ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ನಮಗಿನ್ನೂ ಅರ್ಧಚಂದ್ರ

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

‘ಮೆಟ್ರೊ’ ಎಂದ ಕೂಡಲೇ ವೇಗ ಎಂಬ ಭಾವ ಮನದಲ್ಲಿ ಮೂಡುತ್ತದೆ. ಆದರೆ ಬೆಂಗಳೂರು ಮಹಾನಗರದ ಒಳಗೆ ತ್ವರಿತ ಸಾರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದ ‘ನಮ್ಮ ಮೆಟ್ರೊ’ ಯೋಜನೆಯು ಮಂದಗತಿಯಲ್ಲಿ ಕಾರ್ಯಗತಗೊಳ್ಳುತ್ತಿದೆ. ಪರಿಣಾಮ ‘ಮೆಟ್ರೊ’ಗೆ ವಿಳಂಬ ಎಂಬ ಅರ್ಥ ಬರತೊಡಗಿದೆ!

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದಕ್ಕೆ ಸಮರ್ಥ ಪರಿಹಾರ ಒದಗಿಸಲೆಂದು ರೂಪುಗೊಂಡ ಯೋಜನೆಯೇ ‘ನಮ್ಮ ಮೆಟ್ರೊ’. ಒಂಬತ್ತೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಕಾಮಗಾರಿಗಳು ಇನ್ನೂ ಮುಗಿದಿಲ್ಲ.

ಯೋಜನೆ ಪ್ರಕಾರ ಎಲ್ಲ ನಡೆದಿದ್ದರೆ 2010ರ ಡಿಸೆಂಬರ್‌ ಒಳಗೆ ಮೊದಲ ಹಂತ ಸಂಪೂರ್ಣವಾಗಬೇಕಿತ್ತು. ಗಡುವಿನ ದಿನಾಂಕಗಳು ಮತ್ತೆ ಮತ್ತೆ ವಿಸ್ತರಣೆಯಾಗುತ್ತಲೇ ಇವೆ. ಮುಂದಿನ ಜೂನ್‌ ಒಳಗೆ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದು ಐದು ದಿನಗಳ ಹಿಂದಷ್ಟೆ ಮುಖ್ಯಮಂತ್ರಿ ಹೊಸ ಗಡುವನ್ನು ಪ್ರಕಟಿಸಿದ್ದಾರೆ. ‘ಈ ಗಡುವಿನೊಳಗಾದರೂ ಮುಗಿಯಲಿ, ಮತ್ತೊಂದು ಗಡುವು ಪ್ರಕಟವಾಗದಿರಲಿ. ನಿಗದಿತ ಸಮಯದೊಳಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಾವು ಸಂಚರಿಸುವಂತಾಗಲಿ’ ಎಂಬ ಹಾರೈಕೆ ರಾಜಧಾನಿಯ ನಾಗರಿಕರದ್ದು.

ಬೆಂಗಳೂರು, ಮೆಟ್ರೊದಂತಹ ಬೃಹತ್‌ ಯೋಜನೆಯನ್ನು ಹೊಂದುತ್ತಿರುವ ದೇಶದ ಮೊದಲ ಮಹಾನಗರವೇನಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೆಟ್ರೊ ಸಂಪರ್ಕ ಜಾಲದ ಯಶಸ್ಸನ್ನು ನೋಡಿಕೊಂಡೇ 2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ‘ನಮ್ಮ ಮೆಟ್ರೊ’ ಯೋಜನೆ ಜಾರಿಗೆ ಕ್ಷಿಪ್ರಗತಿಯಲ್ಲಿ ನಿರ್ಧಾರ ಕೈಗೊಂಡರು. ನಂತರ ಮುಖ್ಯಮಂತ್ರಿಯಾದ ಬಿ.ಎಸ್‌. ಯಡಿಯೂರಪ್ಪ ಅವರೂ ಯೋಜನೆಗೆ ಅಗತ್ಯವಿರುವ ಅನುದಾನ ಮತ್ತು ಇತರ ಮಂಜೂರಾತಿಗಳನ್ನು ತ್ವರಿತವಾಗಿ ಒದಗಿಸಿದರು. ‘ನಮ್ಮ ಮೆಟ್ರೊ’ ಜಾರಿಗೆ ಮೊದಲಿನಿಂದ ಇಲ್ಲಿಯವರೆಗೆ ಹಣದ ಕೊರತೆ ಉಂಟಾಗಿಯೇ ಇಲ್ಲ.

ದೆಹಲಿಯಲ್ಲಿ ಈಗ 160 ನಿಲ್ದಾಣಗಳನ್ನು ಒಳಗೊಂಡ 213 ಕಿ.ಮೀ.ಗಳಷ್ಟು ಉದ್ದದ ಮೆಟ್ರೊ ಸಂಪರ್ಕ ಜಾಲ ಇದೆ. ಉದ್ದ ಮತ್ತು ನಿಲ್ದಾಣಗಳ ಸಂಖ್ಯೆ ದೃಷ್ಟಿಯಿಂದ ದೆಹಲಿ ಮೆಟ್ರೊ, ವಿಶ್ವದ 12ನೇ ಅತಿ ದೊಡ್ಡ  ಮೆಟ್ರೊ ವ್ಯವಸ್ಥೆಯಾಗಿ ಹೊರ ಹೊಮ್ಮಿದೆ. ದೆಹಲಿಯಲ್ಲಿ ಮೆಟ್ರೊ ಬೆಳೆಯುತ್ತಲೇ ಇದೆ. 2020ರ ವೇಳೆಗೆ ದೆಹಲಿ ಮೆಟ್ರೊ ಜಾಲದ ಉದ್ದ 400 ಕಿ.ಮೀ.ಗಳಿಗಿಂತ ಹೆಚ್ಚಿರಲಿದೆ. ದೆಹಲಿಯಲ್ಲಿ ಕಾಮಗಾರಿ ಪ್ರಾರಂಭವಾದ ನಾಲ್ಕು ವರ್ಷಗಳಲ್ಲೇ ಮೊದಲ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಯಿತು. ಬೆಂಗಳೂರಿನಲ್ಲಿ ಮೊದಲ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಲು ಆರು ವರ್ಷಗಳ ಕಾಲ ಬೇಕಾಯಿತು.

ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸುವ ದೆಹಲಿಯ ಮಾದರಿ ಬೆಂಗಳೂರಿಗೆ ಆದರ್ಶವಾಗಬೇಕಿತ್ತು, ಆಗಲಿಲ್ಲ. ಹಾಗೆ ನೋಡಿದರೆ ದೆಹಲಿ ಮೆಟ್ರೊ ರೈಲು ನಿಗಮವೇ (ಡಿಎಂಆರ್‌ಸಿ) ‘ನಮ್ಮ ಮೆಟ್ರೊ’ದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್‌) ತಯಾರಿಸಿದ್ದು.

ಇದೇ ಡಿಎಂಆರ್‌ಸಿ ತಂತ್ರಜ್ಞರ ನೇತೃತ್ವದಲ್ಲಿ ಮೂರು ವರ್ಷಗಳ ಹಿಂದಷ್ಟೇ ಕೇರಳದ ಕೊಚ್ಚಿಯಲ್ಲಿ ಮೆಟ್ರೊ ಕಾಮಗಾರಿ ಪ್ರಾರಂಭವಾಯಿತು. ಅಲ್ಲಿ 25 ಕಿ.ಮೀ. ಉದ್ದದ ಮೆಟ್ರೊ ಮಾರ್ಗದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ರೈಲು ಸಂಚಾರದ ಉದ್ಘಾಟನಾ ದಿನಾಂಕವೂ (2016ರ ಜೂನ್‌ 7) ನಿಗದಿಯಾಗಿಬಿಟ್ಟಿದೆ. ಆದರೆ ಬೆಂಗಳೂರಿನಲ್ಲಿ ಉದ್ಘಾಟನಾ ದಿನಾಂಕವನ್ನು ನಿಗದಿ ಮಾಡುವುದಿರಲಿ, ಇಂತಹುದೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದೆಂಬ ಅಂದಾಜು ಮಾಡುವುದೂ ಕಷ್ಟವಾಗಿದೆ.

ಹಾಗಾದರೆ ಬೆಂಗಳೂರಿನಲ್ಲಿ ವಿಳಂಬಕ್ಕೆ ಕಾರಣಗಳೇನು? ಮೆಟ್ರೊ ಕಾಮಗಾರಿಗಳೇಕೆ ನಿಗದಿತ ಅವಧಿಯಲ್ಲಿ ಮುಗಿಯುತ್ತಿಲ್ಲ? ಕಾಮಗಾರಿ ಪ್ರಾರಂಭಿಸಿದಾಗ ಮೂರ್ನಾಲ್ಕು ಕಡೆ ಭೂಸ್ವಾಧೀನದ ಸಮಸ್ಯೆ ಎದುರಾಯಿತು. ಜಲಮಂಡಳಿ, ವಿದ್ಯುತ್‌ ವಿತರಣಾ ಕಂಪೆನಿ, ದೂರಸಂಪರ್ಕ ಮತ್ತು ಇತರ ಇಲಾಖೆಗಳಿಂದ ಸಹಕಾರ ಸಿಗಲಿಲ್ಲ. ಇವೇ ಮೊದಲಾದ ಆರಂಭಿಕ ಅಡೆತಡೆಗಳನ್ನು ನಿವಾರಿಸಿಕೊಂಡ ಬಳಿಕವೂ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆಯಲಿಲ್ಲ. ಇದಕ್ಕೆ ಕಾರಣ ಒಂದೆರಡಲ್ಲ; ಹಲವು.

ಮೆಟ್ರೊ ರೈಲು ವ್ಯವಸ್ಥೆ ಎಂಬುದು ಅತ್ಯುನ್ನತ ತಾಂತ್ರಿಕ ಪ್ರತಿಭೆ ಮತ್ತು ಪರಿಶ್ರಮ ಬೇಡುವ ದೈತ್ಯ ಕಾರ್ಯ. ‘ನಮ್ಮ ಮೆಟ್ರೊ’ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ‘ಬೆಂಗಳೂರು ಮೆಟ್ರೊ ರೈಲು ನಿಗಮ’ದ (ಬಿಎಂಆರ್‌ಸಿ) ಮುಖ್ಯಸ್ಥರ ಸ್ಥಾನಕ್ಕೆ ಮೊದಲಿನಿಂದಲೂ ತಂತ್ರಜ್ಞರನ್ನು ನೇಮಿಸಿಲ್ಲ. ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಐಎಎಸ್‌ ಅಧಿಕಾರಿಗಳನ್ನೇ ನೇಮಿಸಲಾಗುತ್ತಿದೆ. ಅದೂ ಒಬ್ಬ ಅಧಿಕಾರಿಯನ್ನೇ ಇರಿಸಿಲ್ಲ. ಈವರೆಗೆ ನಾಲ್ವರನ್ನು ಬದಲಾಯಿಸಲಾಗಿದೆ. ಇದರಿಂದ ಕೆಲಸದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವುದು ಕಷ್ಟ.

ಡಿಪಿಆರ್‌ ಅನುಸಾರ ಕಾಮಗಾರಿಗಳನ್ನು ಕೈಗೊಳ್ಳದೇ ಇರುವುದು ಮತ್ತೊಂದು ಲೋಪ. ಮೊದಲಿಗೆ ನಗರದ ಹೃದಯಭಾಗವಾದ ಮೆಜೆಸ್ಟಿಕ್‌ನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕಾಗಿತ್ತು. ಅದರ ಬದಲು ಮೆಜೆಸ್ಟಿಕ್‌ ಭಾಗದ ಕಾಮಗಾರಿಗಳ ಗುತ್ತಿಗೆಯನ್ನು ಬಹಳ ತಡವಾಗಿ ನೀಡಲಾಯಿತು. ಪರಿಣಾಮ ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಮುಕ್ಕಾಲು ಭಾಗದಷ್ಟು ಕೆಲಸ ಮುಗಿದಿದ್ದರೂ ಮುಗಿಯದ ಸ್ಥಿತಿಯಲ್ಲಿದೆ.

ಬೆಂಗಳೂರಿನ ಪೂರ್ವ, ಉತ್ತರ, ಪಶ್ಚಿಮ ಭಾಗಗಳಲ್ಲಿ ಒಟ್ಟು ಮೂರು ಮಾರ್ಗಗಳಲ್ಲಿ ರೈಲು ಸಂಚಾರ ಪ್ರಾರಂಭವಾಗಿದೆ. ಕೇಂದ್ರ ಭಾಗದಲ್ಲಿ ಸುರಂಗ ಮತ್ತು ನೆಲದಡಿಯ ನಿಲ್ದಾಣಗಳ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ರೈಲು ಸಂಚಾರ ನಡೆದಿರುವ ಮಾರ್ಗಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಮೊದಲ ನಾಲ್ಕು ವರ್ಷ ‘ನಮ್ಮ ಮೆಟ್ರೊ’ಗೆ ಡಿಎಂಆರ್‌ಸಿ ಸಲಹಾ ಸಂಸ್ಥೆಯಾಗಿತ್ತು. ವ್ಯಕ್ತಿ ಪ್ರತಿಷ್ಠೆ, ಅಹಂಭಾವಗಳ ದೆಸೆಯಿಂದ ಡಿಎಂಆರ್‌ಸಿ ಜತೆಗಿನ ಸಂಬಂಧ ಕಡಿದುಕೊಳ್ಳಲಾಯಿತು. ನಂತರ ಆಯ್ಕೆ ಮಾಡಿಕೊಳ್ಳಲಾದ ಸಲಹಾ ಸಂಸ್ಥೆಯ ಅಪಕ್ವ ಸಲಹೆ ಸೂಚನೆಗಳಿಂದಾಗಿ ಯಾವ ಕಾಮಗಾರಿಗಳೂ ಕಾಲಮಿತಿಯೊಳಗೆ ಪೂರ್ಣಗೊಳ್ಳುತ್ತಿಲ್ಲ. ತಡವಾದಷ್ಟೂ ಆ ಸಂಸ್ಥೆಗೆ ಹೆಚ್ಚು ಲಾಭ, ಹೀಗಾಗಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ ಎಂಬ ಆರೋಪ ಕೇಳಿ ಬಂದಿವೆ.

ಇ.ಶ್ರೀಧರನ್‌ ದೆಹಲಿ ಮತ್ತು ಕೊಚ್ಚಿ ಮೆಟ್ರೊ ಯೋಜನೆಗಳ ಯಶಸ್ಸಿನ ಸೂತ್ರಧಾರರು. ಆ ಕಾರಣದಿಂದ ಅವರನ್ನು ‘ಮೆಟ್ರೊ ಮ್ಯಾನ್‌’ ಎಂದೇ ಕರೆಯಲಾಗುತ್ತಿದೆ. ‘ನಮ್ಮ ಮೆಟ್ರೊ’ ವಿಳಂಬವಾಗುತ್ತಿರುವುದಕ್ಕೆ ಶ್ರೀಧರನ್‌ ಅವರೂ ಮೇಲೆ  ಪ್ರಸ್ತಾಪಿಸಿರುವ ಕಾರಣಗಳನ್ನೇ ಪಟ್ಟಿ ಮಾಡುತ್ತಾರೆ. ಈ ಅಂಶಗಳ ಹೊರತಾಗಿಯೂ ಮುಖ್ಯ ಕಾರಣವೊಂದಿದೆ. ಅದು ಸರ್ಕಾರದ ಪಾತ್ರದ ಕುರಿತಾದುದು.

ಸಾವಿರಾರು ಕೋಟಿ ರೂಪಾಯಿ ವೆಚ್ಚದ ಇಂತಹ ದೊಡ್ಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಸರ್ಕಾರ,  ವಹಿಸಬೇಕಾದಷ್ಟು ಕಾಳಜಿಯನ್ನು ವಹಿಸಲಿಲ್ಲ. ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವರು ಕಾಲ ಕಾಲಕ್ಕೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಲಿಲ್ಲ, ಪ್ರಗತಿ ಪರಿಶೀಲನೆಯನ್ನೂ  ಮಾಡಲಿಲ್ಲ. ಇವೆಲ್ಲ ಸಾಲದೆಂಬಂತೆ ಕಳೆದ ಏಪ್ರಿಲ್‌ನಿಂದ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂ.ಡಿ.) ಮತ್ತೊಂದು ಇಲಾಖೆಯ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ವಹಿಸಲಾಯಿತು. ಈಗಲೂ ಎಂ.ಡಿ. ದ್ವಿಪಾತ್ರಾಭಿನಯ ಮಾಡುತ್ತಿದ್ದಾರೆ. ಈ ಸಂಬಂಧ ಯೋಜನೆಯ ಪಾಲುದಾರನಾದ ಕೇಂದ್ರ ಸರ್ಕಾರವೂ ಗಮನ ಹರಿಸಿದಂತಿಲ್ಲ.

ವಿಳಂಬದಿಂದ ಆಗುವ ಅನಾಹುತಗಳು ಹಲವು. ಜನರು ಭ್ರಮನಿರಸನಗೊಳ್ಳುತ್ತಾರೆ. ಒಂದೆಡೆ ಕಾಮಗಾರಿ ವೆಚ್ಚ, ಇನ್ನೊಂದೆಡೆ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯೋಜನೆಗೆ ಆರ್ಥಿಕ ನೆರವು ನೀಡಿದ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ಯೋಜನೆಯ ವಿಳಂಬದ ಪರಿಣಾಮ ನಗರಕ್ಕಷ್ಟೇ ಸೀಮಿತವಾಗದೆ  ದೇಶದ ವಿಶ್ವಾಸಾರ್ಹತೆಗೇ ಧಕ್ಕೆ ಉಂಟು ಮಾಡುವ ಅಪಾಯ ಇದೆ.

ಮೆಟ್ರೊ ರೈಲು ಕೇವಲ ಒಂದು ಸಾರಿಗೆ ಪ್ರಕಾರವಲ್ಲ. ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹಾನಗರಗಳು ಎದುರಿಸುತ್ತಿರುವ ಬಹುಮುಖ ಸಮಸ್ಯೆ– ಸವಾಲುಗಳಿಗೆ ಪರಿಣಾಮಕಾರಿಯಾದ ಪರಿಹಾರ ಒದಗಿಸಬಲ್ಲ ಒಂದು ಸಮಗ್ರ ವ್ಯವಸ್ಥೆ ಎಂಬುದಕ್ಕೆ ದೆಹಲಿ ಮೆಟ್ರೊದ ಯಶೋಗಾಥೆಯೇ ಮೇರು ಉದಾಹರಣೆಯಾಗಿದೆ.

ಸಮಯ ಉಳಿತಾಯ, ಇಂಧನ ಮಿತವ್ಯಯ, ಅಪಘಾತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ– ಇವೇ ಮೊದಲಾದ  ಅನುಕೂಲಗಳ ಜತೆಯಲ್ಲಿ ಮೆಟ್ರೊ, ನಗರ ಜೀವನ ಶೈಲಿಯಲ್ಲಿ ಗುಣಾತ್ಮಕ ಬದಲಾವಣೆ ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಂತಹ ಮಹತ್ವದ ಯೋಜನೆಯನ್ನು ಸಮಯದ ಶಿಸ್ತಿಗೆ ಒಳಪಟ್ಟು ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಗಮನ ಹರಿಸಬೇಕೆಂಬುದು ಜನರ ಅಪೇಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT