ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಾರಿ’ ಚೈತನ್ಯ ಹೊಸ ಆಟ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಮನರಂಜನಾತ್ಮಕ ಸಿನಿಮಾಗಳನ್ನು ರೂಪಿಸುವಲ್ಲಿ ತಮ್ಮದೇ ಶೈಲಿ ಕಂಡುಕೊಂಡಿರುವ ನಿರ್ದೇಶಕ ಚೈತನ್ಯ, ಕೌತುಕದ ಕಥನದೊಂದಿಗೆ ಮರಳಿದ್ದಾರೆ. ಅವರ ಹೊಸ ಚಿತ್ರದ ಹೆಸರು ‘ಆಟಗಾರ’.

‘ಆ  ದಿನಗಳು’, ‘ಸೂರ್ಯಕಾಂತಿ’ ಮತ್ತು ‘ಪರಾರಿ’ –ಎಂಬ ಮೂರು ವಿಭಿನ್ನ ಶೈಲಿ–ಅಭಿರುಚಿಯ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಚೈತನ್ಯ, ಗಾಂಧಿನಗರದ ಬೆಳಕಿನಿಂದ ಕೆಲ ಕಾಲ ತುಸು ದೂರ ಉಳಿದಿದ್ದರು. ಹೀಗೆ ‘ಪರಾರಿ’ಯಾಗಿದ್ದ ಅವರು ಈಗ ‘ಆಟಗಾರ’ನಾಗಿ ಮರಳಿದ್ದಾರೆ.

‘ಆಟಗಾರ’ ಈಗಿನ ಸಮಕಾಲೀನ ಸಮಾಜದ ಸಂಗತಿಗಳನ್ನೇ ಒಳಗೊಂಡಿರುವ ಚಿತ್ರ ಎನ್ನುತ್ತಾರೆ ಚೈತನ್ಯ. ಕಥೆಯ ಎಳೆ ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ‘ಆಟಗಾರ’ ಯಾರು, ಆಡಿಸುವವರು ಯಾರು ಎನ್ನುವುದೇ ಚಿತ್ರದಲ್ಲಿನ ಕುತೂಹಲ. ಪ್ರತಿ ಹಂತದಲ್ಲಿಯೂ ಆಟಗಾರನ ಹಂತ ಬದಲಾಗುತ್ತಾ ಹೋಗುತ್ತದೆ. ಅದರಲ್ಲಿ ಒಂದು ಅಂಶವನ್ನು ಬಿಟ್ಟುಕೊಟ್ಟರೂ ಸಿನಿಮಾದ ವಸ್ತು ತಿಳಿಯುವ ಸಾಧ್ಯತೆ ಇದೆ. ಹೀಗಾಗಿ ಚಿತ್ರಮಂದಿರದಲ್ಲಿಯೇ ಅದನ್ನು ಅನುಭವಿಸಿದರೆ ಚೆನ್ನ ಎನ್ನುತ್ತಾರೆ.

‘ಇದು ಕಲ್ಪಿತ ಕಥನವಲ್ಲ. ನಮ್ಮ ನಡುವೆಯೇ ಇರುವಂಥದ್ದು. ನನ್ನ ಕಂಫರ್ಟ್‌ ಜೋನ್‌ನಲ್ಲಿ ಇರುವ ಚಿತ್ರ’ ಎನ್ನುತ್ತಾರೆ ಅವರು. ಸಿನಿಮಾದ ಶೈಲಿಯನ್ನು ‘ಆ ದಿನಗಳು’ ಚಿತ್ರಕ್ಕೆ ಹೋಲಿಸುತ್ತಾರೆ. ‘ಆ ದಿನಗಳು’ ಭೂಗತ ಲೋಕವನ್ನು ಕುರಿತಾಗಿದ್ದಾದರೆ, ‘ಆಟಗಾರ’ ನಮ್ಮ ಸುತ್ತಲಿನ ಲೋಕದ ಕಥನ. ಅದು ಪೀರಿಯೆಡ್‌ ವಸ್ತು. ಆಗಿನ ಕಾಲಕ್ಕೆ ತಕ್ಕ ನಿರೂಪಣೆ ಅದರಲ್ಲಿತ್ತು. ಇದು ಸಮಕಾಲೀನ ವಸ್ತು. ಅದಕ್ಕೆ ಪೂರಕವಾದ ಹೊಸಬಗೆಯ ನಿರೂಪಣೆಯೂ ಇರಲಿದೆ ಎನ್ನುತ್ತಾರೆ.

ಚಿತ್ರಕಥೆ ಸಿದ್ಧಪಡಿಸಿದಾಗ ಅವರ ಮನಸ್ಸಿನಲ್ಲಿದ್ದದ್ದು ಹೊಸಮುಖಗಳನ್ನು ತೆರೆಗೆ ಪರಿಚಯಿಸುವ ಉದ್ದೇಶ. ಆದರೆ ನಿರ್ಮಾಪಕ ಯೋಗೀಶ್‌ ದ್ವಾರಕೀಶ್‌ ಖ್ಯಾತನಾಮರೇ ತಾರಾಗಣದಲ್ಲಿದ್ದರೆ ಚೆನ್ನ ಎಂದರು. ಪಾತ್ರಗಳ ಆಯ್ಕೆ, ಸೇರಿಸು ವಿಕೆಯಲ್ಲಿ ಅವರೇ ಮುಂದಾಳತ್ವ ವಹಿಸಿಕೊಂಡರು. ಇದು ಬಹುತಾರಾಗಣದ ಚಿತ್ರ. ಚಿರಂಜೀವಿ ಸರ್ಜಾ, ಪರೂಲ್‌ ಯಾದವ್‌ ಮತ್ತು ಮೇಘನಾ ರಾಜ್‌ ಮುಖ್ಯ ಭೂಮಿಕೆಯಲ್ಲಿದ್ದರೆ, ಅನಂತ್‌ನಾಗ್‌, ದ್ವಾರಕೀಶ್‌, ರವಿಶಂಕರ್, ಪ್ರಕಾಶ್‌ ಬೆಳವಾಡಿ, ಪಾವನಾ, ಸಾಧುಕೋಕಿಲಾ ಮುಂತಾದವರೂ ಇದ್ದಾರೆ. ಪ್ರಮುಖ ತಾರಾಬಳಗದಲ್ಲಿದ್ದವರೆಲ್ಲರೂ ಸಿನಿಮಾಗಳಲ್ಲಿ ನಾಯಕ–ನಾಯಕಿ ಆಗಿದ್ದವರೇ ಎನ್ನುವುದು ಇಲ್ಲಿನ ವಿಶೇಷ. 

‘ಇಷ್ಟು ಜನ ದೊಡ್ಡ ಕಲಾವಿದರು ಸೇರಿದಾಗ ಹೇಗೆ ಸಂಭಾಳಿಸುವುದು ಎಂದು ನನಗೂ ಆತಂಕ ಇತ್ತು. ಆದರೆ ಅವರ್‍ಯಾರೂ ತಾವು ಸ್ಟಾರ್‌ಗಳು ಎಂದು ವರ್ತಿಸಲಿಲ್ಲ. ಎಲ್ಲರೂ ಒಂದು ತಂಡದಂತೆ ಕೆಲಸ ಮಾಡಿದರು. ಶಾಟ್‌ಗಿಂತ ಮುಂಚೆ ಮಾತನಾಡಿಕೊಂಡು ತಾಲೀಮು ಮಾಡಿಕೊಳ್ಳುತ್ತಿದ್ದರು. ನನ್ನ ಜತೆ ಚರ್ಚಿಸುತ್ತಿದ್ದರು. ಹೀಗೆಯೇ ಮಾಡಬೇಕೆಂದು ವಾದಗಳಾಗುತ್ತಿತ್ತು. ರಂಗಭೂಮಿಯಲ್ಲಿದ್ದಾಗ ದೊರೆಯುತ್ತಿದ್ದ ಅನುಭವವನ್ನು ಈ ಸಿನಿಮಾ ನೀಡಿತು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಚೈತನ್ಯ ತಮ್ಮ ಪ್ರತಿ ಸಿನಿಮಾಕ್ಕೂ ಸುಮಾರು ಎರಡು ವರ್ಷದ ಅಂತರ ತೆಗೆದುಕೊಂಡಿದ್ದಾರೆ. ಇನ್ನು ಮುಂದಾದರೂ ಈ ಕೆಟ್ಟ ಅಭ್ಯಾಸ ಬಿಡಬೇಕು ಎಂದು ತೀರ್ಮಾನಿಸಿದ್ದಾರಂತೆ. ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುವ ಇರಾದೆ ಅವರದು.

‘ಪರಾರಿ’ ಚಿತ್ರದ ಬಿಡುಗಡೆ ಬೆನ್ನಲ್ಲೇ ಅದೇ ತಾರಾಬಳಗದೊಂದಿಗೆ ‘ಪರಾರಿ 2’ ಮಾಡುವುದಾಗಿ ಚೈತನ್ಯ ಹೇಳಿಕೊಂಡಿದ್ದರು. ‘ಪರಾರಿ’ ನಿರ್ಮಾಪಕರಿಗೂ ಆಸಕ್ತಿ ಇತ್ತು. ಈಗಲೂ ಅದರ ಮುಂದುವರಿದ ಭಾಗದ ಯೋಚನೆ ಅವರ ಮನದಲ್ಲಿದೆ. ಆದರೆ ಒಂದು ಸಿನಿಮಾ ಮಾಡಿದರೆ ಅದರ ಮತ್ತೊಂದು ಆವೃತ್ತಿ ಮಾಡುವುದು ಕಷ್ಟ. ಮೊದಲನೇ ಭಾಗಕ್ಕೆ ಹೋಲಿಸಿ ನೋಡುತ್ತಾರೆ. ಅದರಂತೆಯೇ ನಿರೀಕ್ಷೆಗಳನ್ನು ಹೊಂದುತ್ತಾರೆ ಎನ್ನುವ ಜಿಜ್ಞಾಸೆ ಅವರದು.

ಸತ್ಯ ಹೆಗ್ಡೆ ಛಾಯಾಗ್ರಹಣ, ಅನೂಪ್ ಸೀಳಿನ್‌ ಸಂಗೀತ ಹೀಗೆ ಅನುಭವಿ ತಂತ್ರಜ್ಞರಿರುವುದರಿಂದ ಅವರ ಶ್ರಮ ತಗ್ಗಿದೆ. ತಮ್ಮ ಸಿನಿಮಾ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ರಂಗಭೂಮಿಯನ್ನು ಅವರು ಸದಾ ನೆನಪಿಸಿಕೊಳ್ಳುತ್ತಾರೆ. ರಂಗಭೂಮಿ ಕಲಿಕೆಯ ತಾಯಿಭೂಮಿ. ಮೂರು ಗಂಟೆ ನಾಟಕವನ್ನು ಕಟ್‌–ರೀಟೇಕ್‌ಗಳಿಲ್ಲದೆ ಸಾಗಿಸುವ ಅನುಭವ ಸಿನಿಮಾದ ಮೇಲೆ ಹಿಡಿತವನ್ನು ನೀಡುತ್ತದೆ ಎನ್ನುವ ಅವರು, ಸಿನಿಮಾಗಳಿಗೂ ಹೆಚ್ಚಾಗಿ ರಂಗಭೂಮಿ ಕಲಾವಿದರನ್ನೇ ಬಳಸಿಕೊಳ್ಳುತ್ತಿದ್ದಾರೆ.

ಪತ್ರಿಕೋದ್ಯಮದ ಓದು ಮತ್ತು ವೃತ್ತಿ ಅನುಭವವೂ ಅವರ ಸಿನಿಮಾ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಅವರು, ರಾಜಕೀಯ ಮತ್ತು ಸಾಮಾಜಿಕ ವಸ್ತುಗಳತ್ತ ಆಕರ್ಷಣೆ ಸಹಜ ಎನ್ನುತ್ತಾರೆ. ಇದಿನ್ನೂ ನಾಲ್ಕನೇ ಸಿನಿಮಾ. ಮುಂದೆ ವಿಭಿನ್ನ ಮಾದರಿಯ ಸಿನಿಮಾಗಳನ್ನು ಮಾಡುವ ಗುರಿಯೂ ಇದೆ ಎಂದು ಹೇಳುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT