ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೀತಿ’ ಅಮಲಿನಲ್ಲಿ ಭವಿಷ್ಯದ ಜ್ಞಾನೋದಯ

ಕ್ಯಾಂ‍ಪಸ್‌ ಕಲರವ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರಾಜಧಾನಿಯ ಕಲಾ ಕಾಲೇಜಿನ ನನ್ನ ಪದವಿ ವ್ಯಾಸಂಗದ ಐದಾರು ಗೆಳೆಯರ ಗುಂಪಿನಲ್ಲಿ ಹರ್ಷವರ್ಧನ ಕೂಡ ಒಬ್ಬ. ನೋಡಲು ಅಷ್ಟೊಂದು ಎತ್ತರ ಮತ್ತು ದಪ್ಪ ಇಲ್ಲದಿದ್ದರೂ ಒಂದು ಮಟ್ಟಿಗೆ ಆತನನ್ನು ಸ್ಫುರದ್ರುಪಿ ಎನ್ನಬಹುದು.

ಪಿಯುಸಿಯಲ್ಲಿ ಅವರ ತಾಲ್ಲೂಕಿಗೇ ಅತಿ ಹೆಚ್ಚು ಅಂಕ ಗಳಿಸಿದ್ದ ಹರ್ಷ ಓದುವುದರಲ್ಲಷ್ಟೆ ಅಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಆತ ಇತರರಿಗಿಂತಲೂ ಸ್ವಲ್ಪ ಮುಂದಿದ್ದ.

ಕಾಲೇಜಿನ ಮೈದಾನದಲ್ಲಿ ಪ್ರತಿ ಶನಿವಾರ ಎನ್‌ಸಿಸಿ ವಿದ್ಯಾರ್ಥಿಗಳಿಗೆ ನಡೆಯುತ್ತಿದ್ದ ತರಬೇತಿ ಶಿಬಿರಕ್ಕೆ ಬರುತ್ತಿದ್ದ ಹುಡುಗಿಯೊಬ್ಬಳು ನಮ್ಮ ಕ್ಲಾಸ್‌ನಲ್ಲಿದ್ದ ಆಕೆಯ ಗೆಳತಿಯನ್ನು ಹಾಗೆ ಮಾತನಾಡಿಸಿಕೊಂಡು ಹೋಗಲು ಬಂದಿದ್ದಳು. ಕ್ಲಾಸ್‌ ಇಲ್ಲದ ಸಮಯವಾದ್ದರಿಂದ ನಮ್ಮ ಗುಂಪು ಅಲ್ಲೇ ಹರಟುತ್ತಾ ಕುಳಿತಿತ್ತು. ಈ ಮಧ್ಯೆ ಹರ್ಷನ ಕಣ್ಣು ಮಾತ್ರ ಆ ಹುಡುಗಿಯ ಮೇಲೆ ನೆಟ್ಟಿತ್ತು. ಈಗಿನ ಕಾಲದ ಸೂಪರ್ ಹುಡುಗಿಯರ ‘ಜಿರೊ ಸೈಜ್‌’ಗಿಂತ ಸ್ವಲ್ಪ ಜಾಸ್ತಿ ಇದ್ದ ಆಕೆ, ಇವನಿಗಿಂತಲೂ ತುಂಬಾ ಚನ್ನಾಗಿರದಿದ್ದರೂ, ಸ್ವಲ್ಪ ಬೆಳ್ಳಗಂತೂ ಇದ್ದಳು. ಹುಡುಗಿಯೊಬ್ಬಳ ಮೇಲಿನ ಹರ್ಷನ ನೆಟ್ಟ ನೋಟವನ್ನು ಮಾತಿನ ನಡುವೆಯೆ ಗಮನಿಸಿದ ನಾವು, ‘ಏನೋ ಸಮಾಚಾರ, ಆ ಹುಡ್ಗಿನ ಹಂಗ್ ಗುರಾಯಿಸ್ತಾ ಇದ್ದಿಯಾ’? ಕೇಳಿದಾಗ, ‘ಯಾಕೊ ಗೊತ್ತಿಲ್ಲ. ಅವಳು ಸಖತ್ ಇಷ್ಟ ಆಗಿದ್ದಾಳೆ. ಹೇಗಾದ್ರೂ ಮಾಡಿ ಕನೆಕ್ಟ್‌ ಮಾಡಿಕೊಡ್ರಲೊ ಪ್ಲೀಸ್‌’ ಎಂದು ಗೋಗರೆದ. ‘ಎಲಾ ಇವ್ನ, ಕೇಳಿದ ತಪ್ಪಿಗೆ ಇವನ ಲವ್ ಕನೆಕ್ಟ್‌ ಮಾಡೊ ಕೆಲಸ ನಮಗೆ ಕೊಟ್ಟುಬಿಟ್ನಲ್ಲಾ?’ ಎಂದು ಅನಿಸಿದರೂ ನಮ್ಮುಡುಗನ ಮೊದಲ ಲವ್ ಸಕ್ಸಸ್‌ ಮಾಡಬೇಕು ಅಂತ ಎಲ್ಲರೂ ‘ನಮ್ಮಿಂದಾಗೊ ಸಾಥ್ ಕೊಡ್ತಿವಿ ಮಗಾ’ ಎಂದು ಭರವಸೆ ನೀಡಿದೆವು.

ಆ ಹುಡುಗಿಯ ಸ್ನೇಹಿತೆ ನಮ್ಮ ತರಗತಿಯ ಲೀಲಾಳಿಗೆ ಹರ್ಷನ ಕಥೆ ಹೇಳಿ, ‘ಏನಿಲ್ಲಾ, ನಿನ್ ಫ್ರೆಂಡ್ ಕಂಪ್ಲೀಟ್ ಡಿಟೇಲ್ಸ್‌ ಕೊಡು ಸಾಕು. ನೀನೇ ಹೇಳಿದೆ ಎಂದು ಯಾರಿಗೂ ಹೇಳಲ್ಲ. ಮುಂದಿನದ್ದನ್ನು ನಾವು ನೋಡ್ಕೊತೀವಿ’ ಎಂದು ಬೇಡಿಕೊಂಡೆವು. ಲೀಲಾಗೆ ನಮ್ಮ ಗುಂಪಿನ ಮೇಲೆ ಸ್ವಲ್ಪ ಗೌರವವಿದ್ದುದರಿಂದ, ಸ್ನೇಹಿತೆ ಅಮೋಘ ಸದ್ಯ ಲವ್‌ನಲ್ಲಿಲ್ಲ ಎಂಬುದರಿಂದಿಡಿದು ಆಕೆಯ ಪೂರ್ಣ ಜಾತಕ ನಮ್ಮ ಮುಂದೆ ಬಿಡಿಸಿಟ್ಟಳು.

ಇದೆಲ್ಲ ಕೇಳಿ ಖುಷಿಯಲ್ಲಿದ್ದ ಹರ್ಷನಿಗೆ, ‘ನೋಡೊ ಮಗಾ, ಮುಂದಿನ ಶನಿವಾರ ಪ್ರಪೋಸ್ ಡೇಟ್‌ ಫಿಕ್ಸ್’ ಎಂದು ದಿನಾಂಕ ನಿಗದಿ ಮಾಡಿದೆವು.

ಅಂದುಕೊಂಡಂತೆ ಶನಿವಾರ ಬಂದೇಬಿಟ್ಟಿತು. ಅಂದು ಎಲ್ಲರಿಗಿಂತ ಒಂದು ತಾಸು ಮೊದಲೇ ಕಾಲೇಜಿಗೆ ಬಂದಿದ್ದ ಹರ್ಷ, ಹೊಸ ಬಟ್ಟೆಯಲ್ಲಿ ಮಿಂಚುತ್ತಿದ್ದ.ಅಂದುಕೊಂಡಂತೆ ಮಧ್ಯಾಹ್ನದ ಹೊತ್ತಿಗೆ ಆ ಹುಡುಗಿ ಲೀಲಾಳನ್ನು ಮಾತನಾಡಿಸಲು ಕ್ಲಾಸ್‌ಗೆ ಬಂದಳು. ಆಗ ನಾವೂ ಸೇರಿ ಕ್ಲಾಸ್‌ನಲ್ಲಿದ್ದದ್ದು ಏಳೆಂಟು ಮಂದಿಯಷ್ಟೆ. ಸರಿ, ಇದೇ ಸರಿಯಾದ ಸಮಯ ಎಂದು ಹರ್ಷನಿಗೆ, ‘ಬೇರೆ ಯಾರೂ ಇಲ್ಲ. ಈಗಲೇ ಹೋಗಿ ಪ್ರಪೋಸ್ ಮಾಡು’ ಎಂದು ಹೇಳಿ, ಕ್ಲಾಸ್‌ನಲ್ಲಿದ್ದ ಬೇರೆ ಹುಡುಗರನ್ನು ಹೊರಗೆ ಕಳಿಸಿದೆವು. ‘ಹೂಂ’ ಎಂದು ತಲೆಯಾಡಿಸಿ ಲೀಲಾ ಮತ್ತು ಅಮೋಘ ಎದುರಿಗೆ ಹೋಗಿ ಕುಳಿತ. ಲೀಲಾ ಅಮೋಘಳಿಗೆ ಹರ್ಷನನ್ನು ಪರಿಚಯಿಸಿದಳು. ನಾವೆಲ್ಲರೂ ಒಂದು ಮೂಲೆಯಲ್ಲಿ ನಿಂತು ಇದನ್ನೆಲ್ಲ ಗಮನಿಸುತ್ತಿದ್ದೆವು.
ಹದಿನೈದು ನಿಮಿಷ ಗರ ಬಡಿದವನಂತೆ ಆಕೆಯನ್ನೇ ಗುರಾಯಿಸುತ್ತಿದ್ದ ಹರ್ಷ, ಹೇಳಲು ಬಾಯಿ ತೆರೆದು ಮತ್ತೆ ಸುಮ್ಮನಾಗುತ್ತಿದ್ದ. ನಾವು ಕೈ ಸನ್ನೆಯಲ್ಲಿಯೇ ಧೈರ್ಯ ಕೊಡ್ತಾ ಇದ್ವಿ. ಅಂತೂ ಕೊನೆಗೆ, ‘ರೀ ನಾ ನಿಮ್ನ ತುಂಬಾ ಇಷ್ಟಪಡ್ತಿನಿ. ಐ ಲವ್ ಯೂ’ ಎಂದು ಹೇಳೇ ಬಿಟ್ಟ.

ಒಂದು ಕ್ಷಣ ವಿಚಲಿತಳಾದ ಅಮೋಘ, ‘ಸಾರಿ ಲವ್– ಗಿವ್ ನನ್ನತ್ರ ಇಟ್ಕೋಬೇಡಿ. ಅದ್ರಿಂದ ನಾವ್ ತುಂಬಾ ದೂರ’ ಎಂದು ಸಾರಸಗಟಾಗಿ ಹೇಳಿದಳು. ಕೂಡಲೇ ಹರ್ಷ, ‘ಇಲ್ರಿ ನಿಮ್ಮ ಫಸ್ಟ್‌ ನೋಡಿದಾಗ್ಲೆ ಇಂಪ್ರೆಸ್ ಆಗಿದ್ದೆ. ಮಾತಾಡ್ಸೊ ಧೈರ್ಯ ಬರ್ಲಿಲ್ಲ ಅಷ್ಟೆ. ಪ್ಲೀಸ್ ಒಂದು ಸಲ ಯೋಚಿಸಿ ಹೇಳಿ’ ಎಂದು ಕೋರಿದ. ಆದರೆ, ಅವಳು, ‘ನಂಗೆ ಅದೆಲ್ಲ ಇಷ್ಟ ಇಲ್ಲ’ ಎಂದು ಏರುದನಿಯಲ್ಲಿ ಹೇಳಿದಳು. ಅಷ್ಟೊತ್ತಿಗೆ ಕೆಲ ಹುಡುಗ– ಹುಡುಗಿಯರು ಕ್ಲಾಸ್‌ಗೆ ಬಂದದ್ದನ್ನು ಗಮನಿಸಿದ ಹರ್ಷ, ‘ಫ್ರೆಂಡ್ಸ್‌ ಇದ್ದಾರೆ. ಪ್ಲೀಸ್ ಹತ್ತು ನಿಮಿಷ ಹೊರಗಡೆ ಬನ್ನಿ’ ಎಂದು ಬೇಡಿಕೊಂಡ. ಮೊದಲಿಗೆ ‘ಇಲ್ಲ’ ಎಂದರೂ, ಕೊನೆಗೂ ಒಪ್ಪಿದ ಅಮೋಘ ಸೆಂಟ್ರಲ್ ಕಾಲೇಜ್ ಪಾರ್ಕ್‌ಗೆ ಹರ್ಷನ ಜತೆ ಬಂದಳು. ಜತೆಗೆ ನಾವೂ ಸ್ವಲ್ಪ ದೂರದಲ್ಲಿ ನಿಂತು ಯಾರೂ ಅತ್ತ ಹೋಗದಂತೆ ನೋಡಿಕೊಳ್ಳುತ್ತಿದ್ದೆವು.

ಅಮೋಘಳ ‘ಏನ್ ಹೇಳಿ’ ಎಂಬ ಪ್ರಶ್ನೆಗೆ ಮಾತು ಆರಂಭಿಸಿದ ಹರ್ಷ, ‘ನೋಡಿ ನಾ ನಿಮ್ಮ ನೋಡಿ ಪ್ರಪೋಸ್ ಮಾಡೋಕೆ ಒಂದ್ ವಾರ ಟೈಮ್ ತಗೊಂಡಿದ್ದೀನಿ. ನೀವು ಒಂದ್ ವಾರ ಟೈಮ್ ತಗೊಂಡು ಹೇಳಿ’ ಎಂದ. ಅದಕ್ಕವಳು, ‘ಅದೆಂಗ್ರಿ ನೋಡಿದ್ ತಕ್ಷಣ ಲವ್ ಬರುತ್ತೆ’ ಎಂದು ದಿಟ್ಟಿಸಿದವಳೆ, ‘ನನಗೆ ನಿಮ್ ಮೇಲೆ ಆ ಥರ ಭಾವನೆ ಇಲ್ಲ. ಪ್ಲೀಸ್ ನನ್ನ ಬಿಟ್ಟು ಬಿಡಿ’ ಎಂದು ಹೊರಡಲು ಸಿದ್ಧಳಾದಳು. ಕೂಡಲೇ ಅವಳ ಕೈ ಹಿಡಿದುಕೊಂಡು ಹರ್ಷ, ‘ನೋಡಿ ನಿಮ್ಗೆ ನನ್ ಮೇಲೆ ಎಲ್ಲೋ ಒಂದು ಕಡೆ ಇಷ್ಟ ಇದೆ. ಹೇಳೋಕೆ ಅಂಜಿಕೆಪಟ್ಟುಕೊಳ್ತಾ ಇದ್ದಿರಷ್ಟೆ. ಇಲ್ಲದಿದ್ದರೆ, ನಾನ್ ಕರೆದ ತಕ್ಷಣ, ಕಾಲೇಜಿನಿಂದ ಇಲ್ಲಿಗೆ ಮಾತಾಡೊಕೆ ಬರ್ತಿದ್ರಾ. ನಿಜವಾಗಿಯೂ ಇಷ್ಟ ಇಲ್ದಿದ್ರೆ ಅಲ್ಲೇ ಚಪ್ಪಲಿ ತಗೊಂಡ್ ನನ್ ಮುಖಕ್ಕೆ ಹೊಡಿತಿದ್ರಿ ತಾನೆ’ ಎಂದ. ಹರ್ಷನ ಈ ಮಾತಿಗೆ ನಿರುತ್ತರಳಾದ ಆಕೆ. ‘ಯಾಕ್ ನನ್ನ ನೀವು ಅರ್ಥ ಮಾಡ್ಕೊತಿಲ್ಲ. ಸರಿ ಒಂದ್ ವೀಕ್ ಟೈಮ್ ಕೊಡಿ’ ಅಂತ ಹೇಳಿ ಹೊರಟಳು.

---ಈ ಮಾತುಕತೆ ನಡೆದ ಕೆಲವೇ ದಿನಗಳಲ್ಲಿ ಪರೀಕ್ಷೆ ನಡಿತು. ರಿಸಲ್ಟ್‌ ಕೂಡ ಬಂತು. ನಾವೆಲ್ಲರೂ ಜಸ್ಟ್‌ ಪಾಸ್ ಕೂಡ ಆಗಿದ್ದೆವು. ಆದರೆ, ಹಿಂದಿನ ಸೆಮಿಸ್ಟರ್‌ನಲ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್ ಆಗಿದ್ದ ಹರ್ಷ, ಆ ಸೆಮಿಸ್ಟರ್‌ನಲ್ಲಿ ಎರಡು ಸಬ್ಜೆಕ್ಟ್‌ಗಳಲ್ಲಿ ಫೇಲಾಗಿದ್ದ. ನಮಗೆಲ್ಲ ಉರಿದೊಯ್ತ. ಕ್ಲಾಸ್‌ನ ಮೂಲೆಯೊಂದರಲ್ಲಿ ಸಪ್ಪಗೆ ಕುಳಿತಿದ್ದ ಹರ್ಷನ ಹತ್ತಿರ ಹೋಗಿ, ‘ಮಗಾ, ಈ ಲವ್‌– ಗಿವ್ ಎಲ್ಲ ಬಿಟ್ಟುಬಿಡು. ಇನ್ಮುಂದೆ ಮುಚ್ಕಂಡ್ ಓದು. ಊರಿಂದ ಇಲ್ಲಿಗೆ ಏನಕ್ಕೆ ಬಂದಿದ್ದಿಯಾ ಅಂತ ಮೊದ್ಲು ತಿಳ್ಕೊ. ಓದಿ ಸೆಟ್ಲ್‌ ಆಗು. ಆಮೇಲೆ ಇದೆಲ್ಲ ಇದ್ದಿದ್ದೆ’ ಎಂದು ಉಗಿದೆವು. ನಮ್ಮ ಬುದ್ಧಿಮಾತುಗಳಿಂದ ಎಚ್ಚೆತ್ತು ‘ಇನ್ಮುಂದೆ ಇಂಥ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದ ಹರ್ಷ, ನೇರವಾಗಿ ಲೀಲಾಳ ಬಳಿ, ‘ನಿನ್‌ ಫ್ರೆಂಡ್‌ಗೆ ನನ್ ಕಡೆಯಿಂದ ಸಾರಿ ಹೇಳು. ಸುಮ್ನೆ ಆಕೆಗೆ ತೊಂದರೆ ಕೊಟ್ಟೆ’ ಎಂದ.

ಆಶ್ಚರ್ಯವೆಂಬಂತೆ ಇದಾಗಿ ಕೆಲ ದಿನಗಳ ಬಳಿಕ, ಹರ್ಷನನ್ನು ಅಮೋಘ ಹುಡುಕಿಕೊಂಡು ಬಂದಳು. ಆತನೊಂದಿಗೆ ಪರ್ಸನಲ್ ಆಗಿ ಮಾತನಾಡಿ, ‘ನನಗೂ ನೀನಂದ್ರೆ ಇಷ್ಟ’ ಎಂದಳು. ಆದರೆ, ಅಷ್ಟೊತ್ತಿಗಾಗಲೇ ಹರ್ಷನ ಹೃದಯದಲ್ಲಿ ಅಮೋಘಳ ಪ್ರೀತಿಯ ಕೊಳ ಬತ್ತಿತ್ತು ಎನಿಸುತ್ತದೆ. ಪ್ರೀತಿಯಿಂದಲೇ ಆಕೆಯನ್ನು ನಿರಾಕರಿಸಿ, ತಾನು ಫೇಲಾಗಿರುವುದು ಸೇರಿದಂತೆ ಒಟ್ಟಾರೆ ಪರಿಸ್ಥಿತಿಯನ್ನು ಬಿಡಿಸಿ ಹೇಳಿ, ‘ಲವ್ ಅಂತ ತಲೆ ಕೆಡಿಸಿಕೊಳ್ಳುವುದು ಬೇಡ. ಸ್ನೇಹಿತರಾಗಷ್ಟೆ ಇರೋಣ. ಚನ್ನಾಗಿ ಓದಿ ಮೊದ್ಲು ಸೆಟ್ಲ್ ಆಗೋಣ’ ಎಂದು ಆಕೆಯನ್ನು ಒಪ್ಪಿಸಿ ಕಳುಹಿಸಿಕೊಟ್ಟ. ಹೀಗೆ ಪ್ರೀತಿಯ ಅಮಲಿನಲ್ಲಿದ್ದ ಹರ್ಷನಿಗೆ ಪರೀಕ್ಷೆಯಲ್ಲಿ ಫೇಲಾದ ಬಳಿಕ, ಭವಿಷ್ಯದ ಕುರಿತು ಜ್ಞಾನೋದಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT