ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಯೊಬ್ಬರೂ ಕಣ್ಣಿನ ಕಾಳಜಿ ವಹಿಸಿ’

Last Updated 25 ಜೂನ್ 2016, 10:27 IST
ಅಕ್ಷರ ಗಾತ್ರ

ಸುರಪುರ: ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಕಣ್ಣಿನ ಕಾಳಜಿ, ರಕ್ಷಣೆ ಅಗತ್ಯವಾಗಿದೆ. ಅದರಲ್ಲೂ  ವೃದ್ಧಾಪ್ಯದಲ್ಲಿ ಹಿರಿಯ ನಾಗರಿಕರು ಕಣ್ಣಿನ ಬಗ್ಗೆ ಕಾಳಜಿ ವಹಿಸಬೇಕು. ಕಣ್ಣು ಬಹು ಮುಖ್ಯ ಅಂಗ. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಜೀವನಪೂರ್ತಿ ಅಂಧತ್ವದಿಂದ ದೂರವಿರಬಹುದು’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಗಳೂರಿನ ವಿವೇಕಾನಂದ ಸೇವಾಶ್ರಮ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ನೇತ್ರ ಶಸ್ತ್ರ ಚಿಕಿತ್ಸೆ ಈಗ ಬಹಳ ಸುಲಭ. ಈ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆಯಾಗಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಅಂದಿನ ದಿನವೇ ಮನೆಗೆ ಹೋಗಬಹುದಾಗಿದೆ. ಈ ಶಸ್ತ್ರ ಚಿಕಿತ್ಸೆಗೆ ಹೆದರುವ ಅಗತ್ಯವಿಲ್ಲ. ನಿಮಗೆ ಗೊತ್ತಿಲ್ಲದಂತೆ ಚಿಕಿತ್ಸೆ ಮಗಿದು ಹೋಗುತ್ತದೆ’ ಎಂದು ತಿಳಿಸಿದರು.

ವಿವೇಕಾನಂದ ಸೇವಾಶ್ರಮದ ಟ್ರಸ್ಟಿ ಡಾ. ವೆಂಕಟೇಶ ಮೂರ್ತಿ ಮಾತನಾಡಿ, ‘ಸೇವಾಶ್ರಮವು ಇದುವರೆಗೂ ರಾಜ್ಯದಲ್ಲಿ 37 ಸಾವಿರ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಜಗತ್ತು ನೋಡುವಂತೆ ಮಾಡಿದೆ.

ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಸುರಪುರದಲ್ಲಿ ಇಲ್ಲಿಯ ವರೆಗೂ 4 ಕ್ಯಾಂಪ್‌ಗಳ ಮೂಲಕ 700 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಓಂಪ್ರಕಾಶ ಕಟ್ಟಿಮನಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ವಿಠಲ ಯಾದವ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಡಾ. ಚೇತನಾ ಸದಾನಂದ, ಡಾ. ಹರ್ಷವರ್ಧನ ರಫಗಾರ್, ಡಾ. ಇಮ್ತಿಯಾಜ್, ಸೂಲಪ್ಪ ಕಮತಗಿ, ಲಕ್ಷ್ಮಣ ಗುತ್ತೇದಾರ್, ಸುಬ್ಬರಾವ್ ಇದ್ದರು.

ಅನ್ನದಾನ ವ್ಯವಸ್ಥೆ: ನೇತ್ರ ಚಿಕಿತ್ಸೆ ಮಾಡಿಸಿಕೊಂಡ ನೂರಾರು ರೋಗಿಗಳಿಗೆ ಇಲ್ಲಿಯ ಬಿಜಿ ಗ್ರೂಪ್ಸ್‌ ಮುಖ್ಯಸ್ಥ, ನಗರಸಭೆ ಸದಸ್ಯ ಪಾರಪ್ಪ ಗುತ್ತೇದಾರ್ ತಮ್ಮ  ಸಹೋದರ ಭೀಮಣ್ಣ ಗುತ್ತೇದಾರ್ ಅವರ ಸ್ಮರಣಾರ್ಥವಾಗಿ ಆಸ್ಪತ್ರೆಯಲ್ಲಿ ಉಚಿತ ಅನ್ನದಾನದ ವ್ಯವಸ್ಥೆ ಮಾಡಿದರು. ನಗರಸಭೆ ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ಮತ್ತು ಡಾ. ಜಗದೀಶ ಬಿಜಾಸಪುರ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT