ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಿಸ್ಕೂಲ್’ ಪರಾಮರ್ಶೆ

ಅಕ್ಷರ ಗಾತ್ರ

ಇಂದು ಪ್ರಪಂಚದಾದ್ಯಂತ ‘ಶಾಲಾಪೂರ್ವ ಶಿಕ್ಷಣ’ ಕೆಲವೇ ಕೆಲ ರಾಷ್ಟ್ರಗಳಲ್ಲಿ ಔಪಚಾರಿಕ ವ್ಯವಸ್ಥೆಯಾಗಿದ್ದು ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದೆ. ಭಾರತವೂ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಅನೌಪಚಾರಿಕವಾಗಿದ್ದು, ಖಾಸಗಿಯವರ ನಿಯಂತ್ರಣದಲ್ಲಿದೆ.

ಖಾಸಗಿ ನಿಯಂತ್ರಣದಲ್ಲಿರುವ ‘ಪ್ರಿಸ್ಕೂಲ್’ ಹಂತ ಹಲವು ಇತಿ–ಮಿತಿಗಳನ್ನು ಒಳಗೊಂಡಿದೆ. ಇಲ್ಲಿ ಪ್ರವೇಶ ಪ್ರಕ್ರಿಯೆ, ಪಠ್ಯಕ್ರಮ, ಬೋಧನಾ ವಿಧಾನ, ಬೋಧಕರ ಅರ್ಹತೆ ಹಾಗೂ ನೇಮಕಾತಿ, ಕಲಿಕಾನುಭ ಎಲ್ಲವನ್ನೂ ಖಾಸಗಿಯವರೇ ನಿರ್ಧರಿಸುವುದರಿಂದ ಕೆಲವೆಡೆ ಗುಣಮಟ್ಟದ ಶಾಲಾಪೂರ್ವ ಶಿಕ್ಷಣ ಲಭ್ಯವಿದೆ. ಇನ್ನೂ ಹಲವೆಡೆ ಇದು ದುಡ್ಡು ಮಾಡುವ ‘ದಂಧೆ’ಯಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ‘ಪ್ರಿಸ್ಕೂಲ್’ನ ಗುಣಾವಗುಣಗಳನ್ನು ನಾವು ಕೆಳಗಿನಂತೆ ವಿಶ್ಲೇಷಿಸಬಹುದು.

‘ಪ್ರಿಸ್ಕೂಲ್’ ಗುಣಗಳು
* ‘ಪ್ರಿಸ್ಕೂಲ್’ ವ್ಯವಸ್ಥೆ ಕೆಲಸದಲ್ಲಿರುವ ತಾಯಂದಿರಿಗೆ ಸಾಕಷ್ಟು ಅನುಕೂಲಕರವಾಗಿದೆ. ಅವರು ಕೆಲಸಕ್ಕೆ ಹೋಗುವ ವೇಳೆಯಲ್ಲಿ ಮಗುವನ್ನು ನೋಡಿಕೊಳ್ಳಲು ಬೇಬಿಕೇರ್ ಹಾಗೂ ನರ್ಸರಿಗಳಲ್ಲಿ ಸೂಕ್ತ ಉಸ್ತುವಾರಿ ಲಭಿಸುತ್ತದೆ.

* ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ‘ಸಾಮಾಜಿಕ ಅಂತರಾನುಕ್ರಿಯೆ’ ಹಾಗೂ ‘ಸಾಮುದಾಯಿಕ ಪ್ರಜ್ಞೆ’ ವೃದ್ಧಿಸಲು ಶಾಲಾಪೂರ್ವ ಶಿಕ್ಷಣ ಪೂರಕವಾಗಿದೆ. ಈ ಹಂತದಲ್ಲಿ ಮಕ್ಕಳು ಇತರರೊಡನೆ ಮಾತನಾಡುವುದು, ಇತರರ ಮಾತುಗಳನ್ನು ಕೇಳಿಸಿಕೊಳ್ಳುವುದು, ಇತರರಿಗೆ ಸಹಾಯ ಮಾಡುವುದು ಹಾಗೂ ಸಮವಯಸ್ಕರ ಒಡನಾಟದ ಮೂಲಕ ‘ಸಂವಹನ ಕೌಶಲ’ವನ್ನು ರೂಢಿಸಿಕೊಳ್ಳುತ್ತಾರೆ.

* ಮೂಲಾಕ್ಷರಗಳ ಓದು–ಬರಹ, ಪರಿಸರ ಪ್ರಜ್ಞೆ ಹಾಗೂ ಗಣಿತದ ಮೂಲ ಪರಿಕಲ್ಪನೆಗಳ ಅರಿವು ಮೂಡಿಸಲು ಈ ಹಂತ ಸೂಕ್ತವಾದುದು.

* ಶಾಲಾ ಶಿಕ್ಷಣಕ್ಕೆ ಅಗತ್ಯವಾಗಿರುವ ‘ಮಾನಸಿಕ ಪೂರ್ವಸಿದ್ಧತೆ’ಯನ್ನು ಶಾಲಾಪೂರ್ವ ಶಿಕ್ಷಣ ಒದಗಿಸುತ್ತದೆ. ತರಗತಿಯ ವರ್ತನೆ ಹಾಗೂ ಶಿಷ್ಟಾಚಾರಗಳ ಅರಿವನ್ನು ಈ ಹಂತದಲ್ಲಿಯೇ ಒದಗಿಸುವುದರಿಂದ ಶಾಲಾ ಹಂತಕ್ಕೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುತ್ತಾರೆ.

* ಆರಂಭಿಕ ಹಂತದಲ್ಲಿಯೇ ಮಕ್ಕಳಲ್ಲಿ ‘ಸ್ವಾತಂತ್ರ್ಯ’ ಹಾಗೂ ‘ಸ್ವಾವಲಂಬನೆ’ಯ ಅರಿವು ಮೂಡಿಸಲು ಸಾಧ್ಯ.

* ಚಟುವಟಿಕೆ ಹಾಗೂ ಮನರಂಜನೆಗೆ ಆದ್ಯತೆ ಇದ್ದು, ಹಾಡು, ನೃತ್ಯ, ಕತೆ ಹೇಳುವಿಕೆ ಹಾಗೂ ಕರಕುಶಲ ಕಲಾಭಿವ್ಯಕ್ತಿ ಮುಂತಾದ ‘ಶಿಶು ಕೇಂದ್ರಿತ ವಿಧಾನಗಳ ಮೂಲಕ ಮಕ್ಕಳು ಕಲಿಯುತ್ತಾರೆ.

* ವ್ಯವಸ್ಥಿತ, ನಿಯಮಬದ್ಧ ಮಾರ್ಗದರ್ಶನದ ಮೂಲಕ ಮಕ್ಕಳಲ್ಲಿ ಶಿಸ್ತು ಬೆಳೆಸಲು ಇದು ವೇದಿಕೆಯಾಗಿದೆ. ಹೆಚ್ಚು–ಕಡಿಮೆ ಎಲ್ಲ ‘ಪ್ರಿಸ್ಕೂಲ್’ಗಳೂ ಪಿಕ್‌ಅಪ್ ಹಾಗೂ ಡ್ರಾಪ್ ವ್ಯವಸ್ಥೆ ಕಲ್ಪಿಸುವುದರಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಹಾಗೂ ಕರೆದುಕೊಂಡು ಬರುವ ವ್ಯವಧಾನ ಇರುವುದಿಲ್ಲ.

* ಪೋಷಕರ ಸಭೆಯಲ್ಲಿ ಇತರ ಪೋಷಕರನ್ನು ಭೇಟಿ ಮಾಡಿ, ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.

* ಈ ಹಂತದಲ್ಲಿ ಬಹುತೇಕ ಮಹಿಳೆಯರೇ ಬೋಧಕರಾಗಿದ್ದು ಅವರು ತಮ್ಮ ಮಮತೆ, ಕಾಳಜಿಗಳಿಂದ ಮಕ್ಕಳ ವರ್ತನೆಯ ಮೇಲೆ ಧನಾತ್ಮಕ ಪ್ರಭಾವ ಬೀರಿ ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತಾರೆ.

* ಮನೆಯ ವಾತಾವರಣವನ್ನು ಮೀರಿದ ಕಲಿಕಾನುಭವಗಳನ್ನು ಮಕ್ಕಳಿಗೆ ಒದಗಿಸಲು ಸಾಧ್ಯ.

* ಸಮಾಜಮಿತಿ ಮಾಪನದ ಮೂಲಕ ಮಕ್ಕಳ ಸಾಮಾಜಿಕ ವರ್ತನೆಯನ್ನು ಗುರುತಿಸುವ ಹಾಗೂ ತಿದ್ದುವ ಅವಕಾಶ ಲಭಿಸುತ್ತದೆ.

‘ಪ್ರಿಸ್ಕೂಲ್’ ಅವಗುಣಗಳು
ಕೆಲ ಮನಶಾಸ್ತ್ರಜ್ಞರೂ ಅಭಿಪ್ರಾಯಪಟ್ಟಿರುವಂತೆ ‘ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು’ ಹೀಗಾಗಿ, ಔಪಚಾರಿಕ ಶಾಲಾಪೂರ್ವ ಶಿಕ್ಷಣದ ಅಗತ್ಯ ಇಲ್ಲ. ತಾಯಿಯೇ ತನ್ನ ಮಗುವಿನ ಮೂಲ ಕಲಿಕೆಯ ಜವಾಬ್ದಾರಿ ವಹಿಸಿಕೊಂಡರೆ ಉತ್ತಮ.

* ‘ಪ್ರಿಸ್ಕೂಲ್’ಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೇರುವುದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಾಸಕ್ಕೆ ಅಡ್ಡಿಯುಂಟಾಗುತ್ತದೆ.

* ಭಾರವಾದ ಸ್ಕೂಲ್ ಬ್ಯಾಗ್, ಸಾಮರ್ಥ್ಯ ಮೀರಿದ ಪಠ್ಯಕ್ರಮ, ವೇಳಾಪಟ್ಟಿಗೆ ಅನುಗುಣವಾಗಿ ದಿನಪೂರ್ತಿ ಕಲಿಯುವಿಕೆ ಮಕ್ಕಳನ್ನು ಕುಗ್ಗಿಸುತ್ತದೆ. ‘ಪ್ರಿಸ್ಕೂಲ್’ಗಳಲ್ಲಿ ನುರಿತ ಮಾರ್ಗದರ್ಶಕರು ಹಾಗೂ ಅರ್ಹ ಬೋಧಕರು ಇಲದಿದ್ದರೆ, ಮಕ್ಕಳ ಮೇಲೆ ಋಣಾತ್ಮಕ ಪ್ರಭಾವ ಉಂಟಾಗುತ್ತದೆ. ಇದರಿಂದ ಮಕ್ಕಳು ಜಗಳಗಂಟುತನ ಹಾಗೂ ಹುಂಬುತನಗಳನ್ನು ಬೆಳೆಸಿಕೊಳ್ಳಬಹುದು. ಇದು ಜೀವಮಾನವಿಡಿ ಮುಂದುವರಿಯಬಹುದು.

* ಮನೆಯಲ್ಲಿರುವ ‘ಸುರಕ್ಷಿತ’ ವಾತಾವರಣ, ಪೋಷಕರ ಆಪ್ತತೆ, ಅಜ್ಜ– ಅಜ್ಜಿಯರ ಆತ್ಮೀಯತೆ, ಅಗತ್ಯಗಳ ತಕ್ಷಣದ ಈಡೇರಿಕೆಯ ಅವಕಾಶಗಳು ‘ಪ್ರಿಸ್ಕೂಲ್’ಗಳಲ್ಲಿ ಇರುವುದಿಲ್ಲ.

* ‘ಪ್ರಿಸ್ಕೂಲ್’ ಪ್ರಕ್ರಿಯೆಗೆ ಹೊಂದಿಕೊಂಡ ಮಗು ರಜೆಯ ಅವಧಿಯಲ್ಲಿ ಮನೆಯಲ್ಲಿ ಕಿರಿಕಿರಿ ಮಾಡುವ ಸಾಧ್ಯತೆ ಇದೆ.

* ಮುಕ್ತ ಹಾಗೂ ಅನಿರ್ಬಂಧಿತ ಕಲಿಕೆಗೆ ಅವಕಾಶವಿಲ್ಲದ್ದರಿಂದ ಮಕ್ಕಳ ಸೃಜನಶೀಲತೆಗೆ ಕಡಿವಾಣ ಹಾಕಿದಂತಾಗುತ್ತದೆ.

* ಎಲ್ಲ ಮಕ್ಕಳಿಗೂ ಒಂದೇ ರೀತಿಯ ಪಠ್ಯ ಹಾಗೂ ಬೋಧನಾ ವಿಧಾನಗಳನ್ನು ಬಳಸುವುದರಿಂದ ಎಳೆವೆಯಲ್ಲಿಯೇ ಮಕ್ಕಳ ವೈಯಕ್ತಿಕ ಭಿನ್ನತೆಗಳನ್ನು ಕಡೆಗಣಿಸಿದಂತಾಗುತ್ತದೆ.

* ಪ್ರತಿ ಮಗುವಿನ ಕುರಿತು ವ್ಯಕ್ತಿಗತ ಕಾಳಜಿ ವಹಿಸಲು ಅವಕಾಶವಿಲ್ಲ. ಹೀಗಾಗಿ, ಮಗುವಿನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿಯಲು ಸಾಧ್ಯವಾಗುವುದಿಲ್ಲ.

* ಸರಿಯಾದ ಶೌಚ, ಸ್ವಚ್ಛತೆ ಹಾಗೂ ಆಹಾರ ಸೇವನೆಯ ತರಬೇತಿ ಇಲ್ಲದ ಪುಟ್ಟ ಮಕ್ಕಳು ‘ಪ್ರಿಸ್ಕೂಲ್’ನಲ್ಲಿ ಬಸವಳಿಯುತ್ತವೆ.

* ಒತ್ತಾಯಪೂರ್ವಕವಾಗಿ ಶಿಸ್ತನ್ನು ಹೇರುವುದರಿಂದ ಮಕ್ಕಳು ಕಲಿಕಾಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ.

* ಖಾಸಗಿಯವರ ನಿಯಂತ್ರಣದಲ್ಲಿರುವ ಕೆಲ ‘ಪ್ರಿಸ್ಕೂಲ್’ಗಳು ‘ವಿವಿಧ ಶುಲ್ಕ’ಗಳ ಹೆಸರಿನಲ್ಲಿ ಪೋಷಕರಿಂದ ಲಕ್ಷಾಂತರ ರೂಪಾಯಿ ವಸೂಲು ಮಾಡುತ್ತಿವೆ.

* ಕೆಲ ಪ್ರತಿಷ್ಠಿತ ‘ಪ್ರಿಸ್ಕೂಲ್’ಗಳಲ್ಲಿ ಮಕ್ಕಳಿಗೆ ಪ್ರವೇಶ ದೊರಕಿಸಲು ಪೋಷಕರು ಹೆರಿಗೆಗೆ ಮುನ್ನವೇ ಸೀಟು ಕಾದಿಸಬೇಕಿರುವುದು ವಿಪರ್ಯಾಸ.

* ಕೆಲವೆಡೆ ಮಕ್ಕಳ ಪ್ರತಿಭೆಯನ್ನು ಕಡೆಗಣಿಸಿ, ‘ಪೋಷಕರ ಆರ್ಥಿಕ– ಸಾಮಾಜಿಕ ಪ್ರತಿಷ್ಠೆ’ಯನ್ನು ಮಾನದಂಡವಾಗಿರಿಸಿಕೊಂಡು, ಪೋಷಕರನ್ನೇ ಸಂದರ್ಶಿಸಿ ಮಕ್ಕಳಿಗೆ ಪ್ರವೇಶಾತಿ ನೀಡಲಾಗುತ್ತಿದೆ.

ಸರ್ಕಾರವೇ ನಿಯಂತ್ರಿಸುವುದು ಒಳಿತು
ಅಮೆರಿಕ, ಫ್ರಾನ್ಸ್, ನೆದರ್‌ಲೆಂಡ್, ಮೆಕ್ಸಿಕೊ, ಬೆಲ್ಜಿಯಂಗಳಲ್ಲಿ ಶಾಲಾಪೂರ್ವ ಶಿಕ್ಷಣವನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಅಮೆರಿಕದ (ಶಾಲಾಪೂರ್ವ ಶಿಕ್ಷಣದ ರಾಷ್ಟ್ರೀಯ ಸಂಶೋಧನಾ ಸಂಸ್ಥೆ) ಎನ್‌ಐಇಇಆರ್ ಕೈಗೊಂಡ ಸಂಶೋಧನೆಯ ಪ್ರಕಾರ ಸರ್ಕಾರ ಪ್ರಾಯೋಜಿತ ಶಾಲಾಪೂರ್ವ ಶಿಕ್ಷಣ ವ್ಯವಸ್ಥೆ ಇರುವ ದೇಶಗಳಲ್ಲಿ ಶಾಲಾ ಹಂತದ ಶಿಕ್ಷಣವೂ ಗುಣಮಟ್ಟದಿಂದ ಕೂಡಿದೆ. ಆ ರಾಷ್ಟ್ರಗಳಲ್ಲಿ ಸುಶಿಕ್ಷಿತರ ಸಂಖ್ಯೆ, ಶಾಲೆಗಳಲ್ಲಿ ಹಾಜರಾತಿಯ ಪ್ರಮಾಣ, ಮೌಲ್ಯವರ್ಧನೆ ಹೆಚ್ಚಿದೆ. ಅಪರಾಧಗಳ ಸಂಖ್ಯೆ ಹಾಗೂ ದುಶ್ಚಟಗಳ ಪ್ರಭಾವ ಕಡಿಮೆ ಇದೆ.

ಶಾಲಾಪೂರ್ವ ಶಿಕ್ಷಣ ಕುರಿತು ಸಮೀಕ್ಷೆ ಕೈಗೊಂಡಿರುವ ‘ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್’ ಸಂಸ್ಥೆಯು, ‘ಶಾಲಾಪೂರ್ವ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಇದು ಖಾಸಗಿಯಾಗಿದ್ದರೆ, ವೆಚ್ಚದಾಯಕವಾಗಿರುತ್ತದೆ. ಅಲ್ಲದೆ, ಗುಣಮಟ್ಟವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ’ ಎಂದು ಅಭಿಪ್ರಾಯಪಟ್ಟಿದೆ. ಪ್ರಾಯಶಃ ಹೀಗಾಗಿಯೇ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 2015ನೇ ಸಾಲಿನ ಯುಎಸ್ ಬಜೆಟ್‌ನಲ್ಲಿ 75 ಬಿಲಿಯನ್ ಡಾಲರ್ ಹಣವನ್ನು ಶಾಲಾಪೂರ್ವ ಶಿಕ್ಷಣದ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ‘ಗುಣಮಟ್ಟದ ಶಾಲಾಪೂರ್ವ ಶಿಕ್ಷಣ ನಾವು ನಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಇದರಲ್ಲಿ ಅವರ ಸುಭದ್ರ ಭವಿಷ್ಯ ಅಡಗಿದೆ’ ಎಂದು ಬಣ್ಣಿಸಿದ್ದಾರೆ.

ಭಾರತದಲ್ಲಿ ಜಾರಿಯಲ್ಲಿರುವ ‘ಅಂಗನವಾಡಿ’ ವ್ಯವಸ್ಥೆ ‘ಅರೆ ಸರ್ಕಾರಿ’ ವ್ಯವಸ್ಥೆಯಾಗಿ ಕಾಟಾಚಾರಕ್ಕೆ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಾರ್ಪಡಿಸಿ, ಶಾಲಾಪೂರ್ವ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡರೆ, ಇಲ್ಲಿಯೂ ಗುಣಮಟ್ಟದ ಶಾಲಾಪೂರ್ವ ಶಿಕ್ಷಣ ಲಭಿಸಿ, ಶಾಲಾ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ.

***
ಯೋಗ್ಯ ‘ಪ್ರಿಸ್ಕೂಲ್’ ಆಯ್ಕೆ ಅಗತ್ಯ
‘ಪ್ರಿಸ್ಕೂಲ್’ಗೆ ಮಕ್ಕಳನ್ನು ಸೇರಿಸುವ ಮೊದಲು ಮಕ್ಕಳ ಹಿತಾಸಕ್ತಿಗೆ ಅನುಗುಣವಾಗಿ ಆ ಶಾಲೆ ಇರುವ ಸ್ಥಳ, ತಲುಪಲು ತೆಗೆದುಕೊಳ್ಳುವ ವೇಳೆ, ವಾಹನ ವ್ಯವಸ್ಥೆ, ಶಾಲೆಯ ಅವಧಿ, ರಜೆಯ ಅವಧಿ ಇವೆಲ್ಲ ಅಂಶಗಳನ್ನು ಪರಿಗಣಿಸಬೇಕು. ಅಲ್ಲದೆ, ಆ ಶಾಲೆಯಲ್ಲಿರುವ ಶಿಕ್ಷಣ– ಶಿಕ್ಷಕರ ಗುಣಮಟ್ಟ, ಶೈಕ್ಷಣಿಕ ಅರ್ಹತೆಗಳು, ಬೋಧನಾ ವಿಧಾನ, ತಂತ್ರಜ್ಞಾನ ಬಳಕೆ ಹೇಗಿದೆ ಎಂಬುದನ್ನು ಅರಿಯಬೇಕು.

ಶಾಲೆಯಲ್ಲಿ ‘ಸುರಕ್ಷಿತ’ ವಾತಾವರಣ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಸ್ವಚ್ಛತೆ, ನೈರ್ಮಲ್ಯ, ಗಾಳಿ, ಬೆಳಕು, ನೀರು, ಶೌಚಾಲಯ, ಆಟದ ಮೈದಾನ, ಪಾಠೋಪಕರಣ ಸೌಲಭ್ಯಗಳು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸಿಸಿಟಿವಿ ಸೌಕರ್ಯಗಳಿದ್ದರೆ ಒಳ್ಳೆಯದು’ ಎಂಬುದು ಮೈಸೂರಿನ ಕುವೆಂಪು ನಗರದಲ್ಲಿರುವ ‘ಪ್ರೇರಣಾ’ ಆಸ್ಪತ್ರೆಯ ಮನೋವೈದ್ಯ ಡಾ.ಎಂ.ಎಸ್. ದರ್ಶನ್ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT