ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಯೊಬ್ಬರೂ ಬೆಂಬಲಕ್ಕೆ ನಿಲ್ಲಬೇಕು’

ಬಾಕ್ಸರ್‌ ಸರಿತಾ ಪ್ರಕರಣ: ಎಐಬಿಎಗೆ ಮತ್ತೆ ಮನವಿ ಸಲ್ಲಿಸಲು ನಿರ್ಧಾರ
Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ‘ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ನಿಷೇಧಕ್ಕೆ ಒಳಗಾಗಿರುವ ಬಾಕ್ಸರ್‌ ಸರಿತಾ ದೇವಿ ಅವರಿಗೆ ಇದು ಕಷ್ಟಕಾಲ. ಆದರೂ, ಅವರ ಧೈರ್ಯ ಕಳೆದುಕೊಳ್ಳಬಾರದು. ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಬ್ಯಾಟಿಂಗ್‌ ಚಾಂಪಿಯನ್‌ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

ಸರಿತಾ ದೇವಿ ಅವರ ಮೇಲಿನ ನಿಷೇಧ ಶಿಕ್ಷೆಯ ಕುರಿತು ಸಚಿನ್‌ ಅವರು ಬುಧವಾರ ಕೇಂದ್ರ ಕ್ರೀಡಾ ಸರ್ವಾನಂದ ಸೋನೊವಾಲ್‌ ಅವರೊಂದಿಗೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು. ಸಭೆಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಪದಕ ತಿರಸ್ಕೃರಿಸಿದ ಬಳಿಕ ಸರಿತಾ ಸಾಕಷ್ಟು ನೊಂದಿದ್ದಾರೆ. ಅವರು ಈಗಾಗಲೇ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಗೆ ಕ್ಷಮೆ ಕೋರಿದ್ದಾರೆ. ಆದ್ದರಿಂದ ಎಐಬಿಎ ಭಾರತದ ಮನವಿ ಪರಿಗಣಿಸಿ ನಿಷೇಧ ಶಿಕ್ಷೆಯನ್ನು ವಾಪಸ್‌ ಪಡೆಯಬೇಕು’ ಎಂದು ಸಚಿನ್ ಹೇಳಿದರು.

ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದ ಬಾಕ್ಸಿಂಗ್‌ನ 60 ಕೆ.ಜಿ. ಲೈಟ್‌ವೇಟ್‌ ವಿಭಾಗದ ಸೆಮಿಫೈನಲ್‌ನಲ್ಲಿ ಮಣಿಪುರದ ಬಾಕ್ಸರ್‌ ದಕ್ಷಿಣ ಕೊರಿಯದ ಜೀನಾ ಪಾರ್ಕ್‌ ಎದುರು ಸೋಲು ಕಂಡಿದ್ದರು. ಆದರೆ ಅವರು, ‘ರೆಫರಿಗಳ ತಪ್ಪು ನಿರ್ಣಯದಿಂದ ನನಗೆ ಸೋಲು ಎದುರಾಯಿತು’ ಎಂದು ವಿಜಯ ವೇದಿಕೆಯಲ್ಲಿ ಪದಕ ತಿರಸ್ಕೃರಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಐಬಿಎ ಸರಿತಾ ಮೇಲೆ ನಿಷೇಧ ಶಿಕ್ಷೆ ಹೇರಿದೆ. ಈಗ ಇದು ಆಜೀವ ನಿಷೇಧವಾಗುವ ಭೀತಿ ಎದುರಾಗಿದೆ.

‘ಸರಿತಾ  ಕ್ರೀಡಾ ಭವಿಷ್ಯಕ್ಕೆ ಈ ಘಟನೆ ಧಕ್ಕೆಯಾಗಬಾರದು. ಭಾರತ ಸರ್ಕಾರ ಪೂರ್ಣವಾಗಿ ಅವರ ಬೆಂಬಲಕ್ಕೆ ನಿಂತಿದೆ. ನಾವೀಗ ಸರಿಯಾದ ಯೋಜನೆಗಳನ್ನು ರೂಪಿಸಿ ಅವರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಆದ್ದರಿಂದ ಎಲ್ಲರೂ ಬೆಂಬಲಕ್ಕೆ ನಿಲ್ಲಬೇಕು’ ಎಂದು ರಾಜ್ಯಸಭಾ ಸದಸ್ಯರೂ ಆದ ಸಚಿನ್‌ ನುಡಿದರು. ಹೋದ ವಾರ ಸಚಿನ್‌ ಈ ವಿಷಯದ ಕುರಿತು ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದರು.

ಕ್ರೀಡಾ ಸಚಿವರ ಜೊತೆಗಿನ ಸಭೆಯಲ್ಲಿ ಒಲಿಂಪಿಕ್‌ ಕಂಚು ಪದಕ ವಿಜೇತೆ ಎಂ.ಸಿ. ಮೇರಿ ಕೋಮ್‌, ವಿಜೇಂದರ್‌ ಸಿಂಗ್‌, ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಎನ್‌. ರಾಮಚಂದ್ರನ್‌, ಬಾಕ್ಸಿಂಗ್‌ ಇಂಡಿಯಾ ಅಧ್ಯಕ್ಷ ಸಂದೀಪ್‌ ಜಜೋಡಿಯ, ರಾಷ್ಟ್ರೀಯ ಬಾಕ್ಸಿಂಗ್‌ ಕೋಚ್‌ ಗುರುಬಕ್ಷ್‌ ಸಿಂಗ್ ಸಂಧು ಪಾಲ್ಗೊಂಡಿದ್ದರು.

ಪುನರ್‌ ಪರಿಶೀಲನೆ: ‘ಸರಿತಾ ಅವರ ಮೇಲಿನ ನಿಷೇಧ ಶಿಕ್ಷೆಯನ್ನು ಪುನರ್‌ ಪರಿಶೀಲಿಸಬೇಕು ಎಂದು ಎಐಬಿಗೆ ಮತ್ತೊಮ್ಮೆ ಕೇಳಿಕೊಳ್ಳಲಾಗುವುದು. ಈ ಪ್ರಕರಣದ ಬಗ್ಗೆ ಪ್ರತಿಯೊಬ್ಬರಿಗೂ ಅನುಕಂಪವಿದೆ. ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು. ಇದಕ್ಕೆ ಸರ್ಕಾರ ಪೂರ್ಣ ಸಹಕಾರ ನೀಡಲಿದೆ’ ಎಂದು ಕ್ರೀಡಾ ಸಚಿವ ಸೋನೊವಾಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT