ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀತಿ ಹುಡುಕಾಟದ ಉದ್ಧಟತನ’

Last Updated 28 ಮಾರ್ಚ್ 2015, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ಕವಿತೆ ಕಟ್ಟಲು ಬದುಕಿನುದ್ದಕ್ಕೂ ಹೋರಾಟ ನಡೆದಿರುತ್ತದೆ. ಅದರ ಹಿಂದೆ ಅಪಾರ ಶ್ರಮವಿರುತ್ತದೆ. ಮುಖ್ಯವಾಗಿ ಕವಿತೆಯು ಔಚಿತ್ಯಪೂರ್ಣವಾಗಿಯೇ ಇರುತ್ತದೆ. ಆದರೆ, ಅದರ ಸಾರಾಂಶ ಹೇಳುವ ಮತ್ತು ನೀತಿ ಹುಡುಕುವ ಉದ್ಧಟತನ ನಡೆಯುತ್ತಿದೆ’
–ಈ ರೀತಿ ಬೇಸರದಿಂದ ಹೇಳಿದ್ದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ.

ಯು.ಆರ್‌.ಅನಂತಮೂರ್ತಿಯವರ ನೆನಪಿನಲ್ಲಿ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ನಗರದಲ್ಲಿ ಆಯೋಜಿಸಿರುವ ಕಾರ್ಯಾಗಾರದಲ್ಲಿ ‘ಕಾವ್ಯಾನುಭವ ಮತ್ತು ನಾಟ್ಯಶಾಸ್ತ್ರ: ಕವಿತೆಯಿಂದ ಮಹಾಕಾವ್ಯದವರೆಗೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.

‘ಕಾವ್ಯದ ಹಸಿವು ಇಲ್ಲದವರಿಗೆ ಕಾವ್ಯದ ಪಾಠ ಮಾಡುವುದು, ಕವಿತೆಯ ಸಂವೇದನೆ ಇಲ್ಲದವರು ಶಾಲಾ ಕಾಲೇಜುಗಳಲ್ಲಿ ಕಾವ್ಯದ ಪಾಠ ಮಾಡುವುದು ನಡೆಯುತ್ತಿದೆ. ಯಾರಿಗೆ ಸಂವೇದನೆ ಇರುವುದಿಲ್ಲವೊ ಅಂಥವರ ಎದುರು ಕಾವ್ಯ ಓದುವುದು ಅನುಚಿತವಾದದು. ಅವರಿಗೂ ಹಿಂಸೆ ನಮಗೂ ಹಿಂಸೆ’ ಎಂದು ಪ್ರತಿಪಾದಿಸಿದರು.

‘ಕಾವ್ಯ ಸಂವೇದನೆ ಕಡಿಮೆಯಾಗಿದ್ದು, ಯಾರಿಗೂ ಅಭಿರುಚಿ ಹಾಗೂ ಹಸಿವು ಇಲ್ಲದಂತಾಗಿದೆ. ಎಂಥ ಪದ್ಯ ಓದಿದರೂ ಅರ್ಥವಾಗದ ಪರಿಸ್ಥಿತಿ ತಲೆದೋರಿದೆ. ಕಾವ್ಯವನ್ನು ಹೇಗೆ ಗ್ರಹಿಸಬೇಕು ಎನ್ನುವುದನ್ನು ಹೊಸ ಪೀಳಿಗೆಯ ಯುವಕರಿಗೆ ಯಾರೂ ಮಾರ್ಗದರ್ಶನ ನೀಡುತ್ತಿಲ್ಲ’ ಎಂದು ವಿಷಾದಿಸಿದರು.

ಕವಿತೆಯನ್ನು ಹೇಗೆ ಓದಬೇಕು, ಅದರಲ್ಲಿರುವ ಸೂಕ್ಷ್ಮ ಸ್ಥಾನಗಳು ಯಾವುವು, ಹೇಗೆ ಗ್ರಹಿಸಿದಾಗ ಆನಂದ ಲಭಿಸುತ್ತದೆ ಎಂಬುದನ್ನು ನಾಟ್ಯಶಾಸ್ತ್ರ ಹೇಳುತ್ತದೆ. ಕವಿತೆಯನ್ನು ಕಣ್ತೆರೆದು, ಧ್ಯಾನಿಸಿ ಓದಬೇಕು. ಅದಕ್ಕೆ ಭಯಂಕರ ಹಸಿವು ಇರಬೇಕು ಎಂದು ನುಡಿದರು.

ವಿದ್ವಾಂಸ ಶ್ರೀರಾಮ್‌ ಭಟ್‌  ಅವರು, ‘ಕವಿತೆಯಿಂದ ಮಹಾಕಾವ್ಯದವರೆಗೆ ಎಲ್ಲಾ ಬರಹದ ಪ್ರಕಾರಗಳು ನಾಟ್ಯ ಶಾಸ್ತ್ರಕ್ಕೆ ಪ್ರಸ್ತುತವಾಗಿರುತ್ತವೆ. ನಾಟ್ಯಶಾಸ್ತ್ರ ಕೂಡ ಎಷ್ಟೊ ಕಡೆ ಗದ್ಯವನ್ನು ಬಳಸುತ್ತದೆ. ನಾಟ್ಯಶಾಸ್ತ್ರವು ವಿಸ್ತಾರ ಪರಿಧಿಯನ್ನು ಇಟ್ಟುಕೊಂಡು ಕಾವ್ಯಾನುಭವದ ಬಗ್ಗೆ ಮಾತನಾಡುತ್ತದೆ’ ಎಂದರು.
ವಿದ್ವಾಂಸ ಕೃಷ್ಣಮೂರ್ತಿ ಹನೂರು ಮಾತನಾಡಿ, ‘ನಾಟಕ ಹುಟ್ಟಿದ್ದೆ ಅರಮನೆಗಳಲ್ಲಿ. ನಾಟಕಗಳು ನಮ್ಮ ಮಹಾಕಾವ್ಯದ ಉಪಉತ್ಪನ್ನಗಳು.

ಅರಮನೆಗಾಗಿ ಸಿದ್ಧಪಡಿಸಿದವು. ಕನ್ನಡ ಸಾಹಿತ್ಯದಲ್ಲೂ ನಾಟಕಗಳು ಅರಮನೆಯಲ್ಲಿ ಪೋಷಿತವಾಗಿವೆ. ಆಮೇಲೆ ಬಯಲಿಗೆ ಬಂದವು. ಆದರೆ, ಬೇರೆ ಸ್ವರೂಪದಲ್ಲಿ ಸ್ವೀಕರಿಸಲಾಯಿತು’ ಎಂದರು.

‘ಇಂಥ ಭವ್ಯವಾದ ನಾಟಕ ಪರಂಪರೆಯನ್ನು ಕನ್ನಡ ಕಾವ್ಯ ಏಕೆ ಸ್ವೀಕರಿಸಲಿಲ್ಲ ಎಂಬುದು ದೊಡ್ಡ ಪ್ರಶ್ನೆ. ನಾಟಕದಲ್ಲಿ ಹೇಳದೇ ಇರುವ ವಿಷಯವನ್ನು ಕಾವ್ಯದ ಮೂಲಕ ಹೇಳಬಹುದು ಎಂಬ ಕಾರಣ ಇರಬಹುದು’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT