ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣ’

ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವ
Last Updated 31 ಆಗಸ್ಟ್ 2014, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಶೀಘ್ರ ಹಾಗೂ ಪಾರದರ್ಶಕ ನ್ಯಾಯದಾನಕ್ಕಾಗಿ ಸಮಗ್ರ ನ್ಯಾಯಾಂಗ ವ್ಯವಸ್ಥೆ­ಯನ್ನೇ ಮಾಹಿತಿ ಹಾಗೂ ಸಂವಹನ ತಂತ್ರ­ಜ್ಞಾನದ (ಐಸಿಟಿ) ಮೂಲಕ ಡಿಜಿಟ­ಲೀಕರಣ ಮಾಡಲಾಗುತ್ತಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಪ್ರಕಟಿಸಿದರು. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭ­ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ಸಂವಿಧಾನ ಪ್ರತಿಪಾದಿಸುವ ಮೌಲ್ಯ ಹಾಗೂ ಆದರ್ಶ­ಗಳು ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರತಿಫಲಿತ­ವಾ­ಗಬೇಕು ಎಂಬುದು ಕೇಂದ್ರದ ಕಳಕಳಿಯಾಗಿದೆ’ ಎಂದು ಹೇಳಿದರು. ‘ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌­ಐಸಿ) ಮತ್ತು ಸುಪ್ರೀಂ ಕೋರ್ಟ್‌ ಇ–ಸಮಿತಿ ಸಹಯೋ­ಗದಲ್ಲಿ ನ್ಯಾಯಾಂಗ  ವ್ಯವಸ್ಥೆ ಡಿಜಿಟಲೀಕರಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲದೆ ದೇಶದಲ್ಲಿರುವ ಸುಮಾರು 14 ಸಾವಿರ ಅಧೀನ ನ್ಯಾಯಾಲಯಗಳಿಗೂ ಐಸಿಟಿ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ವಿವರಿಸಿದರು.

‘ದೇಶದ ಎಲ್ಲ ವಕೀಲರ ದತ್ತಾಂಶ ಬ್ಯಾಂಕ್‌ ಅಭಿವೃದ್ಧಿ ಮಾಡಲೂ ನಿರ್ಧರಿ­ಸಲಾಗಿದೆ. ಇದರಿಂದ ಅತ್ಯಂತ ಅರ್ಹ ಹಾಗೂ ಪ್ರತಿಭಾನ್ವಿತ ವಕೀಲರನ್ನು ಸುಲಭವಾಗಿ ಗುರುತಿಸಿ ನ್ಯಾಯಾಧೀಶ­­ರನ್ನಾಗಿ ನೇಮಕ ಮಾಡಲು ಸಾಧ್ಯವಾ­ಗಲಿದೆ’ ಎಂದು ಹೇಳಿದರು. ‘ನ್ಯಾಯಾಧೀಶರ ಕೊರತೆ ಹಾಗೂ ಮೂಲ­ಸೌಕರ್ಯದ ಅಭಾವದಿಂದ ಬಾಕಿ ಪ್ರಕರಣಗಳ ಸಂಖ್ಯೆ ಬೆಳೆಯುತ್ತಲೇ ಇದೆ.

ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4,382 ಹುದ್ದೆಗಳು ಖಾಲಿ ಇವೆ. ಮಂಜೂರಾದ ಹುದ್ದೆಗಳ ನಾಲ್ಕನೇ ಒಂದು ಭಾಗದಷ್ಟು ಹುದ್ದೆಗಳು ಖಾಲಿ ಇರುವುದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.
‘ಹೈಕೋರ್ಟ್‌ಗಳಿಗೆ ಮಂಜೂರಾದ ಹುದ್ದೆಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲು ನಿರ್ಧ­ರಿಸ­­ಲಾ­ಗಿದ್ದು, ಖಾಲಿ ಹುದ್ದೆಗಳನ್ನೂ ಭರ್ತಿ ಮಾಡ­ಲಾಗುತ್ತದೆ’ ಎಂದು ಹೇಳಿದರು.

‘ರಾಷ್ಟ್ರೀಯ ನ್ಯಾಯಾಂಗ ನೇಮ­ಕಾತಿ ಆಯೋಗ ಮಸೂದೆಗೆ ಈಗಾಗಲೇ ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಸಿಕ್ಕಿದ್ದು, ನ್ಯಾಯಾಂಗ ಸುಧಾರ­ಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ’ ಎಂದು ಸಚಿವರು ವ್ಯಾಖ್ಯಾನಿಸಿದರು. ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಬದಿ­ಗಿಟ್ಟು ಅವರು ಮಾತನಾಡಿದರು. ವೈವಿಧ್ಯ­ಮಯ ಕೋರ್ಸ್‌ ನೋಡಿ, ಮತ್ತೆ ಕಾನೂನು ವಿದ್ಯಾರ್ಥಿ­ಯಾಗುವ ಆಸೆ ಮೂಡಿದೆ ಎಂದರು.

ರಾಷ್ಟ್ರೀಯ ಕಾನೂನು ಶಾಲೆಯ ಕುಲಾಧಿ­ಪತಿಯೂ ಆಗಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ. ಆರ್‌. ವೆಂಕಟರಾವ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ಹಲವು ಹಾಲಿ ಹಾಗೂ ನಿವೃತ್ತ ನ್ಯಾಯಮೂರ್ತಿ­ಗಳು ಹಾಗೂ ವಕೀಲರ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕೈದಿಗಳ ದತ್ತಾಂಶ ನಿರ್ವಹಣೆ ವ್ಯವಸ್ಥೆ: ‘ಜೈಲು­­ಗಳಲ್ಲಿರುವ ಶೇ 66ರಷ್ಟು ಮಂದಿ ವಿಚಾರಣಾ­ಧೀನ ಕೈದಿಗಳು. ಅವರನ್ನು ಬಹುಕಾಲ ಕೂಡಿ­ಡುವುದು ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರ­ವಲ್ಲ, ನಮ್ಮ ವಿಳಂಬ ನ್ಯಾಯದಾನ ವ್ಯವಸ್ಥೆಗೂ ದ್ಯೋತಕ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ವಿಷಾದ ವ್ಯಕ್ತಪಡಿಸಿದರು.

‘ಗರಿಷ್ಠ ಶಿಕ್ಷೆ ಪ್ರಮಾಣದ ಅರ್ಧದಷ್ಟು ಕಾಲವನ್ನು ಜೈಲಿನಲ್ಲಿ ಕಳೆದ ಕೈದಿಗಳ ಬಿಡುಗಡೆಗೆ ಅವಕಾಶ ಕಲ್ಪಿಸಲು ಕಾನೂನು (ಸಿಆರ್‌ಪಿಸಿ 436ಎ) ತಿದ್ದುಪಡಿ ಮಾಡಲಾಗಿದೆ. ಕೈದಿಗಳ ದತ್ತಾಂಶ ನಿರ್ವಹಣೆ ವ್ಯವಸ್ಥೆ ಜಾರಿಗೆ ತರಲಾ­ಗುತ್ತಿದ್ದು, ವಿಚಾರ­ಣಾಧೀನ ಕೈದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ದತ್ತಾಂಶದ ಆಧಾರದ ಮೇಲೆ ಯಾವ ಕೈದಿಗಳನ್ನು ಯಾವ ದಿನ ಬಿಡುಗಡೆ ಮಾಡಬೇಕು ಎನ್ನುವುದು ನಿರ್ಧಾರವಾಗಲಿದೆ’ ಎಂದು ವಿವರಿಸಿದರು.

‘ತಿಹಾರ್‌ ಜೈಲಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ದತ್ತಾಂಶ ನಿರ್ವಹಣೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅದೇ ಸೌಲಭ್ಯವನ್ನು ಉಳಿದ ಜೈಲುಗಳಿಗೂ ಒದಗಿಸಲಾಗುತ್ತದೆ’ ಎಂದು ಹೇಳಿದರು.

ಇವರು ‘ಪದವಿಗಳ ಶತಕ’ವೀರ!
ಬೆಂಗಳೂರು: ಅವರ ಹೆಸರು ಪಟ್ನಾಲ ಜಾನ್‌ ಸುಧಾಕರ್‌. ವಯಸ್ಸು 55. ಪಡೆದ ಪದವಿ­ಗಳ ಸಂಖ್ಯೆ 100. ‘ಪದವಿಗಳ ಶತಕ’ವನ್ನೇ ಬಾರಿಸಿದರೂ ಅವರ ಅಧ್ಯಯನದ ದಾಹ ಇನ್ನೂ ಇಂಗಿಲ್ಲ! ಪ್ರೆಸ್‌ ಇನ್ಫರ್‌ಮೇಷನ್‌ ಬ್ಯೂರೋ (ಪಿಐಬಿ) ಭೋಪಾಲ ಕೇಂದ್ರದಲ್ಲಿ ಹೆಚ್ಚು­ವರಿ ನಿರ್ದೇಶಕರಾಗಿ ಕಾರ್ಯ ನಿರ್ವ­ಹಿ­ಸು­ತ್ತಿರುವ ಸುಧಾಕರ್‌ ಅವರು ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವದಲ್ಲಿ ಭಾನುವಾರ ನಾಲ್ಕು ಪದವಿಗಳನ್ನು ಪಡೆದರು.

‘ಪದವಿಗಳ ಶತಕ’ ಬಾರಿಸಿ ಆಯಿತಲ್ಲ, ಇಲ್ಲಿಗೆ ಅಧ್ಯಯನದ ದಾಹ ಮುಗಿಯಿತೆ’ ಎಂದು ಕೇಳಿದರೆ, ‘ಇಲ್ಲ, ಇನ್ನೂ ಕೆಲವು ಕೋರ್ಸ್‌ಗಳ ಅಧ್ಯಯನ ನಡೆದಿದೆ. ಮತ್ತೆ ಕೆಲವು ಕೋರ್ಸ್‌ಗಳ ಪ್ರವೇಶಕ್ಕೆ ತಯಾರಿಯನ್ನೂ ನಡೆಸಿರುವೆ’ ಎನ್ನುತ್ತಾರೆ ಅವರು!
ಮೂಲತಃ ವಿಶಾಖಪಟ್ಟಣದ ಸುಧಾ­ಕರ್‌ ಕಡು ಬಡತನದ ಕುಟುಂಬದಿಂದ ಬಂದವರು. ಅವರ ಅಪ್ಪ– ಅಮ್ಮ ಅನಕ್ಷರಸ್ಥರು. ‘ಬಡವರೂ ಶೈಕ್ಷಣಿಕ­ವಾಗಿ ಏನೆಲ್ಲ ಸಾಧಿಸಬಹುದು ಎಂದು ತೋರಿಸುವ ಹಟದಿಂದಲೇ ಇಷ್ಟೊಂದು ಪದವಿ ಪಡೆಯಬೇಕಾಯಿತು’ ಎಂದು ಅವರು ಹೇಳುತ್ತಾರೆ.

ಕಾನೂನು ವಿಷಯದಲ್ಲಿ 40, ಸಮೂಹ ಸಂವಹ­ನದಲ್ಲಿ 15, ವ್ಯವಸ್ಥಾ­ಪನ, ಪರಿಸರ, ಮಾನವಿಕ, ಮಾನವ ಹಕ್ಕುಗಳ ಅಧ್ಯಯನ, ಮನಃಶಾಸ್ತ್ರ, ತತ್ವಜ್ಞಾನದ ವಿಷಯಗಳಲ್ಲಿ ತಲಾ ಐದು... ಅವರ ‘ಪದವಿ ಗಣಿತ’ ಹೀಗೇ ಮುಂದುವರಿಯುತ್ತದೆ.
200ಕ್ಕೂ ಅಧಿಕ ಕೃತಿಗಳನ್ನೂ ಅವರು ರಚಿಸಿದ್ದಾರೆ. ಪ್ರತಿಷ್ಠಿತ ಮದರ್‌ ತೆರೆಸಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.ಆಂಧ್ರಪ್ರದೇಶದಲ್ಲಿ ಅನಕ್ಷ­ರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT