ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮಕಥೆ’ ತಂಡದಿಂದ ಚಿತ್ರರಸಿಕರಿಗೆ ಸ್ಪರ್ಧೆ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ನನ್ನ ನಿನ್ನ ಪ್ರೇಮ ಕಥೆ’ ಚಿತ್ರತಂಡ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ. ಚಿತ್ರತಂಡ ಈಗಾಗಲೇ ಸಿದ್ಧಪಡಿಸಿರುವ ಹಾಡುಗಳಿಗೆ ಹೊಸದಾಗಿ ಅತ್ಯುತ್ತಮ ಸಂಗೀತ ಸಂಯೋಜಿಸಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಹಾಗೂ ಒಳ್ಳೆಯ ಪ್ರೇಮಪತ್ರವನ್ನು ಬರೆದು ಕಳುಹಿಸಿದವರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನ ನೀಡಲು ನಿರ್ಧರಿಸಿದೆ. ಅದಕ್ಕಾಗಿ ಸ್ಪರ್ಧೆಯನ್ನೇ ಏರ್ಪಡಿಸಿದೆ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ nnpkcinema.com ಜಾಲತಾಣವನ್ನು ಭೇಟಿ ಮಾಡಬಹುದು. ಚಿತ್ರದ ಹಾಡುಗಳ ಬಿಡುಗಡೆಯ ದಿನ ವಿಜೇತರ ಹೆಸರನ್ನು ಘೋಷಿಸಲಾಗುವುದು.

‘ನನ್ನ ನಿನ್ನ ಪ್ರೇಮ ಕಥೆ’ಗೆ ‘ಪ್ರೀತಿಗಾಗಿ ನೀನು... ಪ್ರೀತಿಯಾದೆ ನೀನು... ಪ್ರೀತಿ ತಾನೆ ನೀನು...’ ಎಂದು ಅಡಿಟಿಪ್ಪಣಿ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ನಡೆಯುವ ಒಂದು ಪ್ರೇಮಕಥೆಯನ್ನು ನಿರ್ದೇಶಕ ಶಿವು ಜಮಖಂಡಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ. ಅವರಿಗೆ ಇದು ನಿರ್ದೇಶನದ ಮೊದಲ ಅನುಭವ. ಪತ್ರಿಕೋದ್ಯಮ ಪದವೀಧರರಾದ ಶಿವು ಅವರೇ ಗೀತ ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ.

ನಿರ್ದೇಶಕರು ಶಂಕರ್ ನಾಗ್ ಅಭಿಮಾನಿ. ಹಾಗಾಗಿ ನಾಯಕನ ತಂದೆಯ ಪಾತ್ರಕ್ಕೆ ಶಂಕರ್ ನಾಗ್ ಅವರನ್ನೇ ಬಳಸಿಕೊಂಡದ್ದಾರೆ. ಶಂಕರ್ ನಾಗ್ ಅವರಂತೂ ಬರಲು ಸಾಧ್ಯವಿಲ್ಲ. ಗ್ರಾಫಿಕ್ಸ್ ಕೂಡ ಬಳಸಿಕೊಳ್ಳುತ್ತಿಲ್ಲ. ಬದಲಾಗಿ ಶಂಕರ್ ನಾಗ್ ಅವರ ಸ್ಟಿಲ್‌ಗಳನ್ನು ಹಾಗೂ ಹಿನ್ನೆಲೆಯಲ್ಲಿ ಅವರ ಸಂಭಾಷಣೆಗಳನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ.

ವಿಜಯ್ ರಾಘವೇಂದ್ರ ಚಿತ್ರದ ನಾಯಕ. ಅವರಿಗೆ ಜೊತೆಯಾದವರು ನಿಧಿ ಸುಬ್ಬಯ್ಯ. ನಾಯಕಿಗೆ ಬಣ್ಣ ಹಚ್ಚುವಾಗ ಆಕೆಯ ಮೇಲೆ ನಾಯಕನಿಗೆ ಪ್ರೀತಿಯಾಗುತ್ತದೆ.

ಈ ಪ್ರೀತಿಯಲ್ಲಿ ಹುಳಿ ಹಿಂಡುವ ಪಾತ್ರದಲ್ಲಿ ತಿಲಕ್ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ, ಸುಧಾ ಬೆಳವಾಡಿ, ಸಂಗೀತ, ಗುರುರಾಜ ಹೊಸಕೋಟೆ, ಜೋಕರ್ ಹನುಮಂತ್ ತಾರಾಗಣದಲ್ಲಿದ್ದಾರೆ. ಜಮಖಂಡಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿಗಳಲ್ಲಿ ಐವತ್ತೈದು ದಿನಗಳ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಏಳು ಹಾಡುಗಳಿವೆ. ದಾಮೋದರ್ ಕಾನಸೂರು ಸಂಕಲನ, ಮೊಹಮದ್ ಹಸೀಬ್ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT