ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನಿ’ಯ ಪ್ರನಾ(ಣಾ)ಳಿಕೆ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದೊಡ್ಡ ಸಭಾಂಗಣದಲ್ಲಿ ಕತ್ತಲು ಕವಿದಿತ್ತು. ಸ್ವಲ್ಪ ಸಮಯದಲ್ಲೇ ಒಂದೊಂದಾಗಿ ದೀಪಗಳು ಬೆಳಕು ಬೀರಲು ಶುರು ಮಾಡಿದವು. ನೂರಾರು ದೀಪಗಳ ಮಧ್ಯೆ ಅಘೋರಿಯೊಬ್ಬ ತ್ರಿಶೂಲ ಹಿಡಿದು ಮುಂದೆ ಬಂದ. ಯಾವುದೋ ಭಕ್ತಿಪ್ರಧಾನ ಚಿತ್ರದ ದೃಶ್ಯ ನೆನಪಿಸುವಂತಿದ್ದ ‘ನಾನಿ’ ಚಿತ್ರೀಕರಣ ತಾಣ, ನಿರ್ದೇಶಕ ರಾಘವೇಂದ್ರ ಗೊಲ್ಲಹಳ್ಳಿ ‘ಕಟ್’ ಎನ್ನುತ್ತಲೇ ಸಹಜ ಸ್ಥಿತಿಗೆ ಮರಳಿತು. ಶೂಟಿಂಗ್‌ಗೆ ವಿರಾಮ ಹೇಳಿದ ರಾಘವೇಂದ್ರ, ಚಿತ್ರತಂಡದ ಸದಸ್ಯರನ್ನು ಕರೆದುಕೊಂಡು ಸುದ್ದಿಗೋಷ್ಠಿಗೆ ಹಾಜರಾದರು.

೧೯೯೭ರಲ್ಲಿ ಗುಜರಾತಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ ‘ನಾನಿ’. ಪ್ರನಾಳ ಶಿಶುವಾಗಿ ಜನಿಸಿದ ನಾನಿ ಎಂಬಾಕೆಯ ಬದುಕು ದುರಂತದಲ್ಲಿ ಅಂತ್ಯವಾಗುತ್ತದೆ. ಅದನ್ನು ಅಷ್ಟೇ ಭಾವನಾತ್ಮಕವಾಗಿ ತೆರೆ ಮೇಲೆ ತೋರಿಸಲು ಸಿದ್ಧತೆ ನಡೆಸಲಾಗಿದೆ.

‘ಇದರಲ್ಲಿ ಇರುವ ಶೇ ೯೫ರಷ್ಟು ಭಾಗ ನೈಜ ಕಥೆ. ಸಿನಿಮಾಕ್ಕೆ ತಕ್ಕಂತೆ ಶೇ ೫ರಷ್ಟು ನಾಟಕೀಯತೆ ಬೆರೆಸಿದ್ದೇವೆ. ಅಘೋರಿಯೊಬ್ಬ ನಸುಕಿನ ಜಾವದಲ್ಲಿ ನಾನಿ ಮನೆಗೆ ಬರುವ ಸನ್ನಿವೇಶವನ್ನು ಹಾಡಿನೊಂದಿಗೆ ಈಗ ಚಿತ್ರೀಕರಿಸುತ್ತಿದ್ದೇವೆ’ ಎಂಬ ಮಾಹಿತಿಯನ್ನು ರಾಘವೇಂದ್ರ ಹಂಚಿಕೊಂಡರು. ನಾನಿ ಪಾಲಕರ ಪಾತ್ರಕ್ಕೆ ಜೈಜಗದೀಶ್ ಹಾಗೂ ಸುಹಾಸಿನಿ ಅವರನ್ನು ಆಯ್ಕೆ ಮಾಡಲಾಗಿದೆ. ಕಥೆ ಕೇಳಿದ ಸುಹಾಸಿನಿ, ಮರುಮಾತಾಡದೆ ಒಪ್ಪಿಕೊಂಡಿದ್ದಾರಂತೆ.

‘ನಾನಿ’ಗೆ ಬಂಡವಾಳ ಹಾಕುತ್ತಿರುವ ರಮೇಶಕುಮಾರ್ ಜೈನ್ ಅವರಿಗೆ ಇದು ಐದನೇ ಸಿನಿಮಾ. ನಾನಿ ಬದುಕಿದ ಗುಜರಾತಿನ ಮನೆಯಲ್ಲೇ ಚಿತ್ರೀಕರಣ ನಡೆಸಲು ಉದ್ದೇಶಿಸಿರುವ ಅವರು, ಅದಕ್ಕಾಗಿ ಆ ಹಾಳು ಮನೆಯನ್ನು ಶುಚಿ ಮಾಡಿಸಿದ್ದಾರಂತೆ. ಚಿತ್ರೀಕರಣಕ್ಕೆಂದು ತಂಡ ಶೀಘ್ರದಲ್ಲೇ ಅಲ್ಲಿಗೆ ತೆರಳಲಿದೆ. ಅಲ್ಲಿಂದ ಬಂದ ಬಳಿಕ, ಚಿಕ್ಕಮಗಳೂರಿನಲ್ಲಿ ಕೂಡ ಒಂದಷ್ಟು ಭಾಗ ಚಿತ್ರೀಕರಿಸುವ ಯೋಜನೆ ಇದೆ.

ಅಲ್ಲಲ್ಲಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮನಿಶ್‌ಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿರುವುದು ಪುಳಕ ಮೂಡಿಸಿದೆ. ಸಿವಿಲ್ ಎಂಜಿನಿಯರ್ ಪಾತ್ರ ಅವರದು. ‘ನಾನಿ’ಯಾಗಿ ಅಭಿನಯಿಸಲು ಆಹ್ವಾನ ಬಂದಾಗ, ಕಥೆ ಕೇಳಿದ ತಮಗೆ ಒಲ್ಲೆ ಅನ್ನಲು ಕಾರಣಗಳೇ ಇರಲಿಲ್ಲ ಎಂದು ಪ್ರಿಯಾಂಕ ರಾವ್ ನೆನಪಿಸಿಕೊಂಡರು.

‘ಕಥೆ ಚೆನ್ನಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಸೂಪರ್’ ಎಂದಷ್ಟೇ ಅವರು ಹೇಳಿದರು. ಮೈಗೆಲ್ಲ ಬೂದಿ ಬಳಿದುಕೊಂಡು ಅಘೋರಿ ವೇಷದಲ್ಲಿದ್ದ ರಮೇಶ ಪಂಡಿತ್, ಮನೆ ಕೆಲಸದಾಕೆ ಪಾತ್ರ ಮಾಡುತ್ತಿರುವ ಕಲ್ಪನಾ ಮಾತನಾಡಿದರು. ಛಾಯಾಗ್ರಹಣದ ಕೆಲಸವನ್ನು ಗುಂಡ್ಲುಪೇಟೆ ಸುರೇಶ್ ನಿರ್ವಹಿಸಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT