ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಕಸಂ’ ಪ್ರಖರತೆ

ಅಂಕದ ಪರದೆ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

2001ರ ನವೆಂಬರ್‌ನ ಒಂದು ಸಂಜೆ. ಸಮಾನ ಮನಸ್ಕ ಗೆಳೆಯರ ಗುಂಪು ಎಡಿಎ ರಂಗಮಂದಿರಲ್ಲಿ ನಾಟಕ ಪ್ರದರ್ಶಿಸಲು ಅವಕಾಶ ಕೋರಿತ್ತು. ‘ನಿಮ್ಮದು ಯಾವ ತಂಡ? ಹೆಸರೇನು’ ಕೇಳಿದ್ದರು ರಂಗ ಮಂದಿರದ ಮಂದಿ. ಗೆಳೆಯರ ಗುಂಪಿನ ಸತೀಶ್ ಚಂದ್ರ ತಾವು ನಡೆಸುತ್ತಿದ್ದ ‘4th ಕಾರ್ನರ್‌’ ಕಂಪೆನಿಯ ಹೆಸರು ಹೇಳಿದರು.

ಗೆಳೆಯರಲ್ಲಿ ನಾಟಕದ ಗೀಳು ಬೆಳೆಯುತ್ತಲೇ ಕಟ್ಟಡ, ರಂಗಸಜ್ಜಿಕೆ, ತಂಡದ ಹೆಸರು ಮತ್ತಿತರ ರಂಗ ಚಟುವಟಿಕೆಗಳ ವಿಚಾರ ತಲೆಯಲ್ಲಿ ಹೊಕ್ಕಿದ್ದೇ ತಡ ರೂಪಗೊಂಡಿತು ‘ಪ್ರದರ್ಶನ ಕಲಾ ಸಂಸ್ಥೆ’. ‘ಪ್ರಕಸಂ’ ಹೆಸರಿನಲ್ಲಿ ನಗರದಲ್ಲಿ ರಂಗ ಚಟುವಟಿಕೆ ನಡೆಸುತ್ತಿದೆ ಈ  ತಂಡ. ಗೆಳೆಯರಾದ ಸತೀಶ್ ಚಂದ್ರ, ಅಶ್ವಿನ್ ರಘುರಾಂ, ಚಂದನ್ ಶಂಕರ್ ‘ಪ್ರಕಸಂ’ಗೆ ಬುನಾದಿ ಹಾಕಿದವರು.

‘ಪ್ರಕಸಂ’ನ ಮೂಲ ನಿರ್ಮಾರ್ತೃ ಸತೀಶ್ ಚಂದ್ರ (ಸದ್ಯ ಕಿರುತೆರೆ ಹಾಸ್ಯ ಧಾರಾವಾಹಿಗಳಲ್ಲಿ ಜನಪ್ರಿಯ ಚಹರೆ). ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸತೀಶ್‌ಗೆ ಆ ಹಾದಿಯತ್ತ ಆಸೆಗಣ್ಣಿನಿಂದ ಇಣುಕಿದ್ದ ಗೆಳೆಯರಾದ ಅಶ್ವಿನ್, ಚಂದನ್ ಜತೆಗೂಡಿ ‘ಪ್ರಕಸಂ’ಗೆ ಸಜ್ಜಿಕೆ ರೂಪಿಸಿದರು. ರಂಗ ಸಂವೇದನೆಯ ಬದಲಾವಣೆಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಪ್ರಯೋಗಗಳನ್ನು ಈ ತಂಡ ನಡೆಸುತ್ತಿದೆ. ‘ಪ್ರಕಸಂ’ನ ಮೊದಲ ಪ್ರದರ್ಶನ ‘ಅಮ್ಮಾವ್ರ ಗಂಡ’.

ಒಂದು ದಶಕದ ಪ್ರಾಯ ದಾಟಿರುವ ‘ಪ್ರಕಸಂ’ನಲ್ಲಿ 150 ಸದಸ್ಯರಿದ್ದು, ಶೇ 50ರಷ್ಟು ಐಟಿ–ಬಿಟಿ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ) ಕ್ಷೇತ್ರದ ಮಂದಿ, 10ರಷ್ಟು ರಂಗಕರ್ಮಿಗಳು, 20ರಷ್ಟು ವಿದ್ಯಾರ್ಥಿಗಳು ಮತ್ತು ಶೇ 20ರಷ್ಟು ಗೃಹಿಣಿಯರು ಸೇರಿದಂತೆ ವಿವಿಧ ವಲಯದವರು ಇದ್ದಾರೆ.

ಕಲಾಸೌಧಕ್ಕೆ ಪುರುಜ್ಜೀವನ
‘ಪ್ರಕಸಂ’ ಮತ್ತು ಹನುಮಂತ ನಗರದ ‘ಕಲಾಸೌಧ’ ಒಂದಕ್ಕೊಂದು ಬೆಸೆದುಕೊಂಡಿರುವ ಹೆಸರುಗಳು. ಬಿಬಿಎಂಪಿ ವ್ಯಾಪ್ತಿಯ ‘ಕಲಾಸೌಧ’ ಬಳಕೆಗೆ ಬಾರದೆ ದೂಳು ಹಿಡಿದಾಗ, ಕಸಪೊರಕೆಯನ್ನು ಕೈಗೆತ್ತಿಕೊಂಡಿದ್ದು ‘ಪ್ರಕಸಂ’ ಕಲಾವಿದರು.

‘‘ರಂಗಶಂಕರದಲ್ಲಿ ನಾಟಕ ಮಾಡಲು ಅವರೇ ದಿನಾಂಕ ನೀಡುವರು. ನಾವು ಅಂದುಕೊಂಡ ದಿನದಲ್ಲಿ ಪ್ರದರ್ಶಿಸಲು ಅಸಾಧ್ಯ. ರವೀಂದ್ರ ಕಲಾಕ್ಷೇತ್ರ ಅಧಿಕಾರಿಶಾಹಿಯ ಹಿಡಿತದಲ್ಲಿದೆ. ಚೌಡಯ್ಯ, ಎಡಿಎ ಮತ್ತಿತತ ಕಲಾಕೇಂದ್ರಗಳಿಗೆ ಹೆಚ್ಚು ಹಣ ತೆರಬೇಕು. ಇದೆಲ್ಲವೂ ನಮ್ಮ ಸ್ಮೃತಿಗೆ ಬರುತ್ತಲೇ ಕಂಡಿದ್ದು ‘ಕಲಾಸೌಧ’. ಈ ಕಲಾಕೇಂದ್ರ ನಿರ್ಮಾಣಕ್ಕೆ ಶ್ರಮವಹಿಸಿದ್ದವರು ಬಿಬಿಎಂಪಿ ಮಾಜಿ ಮೇಯರ್
ಕೆ. ಚಂದ್ರಶೇಖರ್. ಚಟುವಟಿಕೆಯಿಂದ ದೂರವಿದ್ದ ಸೌಧವನ್ನು ನಾವು ಪಡೆದುಕೊಂಡೆವು’’ ಎಂದು ‘ಕಲಾಸೌಧ’ ದಕ್ಕಿದ್ದನ್ನು ವಿವರಿಸುವರು ಸತೀಶ್ ಚಂದ್ರ.

ಚಟುವಟಿಕೆ ಆರಂಭಿಸುತ್ತಲೇ ‘ಪ್ರಕಸಂ’ ಮಾಡಿದ ಮೊದಲ ಕೆಲಸ ಕಲಾಸೌಧದತ್ತ ಜನರನ್ನು ಕರೆತಂದಿದ್ದು. ಸುತ್ತಲಿನ ನಿವಾಸಿಗಳ ಮನೆಗಳಿಗೆ ಭೇಟಿ ಇತ್ತು, ಉಚಿತವಾಗಿ ಟಿಕೇಟು ನೀಡಿತು. ಕಲಾಸೌಧದಲ್ಲಿ ತಂಡ ಪ್ರದರ್ಶಿಸಿದ ಮೊದಲ ನಾಟಕ ‘ಹೊಸ ಬೆಳಕು.’ ವರನಟ ಡಾ. ರಾಜ್ ಕುಮಾರ್ ಅವರ ‘ಹೊಸ ಬೆಳಕು’ ಚಿತ್ರದ ಹಾಡುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿತ್ತು. ಆನಂತರ 5ಡಿ ಹಾರರ್ ನಾಟಕ ‘ನಂ 13 ಮಾರ್ಗೋಸಂ’, ‘ಬೋಗಿ’, ‘ಸೈರಂಧ್ರಿ’ ಸೇರಿದಂತೆ 13 ನಾಟಕಗಳನ್ನು ಇಲ್ಲಿಯವರೆಗೆ ಪ್ರದರ್ಶಿಸಿದೆ.  ನಾಗೇಂದ್ರ ಶಾ ‘ಶಂಭೋ ಶಂಕರ’ ಮತ್ತು ಶ್ರೀನಿವಾಸ ಪ್ರಭು ‘ಗುಳ್ಳೇ ನರಿ’ ನಾಟಕಗಳನ್ನು ನಿರ್ದೇಶಿಸಿದರು.

ಸೋಮವಾರದಿಂದ ಗುರುವಾರ ನಾಟಕ ಪ್ರದರ್ಶಿಸಿದರೆ ಮೂರು ಸಾವಿರ ರೂಪಾಯಿ. ವಾರದ ಅಂತ್ಯದ ಪ್ರದರ್ಶನಗಳಿಗೆ ಐದು ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. ಆ ಪ್ರದರ್ಶನದ ಅವಧಿಯಲ್ಲಿ (100 ನಿಮಿಷಗಳಾದರೆ) ವಿದ್ಯುತ್‌ ಮತ್ತಿತರ ಬಾಡಿಗೆಯನ್ನು ಪಡೆಯಲಾಗುತ್ತದೆ. ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂರು ಗಂಟೆಗಳ ಪ್ರದರ್ಶನಕ್ಕೆ ಹತ್ತು ಸಾವಿರ ರೂಪಾಯಿ ಬಾಡಿಗೆ ನಿಗದಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ರಂಗಚಟುವಟಿಕೆಗಳು ಯಾವ ಮಟ್ಟದಲ್ಲಿ ಇವೆ ಮತ್ತು ಹೊರ ರಾಜ್ಯದಲ್ಲಿ ಯಾವ ರೀತಿ ಇವೆ ಎನ್ನುವ ನಾಡಿಮಿಡಿತ ಹಿಡಿಯುವ ಪ್ರಯತ್ನವನ್ನು ‘ಪ್ರಕಸಂ’ ಮಾಡಿದೆ. 2014ರ ಫೆಬ್ರುವರಿ ಕೊನೆ ಮತ್ತು ಮಾರ್ಚ್‌ ಆರಂಭದ ದಿನಗಳಲ್ಲಿ ಬೆಂಗಳೂರು, ಮದ್ರಾಸ್, ಕೋಲ್ಕತ್ತಾ ಮತ್ತು ಮುಂಬೈನ ರಂಗಭೂಮಿ ಚಟುವಟಿಕೆಗಳನ್ನು ಕುರಿತು ಅಂತರ್ಜಾಲದ ಮೂಲಕ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ನಡೆಸಿದ ವೇಳೆ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಂಡಿವೆ. ನಂತರದ ಸ್ಥಾನ ಮುಂಬೈನದ್ದು. ಹೀಗೆ ನಗರದಲ್ಲಿ ರಂಗ ಪ್ರಯೋಗಗಳಿಗೆ ಹುಲುಸಾದ ವೇದಿಕೆ ಇದೆ ಎನ್ನುವುದನ್ನು ಕಂಡುಕೊಂಡಿದೆ ಪ್ರಕಸಂ.

ಕಲಾಪ್ರೀತಿ ತಂದ ಸಾರ್ಥಕ್ಯ


‘ಕಲಾಸೌಧ’ವನ್ನು ಭೋಗ್ಯಕ್ಕೆ ಪಡೆದ; ತಂಡ ಕಟ್ಟಿದ ಸಂದರ್ಭ ಹೇಗಿತ್ತು?
‘ತಂಡ ಕಟ್ಟುವ ಆಲೋಚನೆ ಇರಲಿಲ್ಲ.  ರಂಗ ಶಂಕರ ಆರಂಭದ ದಿನಗಳಲ್ಲಿ ಅದರ ಜತೆಗಿದ್ದವನು ನಾನು. ಅಲ್ಲಿನ ಆಲೋಚನೆ ಮತ್ತು ಕ್ರಮಗಳು ಬದಲಾದಂತೆ ಐದಾರು ಮಂದಿ ಹೊರ ನಡೆದೆವು. ‘ಕಲಾಸೌಧ’ ನಮಗೆ ಸಿಕ್ಕಿದಾಗ, ‘ತೆಗೆದುಕೋ; ಚೆನ್ನಾಗಿ ನಡೆಸುವ ಎನ್ನುವುದಕ್ಕಿಂತ; ಅಯ್ಯೋ ಕಷ್ಟ ಅಂದವರೇ ಹೆಚ್ಚು. ಆದರೆ ಬೆನ್ನುತಟ್ಟಿದ್ದು ನನ್ನ ಮಡದಿ. ಇನ್ನು ಮುಂದೆ ಕಲಾಸೌಧ ನಿನ್ನ ಮೊದಲ ಹೆಂಡತಿ ಎಂದಿದ್ದಳು.

‘ಪ್ರಕಸಂ’ನಿಂದ ಕಿರುತೆರೆ–ಹಿರಿತೆರೆಗೆ ಜಿಗಿದವರು ಇದ್ದಾರೆಯೇ?
ಹಿತಾ, ವಸಿಷ್ಠ ಸಿಂಹ, ನಿರಂಜನ್ ದೇಶಪಾಂಡೆ, ಕುಲ್ದೀಪಕ್‌ ಸಿನಿಮಾ ರಂಗದಲ್ಲಿದ್ದರೆ, ಶಂಕರ್, ಗಗನ್, ಸೌಮ್ಯ ಮಲ್ಲಿಕಾರ್ಜುನ, ಮನೀಶ್ ನಾಗರಾಜ್, ವಿಜಯ್, ನಾನು ಮತ್ತಿತರರು ಕಿರುತೆರೆಯಲ್ಲಿ ಇದ್ದೇವೆ.

ನಗರದ ರಂಗಭೂಮಿಯ ಸಂವೇದನೆಗಳಲ್ಲಿ ನೀವು ಹೇಗೆ ತೊಡಗುತ್ತೀರಿ?
‘ಪ್ರಕಸಂ’ನ ಮೂಲ ಉದ್ದೇಶ ಮನರಂಜನೆ. ಪ್ರೇಕ್ಷಕ ಕೊಟ್ಟ ಹಣಕ್ಕೆ ಮೋಸ ಆಗಬಾರದು. ‘ಅಯ್ಯೋ ನಾನು ಕೊಟ್ಟ ದುಡ್ಡು ವೇಸ್ಟ್ ಆಯಿತು’ ಎನ್ನುವ ಮಾತು ಪ್ರೇಕ್ಷಕನಿಂದ ಬರಬಾರದು. ಖುಷಿಯಲ್ಲಿ ಥಿಯೇಟರ್‌ನಿಂದ ಹೊರಹೋಗಬೇಕು.

ತಂಡವನ್ನು ಮತ್ತಷ್ಟು ಬೆಳೆಸಲು ಏನಾದರೂ ಆಲೋಚನೆಗಳಿವೆಯೇ?
ಪ್ರೊಡಕ್ಷನ್ ಇಂಟರ್ನ್ಷಿಪ್ ಎನ್ನುವ ಅಧ್ಯಯನ ವಿಷಯ ನಮ್ಮ ತಂಡದಲ್ಲಿದೆ. ಪ್ರತಿ ಬಾರಿ ನಾಟಕ ಮಾಡಿದಾಗಲೂ ರಂಗಚಟುವಟಿಕೆಗಳ ಬಗ್ಗೆ ಪೂರ್ಣ ತಿಳಿವಳಿಕೆ ಇಲ್ಲದ, ಆಸಕ್ತಿ ಇರುವ ಐದು ಮಂದಿ ಹೊಸಬರಿಗೆ ತೊಡಗಲು ಅವಕಾಶ ಮಾಡಿಕೊಡುತ್ತೇವೆ. ರಂಗ ವಿನ್ಯಾಸ, ಬೋರ್ಡು ಬರೆಯುವುದು, ನಟನೆ ಮತ್ತಿತರ ವಿಚಾರಗಳನ್ನು ಹೇಳಿಕೊಡಲಾಗುವುದು.

ಕೇವಲ ನಾಟಕ ಪ್ರಯೋಗಗಳಿಗೆ ಅಷ್ಟೇ ಸೀಮಿತರಾಗಿದ್ದೀರೋ ಹೇಗೆ?
ಇಲ್ಲ. ತಿಂಗಳ ಮೊದಲ ಭಾನುವಾರ ಸಂಜೆ ಐದರಿಂದ ಆರು ಗಂಟೆವರೆಗೆ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತೇವೆ.

‘ಪ್ರಕಸಂ’ ಹಾದಿಯಲ್ಲಿ ಒಮ್ಮೆ ತಿರುಗಿ ನೋಡಿದರೆ ನಿಮಗೆ ಸಾರ್ಥಕ್ಯದ ಭಾವ ಮೂಡಿದ್ದು ಯಾವಾಗ?
ಕಲಾಸೌಧಕ್ಕೆ ಒಬ್ಬರು ಹಿರಿಯ ದಂಪತಿ ಬರುತ್ತಾರೆ. ಬಹಶಃ 60ರ ಪ್ರಾಯ. ಅವರ ಮಕ್ಕಳು ಅಮೆರಿಕದಲ್ಲಿ ಇದ್ದಾರಂತೆ. ಒಮ್ಮೆ ಕಾರ್ಯಕ್ರಮ ನೋಡಿ ‘ನೀವು ಒಂದು ರೀತಿ ನಮಗೆ ಹೊಸ ಬಾಳು ಕೊಟಿದ್ದೀರಿ. ನಮ್ಮ ಸಾಯಂಕಾಲಗಳಿಗೆ ಬಣ್ಣ ಹಚ್ಚಿದ್ದೀರಿ. ನಮ್ಮ ಜೀವನವನ್ನು ಚೆಂದಗಾಣಿಸಿದ್ದೀರಿ’ ಎಂದು ಮೆಚ್ಚುಗೆಯ ಮಾತನಾಡಿದರು. ಆ ಒಂದು ಮಾತಿನಿಂದ ನಾನು ಪಟ್ಟ ಶ್ರಮ, ನಿದ್ದೆ ಇಲ್ಲದೆ ಕಳೆದ ರಾತ್ರಿಗಳು ಎಲ್ಲವೂ ಸಾರ್ಥಕ ಎನಿಸಿತ್ತು.

ಬಹುಪಾಲು ರಂಗ ತಂಡಗಳು ಕಲಾವಿದರಿಗೆ ಸಂಭಾವನೆ ನೀಡುವುದಿಲ್ಲ. ನೀವು? 
ಕಲಾವಿದರಿಗೆ ಹಣ ಕೊಡುವುದಿಲ್ಲ. ನಾವು ಯಾರನ್ನೂ ಬನ್ನಿ ಎಂದು ಕರೆಯುವುದೂ ಇಲ್ಲ. ಸ್ವಯಂ ಪ್ರೇರಿತರಾಗಿ ಬಂದು ತೊಡಗುತ್ತಾರೆ. ಒಂದು ಪ್ರಯೋಗದಿಂದ ಹತ್ತು ಸಾವಿರ ರೂಪಾಯಿ ಬಂದರೆ ಆ ಪ್ರಯೋಗದಲ್ಲಿ ತೊಡಗಿದ ಕಲಾವಿದರಿಗೆ ಹಂಚುವೆ. ಎಲ್ಲರಿಗೂ ಒಂದು ಊಟ ಹಾಕಿಸುತ್ತೇವೆ, ಅಷ್ಟೆ. ನನಗೆ ಒಂದು ನಿರ್ದಿಷ್ಟ ಆರ್ಥಿಕ ಮೂಲ ಇರುವ ಕಾರಣ ಆರ್ಥಿಕ ಮುಗ್ಗಟ್ಟು ತಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT