ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬನವಾಸಿ’ಯ ಕಥಾನಾಯಕಿ

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸನಾತನಿ ಚಂದನವನಕ್ಕೆ ಬಂದು ಏಳೆಂಟು ವರ್ಷಗಳೇ ಕಳೆದಿವೆ. ಆದರೆ ಅವರ ಖಾತೆಯಲ್ಲಿ ಜಮೆಯಾಗಿರುವ ಸಿನಿಮಾಗಳ ಸಂಖ್ಯೆ ಮಾತ್ರ ಐದು. ‘ಎಷ್ಟ್ ನಗ್ತಿಯಾ ನಗು’, ‘ಕ್ರೇಜಿ ಕುಟುಂಬ’, ‘ನಮ್ಮಣ್ಣ ಡಾನ್’, ‘ಛತ್ರಿಗಳು ಸಾರ್ ಛತ್ರಿಗಳು’ ಅವರ ಈವರೆಗಿನ ಸಿನಿಮಾಗಳು. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಮತ್ತೊಂದು ಚಿತ್ರ ‘ಪ್ರಕೃತಿ ಮಡಿಲು ಬನವಾಸಿ’. ಈ ಚಿತ್ರ ಇಂದು (ಫೆ. 12) ತೆರೆ ಕಾಣುತ್ತಿದೆ.

ಸನಾತನಿ ಅವರ ನಿಜ ನಾಮಧೇಯ ವಿಜಯಲಕ್ಷ್ಮಿ. ಆತ್ಮೀಯರೆಲ್ಲ ಪ್ರೀತಿಯಿಂದ ಕರೆಯುವುದು ಲಕ್ಷ್ಮೀ ಎಂದು. ಆದರೆ ಚಿತ್ರರಂಗದಲ್ಲಿ ಅದಾಗಲೇ ಹಲವಾರು ಲಕ್ಷ್ಮಿಯರು ಆಗಿಹೋಗಿದ್ದಾರೆ, ಈಗಲೂ ಇದ್ದಾರೆ ಎಂಬ ಕಾರಣಕ್ಕೆ ವಿಜಯಲಕ್ಷ್ಮಿ ಅವರ ತಾಯಿ, ಸನಾತನಿ ಎಂದು ಮರು ನಾಮಕರಣ ಮಾಡಿದ್ದಾರೆ. ಈಗ ಯಾರಾದರೂ ಸನಾತನಿಯನ್ನು ಮೂಲ ಹೆಸರಿನಿಂದ ಕರೆದರೆ ಒಂದು ಕ್ಷಣ ಗಾಬರಿಯಾಗುತ್ತಾರೆ. ನಂತರವಷ್ಟೇ ಪ್ರತಿಕ್ರಿಯಿಸುತ್ತಾರೆ.

ದ್ವಿತೀಯ ಪಿಯುಸಿ ನಂತರ ಫ್ಯಾಷನ್ ಡಿಸೈನ್ ತರಬೇತಿ ಪಡೆದ ಸನಾತನಿ, ರೂಪದರ್ಶಿಯಾಗಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದುಂಟು. ನಂತರ ಪ್ರವೇಶ ಪಡೆದಿದ್ದು ಧಾರಾವಾಹಿಗೆ. ‘ಈಶ್ವರ ಅಲ್ಲಾ ನೀನೇ ಎಲ್ಲಾ’, ‘ಮೌನ ಕ್ರಾಂತಿ’, ‘ಇದ್ರೆ ಇರ್‍ಬೇಕು ನಿನ್ಹಂಗ’ ಅವರು ನಟಿಸಿರುವ ಕೆಲವು ಧಾರಾವಾಹಿಗಳು. ಮೊದಲ ಚಿತ್ರ ‘ಕ್ರೇಜಿ ಕುಟುಂಬ’ದಲ್ಲಿ ಅಭಿನಯಿಸಿದ ನಂತರ ಅಡುಗೆ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಅನುಭವ ಅವರದ್ದು. ಸದ್ಯ ‘ಗೃಹಲಕ್ಷ್ಮಿ’ ಧಾರಾವಾಹಿಯ ಕಥಾನಾಯಕಿ.

‘ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ನಾನು ನಿರೀಕ್ಷಿಸುತ್ತಿರುವಂಥ ಚಿತ್ರಗಳು ಬಂದಿರಲಿಲ್ಲ’ ಎಂದು ತಮ್ಮ ನಿಧಾನಗತಿಯ ಸಿನಿ ಬದುಕಿಗೆ ಸನಾತನಿ ಕಾರಣ ನೀಡುತ್ತಾರೆ. ನಿಧಾನವಾದರೂ ಪರವಾಗಿಲ್ಲ, ಒಳ್ಳೆಯ ಚಿತ್ರದ ಭಾಗವಾಗುತ್ತಿದ್ದೇನೆ ಎಂದವರು ‘ಪ್ರಕೃತಿ ಮಡಿಲು ಬನವಾಸಿ’ ಒಪ್ಪಿಕೊಂಡರಂತೆ.

ಬನವಾಸಿಯಲ್ಲಿ, ಪ್ರಕೃತಿ ಮಡಿಲಲ್ಲಿ
ತಮಿಳಿನ ‘ಕುಮ್ಕಿ’ ಚಿತ್ರದ ಶೈಲಿಯಲ್ಲಿ ನಮ್ಮ ಚಿತ್ರ ಕಾಡು, ಪ್ರಕೃತಿ ಮಧ್ಯೆ ನಡೆವ ಕಥೆ ಎಂದು ನಿರ್ದೇಶಕ ಧೀರಜ್ ಸೂರ್ಯ ಭರವಸೆ ನೀಡಿದ್ದಕ್ಕೆ ಸನಾತನಿ ‘...ಬನವಾಸಿ’ ತಂಡ ಸೇರಿಕೊಂಡಿದ್ದಾರೆ. ನಿರ್ದೇಶಕರು ಕಥೆ ಹೇಳಿದಂತೆಯೇ ಚಿತ್ರ ಸಿದ್ಧವಾಗಿದೆಯೇ ಎಂದು ಕೇಳಿದರೆ, ‘ಸುಮಾರು ಚಿತ್ರಗಳ ಕಥೆ ಹೇಳುವಾಗ ಒಂದು ರೀತಿ ಇರುತ್ತೆ, ಚಿತ್ರೀಕರಣವಾಗುವಾಗ ಒಂದು ರೀತಿ ಇರುತ್ತೆ, ಡಬ್ಬಿಂಗ್ ವೇಳೆಗೆ ಮತ್ತೊಂದು ರೀತಿ ಬಂದಿರುತ್ತದೆ. ಅಂತಿಮ ಫಲಿತಾಂಶ ಇನ್ನು ಹೇಗೋ ಇರುತ್ತೆದೆ. ಆದರೆ ಈ ಚಿತ್ರದ ಡಬ್ಬಿಂಗ್ ಸಂದರ್ಭದಲ್ಲಿ ನೋಡಿದ್ದೇನೆ, ಚಿತ್ರ ಚೆನ್ನಾಗಿಯೇ ಮೂಡಿಬಂದಿದೆ’ ಎನ್ನುತ್ತಾರೆ ಅವರು.

‘...ಬನವಾಸಿ’ ತಂಡ ಸಂಪೂರ್ಣ ಹೊಸತು. ಸನಾತನಿ ಈ ಚಿತ್ರ ಒಪ್ಪಿಕೊಳ್ಳುವಾಗ ಹೊಸಬರ ಚಿತ್ರಗಳು ಗೆಲ್ಲುತ್ತಿದ್ದವು. ಅಲ್ಲದೆ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸಂದೇಶ ಅವರ ಮನಸಿಗೆ ಮೆಚ್ಚಿಗೆಯಾಗಿತ್ತು. ಈವರೆಗೆ ಹಾಸ್ಯ ಪಾತ್ರಕ್ಕೇ ಹೆಚ್ಚು ಬಣ್ಣಹಚ್ಚಿದ್ದ ಸನಾತನಿ ‘...ಬನವಾಸಿ’ಯಲ್ಲಿ ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಕಾಡಿನ ಹುಡುಗಿ.

ಉತ್ತರ ಕನ್ನಡದ ಶಿರಸಿಯ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದು ಅವರಿಗೆ ಹೊಸ ಅನುಭವ ನೀಡಿದೆ. ಚಿಕ್ಕ ಚಿಕ್ಕ ತೊರೆಗಳಲ್ಲಿ ಓಡುವುದು, ಕಾಡಿನಲ್ಲಿ ಬರಿಗಾಲಲ್ಲಿ ನಡೆದಾಡುವುದು ಅವರಿಗೆ ಹೊಸತು. ‘ನಾನಿರುವ ಕಡೆಯಲ್ಲಿ ಹಾವು, ಪ್ರಾಣಿಗಳೆಲ್ಲ ಸುಳಿಯುತ್ತಲೇ ಇರಲಿಲ್ಲ’ ಎಂದು ಚಿತ್ರೀಕರಣದ ಸವಿ ಅನುಭವ ಹಂಚಿಕೊಳ್ಳುತ್ತಾರೆ.

ವೈವಿಧ್ಯದ ಗೃಹಲಕ್ಷ್ಮಿ
ಸನಾತನಿಗೆ ಹೆಚ್ಚು ಜನಪ್ರಿಯತೆ ಬಂದಿದ್ದು, ಮನೆ ಮಾತಾಗಿದ್ದು ‘ಗೃಹಲಕ್ಷ್ಮಿ’ ಧಾರಾವಾಹಿಯಿಂದ. ತಾನು ಇಷ್ಟ ಪಟ್ಟ ಎಲ್ಲ ಬಗೆಯ ಪಾತ್ರಗಳೂ ‘ಗೃಹಲಕ್ಷ್ಮಿ’ ಧಾರಾವಾಹಿಯಿಂದ ಒದಗಿಬಂದಿವೆ ಎನ್ನುತ್ತಾರೆ ಅವರು. ಹುಚ್ಚಿಯ ಪಾತ್ರ ಮಾಡಬೇಕೆಂಬ ಅವರ ದೊಡ್ಡ ಕನಸೂ ‘ಗೃಹಲಕ್ಷ್ಮಿ’ಯಲ್ಲಿ ಈಡೇರಿದೆ. ಮುಂದೆ ಇನ್ನೂ ಬದಲಾವಣೆ ಇರುವ ಸೂಚನೆಯೂ ಅವರಿಗೆ ಸಿಕ್ಕಿದೆ.

ಸಿನಿಮಾ ಮಾಡುವಾಗ ಸಿನಿಮಾಗಳೇ ಹೆಚ್ಚು ಖುಷಿ ಕೊಟ್ಟರೆ, ಈಗ ಧಾರಾವಾಹಿಯೇ ಎಲ್ಲಕ್ಕಿಂತ ಇಷ್ಟ ಎನ್ನಿಸಿದೆ ಅವರಿಗೆ. ‘ಧಾರಾವಾಹಿಯಲ್ಲಿ ಬದಲಾವಣೆಗೆ ಸಮಯ ಇರುತ್ತದೆ. ತಪ್ಪು ಮಾಡಿದರೆ ತಿದ್ದಿಕೊಳ್ಳುವ ಅವಕಾಶವೂ ಇರುತ್ತದೆ. ಸಿನಿಮಾದಲ್ಲಿ ಒಮ್ಮೆ ಅಭಿನಯಿಸಿದರೆ ಮುಗಿಯಿತು. ಮತ್ತೆ ಅಂಥ ಅವಕಾಶ ಸಿಕ್ಕುತ್ತದೋ ಇಲ್ಲವೋ ಗೊತ್ತಿಲ್ಲ’ ಎನ್ನುತ್ತಾರೆ.

‘ಧಾರಾವಾಹಿ ಕಲಾವಿದರಿಗೆ ಪರದೆ ಚಿಕ್ಕದು. ಕ್ಲೋಸ್ ಅಪ್ ದೃಶ್ಯಗಳೇ ಹೆಚ್ಚು. ಮುಖದಲ್ಲೇ ಎಲ್ಲಾ ಭಾವಗಳನ್ನು ಹೊಮ್ಮಿಸಬೇಕು. ಆದರೆ ಬೆಳ್ಳಿ ತೆರೆಯಲ್ಲಿ ದೇಹ ಭಾಷೆಯ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳಬಹುದು’ ಎಂದು ಅವರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿನ ವ್ಯತ್ಯಾಸ ಗುರ್ತಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT