ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪವರ್’ಗೆ ಐದು ಲಕ್ಷ ಸಿ.ಡಿ. ಕೊಡುಗೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ನಾಳೆ (ಆ. 28) ಬಿಡುಗಡೆಯಾಗಲಿರುವ ‘ಪವರ್’ ಚಿತ್ರ ನೋಡಲು ಹೋಗುವವರಿಗೆ ಸಿಹಿ ಸುದ್ದಿ. ಟಿಕೆಟ್‌ ಪಡೆದು ಚಿತ್ರಮಂದಿರದ ಒಳಹೋಗುವವರಿಗೆ ‘ಪವರ್‌’ ಹಾಡುಗಳ ಸಿ.ಡಿ. ಕೊಡುಗೆಯಾಗಿ ಸಿಗಲಿದೆ.

‘ಪವರ್‌’ ಚಿತ್ರದ ಹಾಡುಗಳ ಹಕ್ಕು ಪಡೆದಿರುವ ‘ಲಹರಿ’ ಸಂಸ್ಥೆಯು ‘ಸಮರ್ಥ ವೆಂಚರ್ಸ್’ ವಿತರಕ ಸಂಸ್ಥೆ ಸಹಯೋಗದಲ್ಲಿ ಈ ವಿನೂತನ ಯತ್ನಕ್ಕೆ ಕೈಹಾಕಿದೆ. ಆಯ್ದ ಚಿತ್ರಮಂದಿರಗಳ ಪ್ರೇಕ್ಷಕರಿಗೆ ಉಚಿತವಾಗಿ ಸಿ.ಡಿ ವಿತರಿಸಲು ಲಹರಿ ವೇಲು ಮುಂದಾಗಿದ್ದಾರೆ.
‘ಪವರ್‌’ ಸಿನಿಮಾ ರಾಜ್ಯದ ಸುಮಾರು 250 ಚಿತ್ರಮಂದಿರಗಳಲ್ಲಿ ಗುರುವಾರ ಬಿಡುಗಡೆಯಾಗಲಿದೆ. ಈ ಪೈಕಿ ಆಯ್ದ ಮೂವತ್ತು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಹಾಡುಗಳ ಸಿ.ಡಿ ಕೊಡುವ ಯೋಚನೆ ವೇಲು ಅವರಲ್ಲಿ ಮೂಡಿತು.

ಇದಕ್ಕೆ ಚಿತ್ರದ ವಿತರಕ, ಸಮರ್ಥ ವೆಂಚರ್ಸ್‌ನ ಪ್ರಸಾದ್ ಬೆಂಬಲ ನೀಡಿದರು. ಈ ಯೋಜನೆಯಡಿ ಒಟ್ಟು ಐದು ಲಕ್ಷ ಸಿ.ಡಿ.ಗಳನ್ನು ಭರದಿಂದ ಸಿದ್ಧಪಡಿಸಲಾಗುತ್ತಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಪವರ್‌ ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಉಚಿತವಾಗಿ ವಿತರಿಸಲಾಗುವುದು.

‘ಇತ್ತೀಚಿನ ದಿನಗಳಲ್ಲಿ ಸಿನಿಮಾದ ಹಾಡುಗಳ ಸಿ.ಡಿ. ಗಮನಾರ್ಹ ಸಂಖ್ಯೆಯಲ್ಲಿ ಮಾರಾಟವಾಗುವುದೇ ಕಡಿಮೆಯಾಗಿದೆ. ಅದನ್ನೇ ಮುಂದಿಟ್ಟುಕೊಂಡು ಅನೇಕ ಜನರು, ಸಂಗೀತ ಕೇಳುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ದೂರುತ್ತಾರೆ. ಆದರೆ ಪವರ್‌ ಚಿತ್ರದ ಹಾಡುಗಳು ಅದನ್ನು ಹುಸಿ ಮಾಡಿವೆ. ಅದೆಷ್ಟೋ ದಿನಗಳ ಬಳಿಕ ಈ ಸಿನಿಮಾದ ಹಾಡುಗಳಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ.

ಸಿನಿಮಾವೊಂದರ ಹಾಡುಗಳ ಸಿ.ಡಿ. ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿರುವುದು ಕನ್ನಡ ಸಂಗೀತ ಕ್ಷೇತ್ರಕ್ಕೆ ಚೈತನ್ಯ ನೀಡಿದೆ’ ಎಂದು ವೇಲು ಸಂತಸ ವ್ಯಕ್ತಪಡಿಸುತ್ತಾರೆ. ಈ ಖುಷಿಯನ್ನು ಪ್ರೇಕ್ಷಕರ ಜತೆಗೆ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಪ್ರಚಾರಕ್ಕೆಂದು ಸಿ.ಡಿ. ಕೊಡುಗೆ ಯೋಜನೆ ರೂಪಿಸಿದ್ದಾಗಿ ಅವರು ಹೇಳುತ್ತಾರೆ.

ಆಯ್ದ ಚಿತ್ರಮಂದಿರಗಳಲ್ಲಿ ಮೂರು ದಿನ ಎಲ್ಲ ಪ್ರದರ್ಶನಕ್ಕೆ ಈ ಕೊಡುಗೆ ಅನ್ವಯವಾಗಲಿದೆ. ಯಾವ ಚಿತ್ರಮಂದಿರದಲ್ಲಿ ಈ ಕಾಣಿಕೆ ಸಿಗಲಿದೆ ಎಂಬುದನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತಿನಲ್ಲಿ ನಮೂದಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT