ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳ್ಳಂದೂರು ನೊರೆ ಸಮಸ್ಯೆಗೆ ಎಸ್‌ಇಜೆಡ್‌ ಕಾರಣ’

ಅಕ್ರಮ ಬಿಲ್ಡರ್‌ಗಳಿಗೆ ಪಾಠ *ಹಸಿರು ನ್ಯಾಯಮಂಡಳಿ ಆದೇಶಕ್ಕೆ ಹೋರಾಟಗಾರರ ಸ್ವಾಗತ
Last Updated 4 ಮೇ 2016, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಅಗರ ಕೆರೆಯ ಸುತ್ತಮುತ್ತಲಿನ ಪ್ರದೇಶ ಜೌಗು ಪ್ರದೇಶ. ಇಲ್ಲಿ ಎಸ್‌ಇಜೆಡ್‌ ನಿರ್ಮಾಣದಿಂದ ಹತ್ತಾರು ಸಮಸ್ಯೆ ಸೃಷ್ಟಿಯಾಗಿವೆ. ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡು ಅನಾಹುತ ಉಂಟಾಗಲು ಎಸ್‌ಇಜೆಡ್‌ ಪ್ರಮುಖ ಕಾರಣ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ಆರೋಪಿಸಿದರು.

ಹಸಿರು ನ್ಯಾಯಮಂಡಳಿಯ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಮಂತ್ರಿ ಸಂಸ್ಥೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಕೆರೆಗೆ ಸೇರಿದ 10 ಎಕರೆ ಜಾಗವನ್ನೂ ಕಬಳಿಸಿದೆ. ಕೆರೆಯೊಳಗೆ ಕಟ್ಟಡದ ತ್ಯಾಜ್ಯಗಳನ್ನು ಸುರಿದಿದೆ. ಇದರಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗಿದೆ. ಅಂತರ್ಜಲದ ಕುಸಿತವೂ ಉಂಟಾಗಿದೆ. ಈ ಬಗ್ಗೆ ನಾನು ನಾಲ್ಕು ವರ್ಷಗಳ ಹಿಂದೆಯೇ ವಿಸ್ತೃತ ವರದಿ ಸಲ್ಲಿಸಿದ್ದೆ. ಕಳೆದ ವರ್ಷ ತಜ್ಞರ ಸಮಿತಿಯ ಜತೆಗೂ ತೆರಳಿ ಮಾಹಿತಿ ನೀಡಿದ್ದೆ’ ಎಂದರು.

‘ಕೆರೆಯ ಸುತ್ತಮುತ್ತ 30 ಮೀಟರ್‌ ಬಫರ್‌ಝೋನ್‌ ಬಿಡಬೇಕು ಎಂದು ಬಿಡಿಎ ತಿಳಿಸಿತ್ತು.  200 ಮೀಟರ್‌ ಬಫರ್‌ ಝೋನ್‌ ಬಿಡಬೇಕು ಎಂದು ನಾನು ತಿಳಿಸಿದ್ದೆ. ನ್ಯಾಯಮಂಡಳಿ 75 ಮೀಟರ್‌ ಬಿಡಬೇಕು ಎಂದು ತಿಳಿಸಿದೆ. ಹೀಗಾಗಿ ಸಹಜವಾಗಿ ಅಲ್ಲಿನ ನಿರ್ಮಾಣ ಕಾಮಗಾರಿಗಳನ್ನು ನೆಲಸಮ ಮಾಡಬೇಕಾಗುತ್ತದೆ’ ಎಂದು ಅವರು ವಿಶ್ಲೇಷಿಸಿದರು.

‘ಇದು ಮಹತ್ವದ ತೀರ್ಪು. ನಮ್ಮಂತಹ ಹೋರಾಟಗಾರರಿಗೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿಸುವಂತಹ ಆದೇಶ ಇದು. ಪರಿಸರದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ನ್ಯಾಯಾಂಗ ಮಧ್ಯಪ್ರವೇಶಿಸಿ  ಕೆರೆ ಉಳಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದು ಅವರು ತಿಳಿಸಿದರು.

‘ಈ ಎಸ್‌ಇಜೆಡ್‌ಗೆ ಜಾಗ ನೀಡಿದ್ದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ). ಮಂಡಳಿಯ ಅಧಿಕಾರಿಗಳನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಅವರು ಆಡಿದ್ದೇ ಆಟ ಎಂಬಂತೆ ಆಗಿದೆ. ಈ ಮಂಡಳಿಯನ್ನೇ ಮುಚ್ಚಿ ಬಿಡುವುದು ಲೇಸು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೆಳ್ಳಂದೂರು ಹಾಗೂ ಅಗರ ಕೆರೆಗಳ ದಂಡೆಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಆಗ ಮಾತ್ರ ಆಸುಪಾಸಿನ ಕೆರೆಗಳು ಉಳಿಯಲು ಸಾಧ್ಯ. ಈ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂದು ಒತ್ತಾಯಿಸಿದರು.

‘ಅಂಕೆಯಿಲ್ಲದ ಬೆಳವಣಿಗೆ, ಪರಿಸರದ ಬಗೆಗಿನ ಕಾಳಜಿ ಕೊರತೆಯಿಂದಾಗಿ ನಗರದ ಸ್ಥಿತಿ ಭಯಾನಕವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಐದು ವರ್ಷಗಳಲ್ಲಿ ನಗರ ನಾಶವಾಗಲಿದೆ’ ಎಂದು ಅವರು ಎಚ್ಚರಿಸಿದರು.

ಹೋರಾಟಗಾರರ ಸ್ವಾಗತ: ನ್ಯಾಯಮಂಡಳಿಯ ಕ್ರಮವನ್ನು ತಜ್ಞರು ಹಾಗೂ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ. ‘ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಹೆಚ್ಚಿಸಿದೆ’ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಒತ್ತುವರಿದಾರರಿಗೆ ಪಾಠ: ‘ಬುಧವಾರ ಬೆಂಗಳೂರಿನ ನಾಗರಿಕರಿಗೆ ಪ್ರಮುಖ ದಿನ. ಕೆರೆಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಬಿಲ್ಡರ್‌ಗಳಿಗೆ ನಾಗರಿಕರು ತಕ್ಕ ಪಾಠ ಕಲಿಸಿದ್ದಾರೆ’ ಎಂದು  ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ತಿಳಿಸಿದರು.
‘ಜನರ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು ಇದು. ನಮ್ಮ ನಗರವನ್ನು ಉಳಿಸಿಕೊಳ್ಳಲು ಯಾವುದೇ ಹೋರಾಟಕ್ಕೆ ಸಿದ್ಧ ಎಂಬ ಸಂದೇಶವನ್ನು ಬಿಲ್ಡರ್‌ಗಳಿಗೆ ಹಾಗೂ ಭ್ರಷ್ಟ ಸರ್ಕಾರಕ್ಕೆ ಜನರು ರವಾನಿಸಿದ್ದಾರೆ’ ಎಂದರು.

20 ವರ್ಷದ ಹೋರಾಟ: ‘ನ್ಯಾಯಮಂಡಳಿ ತೀರ್ಪು  ಸ್ವಾಗತಾರ್ಹ. ಪರಿಸರಕ್ಕೆ ಹಾನಿ ಮಾಡುವ ಇಂತಹ ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಬಾರದು. ಸರ್ಕಾರ ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಫಾರ್ವರ್ಡ್‌ ಫೌಂಡೇಷನ್‌ನ ಟ್ರಸ್ಟಿ ರಾಮಮೂರ್ತಿ ತಿಳಿಸಿದರು.

‘ಬೆಳ್ಳಂದೂರು ಕೆರೆ ಉಳಿಸಲು ನಾವು 20 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಎಸ್‌ಇಜೆಡ್‌ ವಿರುದ್ಧ 3 ವರ್ಷಗಳಿಂದ ನಿರಂತರ ಸಮರ ಸಾರಿದ್ದೆವು. ಈಗ ಅದಕ್ಕೆ ಜಯ ಸಿಕ್ಕಿದೆ’ ಎಂದು ಅವರು ಹೇಳಿದರು.

ನಾಲ್ಕೈದು ವರ್ಷದ ಹೋರಾಟ:  ಎಸ್‌ಇಜೆಡ್‌ ವಿರುದ್ಧ ನಾಲ್ಕೈದು ವರ್ಷಗಳಿಂದ ನಿರಂತರ ಹೋರಾಟ ನಡೆದಿದೆ. 2013ರಲ್ಲಿ ನಡೆದ ಹೋರಾಟದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕಳೆದ ವರ್ಷ   ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಎಸ್‌ಇಜೆಡ್‌ಗೆ ಸ್ವಯಂಪ್ರೇರಿತರಾಗಿ ಜಾಗ ನೀಡಿದ್ದೇವೆ ಎಂದು ಕೆಲವು ರೈತರೂ ಹೋರಾಟ ಮಾಡಿದ್ದರು.

ಅಭಿಯಾನವೂ ನಡೆದಿತ್ತು: ಕೆರೆಗಳ ದಂಡೆಯಲ್ಲಿ ಸಾಗುತ್ತಿರುವ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌) ಯೋಜನೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ change.org ವೆಬ್‌ ತಾಣದಲ್ಲಿ ಕಳೆದ ವರ್ಷ ಅಭಿಯಾನ ನಡೆದಿತ್ತು.

ಯೋಜನೆ ಸ್ಥಗಿತಕ್ಕೆ ಕರ್ನಾಟಕ ಸರ್ಕಾರ ಸೇರಿದಂತೆ 11 ಸಂಸ್ಥೆಗಳು ಕ್ರಮ  ಕೈಗೊಳ್ಳಬೇಕು ಎಂದು ಆಗ್ರಹಿಸಿ ಆರಂಭಿಸಿದ ಅಭಿಯಾನಕ್ಕೆ 4,600 ಮಂದಿ ಸಹಿ ಹಾಕಿದ್ದಾರೆ. ಕೆರೆಗಳ  ಪುನರುಜ್ಜೀವನ, ನಗರ ಯೋಜನೆ, ಸಂಚಾರ ನಿರ್ವಹಣೆ ಮತ್ತಿತರ ವಿಷಯಗಳಲ್ಲಿ ಸಕ್ರಿಯರಾಗಿರುವ ಬೆಳ್ಳಂದೂರು, ಎಚ್‌ಎಸ್‌ಆರ್‌ ಬಡಾವಣೆ ಹಾಗೂ ಕೋರಮಂಗಲದ ನಾಗರಿಕರು ಈ ಅಭಿಯಾನ ಆರಂಭಿಸಿದ್ದರು.

‘ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ನೇತೃತ್ವದ ತಂಡ 2013ರಲ್ಲಿ ವರದಿ ಸಲ್ಲಿಸಿತ್ತು. ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯೋಜನೆ ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿದ್ದರು. ಸ್ಥಳೀಯ ನಿವಾಸಿಗಳು 2013ರ ಮಾರ್ಚ್‌ನಲ್ಲಿ ಪ್ರತಿಭಟನೆ ನಡೆಸಿ ಯೋಜನೆಯನ್ನು ನಿಲ್ಲಿಸಲು ಹಕ್ಕೊತ್ತಾಯ ಮಂಡಿಸಿದ್ದರು. ಕಾಮಗಾರಿ ನಿಲ್ಲಿಸುವಂತೆ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದರು. ಯೋಜನೆಯಿಂದಾಗುವ ಹಾನಿಯ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಲಾಗಿತ್ತು.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಈ ಸಂಸ್ಥೆಗಳು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿವೆ. ಸುಳ್ಳು ದಾಖಲೆಗಳನ್ನು ನೀಡಿ ಜಲಮಂಡಳಿ, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಪರವಾನಗಿ ಪಡೆದಿವೆ ಎಂದು ದೂರಲಾಗಿತ್ತು.

‘ಈ ಯೋಜನೆಯಿಂದ ನೀರಿನ ಹರಿವಿಗೆ ಅಡ್ಡಿಯಾಗಲಿದೆ. ಇದರಿಂದಾಗಿ ಮಳೆಗಾಲದಲ್ಲಿ ಕೋರಮಂಗಲ ಹಾಗೂ ಎಚ್‌ಎಸ್ಆರ್‌ ಬಡಾವಣೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಬೆಳ್ಳಂದೂರು ಕೆರೆ ಬತ್ತಿ ಹೋಗುವ ಅಪಾಯವೂ ಇದೆ’ ಎಂದು ಎಚ್ಚರಿಸಲಾಗಿತ್ತು.

ಕೆರೆಯಂಗಳದಲ್ಲಿದ್ದರೆ ನೆಲಸಮ
ಕೆರೆಯಂಗಳದಲ್ಲಿರುವ ಎಲ್ಲ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತೇವೆ. ಮಂತ್ರಿ ಕಟ್ಟಡ ಕೆರೆಯಂಗಳದಲ್ಲಿ ಇದೆಯಾ ಎಂಬುದು ಗೊತ್ತಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಸಮೀಕ್ಷೆ ನಡೆಸುತ್ತೇನೆ. ಒಂದು ವೇಳೆ ಕೆರೆಯಂಗಳದಲ್ಲಿ ಇದ್ದರೆ ನಾವೇ ನೆಲಸಮ ಮಾಡುತ್ತೇವೆ. ಒಂದು ವೇಳೆ ಬಫರ್‌ ಝೋನ್‌ನಲ್ಲಿ ಇದ್ದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇವೆ. ತೆರವು ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡುತ್ತೇವೆ.
-ವಿ.ಶಂಕರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT