ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಟ್ಟ’ ಹೆಸರಿನ ‘ದೊಡ್ಡ’ರಾಜ ಗವಾಯಿ

ರಂಗಭೂಮಿ
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಸಂಗೀತ ಲೋಕದ ಧ್ರುವತಾರೆ ಪುಟ್ಟರಾಜ ಗವಾಯಿಗಳು- ಅಂಧರ, ಅಂಗವಿಕಲರ, ಅನಾಥರ ಕಾಮಧೇನು. ತಮ್ಮ ಗುರು ಪಂಚಾಕ್ಷರ ಗವಾಯಿಗಳ ಸಂಗೀತದ ಪಥದಲ್ಲೇ ಸಾಗಿ ನಾಟಕ ಲೋಕವನ್ನು ಒಳಗೊಳ್ಳುವ ಮೂಲಕ ಅದನ್ನು ವಿಸ್ತರಿಸಿದವರು. ಅಂತೆಯೇ ಸಂಗೀತ ಹಾಗೂ ರಂಗ ಕಲಾವಿದರ ಕಾಶಿ ಎನಿಸಿದೆ ಗದಗ ವೀರೇಶ್ವರ ಪುಣ್ಯಾಶ್ರಮ. ಆಶ್ರಮಕ್ಕೆ ಕಾಲಿಟ್ಟ ಒಡನೆ ನಾದಲೋಕವೊಂದು ಹೊರಹೊಮ್ಮುತ್ತದೆ. ಅದರಲ್ಲೇ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಹತ್ತಾರು ಅಶಕ್ತ ಕಲಾವಿದರ ಉತ್ಸಾಹ ನಿಮ್ಮ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಆಶ್ರಮವನ್ನು ಕಟ್ಟಿದ ಪಂಚಾಕ್ಷರಿ ಗವಾಯಿ ಮತ್ತು ಅದನ್ನು ಎತ್ತರೆತ್ತರಕ್ಕೆ ಬೆಳೆಸಿದ ಪುಟ್ಟರಾಜ ಗವಾಯಿ ಎಂಬ ಈ ಇಬ್ಬರು ಮಹನೀಯರು ಬದುಕಿದ್ದಾಗಲೇ ದಂತಕತೆಯಾದವರು. ದೇವರ ರಥೋತ್ಸವಗಳು ಈ ನಾಡಿನಲ್ಲಿ ಸಾಕಷ್ಟು ಜರುಗುತ್ತವೆ. ಆದರೆ ಒಬ್ಬ ಸಾಧಕನ ರಥೋತ್ಸವ ಎಲ್ಲಿಯಾದರೂ ನೀವು ಕಂಡಿರುವಿರಾ? ಆ ರಥೋತ್ಸವವೇ ಗದಗದ ಪಂಚಾಕ್ಷರಿ ಗವಾಯಿ ರಥೋತ್ಸವ. ಪ್ರತಿವರ್ಷ ಜುಲೈ ತಿಂಗಳು ಕಲಾವಿದರ ಪ್ರಾಯೋಜಕತ್ವದಲ್ಲಿ ಇದು ಜರುಗುತ್ತದೆ. ಪುಟ್ಟರಾಜ ಗವಾಯಿಗಳು ನಿಧನರಾದ ನಂತರ ಕಳೆದ ಮೂರು ವರ್ಷದಿಂದ ಪಂಚಾಕ್ಷರಿ ಹಾಗೂ ಪುಟ್ಟರಾಜರ ರಥೋತ್ಸವಗಳು ಒಟ್ಟಿಗೆ ನಡೆಯುತ್ತವೆ.

ಸಂಗೀತದ ಮೂಲಕ ಜನರ ಬದುಕು ಕಟ್ಟಲು ಲೋಕ ಸಂಚಾರ ಮಾಡಿದ ಈ ಇಬ್ಬರು ಮಹನೀಯರು ನಡೆದ ಹಾದಿಯಲ್ಲಿ ಪವಾಡಗಳೇ ಸೃಷ್ಟಿಯಾಗಿವೆ. ಅಂತಹ ಪವಾಡಗಳನ್ನು ಜನಪದರು ಕತೆ ಕಟ್ಟಿ ಹಾಡುತ್ತಾರೆ. ಈ ಕತೆಗಳ ಜಾಡು ಹಿಡಿದು ಪುಟ್ಟರಾಜ ಗವಾಯಿಗಳ ಕುರಿತ ಹೊಸದೊಂದು ನಾಟಕ ಇದೀಗ ಸಿದ್ಧಗೊಂಡಿದ್ದು, ಈಗಾಗಲೇ ಹಲವು ಪ್ರದರ್ಶನ ಕಂಡಿದೆ. ನಗರದಲ್ಲಿ ಕಳೆದ ಎರಡು ವಾರಗಳಲ್ಲಿ ಕಲಾಗ್ರಾಮ ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರಯೋಗ ಇತ್ತು. ಕಲಾಗ್ರಾಮದಲ್ಲಿ ಮೇಕಪ್ ಕೃಷ್ಣರ ರಂಗಚೇತನ ತಂಡ ಆಯೋಜಿಸಿತ್ತು. ಕಲಾಕ್ಷೇತ್ರದಲ್ಲಿ ಹೆಸರಾಂತ ನಟಿ ಹೆಲನ್ ಮೈಸೂರು ಅವರು ತಮ್ಮ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಈ ನಾಟಕ ಆಯೋಜಿಸಿದ್ದರು.

ಕಲಾವಿದೆಯರೇ ಒಟ್ಟಾಗಿ ನಿರ್ಮಿಸಿ ನಟಿಸಿದ ನಾಟಕ ಇದು. ಈ ನಾಟಕವನ್ನು ರಚಿಸಿದವರು ಹೆಸರಾಂತ ವೃತ್ತಿ ರಂಗಭೂಮಿ ನಟಿ ಜಯಲಕ್ಷ್ಮಿ ಪಾಟೀಲ ಅವರು. ಜತೆಗೆ ತಾಯಿ ಹಾಗೂ ಭೂತನ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದರು. ಪುಟ್ಟರಾಜ ಗವಾಯಿಗಳ ಹಾವಭಾವ, ನಡೆನುಡಿಯನ್ನು ಯಥಾವತ್ ಎನ್ನುವಂತೆ ತಮ್ಮ ಅಮೋಘ ಅಭಿನಯದ ಮೂಲಕ ಕಟ್ಟಿಕೊಟ್ಟವರು ಮತ್ತೊಬ್ಬ ಹೆಸರಾಂತ ನಟಿ ಹಾಗೂ ಕರ್ನಾಟಕ ಕಲಾವೈಭವ ನಾಟ್ಯ ಸಂಘದ ಒಡತಿ ಮಾಲತಿ ಸುಧೀರ್.

ಹಾವೇರಿ ಸಮೀಪದ ದೇವಗಿರಿಯಲ್ಲಿ ರೇವಣ್ಣ- ಸಿದ್ದವ್ವ ದಂಪತಿಗೆ ಜನಿಸಿದ ಪುಟ್ಟರಾಜ (ಪುಟ್ಟಯ್ಯ) ಹುಟ್ಟು ಕುರುಡರು. ತಂದೆ ತಾಯಿಗೆ ಈ ವಿಷಯ ಆಘಾತ ತರುವ ದೃಶ್ಯದಿಂದ ನಾಟಕ ಆರಂಭವಾಗುತ್ತದೆ. ತನ್ನ ಸೋದರ ಮಾವ ಚಂದ್ರಯ್ಯ ತಂದುಕೊಟ್ಟ ಹಾರ್ಮೋನಿಯಂ ನುಡಿಸುವುದರಲ್ಲಿ ಅಂಧ ಬಾಲಕ ಪುಟ್ಟರಾಜನಿಗೆ ಅತೀವ ಆಸಕ್ತಿ. ಈ ಹಾರ್ಮೋನಿಯಂ ವಾದ್ಯವೇ ಅಂಧನ ಬದುಕು ರೂಪಿಸಬಲ್ಲದು ಎನ್ನುವುದನ್ನು ಸರಿಯಾಗಿಯೇ ಊಹಿಸಿದ ಚಂದ್ರಯ್ಯ, ಗದಗದ ಪಂಚಾಕ್ಷರ ಗವಾಯಿಗಳ ಆಶ್ರಮಕ್ಕೆ ಪುಟ್ಟರಾಜನನ್ನು ಕರೆತಂದು ಸೇರಿಸುತ್ತಾನೆ. ದೈಹಿಕ ಊನವನ್ನೇ ಒಂದು ಛಲವಾಗಿ ಸ್ವೀಕರಿಸಿದ ಪುಟ್ಟಯ್ಯ ಅಲ್ಲಿನ ವಾತಾವರಣದಲ್ಲಿ ಹಾರ್ಮೊನಿಯಂ, ಸಾರಂಗಿ ಮುಂತಾದ ನಾಲ್ಕಾರು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತ ನಾಗುತ್ತಾನೆ. ಜತೆಗೆ ವಿದ್ಯೆಯ ಭಾಗ್ಯ ಲಭಿಸುತ್ತದೆ. ಅಂಧರ ಅನಾಥರ ಸೇವೆ ಮಾಡಬೇಕು. ಸಂಗೀತದ ಮೂಲಕ ಅವರ ಬದುಕಿಗೊಂದು ದಾರಿ ತೋರಬೇಕು ಎಂಬ ಮಹೋನ್ನತ ಸಂಸ್ಕಾರ ಗುರುಗಳಿಂದ ದೊರೆಯುತ್ತದೆ. ಅಲ್ಲಿಂದ ಪುಟ್ಟರಾಜರು ಹಿಂದಿರುಗಿ ನೋಡಿದ್ದೇ ಇಲ್ಲ.

ಹಾರ್ಮೋನಿಯಂ ಮತ್ತು ಸಾರಂಗಿ ವಾದನದಲ್ಲಿ ದೇಶದಲ್ಲೇ ದೊಡ್ಡ ಹೆಸರು ಮಾಡುವ ಮಟ್ಟಕ್ಕೆ ಸಾಧನೆ ಮಾಡುತ್ತಾರೆ. ತಮ್ಮೊಂದಿಗೆ ನೂರಾರು ಶಿಷ್ಯಪಡೆಯನ್ನು ರೂಪಿಸುತ್ತಾರೆ. ಹೆಸರಾಂತ ಸಂಗೀತಗಾರರಾದ ಬಸವರಾಜ ರಾಜಗುರು, ವೆಂಕಟೇಶ ಕುಮಾರ್, ಕುಮಾರದಾಸ್, ಅರ್ಜುನ ಸಾ. ನಾಕೋಡ, ಕಲಕೇರಿ ಮುಂತಾದ ಹತ್ತಾರು ಸಂಗೀತಗಾರರು ಈ ಆಶ್ರಮದ ಗರಡಿಯಲ್ಲಿ ಬೆಳೆದವರು. ಸಂಗೀತದ ಜತೆಗೆ ನಾಟಕವನ್ನು ಪುಟ್ಟರಾಜ ಗವಾಯಿಗಳು ಒಟ್ಟೊಟ್ಟಿಗೆ ಕೊಂಡೊಯ್ಯುತ್ತಾರೆ. ತಾವೇ ಸ್ಥಾಪಿಸಿದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘವನ್ನು ಪೋಷಿಸುತ್ತಾರೆ. ಆ ಕಂಪನಿಗೆ ತಾವೇ ಹತ್ತಾರು ನಾಟಕಗಳನ್ನು ಬರೆದು ಕೊಡುತ್ತಾರೆ. ಸಾಧನೆಯ ತುಂಬು ಬದುಕು ಈ ಪದ್ಮಭೂಷಣ ಪುಟ್ಟರಾಜರದು. ಅವರ ಜೀವನಗಾಥೆಯನ್ನು ಹಿಡಿದು ಕೊಡುವ ಕ್ಯಾನ್‍ವಾಸ್ ದೊಡ್ಡದು. ಅದನ್ನು ಒಂದು ನಾಟಕದಲ್ಲಿ ಅಡಕ ಗೊಳಿಸುವುದು ಕಷ್ಟಸಾಧ್ಯ. ಸಾಂಕೇತಿಕವಾಗಿ ಕೆಲವನ್ನು ಮಾತ್ರ ತೋರಿಸಬಹುದು.

ಆಶ್ರಮಕ್ಕೆ ಸೇರಿ ವಿದ್ಯಾವಂತನಾದ ಪುಟ್ಟರಾಜನನ್ನು ವಾಪಸ್ ಕರೆದೊಯ್ಯಲು ಆಗಮಿಸಿದಾಗ ಪುಟ್ಟರಾಜನ ಮನಸ್ಸು ದ್ವಂದ್ವದಲ್ಲಿ ಸಿಕ್ಕಿಕೊಳ್ಳುತ್ತದೆ. ವಾಪಸ್ ತಾಯಿ ಬಳಿ ಹೋಗಲೇ ಅಥವಾ ಗುರುಗಳ ಆಣತಿಯಂತೆ ಇಲ್ಲೇ ಉಳಿದು ಲೋಕಸೇವೆಯಲ್ಲಿ ನಿರತನಾಗಲೇ ಎಂಬ ನಿರ್ಧಾರ ಕೈಗೊಳ್ಳುವ ಹೊಯ್ದಾಟವನ್ನು ನೈಜವಾಗಿ ತೋರಿಸಲಾಗಿದೆ. ಕೊನೆಗೂ ಪುಟ್ಟರಾಜರು ಆಶ್ರಮದಲ್ಲೇ ಉಳಿಯುವ ನಿರ್ಧಾರ ಕೈಗೊಳ್ಳುತ್ತಾರೆ. ನಂತರದ ಸಾಧನೆಯ ದಾರಿ ಬಹುದೂರದ್ದು. ಅದೊಂದು ಸುದೀರ್ಘ, ಸೃಜನಶೀಲ, ಕ್ರಿಯಾಶೀಲ ಅಷ್ಟೇ ಯಾತನಾಮಯ ಪಯಣ. ತದ ನಂತರವಷ್ಟೇ ಅವರು ಜನರ ಪಾಲಿಗೆ ನಡೆದಾಡುವ ದೇವರಾಗುತ್ತಾರೆ. ಆದರೆ ಪುಟ್ಟರಾಜರು ಆಶ್ರಮದಲ್ಲಿ ಉಳಿದ ನಂತರ ಪವಾಡ ಪುರುಷನಾದ ಹಂತಕ್ಕೆ ಕತೆ ಒಮ್ಮೆಲೇ ಜಿಗಿದುಬಿಡುತ್ತದೆ.

ಜೀವಚ್ಛವವಾಗಿದ್ದ ಭರಮಪ್ಪ ಮತ್ತು ಗಂಗಾ ಎಂಬ ದಂಪತಿಯ ಮಗಳು ಪುಟ್ಟರಾಜರ ಸ್ಪರ್ಶದಿಂದ  ಮರಳಿ ಜೀವನೋತ್ಸಾಹ ಗಳಿಸುತ್ತಾಳೆ. ಕಾಲಾನುಕ್ರಮದಲ್ಲಿ ಸತ್ತವರನ್ನು ಬದುಕಿಸಿದ ಪವಾಡವಾಗಿ ಇದು ರೂಪಾಂತರ ವಾಗುತ್ತದೆ. ಈ ಪವಾಡ ನಿಜವಾಗಿ ನಡೆದಿದೆ ಎಂದೇ ನಾಟಕ ಕಟ್ಟಿಕೊಟ್ಟಿದೆ! ಗವಾಯಿಗಳ ಸಾಧನೆಯ ಮಾರ್ಗದಲ್ಲಿ ಇಂತಹ ಹತ್ತಾರು ಪವಾಡಗಳಿವೆ. ಹೀಗೆ ಪವಾಡಗಳು ಸೃಷ್ಟಿಯಾಗಲು ಕಾರಣವೇನು? ಋಜು ಜೀವನ ನಡೆಸಿದ ಒಬ್ಬ ಸಾಧಕ ಹೇಗೆ ಪವಾಡ ಸದೃಶನಾಗಿ ಗೋಚರವಾಗುತ್ತಾನೆ ಎನ್ನುವುದನ್ನು ಶೋಧಿಸುವ ಅಪಾರ ಸಾಧ್ಯತೆ ಇಂತಹ ಕತೆಗಳಿಗಿದೆ. ಸಾವಿರಾರು ಅಂಧ ವಿದ್ಯಾರ್ಥಿಗಳ ಬಾಳಿಗೆ ಹೇಗೆ ಬೆಳಕಾದ ಎಂದು ಚಿತ್ರಿಸುವುದಕ್ಕೆ ಸಾಕಷ್ಟು ಅವಕಾಶವಿದೆ. ಇಡೀ ನಾಟಕವನ್ನು ಸಂಗೀತದ ಹಿನ್ನೆಲೆಯಲ್ಲೇ ಕಟ್ಟಿಕೊಡಬೇಕು. ಇಂತಹ ಅಪಾರ ಸಾಧ್ಯತೆಗಳನ್ನು ಪ್ರಯೋಗಶೀಲ ತಂಡಗಳು ಕಟ್ಟಿಕೊಡಲಿ ಎಂಬುದಕ್ಕೆ ಪೀಠಿಕೆಯಂತಿದೆ ಈ ನಾಟಕ.

ಪುಟ್ಟರಾಜರು ಶಿಷ್ಯರನ್ನು ತಮಾಷೆ ಮಾಡುತ್ತಲೇ ಅವರನ್ನು ಸೃಜನಶೀಲರಾಗಿ ಮಾಡುತ್ತಿದ್ದ ಅವರ ಕಾರ್ಯವೈಖರಿಯನ್ನು ತೀರ ಇತ್ತೀಚಿನ ವರ್ಷಗಳಲ್ಲಿ ಹತ್ತಿರದಿಂದ ಕಂಡವರಿದ್ದಾರೆ. ಸದಾ ಜನರ ಮಧ್ಯೆ ಇರುತ್ತಿದ್ದ ಪುಟ್ಟರಾಜರು ಗಂಟೆಗಟ್ಟಲೆ ಧ್ಯಾನ ನಿರತರಾಗಿರುತ್ತಿದ್ದರು. ಸೊಗಸಾದ ಭೋಜನ ಅವರದು. ಸದಾ ಹತ್ತಿ ಬಟ್ಟೆಯನ್ನೇ ಧರಿಸಿದರೂ ಅಷ್ಟೇ ಸೊಗಸಾದ ಉಡುಪು, ಆಭರಣ ಪ್ರೀತಿ ಅವರದು. ಅವರೊಬ್ಬ ಸೊಗಸುಗಾರ ಸಾಧಕ. ಸಂಗೀತ, ನಾಟಕಕ್ಕೆ ಅರ್ಪಿಸಿಕೊಂಡಿದ್ದ ಪುಟ್ಟರಾಜರು ಆಶ್ರಮ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಬಸವರಾಜ ಹಿಡ್ಕಿಮಠ ಅವರಿಗೆ ಬಿಟ್ಟಿದ್ದರು. ಕತೆಗಳಿಗೆ, ನಾಟಕಕ್ಕೆ ವಸ್ತುವಾಗುವ ಸಾಕಷ್ಟು ಅಂಶಗಳು ಅವರ ವ್ಯಕ್ತಿತ್ವದಲ್ಲಿವೆ.

ಶಾಸ್ತ್ರೀಯ ಹಿನ್ನೆಲೆಯ ರಾಜು ಅವರ ಹಾಡುಗಾರಿಕೆಯನ್ನು ಹೊರತುಪಡಿಸಿದರೆ, ನಾಟಕದಲ್ಲಿ ಸಂಗೀತ ಕಡಿಮೆ. ಅವರೇ ರಚಿಸಿದ ಹಾಡುಗಳನ್ನು ಬಳಸಬಹುದು. ವೆಂಕಟೇಶ್ ಕುಮಾರ್ ಅವರಂತಹ ಪ್ರಖ್ಯಾತ ಹಿಂದೂಸ್ತಾನಿ ಗಾಯಕರು ಪುಟ್ಟರಾಜರ ಕುರಿತು ರಚಿಸಿ ಹಾಡಿದವುಗಳನ್ನು ಬಳಸಿಕೊಳ್ಳಬಹುದು. ಆದರೆ ವೃತ್ತಿ ಕಲಾವಿದೆಯರೇ ಸೇರಿಕೊಂಡು ಪುಟ್ಟರಾಜರ ಮೇಲಿನ ಪ್ರೀತಿ ಮತ್ತು ಗೌರವದಿಂದ ಇಷ್ಟು ಮಾಡಿದ್ದು ಪುಟ್ಟ ಸಾಧನೆಯೇ ಸರಿ. ಪುಟ್ಟರಾಜ ಗವಾಯಿಗಳ ಮೇಲೆ ಎಷ್ಟೆಲ್ಲ ನಾಟಕಗಳನ್ನು ಮಾಡುವ ಸಾಧ್ಯತೆ ಇದೆ ಎನ್ನುವುದನ್ನು ಈ ನಾಟಕ ತೋರಿಸಿದ್ದಂತೂ ನಿಜ.

ಪುರುಷ ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ಮಹಿಳೆಯರೇ ಅಭಿನಯಿಸಿದರು. ಹಾರ್ಮೋನಿಯಂ ಮತ್ತು ಹಿನ್ನೆಲೆ ಹಾಡಿನಲ್ಲಿ ರಾಜು, ತಬಲಾ ಪ್ರಕಾಶ್ ಹೊರತುಪಡಿಸಿದರೆ- ಪ್ರಸಾಧನ, ರಂಗಸಜ್ಜಿಕೆ, ಬೆಳಕು ಎಲ್ಲವೂ ಮಹಿಳೆಯರದೇ. ಹೆಸರಾಂತ ನಟ, ನಾಟಕಕಾರ ಬಸವರಾಜ ಪಂಚಗಲ್ ಅವರ ಸಲಹೆಗಳೊಂದಿಗೆ ಎಲ್ಲ ಹಿರಿಯ ಅನುಭವಿ ನಟಿಯರು ತಮ್ಮ ಪಾತ್ರಗಳನ್ನು ತಾವೇ ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದಾರೆ. ಚಂದ್ರಯ್ಯನ ಪಾತ್ರದಲ್ಲಿ ದೇವಿಕಾ ಶಿಗ್ಗಾಂವಿ, ಪಂಚಾಕ್ಷರ ಗವಾಯಿ- ಲಕ್ಷ್ಮಿದೇವಿ ಶಿಗ್ಗಾಂವಿ, ಹಾಸ್ಯ ಪಾತ್ರಗಳಲ್ಲಿ ಸರೋಜ ಕಂದಗಲ್, ಮಹೇಶ್ವರಿ, ಭರಮಪ್ಪನಾಗಿ ಅನ್ನಪೂರ್ಣ ಹೊಸಮನಿ, ಗುರುಪಾದ- ಶಾರದಾ ಕಟ್ಟೀಮನಿ, ತಂಗಿ- ಲಕ್ಷ್ಮಿ ಹೊಸಪೇಟೆ ಮುಂತಾದ ಎಲ್ಲ ನುರಿತ ಕಲಾವಿದರು ಪಾತ್ರೋಚಿತವಾಗಿ ಅಭಿನಯಿಸಿ ನಾಟಕ ಕಳೆಕಟ್ಟಿಸಿದರು.
ಆಶ್ರಮದಲ್ಲಾಗಲಿ, ಅವರ ನಾಟಕ ಕಂಪನಿಯಲ್ಲಾಗಲಿ ಮಹಿಳೆಯರಿಗೆ ಅವಕಾಶ ಇಲ್ಲ! ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಾರೆ. ಆದರೆ ಈ ನಾಟಕ ಕಟ್ಟಿಕೊಟ್ಟವರೆಲ್ಲರೂ ಮಹಿಳೆಯರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT