ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರೀ ಬೇಸಿಕ್ಸ್‌ ’: ಸೋಲು ಕಂಡ ಫೇಸ್‌ಬುಕ್‌

‘ಉಚಿತ ಅಂತರ್ಜಾಲ’ದ ಬಗ್ಗೆ ನೀಡಿದ ಅತಿಯಾದ ಪ್ರಚಾರವೇ ಮುಳುವಾಯಿತೇ?
Last Updated 13 ಫೆಬ್ರುವರಿ 2016, 5:36 IST
ಅಕ್ಷರ ಗಾತ್ರ

ಉಚಿತ ಅಂತರ್ಜಾಲ ಸೌಲಭ್ಯ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣದ ದೈತ್ಯ ಸಂಸ್ಥೆಫೇಸ್‌ಬುಕ್‌, ಭಾರತದಲ್ಲಿ ನಡೆಸಿದ  ಜಾಹೀರಾತು ಸಮರದಲ್ಲಿ ಸೋಲು ಕಂಡು ಹಿಮ್ಮೆಟ್ಟಿದೆ.

100 ಕೋಟಿಗೂ ಹೆಚ್ಚು ಫೇಸ್‌ಬುಕ್‌ ಬಳಕೆದಾರರನ್ನು ಪರಸ್ಪರ ಸಂಪರ್ಕಗೊಳಿಸುವುದಕ್ಕಿಂತ,  ಇಡೀ ವಿಶ್ವವನ್ನೇ ಸಂಪರ್ಕ ಜಾಲಕ್ಕೆ ಒಳಪಡಿಸುವ ಮಹೋನ್ನತ ಕನಸನ್ನು ಫೇಸ್‌ಬುಕ್‌ನ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರು ವರ್ಷಗಳಿಂದ ಕಾಣುತ್ತ ಬಂದಿದ್ದಾರೆ. ಇಂಟರ್‌ನೆಟ್‌ನ ಕೆಲವು ಸೇವೆಗಳ ಬಗ್ಗೆ ಮಾತ್ರ  ಹೆಚ್ಚಿನ ಒಲವು ಹೊಂದಿದ ಉಚಿತ ಮೊಬೈಲ್‌ ದತ್ತಾಂಶ ಸೇವೆಯನ್ನು  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌), ಸಂಪೂರ್ಣವಾಗಿ ನಿಷೇಧಗೊಳಿಸಿದ್ದರಿಂದ ಜುಕರ್‌ಬರ್ಗ್‌ ಅವರ ಕನಸಿಗೆ ತೀವ್ರ ಹಿನ್ನಡೆಯಾಗಿದೆ.

ಭಾರತದ ಬಡವರಿಗೂ ಇಂಟರ್‌ನೆಟ್‌ ಸೌಲಭ್ಯವನ್ನು ಉಚಿತವಾಗಿ ವಿಸ್ತರಿಸುವ ಬಗ್ಗೆ  ನಡೆದ ತೀವ್ರ ಸ್ವರೂಪದ ಸಾರ್ವಜನಿಕ ವಾದ–ವಿವಾದಗಳ ನಂತರ, ಫೇಸ್‌ಬುಕ್‌ನ ವಿವಾದಾತ್ಮಕ ‘ಫ್ರೀ ಬೇಸಿಕ್ಸ್‌’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಸರ್ಕಾರ ಮುಂದಾಗಿದೆ.

ಶುಲ್ಕ ಪಾವತಿಸದೆ ಮೊಬೈಲ್‌ನಲ್ಲಿ  ಫೇಸ್‌ಬುಕ್‌ ಅನ್ನು ಅಕ್ಷರ ರೂಪದಲ್ಲಿ ವೀಕ್ಷಿಸಲು, ಕೆಲ ಸುದ್ದಿಗಳು, ಆರೋಗ್ಯ, ಉದ್ಯೋಗ ಮತ್ತಿತರ ಕೆಲ ಮೂಲ ಸೇವೆಗಳನ್ನು ‘ಫ್ರೀ ಬೇಸಿಕ್ಸ್‌’ ಒದಗಿಸುತ್ತಿತ್ತು. ಬಡವರಿಗೆ ಮತ್ತು ತಾಂತ್ರಿಕವಾಗಿ ಪರಿಣತರಲ್ಲದವರಿಗೆ ಇಂಟರ್‌ನೆಟ್‌ನ  ವಿರಾಟ ಸ್ವರೂಪ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು ಎಂದು ಫೇಸ್‌ಬುಕ್‌ ಬಣ್ಣಿಸಿತ್ತು.

ಫೇಸ್‌ಬುಕ್‌ನ ಉದ್ದೇಶ ಒಳ್ಳೆಯದಾಗಿದ್ದರೂ, ಅದನ್ನು ಭಾರತದಲ್ಲಿ ಕಾರ್ಯಗತಗೊಳಿಸುವಲ್ಲಿ ಅದರ ಲೆಕ್ಕಾಚಾರ ತಲೆಕೆಳಗಾಯಿತು. ‘ಫ್ರೀ ಬೇಸಿಕ್ಸ್‌’ ಯೋಜನೆಯನ್ನು ಭಾರತೀಯರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಎಂದು ಫೇಸ್‌ಬುಕ್‌ ನಿರೀಕ್ಷಿಸಿತ್ತು.  ಆದರೆ, ಫೇಸ್‌ಬುಕ್‌ ಇಲ್ಲಿಯೇ ಎಡವಟ್ಟು ಮಾಡಿಕೊಂಡಿತ್ತು. ಈ ಪ್ರಯತ್ನಕ್ಕೆ ಬೆಂಬಲ ನೀಡುವಂತಹ ದೂರಸಂಪರ್ಕ ಸೇವಾ ಸಂಸ್ಥೆಗಳನ್ನು ತನ್ನ ಪ್ರಚಾರ ಅಭಿಯಾನದಲ್ಲಿ ಜತೆಯಾಗಿ ಕರೆದೊಯ್ಯುವ ಬದಲಿಗೆ, ಇಡೀ ದೇಶಕ್ಕೆ  ನೀಡಿದ ಸಂದೇಶದಲ್ಲಿ ತನ್ನನ್ನು ತಾನು ವೈಭವೀಕರಿಸಿಕೊಂಡಿತು.

ಇದೇ ಅದಕ್ಕೆ ಮುಳುವಾಯಿತು ಎಂದು ಪರಿಣತರು ವಿಶ್ಲೇಷಿಸುತ್ತಾರೆ. ಜಾಹೀರಾತು ಸಮರವು ಫೇಸ್‌ಬುಕ್‌ನ ಭವಿಷ್ಯದ ಉದ್ದೇಶಗಳ ಬಗ್ಗೆ ಇಂಟರ್‌ನೆಟ್‌ ಬಳಕೆದಾರರಲ್ಲಿ ಅಪನಂಬಿಕೆ ಮೂಡಿಸಿತು. ಇದೇ ಕಾರಣಕ್ಕೆ ಟ್ರಾಯ್‌ ಕೂಡ ಫೇಸ್‌ಬುಕ್‌ನ ಉದ್ದೇಶಗಳನ್ನು ಪ್ರಶ್ನಿಸುವಂತಾಯಿತು.

ಅಂತರ್ಜಾಲದಲ್ಲಿನ ಎಲ್ಲ ಮಾಹಿತಿಯು ಎಲ್ಲರಿಗೂ ಸಮಾನವಾಗಿ  ದೊರೆಯುವಂತೆ, ಇಂಟರ್‌ನೆಟ್‌ ಒದಗಿಸುವ ಸೇವಾ ಸಂಸ್ಥೆಗಳು ಕಾಳಜಿ ವಹಿಸಬೇಕು ಎಂದು ಪ್ರತಿಪಾದಿಸುವ ‘ತಟಸ್ಥ ಅಂತರ್ಜಾಲ’ ನೀತಿ ಕುರಿತು ದೇಶದಲ್ಲಿ  ಬಿಸಿ ಬಿಸಿ ಚರ್ಚೆ  ನಡೆಯುತ್ತಿದ್ದ ಸಂದರ್ಭದಲ್ಲಿ ಟ್ರಾಯ್‌ ಕೈಗೊಂಡ ನಿರ್ಧಾರವು ಫೇಸ್‌ಬುಕ್‌ ಅನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

ಅಮೆರಿಕದಲ್ಲಿ ಫೇಸ್‌ಬುಕ್‌ ‘ತಟಸ್ಥ ಅಂತರ್ಜಾಲ’ ನೀತಿಯನ್ನು ಪ್ರತಿಪಾದಿಸುತ್ತಿದೆ.  ಆದರೆ, ಭಾರತದಲ್ಲಿ   ಮಾತ್ರ ಅದಕ್ಕೆ ವ್ಯತಿರಿಕ್ತವಾದ ನಿಲುವು ತಳೆದಿರುವುದು ಅದರ ದ್ವಂದ್ವ ಧೋರಣೆಗೆ ಕನ್ನಡಿ ಹಿಡಿಯುತ್ತದೆ. ಅಂತರ್ಜಾಲ ಸಂಪರ್ಕ ಸೌಲಭ್ಯದಿಂದ ವಂಚಿತರಾದವರಿಗೆ ತನ್ನ ಕೆಲವು ಸೇವೆಗಳನ್ನು ಉಚಿತವಾಗಿ ಒದಗಿಸುವುದು   ‘ತಟಸ್ಥ ಅಂತರ್ಜಾಲ’ ನೀತಿಯ ಉಲ್ಲಂಘನೆಯಾಗುವುದಿಲ್ಲ ಎಂದು ಫೇಸ್‌ಬುಕ್‌ ಪ್ರತಿಪಾದಿಸುತ್ತಿದೆ.

ಫ್ರೀ ಬೇಸಿಕ್ಸ್‌ ಯೋಜನೆಯನ್ನು ಭಾರತಕ್ಕೆ ಪರಿಚಯಿಸುವ ಭರದಲ್ಲಿ ಜುಕರ್‌ಬರ್ಗ್‌ ಅವರು ಎಡವಿ ಬಿದ್ದಿರುವುದು,  ಇಡೀ ಜಗತ್ತಿಗೆ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವಲ್ಲಿ ಎದುರಾಗುವ ಸವಾಲುಗಳ ಮೇಲೆ ಬೆಳಕು ಚೆಲ್ಲಿದೆ.

ಚೀನಾದ ಶಿಯೊಮಿ ಮತ್ತು ಗೂಗಲ್‌ ಸಂಸ್ಥೆಗಳೂ ಇದೇ ಬಗೆಯ ಪ್ರಯತ್ನ ಮಾಡುತ್ತಿವೆ. ಅಂತರ್ಜಾಲ ಸೌಲಭ್ಯದಿಂದ ವಂಚಿತರಾದ ಕೋಟ್ಯಂತರ ಜನರಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವುದಕ್ಕೆ ಅವಕಾಶಗಳು ವಿಪುಲವಾಗಿವೆ. ಆದರೆ, ನಿಯಂತ್ರಣ ಕ್ರಮಗಳು ಮತ್ತು ಸ್ಥಳೀಯ ಅಧಿಕಾರಿಗಳು ಈ ಸವಾಲುಗಳನ್ನು ಎದುರಿಸಲು ಪ್ರಮುಖ ಅಡ್ಡಿಯಾಗಿ ಪರಿಣಮಿಸಿದ್ದಾರೆ.

‘ಇಂಟರ್‌ನೆಟ್‌ನ ವಿಷಯದ ಬಗ್ಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ವ್ಯಾಪಕ ಬಗೆಯಲ್ಲಿ ಚರ್ಚೆ ನಡೆದಿದೆ. ಇದರ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ದೇಶದಲ್ಲಿ ಇಂಟರ್‌ನೆಟ್‌ಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು  ಅಂತರ್ಜಾಲ ಸುದ್ದಿ ಸಂಸ್ಥೆ ‘ಮೀಡಿಯಾನಾಮಾ’ದ ಸಂಪಾದಕ ನಿಖಿಲ್‌ ಪಹ್ವಾ ಅಭಿಪ್ರಾಯಪಟ್ಟಿದ್ದಾರೆ.

ಜುಕರ್‌ಬರ್ಗ್ ಅವರು ಎಲ್ಲರಿಗೂ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು 2013ರಲ್ಲಿ ಆರಂಭಿಸಿದ ‘ಫ್ರೀ ಬೇಸಿಕ್ಸ್‌’  ಕಾರ್ಯಕ್ರಮಕ್ಕೆ ಇಂಟರ್‌ನೆಟ್‌ ಡಾಟ್‌ ಆರ್ಗ್‌ (Internet.org) ಎಂದು ಕರೆಯಲಾಗಿತ್ತು. ಮೊಬೈಲ್‌ ಅಪ್ಲಿಕೇಶನ್ಸ್‌ ಅನ್ನು ಹೆಚ್ಚು ದಕ್ಷತೆಯಿಂದ  ಬಳಸುವುದನ್ನು ಸುಲಭಗೊಳಿಸುವುದು ಮತ್ತು ಬಡ ದೇಶಗಳ ಬಳಕೆದಾರರಿಗೆ ಸೀಮಿತ ಪ್ರಮಾಣದಲ್ಲಿ ಉಚಿತವಾಗಿ ಇಂಟರ್‌ನೆಟ್‌ ಸೌಲಭ್ಯ ಒದಗಿಸುವುದು ಇದರ ಮೂಲ ಆಲೋಚನೆಯಾಗಿತ್ತು.

ಈ ಕಾರ್ಯಕ್ರಮದಲ್ಲಿ  ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಸ್ಯಾಮ್ಸಂಗ್‌, ಕ್ವಾಲ್‌ಕಾಂ, ನೋಕಿಯಾ, ಎರಿಕ್ಸನ್‌ ಮತ್ತಿತರ ಸಂಸ್ಥೆಗಳು ಫೇಸ್‌ಬುಕ್‌ನ ಪಾಲುದಾರರಾಗಿ ಕಾರ್ಯನಿರ್ವಹಿಸಲು ಮುಂದೆ ಬಂದಿದ್ದವು. ಆನಂತರ ಅವುಗಳ ಪಾತ್ರ ಗೌಣವಾಗಿತ್ತು.

ಸದ್ಯಕ್ಕೆ ‘ಫ್ರೀ ಬೇಸಿಕ್ಸ್‌’, ವಿಶ್ವದ 25 ದೇಶಗಳಲ್ಲಿ ಲಭ್ಯ ಇದೆ. ಯೋಜನೆಯ ಅಂಗವಾಗಿ ಫೇಸ್‌ಬುಕ್‌, ದೂರದ ಕುಗ್ರಾಮಗಳಲ್ಲಿ ಅಗ್ಗದ ವೈ–ಫೈ ಮತ್ತು ಡ್ರೋನ್‌ಗಳ ನೆರವಿನಿಂದ ಇಂಟರ್‌ನೆಟ್‌ ಸೇವೆ ಒದಗಿಸುವ ಕಾರ್ಯಕ್ರಮಗಳಿಗೆ ಅಪಾರ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿದೆ.

ಭಾರತದಲ್ಲಿ ಫೇಸ್‌ಬುಕ್‌ 13 ಕೋಟಿಗಳಷ್ಟು ಬಳಕೆದಾರರನ್ನು ಹೊಂದಿದೆ.  ಕಳೆದ ವರ್ಷ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ನೆರವಿನಿಂದ ‘ಫ್ರೀ ಬೇಸಿಕ್ಸ್‌’ ಸೇವೆ ಒದಗಿಸಲು ಚಾಲನೆ ನೀಡಿತ್ತು. ಈ ಸೇವೆ ಆರಂಭಗೊಳ್ಳುತ್ತಿದ್ದಂತೆಯೇ ಟೀಕೆಗಳು ಕೇಳಿ ಬರತೊಡಗಿದವು. ಇಂಟರ್‌ನೆಟ್‌ ಬಳಕೆಯಲ್ಲಿ ಹೆಚ್ಚು ಪರಿಣತರಲ್ಲದವರನ್ನು ಮತ್ತು ಹೊಸ ಬಳಕೆದಾರರನ್ನು ತನ್ನ ಬಲೆಗೆ ಕೆಡವಿಕೊಳ್ಳಲು ಫೇಸ್‌ಬುಕ್‌ ನಡೆಸುತ್ತಿರುವ ಸಂಚು ಇದಾಗಿದೆ ಎಂಬ ಕೂಗು ದಿನೇ ದಿನೇ ಬಲವಾಗತೊಡಗಿತು.

ಕೆಲ ನಿರ್ದಿಷ್ಟ ಮೊಬೈಲ್‌ ಆ್ಯಪ್‌ಗಳನ್ನು ಅಥವಾ ಅಂತರ್ಜಾಲ ತಾಣಗಳನ್ನು ಬಳಸಿಕೊಳ್ಳಲು ಮೊಬೈಲ್‌ ಸೇವಾ ಸಂಸ್ಥೆಗಳು ಅಥವಾ ಇಂಟರ್‌ನೆಟ್‌ ಸೇವಾ ಸಂಸ್ಥೆಗಳು ಬಳಕೆದಾರರಿಗೆ ಯಾವುದೇ ಶುಲ್ಕ ವಿಧಿಸದ ‘ಫ್ರೀ ಬೇಸಿಕ್ಸ್‌’ ಮತ್ತು ಶೂನ್ಯ ದರದ ಯೋಜನೆಗಳು ‘ತಟಸ್ಥ ಅಂತರ್ಜಾಲ’ ನೀತಿಯ ಸ್ಪಷ್ಟ ಉಲ್ಲಂಘನೆ ಎಂಬ ವಾದ ಜೋರಾಗತೊಡಗಿತು.

ಇದಕ್ಕೆ ಪ್ರತಿಯಾಗಿ  ಫೇಸ್‌ಬುಕ್‌, ತನ್ನ  ‘ಫ್ರೀ ಬೇಸಿಕ್ಸ್‌’ನ ಕೊಡುಗೆಗಳು ಜನರಿಗೆ ತುಂಬ ಉಪಯುಕ್ತವಾಗಿವೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಮಾಧ್ಯಮಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಲು ಲಕ್ಷಾಂತರ ಡಾಲರ್‌ಗಳನ್ನು ಖರ್ಚು  ಮಾಡಿತು.  ಭಾರತ ಸರ್ಕಾರವು ‘ಫ್ರೀ ಬೇಸಿಕ್ಸ್‌’ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ತನ್ನ ಭಾರತೀಯ ಬಳಕೆದಾರರಿಗೆ ಮನವಿಯನ್ನೂ ಮಾಡಿಕೊಂಡಿತ್ತು.

‘ಫ್ರೀ  ಬೇಸಿಕ್ಸ್‌’ ನಿರ್ಬಂಧಿಸುವುದರ ವಿರುದ್ಧ ಸ್ವತಃ  ಜುಕರ್‌ಬರ್ಗ್‌ ಅವರೂ ಲಾಬಿ ನಡೆಸಿದರು. ಜನಾಭಿಪ್ರಾಯ ತಮ್ಮ ಪರ ಇರುವಂತೆ ಮಾಡಲು ಇಂಗ್ಲಿಷ್‌ ದಿನಪತ್ರಿಕೆಯೊಂದರಲ್ಲಿ ಲೇಖನವನ್ನೂ ಬರೆದರು.

ಇಂತಹ ಅತಿ ಪ್ರಚಾರವೇ ಫೇಸ್‌ಬುಕ್‌ಗೆ ಮುಳುವಾಯಿತು ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. ಸಂಸ್ಥೆಯ ದೀರ್ಘಾವಧಿ ಯೋಜನೆಗಳು ಮತ್ತು ಇತರ ವಹಿವಾಟಿನ ಯಾವುದೇ ಮಾಹಿತಿ ಇಲ್ಲದಿರುವುದು ಭಾರತದ ಇಂಟರ್‌ನೆಟ್‌ ಬಳಕೆದಾರರ ಕಳವಳ ಹೆಚ್ಚಿಸಿತು.

ಇಂಟರ್‌ನೆಟ್‌ ಸೇವೆಗೆ ಸಂಬಂಧಿಸಿದ ಈ ವಿವಾದವು  ಅಮೆರಿಕವೂ ಸೇರಿದಂತೆ ಇತರ ದೇಶಗಳಲ್ಲೂ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಶೂನ್ಯ ದರದ ಇಂಟರ್‌ನೆಟ್‌ ಸೇವೆಗಳು ‘ತಟಸ್ಥ ಅಂತರ್ಜಾಲ’ ನಿಯಮಗಳಿಗೆ ಬದ್ಧವಾಗಿವೆಯೇ ಎಂಬುದರ ಕುರಿತಾಗಿ ಅಮೆರಿಕದ ಸಂವಹನ ಆಯೋಗವು (ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌) ಅಧ್ಯಯನ ಮಾಡುತ್ತಿದೆ.

‘ಕೆಲವೇ ಕೆಲ ನಿರ್ದಿಷ್ಟ ಸೇವೆಗಳನ್ನು ಉಚಿತವಾಗಿ ಒದಗಿಸುವ ಮೂಲಕ  ಬಳಕೆದಾರರ ಇಂಟರ್‌ನೆಟ್‌ ಅನುಭವವನ್ನು  ರೂಪಿಸುವ ಅಧಿಕಾರವು ಮೊಬೈಲ್‌ ಸೇವಾ ಸಂಸ್ಥೆಗಳ ಪಾಲಾಗದಂತೆ ನೋಡಿಕೊಳ್ಳಬೇಕು’ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು  ತನ್ನ ಹೊಸ ನೀತಿಯಲ್ಲಿ ಅಭಿಪ್ರಾಯಪಟ್ಟಿದೆ.

‘ಬಹುತೇಕ ಭಾರತೀಯರು ಈಗಲೂ ಇಂಟರ್‌ನೆಟ್‌ ಸೌಲಭ್ಯ ವಂಚಿತರಾಗಿರುವುದರಿಂದ, ಅವರ ಮಧ್ಯೆ ಸಂವಹನ ಏರ್ಪಡಿಸುವ  ನಮ್ಮ ಮಹತ್ವದ ಗುರಿಯಿಂದ ನಾವು ಹಿಂದೆ ಸರಿಯುವುದಿಲ್ಲ’ ಎಂದು ಜುಕರ್‌ಬರ್ಗ್‌ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ಇಂಟರ್‌ನೆಟ್‌ ಸಂಪರ್ಕ ವಂಚಿತ ಬಳಕೆದಾರರಿಗೆ ಇಂತಹ ಸೌಲಭ್ಯ ಕಲ್ಪಿಸಿಕೊಡುವುದರಿಂದ  ಜನರನ್ನು ಬಡತನದಿಂದ ಮೇಲೆತ್ತಲು, ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿಸಲು ಮತ್ತು ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಲು ಸಾಧ್ಯವಾಗಲಿದೆ. ಈ ಜನರ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಿದ್ದು, ಅವರಿಗೆ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ನಾವು ಬದ್ಧರಾಗಿದ್ದೇವೆ’ ಎಂದೂ ಅವರು ಬರೆದುಕೊಂಡಿದ್ದಾರೆ.

‘ವಿಶ್ವದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೆ ಇಂಟರ್‌ನೆಟ್‌ ಒಂದೇ ಬಗೆಯಲ್ಲಿ ದೊರೆಯುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಇಂಟರ್‌ನೆಟ್‌ ಎನ್ನುವುದು 130 ಅಂತರ್ಜಾಲ ತಾಣಗಳ ಸಂಗ್ರಹವಲ್ಲ.  ಇಂಟರ್‌ನೆಟ್‌ ಸೌಲಭ್ಯ ಪಡೆಯುವ ಮತ್ತು ‘ತಟಸ್ಥ ಅಂತರ್ಜಾಲ’ದ ಮಧ್ಯೆ ಆಯ್ಕೆ ಮಾಡಿಕೊಳ್ಳಲು ನಾವು ಬಳಕೆದಾರರನ್ನು  ಒತ್ತಾಯಿಸಬಾರದು’ ಎಂದು  ಮೀಡಿಯಾನಾಮಾದ ನಿಖಿಲ್‌ ಪಹ್ವಾ ಹೇಳುತ್ತಾರೆ.

ಟ್ರಾಯ್‌ ನಿರ್ಧಾರದಿಂದ ತಮಗೆ ತೀವ್ರ ನಿರಾಶೆಯಾಗಿದೆ ಎಂದು ಭಾರತೀಯ ಮೊಬೈಲ್‌ ಸೇವಾ ಸಂಸ್ಥೆಗಳು  (ಸಿಒಎಐ)  ಪ್ರತಿಕ್ರಿಯಿಸಿವೆ.
‘ಕಡಿಮೆ ಅನುಕೂಲ ಹೊಂದಿರುವ  ನಾಗರಿಕರು ಇಂಟರ್‌ನೆಟ್‌ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ,   ಜೀವನಮಟ್ಟ ಸುಧಾರಿಸಿಕೊಳ್ಳುವ ಮಾರ್ಗಗಳನ್ನು, ‘ಫ್ರೀ ಬೇಸಿಕ್ಸ್‌’ ಮೇಲೆ ಸಂಪೂರ್ಣ ನಿಷೇಧ ವಿಧಿಸಿದ ಟ್ರಾಯ್‌ ನಿರ್ಧಾರವು ಮುಚ್ಚಿ ಬಿಟ್ಟಿದೆ’ ಎಂದು ಸಿಒಎಐನ ಮಹಾ ನಿರ್ದೇಶಕ ರಾಜನ್‌ ಎಸ್‌. ಮ್ಯಾಥ್ಯೂ  ಅಭಿಪ್ರಾಯಪಟ್ಟಿದ್ದಾರೆ.
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT