ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಮಂಡಳಿ ಆದೇಶ ಉಲ್ಲಂಘಿಸಿಲ್ಲ’

ಕೃಷ್ಣಾ ನದಿ: ಗುರ್ಜಾಪುರ ಬ್ಯಾರೇಜ್‌ಗೆ ತೆಲಂಗಾಣ ತಗಾದೆ
Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಗುರ್ಜಾಪುರದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಆಗುತ್ತಿರುವ ಬ್ಯಾರೇಜ್ ಕಂ ಸೇತುವೆ ಕಾಮಗಾರಿ ಬಗ್ಗೆ ತೆಲಂಗಾಣ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಸಲ್ಲಿಸಿದ ಆಕ್ಷೇಪಣೆಗೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಸುಮಾರು ಮೂರು ತಿಂಗಳ ಹಿಂದೆಯೇ ಉತ್ತರ ನೀಡಿದೆ. ಆದರೂ ಈ ಯೋಜನೆ ತಡೆಯಲು ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ತೆಲಂಗಾಣ ಒತ್ತಾಯಿಸಿದೆ.

‘ನ್ಯಾಯಮಂಡಳಿ ಆದೇಶದಂತೆ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರಿನ ಬಳಕೆಗೆ ಅನುಗುಣವಾಗಿಯೇ ಈ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯ ಅನುಮತಿಯನ್ನು ಕರ್ನಾಟಕ ಸರ್ಕಾರದಿಂದ ಪಡೆದುಕೊಳ್ಳಲಾಗಿದೆ’ ಎಂದು ಸಿಡಬ್ಲ್ಯುಸಿಗೆ ರವಾನಿಸಿರುವ ಉತ್ತರದಲ್ಲಿ ತಿಳಿಸಿದ್ದಾಗಿ ಕೆಪಿಸಿ ಮೂಲಗಳು ಹೇಳಿವೆ.

ಈ ಮಧ್ಯೆ, 1 ಕಿ.ಮೀ.ಗೂ ಹೆಚ್ಚು ಉದ್ದ ಇರುವ ಬ್ಯಾರೇಜ್‌ ಕಂ ಸೇತುವೆ ಕಾಮಗಾರಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ನಿರ್ಮಾಣ ಕಾರ್ಯ ಗುರ್ಜಾಪುರದಲ್ಲಿ ಸಾಗಿದೆ.

ಬ್ಯಾರೇಜ್‌ ಏಕೆ: ಕೃಷ್ಣಾ ನದಿಯಿಂದ ವಾರ್ಷಿಕ 2.84 ಟಿಎಂಸಿ ಅಡಿ ನೀರು ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರಕ್ಕೆ (ಆರ್‌ಟಿಪಿಎಸ್‌) ಹಂಚಿಕೆಯಾಗಿದೆ. ಆದರೆ, 2012ರಲ್ಲಿ ನೀರಿನ ತೀವ್ರ ಕೊರತೆ ಎದುರಾದ ಕಾರಣ ಆರ್‌ಟಿಪಿಎಸ್‌ನ ನಾಲ್ಕು ಘಟಕಗಳನ್ನು ಸ್ಥಗಿತಗೊಳಿಸಬೇಕಾಯಿತು.

ಆಗ ಕೆಪಿಸಿ, ಹಂಚಿಕೆಯಾದ ನೀರಿನಲ್ಲೇ 0.46 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿ ಬೇಸಿಗೆಯಲ್ಲಿ ಬಳಕೆ ಮಾಡಲು ಬ್ಯಾರೇಜ್‌ ನಿರ್ಮಾಣದ ಪ್ರಸ್ತಾವವನ್ನು ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಕೆಪಿಸಿಯಿಂದಲೇ ಬ್ಯಾರೇಜ್‌ ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಿದ ಜಲಸಂಪನ್ಮೂಲ ಇಲಾಖೆ, ಅಗತ್ಯ ಅನುಮತಿಯನ್ನು ಸರ್ಕಾರದಿಂದ ಕೊಡಿಸಿತು.

ಕೆಪಿಸಿಗೆ ಇಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡುವ ಉದ್ದೇಶ ಮಾತ್ರ ಇತ್ತು. ಆದರೆ, ಬ್ಯಾರೇಜ್‌ ಜೊತೆಗೆ ಸೇತುವೆ ನಿರ್ಮಾಣ ಮಾಡುವುದರಿಂದ ರಾಯಚೂರು ಮತ್ತು ಯಾದಗಿರಿ ಮಧ್ಯೆ ಸುಮಾರು 50 ಕಿ.ಮೀ. ಅಂತರ ಕಡಿಮೆ ಆಗುತ್ತದೆ ಎಂದು ಸ್ಥಳೀಯರು ಮನವಿ ಸಲ್ಲಿಸಿದ ಕಾರಣ ಬ್ಯಾರೇಜ್‌ ಕಂ ಸೇತುವೆ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿ, ಕಳೆದ ಆಗಸ್ಟ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಆದರೆ, ಬ್ಯಾರೇಜ್‌ ನಿರ್ಮಾಣಕ್ಕೆ ತೆಲಂಗಾಣ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ನಡೆಯುತ್ತಿದ್ದ  ಸ್ಥಳ ಪರಿಶೀಲನೆಗೆ ಆ ರಾಜ್ಯದ ಬೃಹತ್‌ ಕೈಗಾರಿಕಾ ಸಚಿವ ಜುಪಲ್ಲಿ ಕೃಷ್ಣರಾವ್‌ ಮತ್ತು ಲೋಕಸಭೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸಂಸದೀಯ ಪಕ್ಷದ ನಾಯಕ ಜಿತೇಂದ್ರ ರೆಡ್ಡಿ ನೇತೃತ್ವದ ತಂಡವನ್ನು ಆಗಸ್ಟ್‌ 3ನೇ ವಾರದಲ್ಲಿ ಕಳುಹಿಸಿತ್ತು. ಸ್ಥಳೀಯ ಸಂಸದ ಬಿ.ವಿ.ನಾಯಕ, ಶಾಸಕ ಡಾ.ಎಸ್‌.ಶಿವರಾಜ ಪಾಟೀಲ್ ಮತ್ತು ಆರ್‌ಟಿಪಿಎಸ್‌ ಅಧಿಕಾರಿಗಳು ತೆಲಂಗಾಣದ ಸಚಿವರ ನೇತೃತ್ವದ ತಂಡಕ್ಕೆ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು.

ಆಗ ಈ ಬಗ್ಗೆ  ಪ್ರತಿಕ್ರಿಯಿಸಿದ್ದ ತೆಲಂಗಾಣದ ಸಚಿವ ಜುಪಲ್ಲಿ ಕೃಷ್ಣರಾವ್‌, ಈ ಬ್ಯಾರೇಜ್‌ ನಿರ್ಮಾಣದಿಂದ ನದಿಯ ಕೆಳಪಾತ್ರದ  ಮಹಬೂಬನಗರ ಜಿಲ್ಲೆ ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಯೋಜನೆ ತಡೆಯುವಂತೆ ಒತ್ತಾಯಿಸಿ ಕೇಂದ್ರ ಜಲಸಂಪನ್ಮೂಲ    ಸಚಿವಾಲಯಕ್ಕೆ ದೂರು ನೀಡುವುದಾಗಿ ಹೇಳಿದ್ದರು.

ಬ್ಯಾರೇಜ್‌ ವಿಶೇಷ ಏನು?
1.170 ಕಿ.ಮೀ. ಉದ್ದ ಬ್ಯಾರೇಜ್‌ ಕಂ ಸೇತುವೆಗೆ 194 ಗೇಟ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. 5.6 ಮೀಟರ್‌ ಎತ್ತರದ ಬ್ಯಾರೇಜ್‌ನಲ್ಲಿ 3 ಮೀಟರ್‌ಗಳಷ್ಟು ನೀರು ಸಂಗ್ರಹ ಮಾಡುವ ಉದ್ದೇಶ ಇದೆ. ₹120 ಕೋಟಿ ವೆಚ್ಚದ ಈ ಯೋಜನೆಯನ್ನು ಬೆಂಗಳೂರಿನ ರಘು ಇನ್‌ಫ್ರಾ ಸಂಸ್ಥೆ  ನಿರ್ವಹಿಸುತ್ತದೆ. 2015ರ ಜನವರಿ 28ರಂದು ಕಾಮಗಾರಿಗೆ ಕಾರ್ಯಾದೇಶ   ನೀಡಲಾಗಿದ್ದು, 24 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
 

****
ಗುರ್ಜಾಪುರದ ಬಳಿ ಬ್ಯಾರೇಜ್‌ ಕಂ ಸೇತುವೆ ನಿರ್ಮಾಣ ಅಧಿಕೃತವಾಗಿ ನಡೆಯುತ್ತಿದೆ. ತೆಲಂಗಾಣ ಸರ್ಕಾರ ಅನಗತ್ಯವಾಗಿ ವಿವಾದ ಮಾಡುತ್ತಿದೆ
-ಡಾ. ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT