದ ಮಂಗಳದ ಮುಂಬೆಳಗು ಅನ್ನೋ ನಾಟಕದಲ್ಲಿ ಬಾಲಪಾತ್ರ ಮಾಡಿಸಿದರು. ರಾಮಾಯಣ ನಾಟಕದಲ್ಲಿ ನೃತ್ಯ ಮಾಡಿಸಿದರು.

ಹಾಡೋದರಲ್ಲಿ, ನಟಿಸೋದರಲ್ಲಿ ನಾನೇ ಎಲ್ಲರಿಗಿಂತ ಚುರುಕಾಗಿದ್ದೆ. ಹಿಂದೆ ನಮ್ಮ ಕಂಪನಿಯಲ್ಲಿದ್ದು ನಂತರ ಬೆಂಗಳೂರಿನ ಸಂಪಂಗಿರಾಮನಗರಕ್ಕೆ ಬಂದು ನೆಲೆಸಿದ ಗುರುಮೂರ್ತಾಚಾರ್ ಅವರನ್ನ ಸಂಗೀತ ಶಿಕ್ಷಕರಾಗಿ ಅಪ್ಪ ನನಗಾಗಿ ನೇಮಿಸಿದರು. ಗುರುಮೂರ್ತಾಚಾರ್ ದೊಡ್ಡ ಹಾಡುಗಾರರು, ವಯಲಿನ್, ಹಾರ್ಮೋನಿಯಂ ಚೆನ್ನಾಗಿ ನುಡಿಸೋರು. ವಾರಕ್ಕೆರಡು ಬಾರಿ ಸೈಕಲ್ ಮೇಲೆ ನಮ್ಮ ಮನೆಗೆ ಬಂದು ಸಂಗೀತದ ಪಾಠ ಹೇಳಿಕೊಡೋರು. ಆರು ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತೆ.

ಜ್ಯೂನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾದೆ. ಈ ಮಧ್ಯೆ ಅಪ್ಪನ ನಾಟಕ ಕಂಪನಿಗೆ ಹೋಗಿ ಅಭಿನಯಿಸೋದು, ಮತ್ತೆ ಬೆಂಗಳೂರಿಗೆ ಬಂದು ಶಾಲೆಗೆ ಹೋಗೋದು ನಡೆದೇ ಇತ್ತು. ಕಂಪನಿಗೆ ಸಂಕಷ್ಟದ ಕಾಲ ಆಗಾಗ ಬರ್‌್ತಿತ್ತು. ಆಗೆಲ್ಲ ನಾನು ಬೆಂಗಳೂರಿನಲ್ಲಿ ಕರ್ನಾಟಕ ವಾದ್ಯಗೋಷ್ಠಿ ಎಂಬ ಆರ್ಕೆಸ್ಟ್ರಾಗೆ ಹಾಡಲು ಹೋಗುತಿದ್ದೆ. ರಂಗಗೀತೆ ಜತೆಗೆ ಆ ಕಾಲದ ಚಿತ್ರಗೀತೆಗಳನ್ನೂ ಹಾಡ್ತಿದ್ದೆ. ಚಿಕ್ಕ ವಯಸ್ಸಿಗೆ ಮದುವೆ ಮಾಡಿದರು. ಹಾಡು, ನಟನೆ ಕಾಯಕ ನಿಲ್ಲಲಿಲ್ಲ. ಅದೇ ಮುಂದುವರೀತು.

ನಾಟಕದವರ ಜಮೀನು ಅಂದರೆ ಯಾರಿಗೇ ಆದರೂ ಸದರ ಜಾಸ್ತಿ. ಉಳುವವನೇ ಒಡೆಯ ಕಾನೂನಿನ ನೆಪದಲ್ಲಿ ನಮ್ಮ ಜಮೀನು ಹೊಡೆದುಕೊಳ್ಳೋ ಪ್ರಯತ್ನ ನಡೀತು. ಈಗ ಮಂತ್ರಿ ಆಗಿರೋ ರಾಮಲಿಂಗರೆಡ್ಡಿ, ಕೇಶವಮೂರ್ತಿ ಮಧ್ಯಸ್ಥಿಕೆ ವಹಿಸಿ ನಮ್ಮ ಜಮೀನು ಮಾರಿ ದುಡ್ಡು ಕೊಡಿಸಿದರು. ಆ ದುಡ್ಡಿನಲ್ಲಿ ಹಂಚಿನ ಮನೆ ಒಡೆಸಿ ದೊಡ್ಡ ಮನೆ ಕಟ್ಟಿಸಿದರು.

ನನ್ನ ಅಕ್ಕ ತಂಗಿಯರು ಎಲ್ಲರೂ ಹಾಡುಗಾರರು, ಎಲ್ಲರೂ ಕಲಾವಿದರು. ಆದರೆ ಒಂದು ಗುಂಜಿ ತೂಕ ನಾನೇ ಚೆನ್ನಾಗಿ ಹಾಡ್ತೇನೆ ಅನ್ನೋ ಕಾರಣಕ್ಕೆ ಅಪ್ಪನಿಗೆ ನನ್ನ ಜತೆ ಸಲುಗೆ, ಸ್ನೇಹ ಜಾಸ್ತಿ ಇತ್ತು. ನಾನೂ ಅವರನ್ನ ಬಾಳ ಹಚಿಕೊಂಡಿದ್ದೆ. ನನ್ನ ಜತೇಲೇ ಹೆಚ್ಚು ಕಾಲ ಕಳೆದರು. ಅವರ ಊಟ, ತಿಂಡಿ ಉಸ್ತುವಾರಿ ನಾನೇ ವಹಿಸ್ತಿದ್ದೆ. ಬಟ್ಟೆ ತೊಳೆದುಕೊಡ್ತಾ ಇದ್ದೆ. ನಾನು ದೊಡ್ಡ ಕಲಾವಿದೆ ಆಗಬೇಕು ಅಂತಾ ಬಾಳ ಕನಸು ಕಂಡಿದ್ದರು. ನಾನು ಬೆಳೀತಾ ಹೋದ ಹಾಗೆ ಬಾಳ ಆನಂದಪಟ್ಟರು. ಮಕ್ಕಳನ್ನೆಲ್ಲ ಅವರವರ ಹೆಸರು ಹಿಡಿದು ಕರೆಯೋರು. ನಾವೆಲ್ಲ ಅವರನ್ನ ದಾದಾ ಅಂತ ಕರೀತಿದ್ವಿ. ಪ್ರತಿಭಾ ಇವತ್ತು ಹೊಸದಾಗಿ ಕಂದ ಹಾಡಿದೆಲ್ಲ.. ಅದು ಯಾವ ರಾಗ..? ಅಂತೆಲ್ಲ ನನ್ನನ್ನ ಕೇಳೋರು. ಅದು ಹಾಗೆ ದಾದಾ.. ಇದು ಹೀಗೆ ದಾದಾ.. ಅಂತ ಹೇಳ್ತಿದ್ದೆ. ಒಳ್ಳೇ ಸ್ನೇಹಿತನ ತರಹ ಸಂಗೀತ, ನಾಟಕದ ಕುರಿತು ಯಾವಾಗಲೂ ನನ್ನೊಂದಿಗೆ ಚರ್ಚೆ ಮಾಡೋರು.

‘ಒಂದು ಪಾತ್ರಕ್ಕೆ ಹೋದಮೇಲೆ ಅದರಲ್ಲಿ ಲೀನ ಆಗಿಬಿಡಬೇಕು. ಹರಿಶ್ಚಂದ್ರನ ಪತ್ನಿ ಚಂದ್ರಮತಿ ತನ್ನ ಮಗನನ್ನ ಕಳೆದುಕೊಂಡಾಗ ಸ್ವಂತ ಮಗ ಸತ್ತ ಹಾಗೆ ಅನುಭವಿಸಬೇಕು. ದುಃಖ ಹೊಟ್ಟೆಯೊಳಗಿಂದ ಬರಬೇಕು, ಗಂಟಲೊಳಗಿಂದ ಅಲ್ಲ..’ ಅಂತ ಹೇಳೋರು. ಚಿಕ್ಕ ವಯಸ್ಸಿನಿಂದಲೇ ಇದನ್ನೆಲ್ಲ ಕರಗತ ಮಾಡ್ತಾ ಬಂದ್ರು. ಗಂಭೀರ ಪಾತ್ರಕ್ಕೆ ಹೇಗೆ ನಡೀಬೇಕು, ಹಾಸ್ಯ ಪಾತ್ರದಲ್ಲಿ ನಟಿಸುವಾಗ ರಂಗದ ಮೇಲೆ ಹೇಗಿರಬೇಕು ಅನ್ನೋದನ್ನ ತಾವೇ ನಡೆದು ಅಭಿನಯಿಸಿ ತೋರಿಸೋರು.
‘ದ್ರೌಪದಿ ಪಾತ್ರವಾದರೆ, ಯಾವ ಅಳತೆಯಲ್ಲಿ ಕಣ್ಣಾಡಿಸಬೇಕು.. ಯಾವ ಅಳತೆಯಲ್ಲಿ ಕೈಯಾಡಿಸಬೇಕು.. ಚೆಲ್ಲುಚೆಲ್ಲಾಗಿ ನಡೀಬಾರದು... ಗಾಂಭಿರ್ಯ ಇರಬೇಕು’ ಅಂತೆಲ್ಲ ಮನದಟ್ಟಾಗೋ ಹಾಗೇ ಹೇಳಿಕೊಡೋರು.

ನನ್ನಪ್ಪ ಹೊಟ್ಟೆ ತುಂಬ ಸಂತೃಪ್ತಿಯಿಂದ ಊಟ ಮಾಡೋರು. ರುಚಿಯಾದ ಸಾರು ಇರಬೇಕಿತ್ತು. ನಾಟಕ, ಹರಿಕಥೆ, ಪುರಾಣ - ಇದರಲ್ಲೇ ಕಾಲ ಕಳೆಯೋರು. ಒಂದೂ ದುರಭ್ಯಾಸ ಇರಲಿಲ್ಲ. ನಮ್ಮ ಕಂಪನಿ ನಿಂತಮೇಲೆ ಹಳ್ಳಿಗಳಿಗೆ ನಾಟಕ ಕಲಿಸೋಕೆ ಹೋಗೋರು. ನಾನು ಅಮೆಚ್ಯೂರ್ ನಾಟಕಗಳಿಗೆ ಹೋಗೋಕೆ ಶುರುಮಾಡಿ ಬಾಳ ದಿನ ಆಗಿತ್ತು. ಅವರು ಹಾರ್ಮೋನಿಯಂಗೆ ನಾನು ಮುಖ್ಯ ಪಾತ್ರಕ್ಕೆ- ಕೆಲವು ಕಡೆ ಒಟ್ಟಿಗೇ ಹೋಗ್ತಿದ್ವಿ. ಅವರಿಗೆ ಆಹ್ವಾನ ಇಲ್ಲದಾಗಲೂ ನನ್ನ ಪಾತ್ರ ನೋಡೋಕೆ ಕೆಲವು ಕಡೆ ಬರೋರು. ಮನೆಗೆ ಬಂದ ಮೇಲೆ ನನ್ನ ದ್ರೌಪದಿ, ಕುಂತಿ, ರುಕ್ಮಿಣಿ, ಸುಭದ್ರೆ ಪಾತ್ರಗಳ ಬಗ್ಗೆ- ನನ್ನ ನಟನೆ ಬಗ್ಗೆ ವಿಶ್ಲೇಷಣೆ ಮಾಡೋರು.

‘ನೀನಿದಿಯಾ ನೋಡು.. ನೀನು ಬೆರಳು ತೋರಿಸಿದರೆ ಹಸ್ತ ನುಂಗಿಬಿಡ್ತಿಯಾ..? ನನ್ನ ಹತ್ತಿರ ಹೇಳಿಸ್ಕೊಂಡು ನನಗೆ ಬತ್ತಿ ಇಟ್ಟಬಿಡ್ತಿಯಾ..’ ಅಂತ ಮೆಚ್ಚುಗೆಯ ಹುಸಿಮುನಿಸು ತೋರಿಸ್ತಾ ಇದ್ದರು.

ನಾನು ಕೃಷ್ಣ, ರಾಮ, ಆಂಜನೇಯ, ವೀರ ಬ್ರಹ್ಮೇಂದ್ರ ಮುಂತಾದ ಗಂಡು ಪಾತ್ರ ಮಾಡಿದಾಗಂತೂ ಅವರಿಗೆ ಬಾಳ ಖುಷಿ. ‘ನೀನು ಗಂಡಸಾಗಿ ಹುಟ್ಟಬೇಕಿತ್ತು. ಯಾವ ಪಾತ್ರಕ್ಕೂ ಆಗಲ್ಲ ಅನ್ನಲ್ಲವಲ್ಲ ನೀನು.. ನಿನ್ನ ಧೈರ್ಯಕ್ಕೆ ಮೆಚ್ಚಬೇಕು’ ಅನ್ನೋರು. ‘ನಿನ್ನ ಆಂಜನೇಯನ ಪಾತ್ರ ನೋಡಿ ನನ್ನಮ್ಮನ ನೆನಪು ಬಂತು. ಅವರು ಆಂಜನೇಯ ಪಾತ್ರ ಹೇಗೆ ಮಾಡ್ತಿದ್ದರು ಅಂತ ನೆನಪಿಸಿಕೊಳ್ತಿದ್ದೆ. ಅವರು ಮಾಡ್ತಿದ್ದದ್ದು ಆ ಕಾಲಕ್ಕೆ ಸರಿ, ನಿನ್ನ ಪಾತ್ರ ಈ ಕಾಲಕ್ಕೆ ಸರಿ. ನಿಮ್ಮಜ್ಜಿಯರನ್ನೆಲ್ಲ ಮೀರಿಸಿಬಿಟ್ಟೆ ಬಿಡು. ನಿನಗೇನು ಮೈಮೇಲೆ ಬಂದಿತ್ತಾ ಆ ಪಾಟಿ ಪಾತ್ರ ಮಾಡೋಕೆ.. ನಾನು ಬಾಳ ಸಂತೋಷ ಪಟ್ಟೆ ಬಿಡು ಅಮ್ಮ..’ ಅಂತ ಮನಸಾರೆ ಆನಂದಪಡೋರು.

ಮರಾಠಿ ರಂಗಗೀತೆ ಹಾಗೂ ಕನ್ನಡ ರಂಗಗೀತೆ ಜುಗಲ್‌ಬಂದಿ ಕಾರ್ಯಕ್ರಮಕ್ಕೆ ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಆರ್. ಪರಮಶಿವನ್, ಸುಭದ್ರಮ್ಮ ಮನ್ಸೂರು, ಸೀತಾರಾಮರಾಜು ಹಾಗೂ ನನ್ನನ್ನ ಮುಂಬಯಿಗೆ ಕಳಿಸಿದ್ದರು. ಹಿಂದೂಸ್ತಾನಿ ದಾಟಿಯ ಮರಾಠಿ ರಂಗಗೀತೆಯಲ್ಲಿ ಆಲಾಪ ಜಾಸ್ತಿ. ‘ಬಾ.. ಶುಭ ಪ್ರತಿಮಾ...’ ಅನ್ನೋ ಹಾಡನ್ನು ಅವರಿಗೆ ಸರಿಸಾಟಿಯಾಗಿ ಸುಭದ್ರಮ್ಮ ಅಕ್ಕ ರಾಗ ಬೆಳೆಸಿ ಬೆಳೆಸಿ ಮಧುರವಾಗಿ ಹಾಡಿದರು. ಅದು ನನ್ನ ಮೇಲೆ ಪ್ರಭಾವ ಬೀರಿತು. ಆಂಧ್ರದ ಬಾಣಿ ನನಗೆ ಗೊತ್ತು. ದ್ರೌಪದಿ ಪಾತ್ರದ ಒಂದು ಹಾಡನ್ನ ಶಿವರಂಜನಿ ರಾಗದಲ್ಲಿ ನಾನೂ ವಿಸ್ತರಿಸಿ ವಿಸ್ತರಿಸಿ ಹಾಡಿದೆ. ಜೋರಾದ ಚಪ್ಪಾಳೆಯಿಂದ ಮರಾಠಿ ಸಹೃದಯಿಗಳು ಮೆಚ್ಚುಗೆ ಸೂಚಿಸಿದರು. ಅಪ್ಪನಿಗೆ ಈ ವಿಷಯ ಹೇಳಿದಾಗ ಆತನ ಆನಂದ ಮುಗಿಲುಮುಟ್ಟಿತ್ತು.

ಕಾಂಬೋಡಿ, ಮೋಹಿನಿ, ಮಾಲಕೌಂಸ್, ಹಿಂದೋಳ, ಕಾನಡ, ಶಂಕರಾಭರಣ - ಹೀಗೆ ಒಂದು ಪದದ ಎರಡೆರಡು ಲೈನಿಗೆ ಒಂದೊಂದು ರಾಗ ಹಾಕಿ ರಾಗಮಾಲಿಕೆ ಮಾಡಿಕೊಂಡದ್ದು ಅಪ್ಪನಿಗೆ ಹಿಗ್ಗೋ ಹಿಗ್ಗು. ಬೆಂಗಳೂರಿನ ಹಿರಿಯ ಸಂಗೀತ ಮೇಷ್ಟ್ರುಗಳಾದ ವಜ್ರಪ್ಪ, ಕಲ್ಲೂರು ಶ್ರೀನಿವಾಸ, ನರಸಿಂಹಯ್ಯ - ಇವರೆಲ್ಲ ನನಗೆ ಅತ್ಯುತ್ತಮ ವಾದ್ಯದ ಸಾಥ್ ನೀಡಿ ನನ್ನನ್ನ ಬೆಳೆಸಿದ್ದಾರೆ.

ನಾನು ಹಳ್ಳಿಗಳ ಪೌರಾಣಿಕ ನಾಟಕಗಳಿಗೆ ಅಭಿನಯಿಸೋಕೆ ಹೋದರೆ ಎಲ್ಲ ಊರಲ್ಲೂ ಒಳ್ಳೇ ಮೇಷ್ಟ್ರುಗಳು ಇರ್‌್ತಿರಲಿಲ್ಲ. ‘ಅಕ್ಕಾವ್ರೆ.. ಶಾಸ್ತ್ರೀಯ ಸಂಗೀತದ ಆಳವಾದ ಜ್ಞಾನ ನಮಗೆ ಇಲ್ಲ. ನೀವು ಹಾಡ್ತಾ ಹೋಗ್ತಾ ಇರಿ, ನಾವು ಶ್ರುತಿ ಹಿಡ್ಕೊಂಡು ಹಾಗೇ ನಿಮ್ಮ ಹಿಂದೆ ಬಂದು ಬಿಡ್ತೇವೆ...’ ಅಂತ ಅಂತಹ ಮೇಷ್ಟ್ರು ಹೇಳ್ತಿರ್‌್ತಾರೆ. ‘ನಿಮ್ಮ ದ್ರೌಪದಿ ಪಾತ್ರ ಪ್ರವೇಶ ಪಡೆದ ಮೇಲೆ ನಾಟಕ ಎದ್ದು ಬಿಡ್ತು ಬಿಡು..’ ಅನ್ನೋರು. ಎಷ್ಟೋ ಬಾರಿ ಇದನ್ನೆಲ್ಲ ನನ್ನಪ್ಪ ಕಣ್ಣಾರೆ ಕಾಣಿಸಿಕೊಂಡರು, ಕಿವಿಯಾರೆ ಕೇಳಿಸಿಕೊಂಡರು. ಆಗ ಅವರ ಆನಂದ ಹೇಳತೀರದು.

ಸುಭದ್ರಮ್ಮ ಮನ್ಸೂರರದು ಮಧುರವಾದ ಧ್ವನಿ, ನನ್ನದು ಎತ್ತರದ ಧ್ವನಿ. ಅದು ನನಗೆ ಬಾಲ್ಯದಿಂದಲೇ ಬಂದುಬಿಡ್ತು. ಬಾಲಪಾತ್ರಗಳಲ್ಲಿ ನಟಿಸುವಾಗ ಅಜ್ಜಿಯಂದಿರು ಮತ್ತು ನನ್ನ ಅಪ್ಪ ಎಲ್ಲರೂ ನನ್ನನ್ನ ಬೈಯೋರು. ಜೋರಾಗಿ ಕಿರುಚು ಅನ್ನೋರು. ‘ನಿನ್ನ ಮಾತು, ಹಾಡು- ಅಲ್ಲಿ ಕಣ್ಣಿಗೆ ಕಾಣದಷ್ಟು ದೂರದಲ್ಲಿ ಕುಳಿತಾರಲ್ಲ.. ಅವರಿಗೆ ಕೇಳಿಸಬೇಕು..’ ಅನ್ನೋರು. ಆ ಕಾಲಕ್ಕೆ ಮೈಕ್‌ಸೆಟ್ ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ.. ಹಾಗಾಗಿ ಗಟ್ಟಿಯಾಗಿ ಹಾಡೋದು ನನಗೆ ರೂಢಿಯಾಯ್ತು.

ಅತಿ ಎತ್ತರದ ಸ್ಥಾಯಿಯಲ್ಲಿ ನಾನು ಹಾಡಬಲ್ಲೆ. ನನ್ನ ಹಾಡಿಗೆ ಹಾರ್ಮೋನಿಯಂ ಬಾರಿಸ್ತ ಇದ್ದ ಮೇಷ್ಟ್ರುಗಳು, ಇನ್ನು ಈ ಕಡೆ ರೀಡಗಳಿಲ್ಲ ತಾಯಿ... ಸಾಕು. ಆರೂವರೆ ರೀಡಾಯಿತು ಅನ್ನೋರು. ಒಮ್ಮೆ ನನ್ನ ಹಾಡನ್ನು ಕೇಳಿದ ಗಾನಗಂಧರ್ವ ಡಾ. ರಾಜಕುಮಾರ ಅವರು, ಎಷ್ಟರಲ್ಲಿ ಹಾಡಿದ್ದು ಎಂದು ಕೇಳಿದ್ದರು. ಈ ವಿಷಯ ತಿಳಿದ ತಂದೆ ನನ್ನ ಜನ್ಮ ಸಾರ್ಥಕ ಆತು ಬಿಡು ಅಂದ್ರು. ಪರಮಶಿವಣ್ಣ ನಾನು ಹಾಡೋದಕ್ಕಿಂತ ಮುಂಚೆ ಇನ್ನು ಸುನಾಮಿ ಬರುತ್ತೆ ಅನ್ನೋರು. ನಮ್ಮ ವಂಶಕ್ಕೆಲ್ಲ ಗಂಟಲು ಕಿತ್ತುಕೊಂಡು ಹೋಗೋ ಧ್ವನಿ ನಿನಗೇ ಬಂದೈತೆ ಬಿಡು ಅನ್ನೋರು ಅಪ್ಪ ಕೃಷ್ಣರಾವ್.

ಕಳೆದ ವರ್ಷ ಜೂನ್‌ನಲ್ಲಿ ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ’ಕನ್ನಡ ರಂಗಭೂಮಿ - ಮರುಚಿಂತನೆ’ ಸಮಾವೇಶದಲ್ಲಿ ನನ್ನನ್ನ ಸನ್ಮಾನಕ್ಕೆ, ರಂಗಗೀತೆ ಹಾಡೋದಿಕ್ಕೆ ಕರೆದಿದ್ದರು. ಸನ್ಮಾನ ಮುಗೀತು. ಈ ಕಡೆ ಬೆಂಗಳೂರಲ್ಲಿ ಅಪ್ಪ ನಿಧನರಾದ ಸುದ್ದಿ ಬಂತು. ತಕ್ಷಣ ಹೊರಟುಬಂದೆ. ನಾನು ದಾವಣಗೆರೆಗೆ ಹೊರಟಾಗ ನಾನೂ ಬರ್‌್ತೇನೆ ಅಂತಿದ್ದರು ಅಪ್ಪ.

ನನ್ನ ಎಲ್ಲ ನಾಟಕಗಳ ಪ್ರದರ್ಶನಗಳಿಗೆ ಮುಂದಿನ ಸಾಲಲ್ಲಿ ಬಂದು ಕುಳಿತುಕೊಳ್ಳೋರು. ನನ್ನ ಪಾತ್ರವನ್ನ ಮೆಚ್ಚಿಕೊಳ್ಳುತ್ತಿದ್ದರೂ, ಏನಾದರೂ ಒಂದು ತಪ್ಪು ಕಂಡುಹಿಡಿಯೋರು. ಎಲ್ಲಾನು ಸರಿ ಅಂತ ಒಪ್ಪಿಕೊಳ್ತಿರಲಿಲ್ಲ. ಅದೇ ನನ್ನನ್ನ ಇಲ್ಲೀವರೆಗೆ ಕಾಪಾಡಿದೆ..’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT