ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗರಿಕರ ಸೇವೆ ಪೊಲೀಸರ ಆದ್ಯ ಕರ್ತವ್ಯ’

ದಾವಣಗೆರೆ: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ; 105 ಮಂದಿಗೆ ತರಬೇತಿ
Last Updated 1 ಡಿಸೆಂಬರ್ 2015, 11:30 IST
ಅಕ್ಷರ ಗಾತ್ರ

ದಾವಣಗೆರೆ: ನಾಗರಿಕ ಪೊಲೀಸ್‌ ತರಬೇತಿ ಪಡೆದ ಎಲ್ಲ ಅಧಿಕಾರಿಗಳು ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಬಿ.ಬೋರಲಿಂಗಯ್ಯ ಸಲಹೆ ನೀಡಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕಚೇರಿಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 6ನೇ ನಾಗರಿಕ ಪೊಲೀಸ್‌ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯಯುತ ಜೀವನ ನಡೆಸಬೇಕು. ನಾಗರಿಕರ ರಕ್ಷಣೆ ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು.

ತರಬೇತಿ ಸಮಯದಲ್ಲಿ ನೀಡುವ ಸಲಹೆ, ಹಾಗೂ ಸೌಲಭ್ಯಗಳನ್ನು ಪಡೆದು ತರಬೇತಿಯನ್ನು ಯಶಸ್ವಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಡಿವೈಎಸ್‌ಪಿ ಅಶೋಕ್‌ ಕುಮಾರ್ ಮಾತನಾಡಿ, ಸಮಾಜ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ. ತಜ್ಞ ಹಾಗೂ ದಕ್ಷ ಅಧಿಕಾರಿಗಳು ಕೇಂದ್ರದಲ್ಲಿ ತರಬೇತಿ ನೀಡಲಿದ್ದು, ಪ್ರಶಿಕ್ಷಣಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಪೊಲೀಸರಿಗೆ ಉತ್ತಮ ನಡತೆ ಹಾಗೂ ಪ್ರಾಮಾಣಿಕತೆ ಅತಿ ಮುಖ್ಯ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಪೊಲೀಸ್‌ ಇಲಾಖೆಗೆ ಗೌರವ ತರಬೇಕು. ಯಾವುದೇ ಸಂದರ್ಭದಲ್ಲಿ ಆಸೆ, ಆಮಿಷಗಳಿಗೆ ಬಲಿಯಾಗಬಾರದು ಎಂದು ಅಶೋಕ್‌ ಕುಮಾರ್‌ ಎಚ್ಚರಿಸಿದರು.

ಪ್ರಶಿಕ್ಷಣಾರ್ಥಿಗಳಿಗಳಿಗೂ ಹಲವು ಒತ್ತಡಗಳಿರುತ್ತವೆ. ಅವುಗಳನ್ನು ಮೆಟ್ಟಿ ನಿಲ್ಲುವ ಕೆಲಸ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ. ಅಂತಹ ಒತ್ತಡದ ನಡುವೆ ಕುಟುಂಬದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ತರಬೇತಿ ಶಿಬಿರದಲ್ಲಿ ಚಾಮರಾಜನಗರ ಜಿಲ್ಲೆಯ 86, ಮಂಡ್ಯ ಜಿಲ್ಲೆಯ 19 ಮಂದಿ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಸೇರಿದಂತೆ 105 ಮಂದಿ ಭಾಗವಹಿದ್ದರು. ಕಾರ್ಯಕ್ರಮದಲ್ಲಿ ಡಿಸಿಆರ್‌ಬಿ ಡಿವೈಎಸ್‌ಪಿ ಮಂಜುನಾಥ್‌ ಕೆ.ಗಂಗಲ್‌, ಗ್ರಾಮಾಂತರ ಉಪ ವಿಭಾಗದ ಡಿವೈಎಸ್‌ಪಿ ಬಿ.ಎಸ್‌.ನೇಮಗೌಡ, ಡಿಎಆರ್‌ ಆರ್‌ಪಿಐ ಸೋಮಶೇಖರಪ್ಪ,  ಡಿಎಆರ್‌ ಆರ್‌ಪಿಐ ಎಸ್‌.ಎನ್‌. ಕಿರಣ್‌ಕುಮಾರ್ ಸಿಪಿಐ ಸಂಗನಾಥ, ಹಾಗೂ ನಗರದ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT