ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಗ’ದ ವಿದ್ಯಾದಾನಿ

ಸದ್ದಿಲ್ಲದ ಸಾಧಕರು-5
Last Updated 29 ಜೂನ್ 2015, 19:30 IST
ಅಕ್ಷರ ಗಾತ್ರ

ಸದ್ದಿಲ್ಲದೇ, ಪ್ರಚಾರದ ಬೆನ್ನು ಹತ್ತದೆ, ಎಲೆಮರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವವರು ಅದೆಷ್ಟೋ ಮಂದಿ. ರಾಜ್ಯ ಸರ್ಕಾರ ಗುರುತಿಸದಿದ್ದರೂ ಕೇಂದ್ರದ ಗಮನ ಸೆಳೆದವರು ಕೆಲವರಿದ್ದರೆ, ಯಾರು ಗುರುತಿಸದಿದ್ದರೂ ಸಮಾಜ ಸೇವೆಯಲ್ಲಿಯೇ ನೆಮ್ಮದಿ ಕಾಣುತ್ತಿರುವವರು ಹಲವರು. ಅಂಥ ಕೆಲ ಸಾಧಕರ ಪರಿಚಯ ಈ ಅಂಕಣದಲ್ಲಿ...

ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಎಂದರೆ ವ್ಯಾಪಾರೀಕರಣ ಎನ್ನುವಂಥ ಪರಿಸ್ಥಿತಿ ಇಂದಿನದ್ದು. ಆದರೆ ಇಲ್ಲೊಬ್ಬ ವಿಜ್ಞಾನಿ ,  ವಿದ್ಯಾದಾನಕ್ಕಾಗಿ ಸ್ವಯಂ ನಿವೃತ್ತಿ ಪಡೆದು ದೇಶದಲ್ಲಿಯೇ ಪ್ರಥಮ ಎನಿಸಿರುವ ಪಿರಮಿಡ್‌ ಮಾದರಿಯ ಶಾಲೆ ನಿರ್ಮಿಸಿ, ತಾವು ಕೂಡಿಟ್ಟ ಹಣವನ್ನೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವ್ಯಯಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿಯಿಂದ ಗುಡೇಮಾರನಹಳ್ಳಿ ದಾರಿಯಲ್ಲಿ ಇರುವ ತೊರೆಹಳ್ಳಿಯ ಬಳಿ ಸಾಗುತ್ತಿದ್ದಂತೆ ಹತ್ತಾರು ಪಿರಮಿಡ್‌ಗಳು ಗಮನಸೆಳೆಯುತ್ತವೆ. ಈಜಿಪ್ಟ್‌ ಮಾದರಿಯಲ್ಲಿ ಕಟ್ಟಲಾದ ಈ ‘ಪಿರಮಿಡ್‌’ ಆಕರ್ಷಣೀಯ ಕೇಂದ್ರವೂ ಹೌದು. ಇದರ ಹೆಸರು ‘ಪಾರಂಗ ವಿದ್ಯಾಶಾಲೆ’, ಆದರೆ ಎಲ್ಲರ ಬಾಯಲ್ಲೂ ಇದು ‘ಪಿರಮಿಡ್‌ ಶಾಲೆ’. ಪಿರಮಿಡ್‌ ಮಾದರಿಯ ಕಟ್ಟಡದಲ್ಲಿ ವಿದ್ಯಾದಾನ ಮಾಡುತ್ತಿರುವ ದೇಶದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಇದರದ್ದು.
ಅಂದಹಾಗೆ ಈ ಶಾಲೆ, ‘ಪಿರಮಿಡ್‌ ಶಾಲೆ’ ಎಂಬುದಕ್ಕೆ ಮಾತ್ರ  ಪ್ರಸಿದ್ಧಿಯಲ್ಲ. ಇಲ್ಲಿ ಎಲ್ಲವೂ ವಿಶೇಷವೇ. ಇದು ಖಾಸಗಿ ಶಾಲೆಯಾದರೂ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಬಹುತೇಕ ಎಲ್ಲವೂ ಉಚಿತವೇ. ಊಟ, ಸಮವಸ್ತ್ರ... ಎಲ್ಲವೂ ಉಚಿತವಾಗಿ ನೀಡಲಾಗುತ್ತದೆ.

ಇಂಥದ್ದೊಂದು ಅಪರೂಪದ ಶಾಲೆಯ ಆರಂಭದ ಹಿಂದಿರುವ ಯೋಚನೆ ವಿಜ್ಞಾನಿ ಎಂ.ಆರ್‌.ರಾಮಮೂರ್ತಿ ಅವರದ್ದು. ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್‌ ಕಲಾಂ ಅವರ ಜತೆಯೂ ಕೆಲಸ ಮಾಡಿ, ವಿದ್ಯಾದಾನದ ಹಂಬಲದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದ ಅಪರೂಪದ ವ್ಯಕ್ತಿ ಇವರು. ಶಾಲೆಯಲ್ಲಿ ಶಿಕ್ಷಕನಾಗಿ, ಮಾರ್ಗದರ್ಶಿಯಾಗಿ, ಆಡಳಿತಾಧಿಕಾರಿಯಾಗಿ, ಅಷ್ಟೇ ಏಕೆ ಗುಮಾಸ್ತನಾಗಿಯೂ ಕೆಲಸ ಮಾಡುತ್ತಿದ್ದಾರೆ. ತಮಗೆ ಬರುತ್ತಿರುವ ಮಾಸಿಕ ಪಿಂಚಣಿಯನ್ನು ಶಾಲೆಯ ಖರ್ಚು ವೆಚ್ಚಗಳಿಗೆ ವಿನಿಯೋಗಿಸುತ್ತಿದ್ದಾರೆ!

ತಾಯಿ ಪಾರ್ವತಮ್ಮ ಹಾಗೂ ತಂದೆ ರಂಗನಾಥರಾವ್‌ ಅವರ ಹೆಸರಿನ ಮೊದಲ ಅಕ್ಷರಗಳನ್ನು ತೆಗೆದು ‘ಪಾರಂಗ’ ಎಂದೂ ಈ ಸಂಸ್ಥೆಗೆ ಹೆಸರಿಟ್ಟಿದ್ದರೂ ‘ಪಾರಂಗ’ ಎಂದರೆ ‘ಅಜ್ಞಾನದಿಂದ ಸುಜ್ಞಾನದೆಡೆಗೆ’ ಎಂಬ ಅರ್ಥವನ್ನೂ ನೀಡುವುದು  ವಿಶೇಷ. ಚಿಕ್ಕ ಜಾಗವಿದ್ದರೂ ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿ, ಕಿರಿದಾದ ಹತ್ತಾರು ಕೊಠಡಿಗಳನ್ನು ಕಟ್ಟಿ ಸಾಧ್ಯವಾದಷ್ಟು ತರಗತಿಗಳನ್ನು ನಡೆಸುವ ಹಲವು ವಿದ್ಯಾಸಂಸ್ಥೆಗಳು ನಮ್ಮ ಮುಂದೆ ಇವೆ. ಅಲ್ಲದೇ ಎಲ್‌ಕೆಜಿಗೇ ಲಕ್ಷಾಂತರ ರೂಪಾಯಿ ವಂತಿಗೆ ಪಡೆದು ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣ ಮಾಡುತ್ತಿರುವುದು ಈಗ ಮಾಮೂಲು. ಆದರೆ ‘ಪಾರಂಗ’ ಹಾಗಲ್ಲ. ಅತಿ ಕಡಿಮೆ ಬೆಲೆಯಲ್ಲಿ ಪ್ರವೇಶ ಶುಲ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ, ಉಳಿದೆಲ್ಲವೂ ಇಲ್ಲಿ ಉಚಿತ.

ಅಷ್ಟಕ್ಕೂ ಈ ಕಟ್ಟಡವನ್ನು ಪಿರಮಿಡ್‌ ಮಾದರಿಯಲ್ಲಿ ಕಟ್ಟಿರುವ ಹಿಂದೆ ವೈಜ್ಞಾನಿಕ ಉದ್ದೇಶವೂ ಇದೆ. ‘ಈ ರೀತಿಯ ಕಟ್ಟಡದಲ್ಲಿ ಕಲಿಯುವ ಮಕ್ಕಳ ಗ್ರಹಿಕಾ ಶಕ್ತಿ ಹೆಚ್ಚಾಗುತ್ತದೆ. ಅಧ್ಯಯನವನ್ನು ಕೇಂದ್ರೀಕರಿಸಿ ನಡೆಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ರಾಮಮೂರ್ತಿ. ಎಲ್‌ಕೆಜಿಯಿಂದ 10ನೇ ತರಗತಿ ಇಲ್ಲಿದೆ. 1ರಿಂದ 6ನೇ ತರಗತಿವರೆಗೆ ಕನ್ನಡ ಮಾಧ್ಯಮ, 6ರಿಂದ 7ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಹಾಗೂ 8,9,10ನೇ ತರಗತಿ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಒಟ್ಟು 660 ವಿದ್ಯಾರ್ಥಿಗಳಿದ್ದು, 11 ಪಿರಮಿಡ್‌ಗಳಿವೆ.  24 ಶಿಕ್ಷಕರಿದ್ದಾರೆ.

ವಿಜ್ಞಾನಿಯಿಂದ ವಿದ್ಯಾದಾನದೆಡೆಗೆ...
ವಿಜ್ಞಾನಿಯಾಗಿರುವ ತೊರೆಹಳ್ಳಿಯ ನಿವಾಸಿ ರಾಮಮೂರ್ತಿ ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವಿ, ಹಾಸನದಲ್ಲಿ ಬಿ.ಇ ಪದವಿ, ಮದ್ರಾಸ್‌ನ ಐಐಟಿಯಲ್ಲಿ ಎಂ.ಟೆಕ್‌ ಪದವಿ ಪೂರೈಸಿದವರು. ವಿದ್ಯೆಗೆ ತಕ್ಕಂತೆ ಅವರು ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ ಎನ್‌ಎಎಲ್‌ನಲ್ಲಿ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟರಿ) ವಿಜ್ಞಾನಿಯಾಗಿ ನೇಮಕಗೊಂಡರು. ದೇಶದ ಪ್ರತಿಷ್ಠಿತ ಜಿಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಸೇರಿದಂತೆ ಹಲವು ಯೋಜನೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದರು.

33 ವರ್ಷ ಎನ್‌ಎಎಲ್‌ನಲ್ಲಿ ಕೆಲಸ ಮಾಡಿದ ಅವರಿಗೆ ಸಮಾಜ ಸೇವೆಯಲ್ಲಿ ತೊಡಗಬೇಕು ಎಂಬ ಆಸಕ್ತಿ ಬೆಳೆಯಿತು. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉತ್ಕಟ ಬಯಕೆ ಶುರುವಾಯಿತು. ಆದ್ದರಿಂದ ಎನ್‌ಎಎಲ್‌ನಲ್ಲಿಯೇ ನಿರ್ದೇಶಕರ ಹುದ್ದೆಯಲ್ಲಿದ್ದ ಅವರು 2003ರಲ್ಲಿ ನಿವೃತ್ತಿಗೆ ಇನ್ನೂ 5 ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದರು. ಈ ವೇಳೆಗಾಗಲೇ ಅವರು ಬೆಂಗಳೂರಿನ ಜಯನಗರದಲ್ಲಿ ಬೆಂಗಳೂರು ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿಯನ್ನು ಸ್ಥಾಪಿಸುವ ಮೂಲಕ ಸೇವಾ ವಲಯದಲ್ಲಿ ಛಾಪು ಮೂಡಿಸಿದ್ದರು. ಸ್ವಯಂ ನಿವೃತ್ತಿ ನಂತರ ಶಿಕ್ಷಣ ಕಾಯಕಕ್ಕೆ ಮುಂದಾದರು.

‘ಸುಧಾ’ ಪ್ರಭಾವ
ಹಿಂದೊಮ್ಮೆ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಪಿರಮಿಡ್‌’ ಗಳ ಬಗೆಗಿನ ಲೇಖನ ಓದಿ ಅದಕ್ಕೆ ಆಕರ್ಷಿತರಾಗಿದ್ದರು. ಆ ಲೇಖನದ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಅವರು, ಅದೇ ಮಾದರಿಯಲ್ಲಿ ಶಾಲೆ ನಿರ್ಮಾಣಕ್ಕೆ ಮುಂದಾಗಿ ತಂದೆಯಿಂದ ಬಳುವಳಿಯಾಗಿ ಬಂದ ಆರು ಎಕರೆ ಜಮೀನಿನಲ್ಲಿ ‘ಪಾರಂಗ’ ಚಾರಿಟಬಲ್‌ ಟ್ರಸ್ಟ್‌ ಶುರು ಮಾಡಿದರು. ಸೇವಾ ಅವಧಿಯಲ್ಲಿ ಉಳಿತಾಯ ಮಾಡಿದ್ದ ಹಾಗೂ ನಿವೃತ್ತಿ ನಂತರ ಬಂದ ಎಲ್ಲ ₨ 40 ಲಕ್ಷವನ್ನು ಶಾಲೆ ನಿರ್ಮಿಸಲು ವಿನಿಯೋಗಿಸಿದರು. ಇವರಿಗೆ ಕೆಲ ದಾನಿಗಳೂ ಕೈಜೋಡಿಸಿದರು.

1998ರಲ್ಲಿಯೇ ‘ಪಾರಂಗ’ ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸಿದ್ದ ಅವರು, 2000ನೇ ಇಸವಿಯಲ್ಲಿಯೇ ಮನೆಯಲ್ಲಿಯೇ ಪ್ರೌಢಶಾಲೆ ಆರಂಭಿಸಿದರು. 2003ರಲ್ಲಿ ಮೊದಲಿಗೆ ಮೂರು ಪಿರಮಿಡ್‌ ಕಟ್ಟಡ ತಲೆ ಎತ್ತಿದವು. ನಂತರ ಇವು 11ಕ್ಕೆ ಏರಿತು. 30/X30 ಅಡಿ ವಿಸ್ತೀರ್ಣದಲ್ಲಿ 10 ಪಿರಮಿಡ್‌ಗಳಿದ್ದರೆ, 40X/40 ಅಡಿ ವಿಸ್ತೀರ್ಣದಲ್ಲಿ ಒಂದು ಪಿರಮಿಡ್‌ ನಿರ್ಮಿಸಲಾಗಿದೆ. ಎಲ್ಲದರಲ್ಲೂ ಗಾಳಿ, ಬೆಳಕು ಸ್ವಚ್ಛಂದವಾಗಿ ಒಳ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಲಾಗಿದೆ. ಪಿರಮಿಡ್‌ ಒಳಗೆ ಸುತ್ತಲೂ ಸಸಿಗಳನ್ನು ಬೆಳೆಸಲು ಅವಕಾಶ ಮಾಡಿಡಲಾಗಿದೆ. ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.

ಶಾಲೆಯನ್ನು ಕಟ್ಟಿದರೆ ಸಾಲದು, ಅಲ್ಲಿನ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಪಾಠವನ್ನು ಹೇಳಿಕೊಡಬೇಕು ಎಂಬುದನ್ನು ಅರಿತ ರಾಮಮೂರ್ತಿ ಅವರು, ಸ್ವತಃ 7 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಪಾಠವನ್ನು ಹೇಳಿಕೊಡುತ್ತಾರೆ. ಮಾನವೀಯ ಮೌಲ್ಯಗಳನ್ನು ಬೆಳೆಸುವ ನೀತಿ ಪಾಠ, ವೈಜ್ಞಾನಿಕವಾಗಿ ಚಿಂತಿಸುವ ವಿಧಾನವನ್ನು ಅವರು ತಿಳಿಸಿಕೊಡುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಪ್ರಯೋಗಾಲಯ ಮತ್ತು ಗ್ರಂಥಾಲಯವನ್ನು ಅವರು ನಿರ್ಮಿಸಿದ್ದಾರೆ.  ಮೂಲ ವಿಜ್ಞಾನದ ಗ್ರಾಮೀಣ ಮಕ್ಕಳನ್ನು ಆಕರ್ಷಿಸಲು ಅವರು ಶ್ರಮಿಸುತ್ತಿದ್ದಾರೆ.  ಈ ಶಾಲೆಗೆ ನಾಲ್ಕು ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬರುತ್ತಿದೆ.

ಇಲ್ಲಿಯವರೆಗೆ ಟ್ರಸ್ಟ್‌ ₨ 75 ಲಕ್ಷಕ್ಕೂ ಹೆಚ್ಚು ವಿನಿಯೋಗಿಸಿದೆ. ಒಂದೊಂದು ಪಿರಮಿಡ್‌ ಕಟ್ಟಲು ಅಂದಾಜು ₨ 4 ಲಕ್ಷ ತಗುಲಿದೆ. ಅಲ್ಲದೆ ಶಾಲೆಯ ನಿರ್ವಹಣೆಗೆ ವರ್ಷಕ್ಕೆ ₨ 22ರಿಂದ 24 ಲಕ್ಷ ತಗಲುತ್ತಿದೆ. ಹಸಿದಿದ್ದರೆ ವಿದ್ಯೆ ಕಲಿಯುವುದು ಕಷ್ಟ ಎಂಬುದನ್ನು ಅರಿತ ಅವರು ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ. ಬೆಂಗಳೂರಿನ ತ್ಯಾಗರಾಜನಗರದ ಸಾಯಿ ಮಂದಿರವು ಇಲ್ಲಿನ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದೆ. ಅಲ್ಲದೆ ಅಮೆರಿಕದ ದಾನಿಗಳು ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಆರು ಎಕರೆ ವಿಶಾಲ ಪ್ರದೇಶ ಹೊಂದಿರುವ ಇಲ್ಲಿ ಮಕ್ಕಳಿಗಾಗಿ ಸುಸಜ್ಜಿತ ಆಟದ ಮೈದಾನ, ವಿದ್ಯಾರ್ಥಿ ನಿಲಯ, ಅನಾಥಾಲಯ ನಿರ್ಮಿಸುವ ಗುರಿಯನ್ನು ‘ಪಾರಂಗ’ ಚಾರಿಟಬಲ್‌ ಟ್ರಸ್ಟ್‌ ಹೊಂದಿದೆ.
‘ಇಂಥ ಕಟ್ಟಡಗಳ ನಿರ್ಮಾಣದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆ ನಡೆಯಬೇಕಾದ ಅಗತ್ಯ ಇದೆ. ಇದು ಭವಿಷ್ಯದ ಶಿಕ್ಷಣದಲ್ಲಿ ಬದಲಾವಣೆಗಳನ್ನು ತರಲು ಅತ್ಯಗತ್ಯ’ ಎನ್ನುವುದು ರಾಮಮೂರ್ತಿ ಅವರ ಅನುಭವದ ನುಡಿ.

ಅವರ ಸಂಪರ್ಕ ಸಂಖ್ಯೆ 99805–53603.
ಚಿತ್ರಗಳು : ಚಂದ್ರೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT