ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯ’ ಮೆಟ್ಟಿನಿಂತು ಗೆದ್ದ ನಾರಾಯಣಸ್ವಾಮಿ

ಕಾಂಗ್ರೆಸ್‌ಗೆ ಸವಾಲೆಸೆದು ಸ್ಪರ್ಧಿಸಿದ್ದ ದಯಾನಂದ ರೆಡ್ಡಿಗೆ ಸಿಕ್ಕಿದ್ದು ಬರೀ 19 ಮತ!
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಹಾಲಿ ಸದಸ್ಯರ ‘ಬಂಡಾಯ’ವನ್ನು ಮೆಟ್ಟಿನಿಂತು ಗೆಲುವು ಸಾಧಿಸಿದ್ದಾರೆ.

ಚಲಾವಣೆಯಾದ ಮತಗಳ ಪೈಕಿ 2,708 ಮತಗಳು ಕ್ರಮಬದ್ಧವಾಗಿದ್ದವು. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲೇ ಗೆಲುವು ಸಾಧಿಸಲು 1355 ಮತಗಳ ಅಗತ್ಯವಿತ್ತು. ನಾರಾಯಣಸ್ವಾಮಿ ಅವರು 1,384 ಮತಗಳನ್ನು ಗಳಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ವಿಧಾನ ಪರಿಷತ್‌ ಪ್ರವೇಶಿಸುವ ಅರ್ಹತೆ ಪಡೆದರು. ಅವರು ಬಿಜೆಪಿ ಅಭ್ಯರ್ಥಿ ದೊಡ್ಡ ಬಸವರಾಜು ಅವರಿಗಿಂತ 82 ಮತಗಳನ್ನು ಹೆಚ್ಚು ಗಳಿಸಿದ್ದಾರೆ.   

ಕಾಂಗ್ರೆಸ್‌ ಪಕ್ಷವು ವಿಧಾನ ಪರಿಷತ್‌ ಸದಸ್ಯ ದಯಾನಂದ ರೆಡ್ಡಿ ಅವರಿಗೆ ಟಿಕೆಟ್‌ ನಿರಾಕರಿಸಿ, ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿತ್ತು. ರೆಡ್ಡಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಸೆಡ್ಡು ಹೊಡೆದಿದ್ದರು. ‘ಗೆದ್ದೇ ಗೆಲ್ಲುತ್ತೇನೆ’ ಎಂಬ ಆತ್ವವಿಶ್ವಾಸದಿಂದ ಬೀಗುತ್ತಿದ್ದ ರೆಡ್ಡಿ ಅವರು ಕೇವಲ 19 ಮತಗಳನ್ನು ಗಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧಿಸಿರಲಿಲ್ಲ. ಹಾಗಾಗಿ, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಮೊದಲೇ ಇತ್ತು. ದಯಾನಂದ ರೆಡ್ಡಿ ಅವರು ಹೆಚ್ಚು ಮತಗಳನ್ನು ಪಡೆದಷ್ಟು ಕಾಂಗ್ರೆಸ್‌ಗೆ ಗೆಲುವು ಕಷ್ಟ ಎಂಬ ವಾತಾವರಣ ಇತ್ತು. ರೆಡ್ಡಿ ಅವರು  ಹೆಚ್ಚು ಮತ ಗಳಿಸದ ಕಾರಣ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಹಾದಿ ಸುಗಮವಾಗಿದೆ.

ಕಾಂಗ್ರೆಸ್‌ ಒಗ್ಗಟ್ಟು: ದಯಾನಂದ ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆಯೇ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆ ಇಟ್ಟಿತು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಬೇರೆ ಪಕ್ಷದವರಿಗೆ ಹೋಗದಂತೆ ತಡೆಯಲು ಪಕ್ಷದ ಮುಖಂಡರು ‘ಕಾರ್ಯತಂತ್ರ’ ರೂಪಿಸಿದರು. ಈ ಕ್ಷೇತ್ರದ ವ್ಯಾಪ್ತಿಯ ಶಾಸಕರು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದರು.

ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಈ ಪಕ್ಷದ ಮತಗಳು ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಹಂಚಿಹೋಗಿವೆ. ಜೆಡಿಎಸ್‌ನ ಹೆಚ್ಚಿನ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.

‘ಯಾರಿಗೆ ಮತ ಹಾಕಬೇಕೆಂಬ ಬಗ್ಗೆ ನಮಗೆ ಪಕ್ಷದ ವರಿಷ್ಠರಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹಾಗಾಗಿ  ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದೇವೆ’ ಎಂದು ಜೆಡಿಎಸ್‌ ಶಾಸಕ ಜಮೀರ್‌ ಅಹಮದ್ ಖಾನ್‌ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಕಾಂಗ್ರೆಸ್‌ ಬಂಡಾಯದ ಲಾಭ ಪಡೆಯಲು ಯತ್ನಿಸಿದ ಬಿಜೆಪಿ ನಾಯಕರು ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ದಯಾನಂದ ರೆಡ್ಡಿ  ಅವರ ಜತೆ ಸಭೆ ನಡೆಸಿ, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಜಯ ಗಳಿಸಿದ್ದರಿಂದ  ಎರಡನೇ  ಪ್ರಾಶಸ್ತ್ಯದ ಮತಗಳನ್ನು ಎಣಿಕೆಗೆ ಪರಿಗಣಿಸುವ ಅಗತ್ಯವೇ ಎದುರಾಗಿಲ್ಲ.

‘ಆನೇಕಲ್‌ ತಾಲ್ಲೂಕಿನಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಅಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ  ಮತಗಳು ಬಂದಿಲ್ಲ. ಬೆಂಗಳೂರು ನಗರದ ವೈಟ್‌ಫೀಲ್ಡ್‌ ಆಸುಪಾಸಿನ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ  ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇಲ್ಲೂ ನಿರೀಕ್ಷಿತ  ಪ್ರಮಾಣದಲ್ಲಿ ಮತಗಳು ಬಿದ್ದಿಲ್ಲ’ ಎಂದು ದೊಡ್ಡಬಸವರಾಜು ಅವರು ಸೋಲಿನ ಕಾರಣವನ್ನು ವಿಶ್ಲೇಷಿಸಿದರು.

ಆಮಿಷ, ಆಣೆ ಪ್ರಮಾಣ: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ದೂರುಗಳೂ ಕೇಳಿ ಬಂದಿದ್ದವು.

ಒಂದೇ ಮತ ಚಲಾವಣೆ: ಪರಿಷತ್‌ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು (ಪ್ರಾಶಸ್ತ್ಯ) ಮತಗಳನ್ನು ಹಾಕುವುದಕ್ಕೆ ಅವಕಾಶ ಇದ್ದರೂ ಹೆಚ್ಚಿನ ಮತದಾರರು ಒಂದೇ ಮತವನ್ನು  ಚಲಾಯಿಸಿದ್ದಾರೆ.  ಪ್ರಾಶಸ್ತ್ಯದ ಮತಗಳ ಚಲಾವಣೆಯಿಂದ ಎಣಿಕೆ ವೇಳೆ ಗೊಂದಲ ಉಂಟಾಗುವುದನ್ನು ತಪ್ಪಿಸಲು, ಕೇವಲ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಪ್ರಮುಖ ರಾಜಕೀಯ ಪಕ್ಷದ ವರಿಷ್ಠರು  ಮತದಾರರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಎಣಿಕೆ ವೇಳೆ ಮಾತಿನ ಚಕಮಕಿ: ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಬುಧವಾರ ಎಣಿಕೆ ಸಿಬ್ಬಂದಿ ಹಾಗೂ ಬಿಜೆಪಿ ಅಭ್ಯರ್ಥಿ ಪರ ಏಜೆಂಟ್‌ ಒಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಅಭ್ಯರ್ಥಿಗೆ ಚಲಾವಣೆಯಾಗಿದ್ದ ಮತಪತ್ರದಲ್ಲಿ ಬೇರೆ ಗುರುತನ್ನೂ ಮಾಡಲಾಗಿತ್ತು, ಈ ಕಾರಣಕ್ಕೆ ಮತವನ್ನು ಅಸಿಂಧು ಎಂದು ಪರಿಗಣಿಸಲು ಸಿಬ್ಬಂದಿ ನಿರ್ಧರಿಸಿದರು. ಇದಕ್ಕೆ ಏಜೆಂಟ್‌ ಏರುಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಪರಿಸ್ಥಿತಿ ಹದ್ದು ಮೀರುವುದನ್ನು ಕಂಡು ಅಧಿಕಾರಿ, ಪೊಲೀಸ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದರು. ಅಷ್ಟರಲ್ಲಿ ಜಿಲ್ಲಾ ಚುನಾವಣಾಧಿಕಾರಿ ವಿ.ಶಂಕರ್‌ ಅವರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಫಲಿತಾಂಶ ಘೋಷಣೆ ವಿಳಂಬ: ಮತ ಎಣಿಕೆ ಕಾರ್ಯ ಬೆಳಿಗ್ಗೆ 11 ಗಂಟೆ ಮುನ್ನವೇ ಮುಗಿದಿತ್ತು. ಆದರೆ, ಅಭ್ಯರ್ಥಿಯ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದು ರಾತ್ರಿ 8 ಗಂಟೆಗೆ.

‘ಫಲಿತಾಂಶ ಪ್ರಕಟಿಸುವ ಮುನ್ನ ಎಣಿಕೆ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಅವರಿಂದ ಸಮ್ಮತಿ ಪಡೆಯಬೇಕು. ಹಾಗಾಗಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸುವಾಗ ವಿಳಂಬವಾಗಿದೆ’ ಎಂದು  ಅಧಿಕಾರಿಯೊಬ್ಬರು ತಿಳಿಸಿದರು.

ಗೆಲುವಿನ ಅಪ್ಪುಗೆ: ಕಾಂಗ್ರೆಸ್‌ ಅಭ್ಯರ್ಥಿ ನಾರಾಯಣ ಸ್ವಾಮಿ ಅವರ ಪುತ್ರಿ ದೀಪ್ತಿ ಹಾಗೂ ಪುತ್ರ ದೀಪಕ್‌   ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತಂದೆಯ ಜತೆಗೇ ಇದ್ದರು. ಸ್ವಾಮಿ ಅವರ ಗೆಲುವು ಖಚಿತವಾಗುತ್ತಿದ್ದಂತೆ ದೀಪ್ತಿ ಅವರು ತಂದೆಯನ್ನು ಅಪ್ಪಿಕೊಂಡು ಚುಂಬಿಸಿ ಶುಭಕೋರಿದರು. ತಂದೆಯ ಗೆಲುವಿನ ಸಂಭ್ರಮದಿಂದ ಅವರ ಕಣ್ಣಾಲಿಗಳು ತೇವಗೊಂಡಿದ್ದವು.

ಸಂಭ್ರಮ: ಫಲಿತಾಂಶ ಪ್ರಕಟವಾದ ಬಳಿಕ  ಬೆಂಬಲಿಗರು ಸ್ವಾಮಿ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.
***
7 ಮತ ಲೆಕ್ಕಕ್ಕಿಲ್ಲ
ಆನೇಕಲ್‌ ತಾಲ್ಲೂಕಿನ ಮುಗಳೂರು ಗ್ರಾಮ ಪಂಚಾಯಿತಿಯ ಮತಗಟ್ಟೆಯ ಮತಪೆಟ್ಟಿಗೆಯಲ್ಲಿದ್ದ ಏಳು ಮತಪತ್ರಗಳೂ ಅಧಿಕೃತ ಮತಪತ್ರಗಳಲ್ಲ! 

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ ನೀಡಿದ್ದ ‘ಮಾದರಿ ಮತಪತ್ರ’ಗಳನ್ನೇ ಗ್ರಾಮ ಪಂಚಾಯಿತಿ ಸದಸ್ಯರು ಮತ ಪೆಟ್ಟಿಗೆಗೆ ಹಾಕಿದ್ದರು. ಈ ಏಳು ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ ಅವರು ಅಧಿಕೃತ ಮತಪತ್ರವನ್ನು ಮತಗಟ್ಟೆಯಿಂದ ಹೊರಗೊಯ್ಯುವುದನ್ನು ಗಮನಿಸಿದ ವಿರೋಧ ಪಕ್ಷದ ಏಜೆಂಟರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಮತಗಟ್ಟೆ ಅಧಿಕಾರಿಗಳು ಆ ಮತಪತ್ರವನ್ನು ವಶಪಡಿಸಿಕೊಂಡಿದ್ದರು. ಅಲ್ಲಿಯವರೆಗೆ  ಚಲಾವಣೆಯಾದ ಮತಗಳಿದ್ದ ಪೆಟ್ಟಿಗೆಯನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗಿತ್ತು.

ಮತಪತ್ರವನ್ನು ಹೊರಗೊಯ್ದ ಸದಸ್ಯೆ ವಿರುದ್ಧ ಮತಗಟ್ಟೆ ಅಧಿಕಾರಿ ಸರ್ಜಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಾಗವೇಣಿ ಅವರಂತೆಯೇ ಇತರ ಆರು ಮಂದಿ ಸದಸ್ಯರು ತಪ್ಪೆಸಗಿರುವುದು ಎಣಿಕೆ ವೇಳೆ ಬೆಳಕಿಗೆ ಬಂದಿದೆ.
***
ಹಣ ಹಂಚುವಷ್ಟು ಶ್ರೀಮಂತ ­­ನಾನಲ್ಲ. ಪ್ರಚಾರ ಸಭೆಯಲ್ಲಿ ಕಾರ್ಯ­ಕರ್ತರು ಸ್ವಯಂಪ್ರೇರಣೆಯಿಂದ  ಆಣೆ ಪ್ರಮಾಣ ಮಾಡಿದ್ದರು.   ಆಕಸ್ಮಿಕವಾಗಿ ನಡೆದ ಈ ಘಟನೆ ಬಗ್ಗೆ ವಿಷಾದವಿದೆ. ಇದು ಸರಿಯಲ್ಲ ಎಂದು ನಾನೇ ಹೇಳಿದ್ದೆ.
-ಎಂ.ನಾರಾಯಣಸ್ವಾಮಿ, ವಿಜೇತ ಅಭ್ಯರ್ಥಿ (ಕಾಂಗ್ರೆಸ್‌)
***

ನಾನು ಯಾರಿಂದಲೂ ಮತವನ್ನು ಖರೀದಿಸಿಲ್ಲ. ಆಣೆ ಪ್ರಮಾಣ ಮಾಡಿಸಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ  ಮತದಾರ­ರಿಗೆ ₹ 1 ಲಕ್ಷ ಹಾಗೂ ಬೆಳ್ಳಿ ನಾಣ್ಯ ಹಂಚಿದ್ದಾರೆ. ರಾಷ್ಟ್ರೀಯ ಪಕ್ಷಗಳು ₹ 70 ಕೋಟಿಗೂ ಹೆಚ್ಚು ಕಪ್ಪುಹಣವನ್ನು ವ್ಯಯಿಸುವಂತೆ ಮಾಡಿದ ತೃಪ್ತಿ ಇದೆ.
-ದಯಾನಂದ ರೆಡ್ಡಿ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ
***

ದುಡ್ಡಿನ ಬಲದಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದಾರೆ. ಸರ್ಕಾರವೂ ಅವರ ಕೈಯಲ್ಲೇ ಇರುವುದರಿಂದ ಅಧಿಕಾರವನ್ನೂ ದುರುಪಯೋಗ ಪಡಿಸಿಕೊಂಡಿ­ದ್ದಾರೆ. ಆದರೂ ಪೈಪೋಟಿ ನೀಡಿದ ತೃಪ್ತಿ ಇದೆ.
-ದೊಡ್ಡ ಬಸವರಾಜು, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT