ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾತ್ರ ಯಾವುದಾದರೇನು,ನಿರ್ವಹಣೆ ಮುಖ್ಯ...

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸೋನು ಗೌಡ ನಟನೆಯ ‘ಗೋವಾ’ ಇಂದು (ಮಾ. 6) ತೆರೆ ಕಾಣುತ್ತಿದೆ. ಒಂದು ವರ್ಷದ ನಂತರ ತೆರೆಕಾಣುತ್ತಿರುವ ತಮ್ಮ ಕನ್ನಡ ಸಿನಿಮಾದ ಬಗ್ಗೆ ಸೋನು ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ.

*‘ಗೋವಾ’ ಚಿತ್ರದ ವಿಶೇಷಗಳೇನು?
ಇದು ಬಹು ತಾರಾಗಣವಿರುವ ಚಿತ್ರ. ಚಿತ್ರದಲ್ಲಿ ತುಂಬಾ ಎಂಟರ್‌ಟೇನ್‌ಮೆಂಟ್ ಇದೆ. ತಮಿಳಿನಲ್ಲಿ ಹಿಟ್ ಆದ ಈ ಹಾಸ್ಯಭರಿತ ಚಿತ್ರ ಕನ್ನಡದಲ್ಲೂ ಹಿಟ್ ಆಗುವ ನಂಬಿಕೆ ಇದೆ. ಮೂಲ ಚಿತ್ರವನ್ನೂ ನೋಡಿದ್ದೇನೆ. ಅದಕ್ಕೂ ಕನ್ನಡದ ‘ಗೋವಾ’ಕ್ಕೂ ಅಂತಹ ವ್ಯತ್ಯಾಸವೇನೂ ಏನೂ ಇಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ ಅಷ್ಟೆ.

*ನಿಮ್ಮ ಪಾತ್ರ ಹೇಗಿದೆ?
ನಾನಿಲ್ಲಿ ತರುಣ್ ಅವರಿಗೆ ಜೋಡಿಯಾಗಿ ನಟಿಸಿರುವೆ. ನನ್ನ ಪಾತ್ರಕ್ಕೆ ಕೊಂಚ ನೆಗೆಟಿವ್ ಶೇಡ್ ಕೂಡ ಇದೆ. ಇನ್ನೂ ಹಣ ಮಾಡಬೇಕು ಇನ್ನೂ ಹಣ ಮಾಡಬೇಕು ಎಂಬ ದಾಹ ಇರುವ ಪಾತ್ರ. ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ. ಕೋಮಲ್, ಶರ್ಮಿಳಾ ಅವರ ಜೊತೆಯಲ್ಲಿ ಚಿತ್ರೀಕರಣ ತುಂಬ ಚೆನ್ನಾಗಿತ್ತು.

*ಬೇರೆ ಯಾರ ಚಿತ್ರಗಳಲ್ಲಿ ನಟಿಸುತ್ತಿರುವಿರಿ?
ಶಿವರುದ್ರಯ್ಯ ನಿರ್ದೇಶನದ, ದೇವನೂರ ಮಹಾದೇವ ಅವರ ಕಥೆ ಆಧರಿತ ‘ಮಾರಿಕೊಂಡವರು’ ಚಿತ್ರದಲ್ಲಿ ನಟಿಸುತ್ತಿರುವೆ. ಸುಮನಾ ಕಿತ್ತೂರು ನಿರ್ದೇಶಿಸುತ್ತಿರುವ, ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಥೆ ಆಧರಿತ ಚಿತ್ರವನ್ನೂ ಒಪ್ಪಿಕೊಂಡಿದ್ದೇನೆ. ‘ಮಾರಿಕೊಂಡವರು’ ಚಿತ್ರದಲ್ಲಿ ನನ್ನದು ತುಂಬಾ ಪ್ರಬುದ್ಧ ಪಾತ್ರ. ನಾನು ನಟಿಸಿರುವ ‘ಹಾಫ್ ಮೆಂಟ್ಲು’ ಚಿತ್ರ  ಬಿಡುಗಡೆಗೆ ಸಿದ್ಧವಾಗಿದೆ.

*ಕಮರ್ಷಿಯಲ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ ನೀವು ಈಗ ಕಲಾತ್ಮಕ ಚಿತ್ರಗಳಲ್ಲೂ ಗುರ್ತಿಸಿಕೊಳ್ಳುತ್ತಿದ್ದೀರಿ. ಈ ಅನುಭವ ಹೇಗನ್ನಿಸುತ್ತಿವೆ?
ಖುಷಿ ಇದೆ. ಕಲಾತ್ಮಕ ಚಿತ್ರಗಳ ಬಗ್ಗೆ ನನಗೆ ಮೊದಲಿನಿಂದಲೂ ಒಲವಿದೆ.  ತಮಿಳಿನಲ್ಲಿ ಕೂಡ ಒಂದು ಕಲಾತ್ಮಕ ಚಿತ್ರದಲ್ಲಿ ಅಭಿನಯಿಸಿರುವೆ.

*ಕಲಾತ್ಮಕ ಚಿತ್ರಗಳಿಗೆ ನಿಮ್ಮ ತಯಾರಿ ಹೇಗಿದೆ?
ವಿಶೇಷ ತಯಾರಿ ಏನೂ ಇಲ್ಲ. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ನನಗೆ ಯಾವ ಪಾತ್ರ ಎಂದು ಇನ್ನೂ ಹೇಳಿಲ್ಲ. ‘ಆದರೆ ಆ ಕಥೆಯನ್ನೊಮ್ಮೆ ಓದು’ ಎಂದು ಸುಮನಾ ಹೇಳಿದ್ದಾರೆ. ಶಿವರುದ್ರಯ್ಯ ಅವರು ‘ಮಾರಿಕೊಂಡವರು’ ಕಥೆಯನ್ನು ಓದಬೇಡ ಎಂದೇ ಹೇಳಿದ್ದಾರೆ. ಕಥೆಯಲ್ಲಿನ ಪಾತ್ರ ಹಾಗೂ ಸಿನಿಮಾದಲ್ಲಿನ ಪಾತ್ರಗಳಲ್ಲಿ ಬದಲಾವಣೆ ಇದೆ. ಕಥೆ ಓದಿದರೆ ಅದೇ ಪಾತ್ರ ತಲೆಯಲ್ಲಿ ಅಚ್ಚಾಗಿಬಿಡುತ್ತದೆ ಎನ್ನುವುದು ಅವರ ಅನಿಸಿಕೆ.

*ಕನ್ನಡದಲ್ಲಿ ನೀವು ನಟಿಸುತ್ತಿರುವ ಚಿತ್ರಗಳು ಕಡಿಮೆ ಆದವಲ್ಲವೇ?
ಹೌದು. ಕಳೆದ ಎರಡು ಮೂರು ವರ್ಷಗಳಲ್ಲಿ ತಮಿಳಿನಲ್ಲಿ ಸಾಕಷ್ಟು ಜಾಹೀರಾತುಗಳಲ್ಲಿ ಕೆಲಸ ಮಾಡಿದೆ. ತಮಿಳು, ಮಲಯಾಳಂನಲ್ಲಿ ಕೆಲವು ಚಿತ್ರಗಳಲ್ಲೂ ನಟಿಸಿರುವೆ. ‘ದ್ಯಾವ್ರೇ’ ಚಿತ್ರದಲ್ಲಿ ನಟಿಸಿದ ನಂತರ ಕನ್ನಡದಲ್ಲಿ ಮತ್ತೆ ಹೆಚ್ಚು ಅವಕಾಶಗಳು ದೊರೆಯುತ್ತಿವೆ.  ಕನ್ನಡ, ತಮಿಳು– ಒಂದಲ್ಲಾ ಒಂದೆಡೆ ಕೆಲಸ ನಡೆಯುತ್ತಲೇ ಇರುತ್ತದೆ.

*ನೀವು ನಿರೀಕ್ಷಿಸಿದ ಪಾತ್ರಗಳು ಈವರೆಗೆ ದೊರೆತಿವೆಯೇ?
ನಾನೊಬ್ಬ ನಟಿಯಾಗಿ ಇಂಥದ್ದೇ ಪಾತ್ರಗಳು ಬೇಕು ಎಂದು ಕಾಯುತ್ತಾ ಕೂರಲು ಸಾಧ್ಯವಿಲ್ಲ. ಬಂದ ಅವಕಾಶಗಳನ್ನೇ ಚೆನ್ನಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಅನಿಸಿಕೆ. ನಿರ್ದೇಶಕರು ಪಾತ್ರದ ಬಗ್ಗೆ ವಿವರಣೆ ನೀಡಿರುತ್ತಾರಾದರೂ ಅದಕ್ಕೆ ಜೀವ ತುಂಬುವವರು ನಾವೇ ತಾನೇ. ಹಾಗಾಗಿ ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಆದರೂ ‘ರಾಮಲೀಲಾ’ದಲ್ಲಿ ದೀಪಿಕಾ ಪಡುಕೋಣೆ, ‘ಕ್ವೀನ್’ನಲ್ಲಿ ಕಂಗನಾ ರನೋಟ್‌ರ ಪಾತ್ರ ನೋಡಿದಾಗ ಈ ಪಾತ್ರ ನನಗೆ ಸಿಕ್ಕರೆ ನಾನು ಹೇಗೆ ಮಾಡಬಲ್ಲೆ ಎಂಬ ಕಲ್ಪನೆ ಮೂಡುತ್ತದೆ. ಅಂಥ ಪಾತ್ರ ಮಾಡಬೇಕು ಎಂಬುದು ನನ್ನ ನಿರೀಕ್ಷೆ. ‘ಗೊಂಬೆಗಳ ಲವ್’, ‘ಜಟ್ಟ’ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಹೊಸಬರ ಜೊತೆ ಕೆಲಸ ಮಾಡಬೇಕೆಂದು ನನಗೂ ತುಂಬಾ ಆಸೆ ಇತ್ತು. ಆಗ ಸಿಕ್ಕಿದ್ದು ‘ಹಾಫ್ ಮೆಂಟ್ಲು’. ಈ ಚಿತ್ರ ನನ್ನ ನಿರೀಕ್ಷೆಗಿಂತಲೂ ತುಂಬಾ ಚೆನ್ನಾಗಿ ಬಂದಿದೆ. ‘ಗೋವಾ’ ಚಿತ್ರದ ಪಾತ್ರಕ್ಕಿಂತ ಅಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT