ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗರಿಕ ರಕ್ಷಣಾ ಕಾಯ್ದೆಗೆ ಸಿದ್ಧತೆ’

Last Updated 17 ಡಿಸೆಂಬರ್ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ‘ನಾಗರಿಕ ರಕ್ಷಣೆ ಕಾಯ್ದೆ’ಯನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ. ಈ ಕಾಯ್ದೆ ಜಾರಿಯಾದರೆ ಜನ ಹೆಚ್ಚಿರುವ ಪ್ರತಿ ಕಟ್ಟಡದಲ್ಲೂ ಸಿ.ಸಿ.ಕ್ಯಾಮೆರಾಗಳ ಕಣ್ಗಾವಲು ಇರುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್‌.ರೆಡ್ಡಿ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಬುಧವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ನಾಗರಿಕ ರಕ್ಷಣೆ ಕಾಯ್ದೆಯು ಈಗಾಗಲೇ ಹೈದರಾಬಾದ್‌ನಲ್ಲಿ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ನಗರದಲ್ಲೂ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಅನುಮತಿ ಕೋರಲಾಗುವುದು’ ಎಂದು ಹೇಳಿದರು.

‘ಈ ಕಾಯ್ದೆ ಪ್ರಕಾರ, 200 ರಿಂದ 300 ಜನರ ಓಡಾಟ ಇರುವ ಪ್ರತಿ ಕಟ್ಟಡದಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಸಬೇಕಾಗುತ್ತದೆ. ಜತೆಗೆ ಕಟ್ಟಡದ ಹೊರಭಾಗದಲ್ಲೂ ಕ್ಯಾಮೆರಾ ಹಾಕಬೇಕಾಗುತ್ತದೆ. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಕೃತ್ಯ ನಡೆದ ನಂತರ ಆರೋಪಿಗಳನ್ನು ಪತ್ತೆ ಮಾಡಲು ಇದು ನೆರವಾಗಲಿದೆ’ ಎಂದು ವಿವರಿಸಿದರು.

₨75 ಕೋಟಿ ಬಿಡುಗಡೆ: ‘ನಗರದ ಜಂಕ್ಷನ್‌ಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸುವುದು ಹಾಗೂ ಸಂಚಾರ ದಟ್ಟಣೆಯ ನಿವಾರಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ₨ 75 ಕೋಟಿ ಬಿಡುಗಡೆ ಮಾಡಿದೆ. ಹೆಚ್ಚು ಸಿ.ಸಿ ಕ್ಯಾಮೆರಾ ಅಳವಡಿಸಿರುವ ಮಹಾನಗರಗಳ ಪಟ್ಟಿಯಲ್ಲಿ ಶೀಘ್ರದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿರುತ್ತದೆ’ ಎಂದು ಹೇಳಿದರು.

‘ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ 15 ಸಾವಿರ ಮಂದಿಯನ್ನು ಹೊಸದಾಗಿ ರೌಡಿ ಪಟ್ಟಿಗೆ ಸೇರಿಸಲಾಗಿದೆ. ರೌಡಿ ಚಟುವಟಿಕೆಗಳಿಗೆ ಎಂದಿಗೂ ಅವಕಾಶ ಕೊಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸಾರ್ವಜನಿಕರು ಮುಕ್ತವಾಗಿ ದೂರು ನೀಡಬಹುದು’ ಎಂದರು.

‘ಪ್ರತಿ ಠಾಣಾಧಿಕಾರಿಯು ತನ್ನ ವ್ಯಾಪ್ತಿಯಲ್ಲಿರುವ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಯ ಬಗ್ಗೆ ತಿಳಿದುಕೊಂಡಿರಬೇಕು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಆತ ಮತ್ತೆ ಕೃತ್ಯ ಎಸಗುವ ಪ್ರವೃತ್ತಿ ಹೊಂದಿರುತ್ತಾನೆ. ಹೀಗಾಗಿ ಮೊದಲೇ ಆತನ ಮೇಲೆ ನಿಗಾ ವಹಿಸಿ ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಈ ಕ್ರಮದಿಂದ ಅಪರಾಧ ಪ್ರಕರಣಗಳನ್ನು ತಡೆಯಬಹುದು’ ಎಂದು ಹೇಳಿದರು.

‘ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಸದ್ಯ ಅಂಥ 68 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಎರಡು ವಾರಗಳಲ್ಲಿ ಅವು ಇತ್ಯರ್ಥವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ವಿಶೇಷ ಘಟಕ ಸ್ಥಾಪನೆ
‘ಸೈಬರ್‌ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಘಟಕವು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವ್ಯಾಪ್ತಿಯಲ್ಲಿ ಬರಲಿದೆ’ ಎಂದು ಎಂ.ಎನ್‌.ರೆಡ್ಡಿ ಹೇಳಿದರು.

₨ 1 ಸಾವಿರ ಕೋಟಿಯ ಯೋಜನೆ
‘ನಗರದ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ರಾಜ್ಯ ಸರ್ಕಾರ ₨ 1,000 ಕೋಟಿಯ ಯೋಜನೆಯನ್ನು ಸದ್ಯದಲ್ಲೇ ಜಾರಿಗೊಳಿಸಲಿದೆ. ಯೋಜನೆಯ ನಿರ್ವಹಣೆಗಾಗಿ ಲೋಕೋಪಯೋಗಿ ಸಚಿವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಿದೆ. ತಜ್ಞರು ಹಾಗೂ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಆ ಸಮಿತಿಯಲ್ಲಿ ಇರುತ್ತಾರೆ’ ಎಂದು ಎಂ.ಎನ್‌.ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT