ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಾಕರಣದಿಂದ ಸ್ವೀಕರಣದತ್ತ ಸಾಗುವುದು ಅನಿವಾರ್ಯ’

Last Updated 26 ಜೂನ್ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಮುವಾದ ಹೆಚ್ಚುತ್ತಿ ರುವ ಈ ಕಾಲದಲ್ಲಿ ಬಂಡಾಯ ಸಾಹಿತಿಗಳೂ ನಿರಾಕರಣ ಗುಣದಿಂದ ಸ್ವೀಕರಣ ಗುಣದತ್ತ ಸಾಗುವ ಅನಿವಾರ್ಯತೆ ಇದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಕಲಬುರ್ಗಿಯ ದಲಿತ ಬಂಡಾಯ ಸಮುದಾಯ, ಪ್ರಗತಿಪರ ಪ್ರಕಾಶನ  ಭಾನುವಾರ ಏರ್ಪಡಿಸಿದ್ದ ಚೆನ್ನಣ್ಣ ವಾಲೀಕಾರ ಅವರ ‘ಸುನೀತಂಗಳ ಸುಕಾವ್ಯಾಮೃತ’, ‘ಸುನೀತಂಗಳ ಸುದಿವ್ಯಾಮೃತ’ ಮಹಾಛಂದಸ್ಸಿನ ಸಂಕೀರ್ಣ ಗಪದ್ಯಗಳ ಹಾಡುಗಬ್ಬ ಕೃತಿ ಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿಂದೆ ಬಂಡಾಯ ಸಾಹಿತಿಗಳು ಖಾವಿಧಾರಿಗಳಿದ್ದ ವೇದಿಕೆಯನ್ನು ಹಂಚಿಕೊಳ್ಳುವುದಕ್ಕೂ ನಿರಾಕರಿಸುತ್ತಿದ್ದೆವು. ಸಂದರ್ಭ ನಮ್ಮನ್ನು ಬದಲಾಯಿಸಿದೆ. ಉದ್ದೇಶವನ್ನು ಈಡೇರಿಸಿಕೊಳ್ಳಬೇಕಾದರೆ ಸ್ವೀಕರಣ ಗುಣವನ್ನು ರೂಢಿಸಿಕೊಳ್ಳಲೇಬೇಕು. ಪ್ರಗತಿಪರ ಮಠಾಧೀಶರ ವೇದಿಕೆಗಳು ಸೃಷ್ಟಿಯಾಗಿವೆ. ಇಂತಹ ಮಠಾಧೀಶರ ಜತೆ ವೇದಿಕೆ ಹಂಚಿಕೊಳ್ಳುವುದರಲ್ಲಿ ಅರ್ಥ ಇದೆ’ ಎಂದರು.

‘ಚಳವಳಿಯಲ್ಲಿ ತೊಡಗಿಸಿಕೊಂಡವರು ಸೃಜನಶೀಲತೆ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ವಾಲೀಕಾರ ಅವರು ಚಳವಳಿಯನ್ನು ವಿಸ್ತರಿಸುವುದರ ಜೊತೆ ವಿಮರ್ಶಾ ಪ್ರಜ್ಞೆಯನ್ನೂ ವಿಸ್ತರಿಸುವಂತೆ  ಪ್ರಯೋಗಶೀಲ ಕೃತಿಗಳನ್ನು ರಚಿಸುತ್ತಿದ್ದಾರೆ. ಸಿದ್ಧಾಂತವು  ಶೃಂಖಲೆಯಾಗದಂತೆ  ನೋಡಿಕೊಂಡಿದ್ದಾರೆ’ ಎಂದರು.

ಕೃತಿ ಬಿಡುಗಡೆ ಮಾಡಿದ ಸಾಹಿತಿ ಚಂದ್ರಶೇಖರ ಕಂಬಾರ, ‘ವಾಲೀಕಾರ ಅವರು ನಿರ್ದಿಷ್ಟ ಧ್ವನಿಯನ್ನು ಇಟ್ಟು ಕೊಂಡೇ ಕೃತಿ ರಚಿಸುತ್ತಾರೆ. ಅವರನ್ನು ಇಷ್ಟಪಡದವರೂ ಅವರ ಕೃತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದರು. 

ವಿಮರ್ಶಕ ಡಾ.ಸಿ.ಎನ್‌. ರಾಮ ಚಂದ್ರನ್‌, ‘ಎರಡೂ ಕೃತಿಗಳು ಮುಕ್ತ ಚಿಂತನೆಗಳ ಗಪದ್ಯಗಳಿಂದ ಕೂಡಿವೆ. ಬಗೆ ಬಗೆಯ ವಸ್ತುಗಳ ಕುರಿತ ಸೂಕ್ಷ್ಮ ಒಳನೋಟಗಳಿವೆ. ವಾಗಾಡಂಬರ ಪದೇ ಪದೇ ಬರುತ್ತದೆ’ ಎಂದರು. 

ಲೇಖಕ ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌, ‘ಒಳಮುಖಿ ಹಾಗೂ ಹೊರಮುಖಿ ಚಿಂತನೆಗಳಿರುವ ಈ ಕೃತಿ ವಾಲೀಕಾರ ಅವರ ಆತ್ಮಕತೆಯ ಮಾರು ವೇಷದಂತಿದೆ’  ಎಂದರು.

ಲೇಖಕ ಡಾ.ವಿ.ನಾಗರಾಜ, ‘ಬೇಸಿಗೆ ಯಲ್ಲಿ ಹಿತವನ್ನುಂಟು ಮಾಡುವ ತಣ್ಣನೆ ಗಾಳಿ  ಚಳಿಗಾಲದಲ್ಲಿ ಬೇರೆಯೇ ಅನು ಭವವನ್ನು ನೀಡುತ್ತದೆ.  ಇಂತಹ ಅಂಶ ಈ ಕೃತಿಯಲ್ಲಿ ವ್ಯಕ್ತವಾಗಿದೆ. ಸಮಸ್ಯೆ ಹಾಗೂ ಪರಿಹಾರವನ್ನು ಏಕಕಾಲದಲ್ಲೇ ಕಟ್ಟಿಕೊಡುವ ಯತ್ನವನ್ನು ಕವಿ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT