ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರನ್ನು ನಡುಗಿಸಲಿದೆ ಪೊರಕೆ’

ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ವಿಶ್ವಾಸ
Last Updated 15 ಏಪ್ರಿಲ್ 2014, 20:36 IST
ಅಕ್ಷರ ಗಾತ್ರ

ಬೆಂಗಳೂರು: ‘ನೀರಿನ ಮಾಫಿಯಾ, ಭೂ ಮಾಫಿಯಾ ಹಾಗೂ ಕಸದ ಮಾಫಿಯಾಗಳು ನಗರವನ್ನು ಹಾಳು ಮಾಡುತ್ತಿವೆ. ನಾವು ಸಂಸದರಾದರೆ ಈ ಮಾಫಿಯಾಗಳನ್ನು ಮಟ್ಟ ಹಾಕಿ ಬೆಂಗಳೂರು ನಡುಗುವಂತೆ ಮಾಡುತ್ತೇವೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳು ವಾಗ್ದಾನ ಮಾಡಿದರು.

ಪ್ರೆಸ್‌ ಕ್ಲಬ್‌ ಹಾಗೂ ಬೆಂಗಳೂರು ವರದಿಗಾರರ ಕೂಟದ ಆಶ್ರಯದಲ್ಲಿ ಪ್ಲೆಸ್‌ ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಪ್ರೊ.ಬಾಬು ಮ್ಯಾಥ್ಯೂ, ಗ್ರಾಮಾಂತರ ಕ್ಷೇತ್ರದ ರವಿಕೃಷ್ಣ ರೆಡ್ಡಿ, ದಕ್ಷಿಣ ಕ್ಷೇತ್ರದ ನೀನಾ ಪಿ.ನಾಯಕ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಕೆ.ಅರ್ಕೇಶ್‌ ಈ ವಾಗ್ದಾನ ಮಾಡಿದರು.

ಪ್ರೊ.ಬಾಬು ಮ್ಯಾಥ್ಯೂ ಮಾತನಾಡಿ, ‘ನಗರದಲ್ಲಿ ಪ್ರತಿದಿನ 4,500 ಟನ್‌ ಕಸ ಸಂಗ್ರಹವಾಗುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಮುಂಬೈ ಮಹಾನಗರದಲ್ಲೂ ಇಷ್ಟು ಕಸ ಸಂಗ್ರಹವಾಗುವುದಿಲ್ಲ. ಇದು ದುಡ್ಡು ಹೊಡೆಯುವ ಲೆಕ್ಕ. ಈ ಮಾಫಿಯಾವನ್ನು ಮೊದಲು ಹೊಡೆದೋಡಿಸಬೇಕು’ ಎಂದರು.

‘ಕೇಂದ್ರೀಯ ವಿದ್ಯಾಲಯಗಳು ಕೆಲವೇ ಮಂದಿಗೆ ಸೀಮಿತ ಆಗಿವೆ. ಉಳ್ಳವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗೆ ಜನಸಾಮಾನ್ಯರ ಮಕ್ಕಳು ಹೋಗು­ತ್ತಿದ್ದಾರೆ. ಅವರಿಗೂ ಉತ್ತಮ ಶಿಕ್ಷಣ ದೊರಕ­ಬೇಕಿದೆ. ಇದಕ್ಕಾಗಿ ಸರ್ಕಾರಿ ಶಾಲೆಗಳನ್ನು ಬಲಪ­ಡಿ­ಸಬೇಕಿದೆ. ಈ ಕೆಲಸವನ್ನು ಪಕ್ಷ ಮಾಡಲಿದೆ’ ಎಂದು ಅವರು ಭರವಸೆ ನೀಡಿದರು.

‘ನಗರದಲ್ಲಿ ಬಿಎಂಟಿಸಿ ಬಸ್‌ಗಳ ಕೊರತೆ ಇಲ್ಲ. ಆದರೆ, ಬಸ್‌ ಹತ್ತುವಾಗ ಮಹಿಳೆಯರ ಪ್ರಾಣ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನರು ಹತ್ತುವ ಮೊದಲೇ ಬಸ್‌ ಹೊರಡುತ್ತದೆ. ಇದನ್ನೆಲ್ಲ ತಡೆಯಲು ಮಹಿಳೆಯರಿಗೆ ಪ್ರತ್ಯೇಕ ಮಿನಿ ಬಸ್‌ ವ್ಯವಸ್ಥೆ ಮಾಡಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.

ರವಿಕೃಷ್ಣ ರೆಡ್ಡಿ ಮಾತನಾಡಿ, ‘ಜನರು ಈಗ ಕುಡಿಯುವ ನೀರನ್ನು ಹಣ ಕೊಟ್ಟು ಖರೀದಿ­ಸಬೇಕಿದೆ. ನೀರು ಜನರ ಮೂಲಭೂತ ಹಕ್ಕು ಆಗಬೇಕಿದೆ. ಆದರೆ, ಈಗ ಹಣ ಪಡೆದು ಜನರಿಗೆ ಅವಮಾನ ಮಾಡಲಾಗುತ್ತಿದೆ. ಜನ­ದ್ರೋಹ ಸರ್ಕಾರಗಳಿಂದ ಜನರು ಇಂತಹ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರದ ಬಹುತೇಕ ಕೆರೆಗಳು ಒತ್ತುವರಿ ಆಗಿವೆ. ಮಳೆನೀರು ಕೊಳಚೆ ನೀರಿನೊಂದಿಗೆ ಸೇರಿ ಕೆರೆಗಳನ್ನು ಸೇರುತ್ತಿದೆ. ಇದನ್ನು ತಡೆಗಟ್ಟುವ ಯೋಜನೆಗಳನ್ನು ರೂಪಿಸಿಲ್ಲ. ನದಿಗಳ ನೀರನ್ನು ಕೆರೆಗಳಿಗೆ ಹರಿಸುವ ಬಗ್ಗೆಯೂ ಚಿಂತನೆ ನಡೆಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೆ.ಅರ್ಕೇಶ್‌ ಮಾತನಾಡಿ, ‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಲಕ್ಷಾಂತರ ಕೊಳವೆಬಾವಿಗಳು ಬರಿದಾಗಿವೆ. ಜನರು ಕುಡಿಯುತ್ತಿರುವುದು ಫ್ಲೋರೈಡ್‌ ನೀರನ್ನು. ಈಗಿರುವ ಜಲಮೂಲ­ಗಳನ್ನೇ ಬಳಸಿ ಆರು ತಿಂಗಳಲ್ಲೇ ಜನರಿಗೆ ಶುದ್ಧ ನೀರನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ಜನರ ಆಶೀರ್ವಾದ ಬೇಕಿದೆ’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ದಲ್ಲಾಳಿಗಳು ರೈತರ ರಕ್ತ ಹೀರುತ್ತಿದ್ದಾರೆ. ಜುಜುಬಿ ಬೆಲೆಗೆ ಭೂಮಿ ಖರೀದಿ ಮಾಡಿ 10 ಪಟ್ಟು ಬೆಲೆಗೆ ಉದ್ಯಮಗಳಿಗೆ ಮಾರಾಟ ಮಾಡುತ್ತಿದ್ದಾರೆ. ನಾವು ರೈತರನ್ನು ದಲ್ಲಾಳಿಗಳ ಕಪಿಮುಷ್ಠಿಯಿಂದ ಮುಕ್ತರನ್ನಾಗಿ ಮಾಡುತ್ತೇವೆ’ ಎಂದರು.

‘ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕಿದೆ. ಈಗ ಒಬ್ಬರು ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತೊಬ್ಬರು ಕಣ್ಣೀರ ಹೊಳೆ ಹರಿಸುತ್ತಿದ್ದಾರೆ. ಇನ್ನೊಬ್ಬರು ದುಡ್ಡಿನ ಹೊಳೆ ಹರಿಸುತ್ತಿದ್ದಾರೆ. ನಾವು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಸರಕ್ಕೆ ಯಾವುದೇ ತೊಂದ­ರೆ­­­ಯಾಗದ ರೀತಿಯಲ್ಲಿ ಪಶ್ಚಿಮಾಭಿ­ಮುಖ­ವಾಗಿ ಹರಿಯುವ ನದಿಗಳ ನೀರನ್ನು ಇಲ್ಲಿಗೆ ತರುತ್ತೇವೆ’ ಎಂದು ಅವರು ಭರವಸೆ ನೀಡಿದರು.

ನೀನಾ ಪಿ.ನಾಯಕ್‌ ಮಾತನಾಡಿ, ‘ರಾಜ­ಧಾನಿಯ ಹೃದಯಭಾಗವಾದ ದಕ್ಷಿಣ ಕ್ಷೇತ್ರ­ದಲ್ಲೂ ಕುಡಿಯುವ ನೀರಿನ ಸಮಸ್ಯೆ ಗಂಭೀರ­ವಾಗಿದೆ. ಈ ಸಮಸ್ಯೆಯನ್ನು ಬಗೆಹರಿ­ಸುವ ಯಾವುದೇ ಕೆಲಸ ಆಗುತ್ತಿಲ್ಲ. ಮಹಿಳೆಯರು ಹಾಗೂ ಮಕ್ಕಳಿಗೆ ಭದ್ರತೆ ಇಲ್ಲ. ಶಾಲೆ ಬಿಡುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT