ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯ ಹೆಚ್ಚು’

Last Updated 26 ಜನವರಿ 2015, 10:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಪೋಷಕರು ತಮ್ಮ ಮಕ್ಕಳ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪ್ರಾಧ್ಯಾಪಕ ಡಾ.ನಟರಾಜ್ ಸಲಹೆ ನೀಡಿದರು.

ನಗರದ ಕೋಟೆ ಆವರಣದಲ್ಲಿ ದುರ್ಗೋತ್ಸವ 2015 ರ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಪ್ರಚಲಿತ ವಿದ್ಯಮಾನಗಳು ಗೋಷ್ಠಿಯಲ್ಲಿ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಪರಿಹಾರ’ ವಿಷಯ ಕುರಿತು  ಮಾತನಾಡಿದರು.

ಶೇ. ೨೦ ರಷ್ಟು ರಕ್ತ ಸಂಬಂಧಿಗಳಿಂದ ಶೇ. ೬೦ರಷ್ಟು ಪರಿಚಯಸ್ಥರಿಂದ ಹಾಗೂ ಶೇ. ೧೦ ರಷ್ಟು ಅಪರಿಚಿತರಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಒಟ್ಟು ಶೇ. ೯೦ರಷ್ಟು ಲೈಂಗಿಕ ದೌರ್ಜನ್ಯಗಳು ರಕ್ತ ಸಂಬಂಧಿಗಳು ಹಾಗೂ ಪರಿಚಯಸ್ಥರಿಂದಲೇ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಯಾವ ಮಗುವಾಗಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಪೊಲೀಸರು, ಮಾಧ್ಯಮಗಳ ಮುಂದೆ ನಿಲ್ಲಿಸುವ ಬದಲು ಮೊದಲು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಪ್ರತಿನಿತ್ಯ ಶೇ ೨೭.೬ ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಶೇ. ೨ ರಷ್ಟು ಮಕ್ಕಳು ನಿತ್ಯ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ೨೦೧೧ ರಲ್ಲೇ ರಾಜ್ಯ ಮಕ್ಕಳ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಸಹ ಈ ಕುರಿತು ಪೊಲೀಸರಿಗೆ ಮಾಹಿತಿ ಇಲ್ಲದಿರುವುದು ವಿಷಾದನೀಯ. ಬಾಂಗ್ಲಾ ದೇಶದಲ್ಲಿ ೬ ರಿಂದ ೧೨ ವರ್ಷದ ಬಾಲಕಿಯರಿಗೆ ಥೈರಾಯಿಡ್ ಇಂಜಕ್ಷನ್ ನೀಡಿ ಮಾಂಸಖಂಡಗಳನ್ನು ಬೆಳೆಸಿ ಪರವಾನಗಿ ಪಡೆದ ವೇಶ್ಯಾವಾಟಿಕೆ ಕೇಂದ್ರಗಳಿಗೆ ಮಕ್ಕಳನ್ನು ತಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಮಾತನಾಡಿ, ಭ್ರಷ್ಟತೆ, ಮೋಸ, ಕಪಟ, ವಂಚನೆ, ಸ್ವಾರ್ಥಗಳೆ ನಿತ್ಯ ಜೀವನದಲ್ಲಿ ಯಶಸ್ಸು ಕಾಣುತ್ತಿವೆ. ಮೌಲ್ಯಗಳು ಮೂಲೆ ಸೇರಿಕೊಂಡು ಅಪಮೌಲ್ಯಗಳು ಸಮಾಜದಲ್ಲಿ ವಿಜೃಂಭಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದಲಿತ ರಾಜಕಾರಣಿಗಳು, ಅಧಿಕಾರಿಗಳು ದೇಗುಲಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಹೊಸ ರೀತಿಯ ಅಸ್ಪೃಶ್ಯತೆ ಕಾಣುತ್ತಿದ್ದೇವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದ ಭಯೋತ್ಪಾದನೆಯ ಕರಿ ನೆರಳು ನಮ್ಮ ಮೇಲಿದ್ದು, ಸಾಮಾನ್ಯ ಜನರು ಭಯದಿಂದ ಬದುಕುವಂತಾಗಿದೆ. ಪ್ರಾದೇಶಿಕ ಅಸಮಾನತೆ ನಮ್ಮ ಮುಂದಿದ್ದು, ಇವುಗಳ ಮಧ್ಯೆ ಜಗತ್ತಿನ ಜ್ಞಾನ ನಮ್ಮ ಕೈಯಲ್ಲಿದೆ. ಈ ಮೂಲಕ ನಮ್ಮ ಮುಂದಿರುವ ಅಸಮಾನತೆ ಹೋಗಲಾಡಿಸಿ ಸಮಾನತೆ ಕಾಣಬೇಕು ಎಂದರು.

ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ.ಎಚ್.ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎಂ.ರೇವಣ್ಣಸಿದ್ದಪ್ಪ ಸೇರಿದಂತೆ ಇತರರು ಇದ್ದರು. ಎಸ್.ಕೆ.ಗೀತಾ ಪ್ರಾರ್ಥಿಸಿದರು. ಕೆ.ಪಿ.ಎಂ.ಗಣೇಶಯ್ಯ ಸ್ವಾಗತಿಸಿದರು. ಹುರುಳಿ ಬಸವರಾಜ್ ನಿರೂಪಿಸಿದರು. ದಯಾವತಿ ಪುತ್ತೂರಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT