ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳ್ಳಿ’ಪ್ರಭೆಯಲಿ ಪ್ರಜ್ವಲ್!

Last Updated 14 ಜುಲೈ 2016, 20:02 IST
ಅಕ್ಷರ ಗಾತ್ರ

ಹತ್ತು ವರ್ಷದ ಹಿಂದೆ ‘ಸಿಕ್ಸರ್‌’ನಿಂದ ಬಣ್ಣದ ಬದುಕು ಪ್ರಾರಂಭಿಸಿದ ಪ್ರಜ್ವಲ್ ದೇವರಾಜ್‌ ಅವರ 25ನೇ ಚಿತ್ರ ‘ಭುಜಂಗ’ ಇಂದು ತೆರೆಕಾಣುತ್ತಿದೆ.

‘ಪ್ರತಿಯೊಬ್ಬ ಕಲಾವಿದನಿಗೂ ಇಂಥಹದ್ದೊಂದು ಸಂಖ್ಯೆ ಮಹತ್ವದ ಮೈಲುಗಲ್ಲು. ಹಿಂದಿರುಗಿ ನೋಡಿದಾಗ ಇಷ್ಟು ಬೇಗ ಈ ಸಾಧನೆ ಆಗಿದೆಯಲ್ಲ ಎಂಬ ಖುಷಿಯಾಗುತ್ತಿದೆ’

ವೃತ್ತಿ ಬದುಕಿನಲ್ಲಿ 25 ಸಿನಿಮಾಗಳನ್ನು ಪೂರೈಸಿದ ಸಂತಸದಲ್ಲಿರುವ ನಟ ಪ್ರಜ್ವಲ್‌ ದೇವರಾಜ್‌, ‘ಭುಜಂಗ’ದ ಗೆಲುವಿನ ಮೂಲಕ ಈ ಮೈಲುಗಲ್ಲನ್ನು ಸ್ಮರಣೀಯವಾಗಿಸಿಕೊಳ್ಳುವ ಕಾತರದಲ್ಲಿದ್ದಾರೆ.

‘ಇಷ್ಟು ವರ್ಷ ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದೇನೆ. ಜನರು 10 ವರ್ಷಗಳಿಂದ ನನ್ನನ್ನು ಬೆಳೆಸಿದ್ದಾರೆ. ಅವರ ಬಾಂಧವ್ಯ ಹೀಗೆಯೇ ಇರಲಿ. ಕನ್ನಡ ಚಿತ್ರೋದ್ಯಮದಲ್ಲಿ ನಾಯಕನಟನಾಗಿ 25 ಸಿನಿಮಾ ಎಂದರೆ ಸಣ್ಣ ಮಾತೇನಲ್ಲ. ಹೀಗಾಗಿ ಈ ಹಾದಿಯತ್ತ ತಿರುಗಿ ನೋಡಿದಾಗ ಹೆಮ್ಮೆಯಾಗುತ್ತದೆ’ ಎನ್ನುತ್ತಾರೆ ಪ್ರಜ್ವಲ್‌.

ಬಣ್ಣದ ನಂಟು ಶುರುವಾಗಿ ದಶಕವೇ ಉರುಳಿದ್ದರೂ ಪ್ರಜ್ವಲ್‌ಗೆ ದೊಡ್ಡ ಗೆಲುವು ಇನ್ನೂ ಮರೀಚಿಕೆ. ಹಾಗಿದ್ದೂ ಅವರಿಗೆ ಈ ಬಗ್ಗೆ ಬೇಸರವಿಲ್ಲ. ‘ಹೆಚ್ಚಿನ ನಟರು ಚಿತ್ರರಂಗಕ್ಕೆ ಕಾಲಿಡುವುದೇ 26–28ನೇ ವಯಸ್ಸು ದಾಟಿದಾಗ. ಆದರೆ ನಾನು 18ನೇ ವಯಸ್ಸಿಗೇ ಬಂದೆ. ಈವರೆಗಿನ ಸಿನಿಮಾಗಳಲ್ಲಿ ನನ್ನದು ದೊಡ್ಡ ಫ್ಲಾಪ್‌ ಚಿತ್ರವಿಲ್ಲ. ಅತ್ತ ಸೂಪರ್ ಹಿಟ್‌ ಕೂಡ ಆಗಿಲ್ಲ.

ಮಧ್ಯಮ ಮಾರ್ಗದಲ್ಲಿಯೇ ಗೆದ್ದಿವೆ. ಹೀಗಾಗಿ ನನ್ನಲ್ಲಿ ಆತುರವಿಲ್ಲ. ಇನ್ನೂ ಸಮಯವಿದೆ ಎಂಬ ಅರಿವಿದೆ’ ಎಂದು ಹೇಳುತ್ತಾರೆ ಅವರು.

‘ಭುಜಂಗ’ನ ಹೊಸ ಅವತಾರ
ತಮ್ಮನ್ನು ಇಷ್ಟು ಸಿನಿಮಾಗಳಿಗೆ ನೋಡಿದ್ದಕ್ಕೆ ತದ್ವಿರುದ್ಧ ರೀತಿಯಲ್ಲಿ ‘ಭುಜಂಗ’ದಲ್ಲಿ ನೋಡಬಹುದು ಎನ್ನುತ್ತಾರೆ ಪ್ರಜ್ವಲ್. ಇದುವರೆಗಿನ ಪಾತ್ರಗಳು, ಇಂತಹ ಮಗ ನಮಗೆ ಇರಲಿ ಎಂದು ತಂದೆ ತಾಯಂದಿರಿಗೆ ಅನಿಸುವಂಥದ್ದು. ‘ಭುಜಂಗ’ದ ಪಾತ್ರ ಇಂತಹ ಮಗ ಇಲ್ಲದಿರಲಿ ಎನಿಸುವಂಥದ್ದು.

ಪ್ರಜ್ವಲ್‌ ಈ ಚಿತ್ರದಲ್ಲಿ ಕಳ್ಳನಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಅಂದಿನ ಬದುಕಿಗೆ ಎಷ್ಟು ಅಗತ್ಯವೋ ಅಷ್ಟೇ ಕದಿಯುವ ಕಳ್ಳ. ಯಾರ ಕುರಿತೂ ಆತನಿಗೆ ಯೋಚನೆ, ಕಾಳಜಿಗಳಿಲ್ಲ. ಹರಿದುಹೋದ ಬನಿಯನ್‌, ಪಟಾಪಟ್ಟಿ ಚಡ್ಡಿ, ವಿಕಾರವಾಗಿ ಬೆಳೆದ ಗಡ್ಡ – ಇವು ಆತನ ಟ್ರೇಡ್‌ಮಾರ್ಕ್‌ಗಳು. ಇಂತಹ ಪೋಕಿರಿ ಪ್ರೀತಿಯಲ್ಲಿ ಬಿದ್ದ ಬಳಿಕ ಹೇಗೆ ಬದಲಾಗುತ್ತಾನೆ ಎನ್ನುವುದನ್ನು ಹಾಸ್ಯಮಯವಾಗಿ ಹೇಳಲಾಗಿದೆ ಎಂದು ‘ಭುಜಂಗ’ ಚಿತ್ರದ ಕುರಿತು ವಿವರಿಸುತ್ತಾರೆ ಅವರು.

ಸಿನಿಮಾ ಎನ್ನುವ ಜೇನುಗೂಡು
ಚಿತ್ರದ ಸೋಲು ಗೆಲುವು ನಾಯಕರ ಕೈಯಲ್ಲಿಲ್ಲ ಎನ್ನುವುದು ಪ್ರಜ್ವಲ್ ಸಮರ್ಥನೆ. ಚಿತ್ರದ ಕಥೆ ಆಯ್ಕೆ ಮಾಡಿಕೊಳ್ಳುವಾಗ ಅದು ಚೆನ್ನಾಗಿದೆ ಎಂದು ಅಂದುಕೊಳ್ಳುತ್ತೇವೆ, ಆದರೆ 89 ವಿಭಾಗಗಳೂ ಸಮರ್ಪಕವಾಗಿ ಕೆಲಸ ಮಾಡಿದರೆ ಮಾತ್ರ ಒಳ್ಳೆಯ ಸಿನಿಮಾ ಮೂಡಲು ಸಾಧ್ಯ.

ಹೊಸಬರಿಗೆ ಅವಕಾಶ ನೀಡಿದರೆ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ಭಾವನೆ ಇತ್ತು. ಅದಕ್ಕಾಗಿ ಅನೇಕ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಿದೆ. ಸಿನಿಮಾದ ಶುರುವಿನಲ್ಲಿ ಇರುವ ಹುಮ್ಮಸ್ಸು, ಪ್ರಾಮಾಣಿಕತೆ ಮುಗಿಯುವ ವೇಳೆಗೆ ಇರುವುದಿಲ್ಲ. ತಮ್ಮನ್ನು ಮಣಿರತ್ನಂ ಮಟ್ಟಕ್ಕೆ ಕಲ್ಪಿಸಿಕೊಂಡಿರುತ್ತಾರೆ ಎಂದು ಕೆಲವು ಹೊಸ ನಿರ್ದೇಶಕರ ಧೋರಣೆಗಳನ್ನು ಸೂಚ್ಯವಾಗಿ ಟೀಕಿಸುತ್ತಾರೆ.

ಈಗಿನ ಚಿತ್ರರಂಗ ಹೆಚ್ಚು ಭರವಸೆ ಮೂಡಿಸುತ್ತಿದೆ. ಈ ಕಾರಣಕ್ಕಾಗಿ ಸಿನಿಮಾದ ಇತರೆ ವಿಭಾಗಗಳನ್ನೂ ತಿಳಿದುಕೊಳ್ಳಲು ಕೆಲಸ ಮಾಡುತ್ತಿದ್ದೇನೆ. ಅನೇಕ ನಟರು ಸಹ ಈ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿ ಬರಲು ನಮಗೆ ವಿವಿಧ ವಿಭಾಗಗಳ ಕುರಿತು ಜ್ಞಾನ, ತಿಳಿವಳಿಕೆ ಅಗತ್ಯ ಎನ್ನುತ್ತಾರೆ ಅವರು.
ಸಾಮಾಜಿಕ ಮೌಲ್ಯದ ‘ಚೌಕ’

ಮೊದಲ ಬಾರಿಗೆ ಬಹುತಾರಾಗಣದ ಚಿತ್ರದಲ್ಲಿ ಪ್ರಜ್ವಲ್‌ ಕಾಣಿಸಿಕೊಳ್ಳುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ‘ಚೌಕ’ ಚಿತ್ರದಲ್ಲಿ ವಿಜಯ ರಾಘವೇಂದ್ರ, ‘ನೆನಪಿರಲಿ’ ಪ್ರೇಮ್‌ ಮತ್ತು ದಿಗಂತ್‌ ಜತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ‘ರಂಗ್‌ದೆ ಬಸಂತಿ’ಯಂತೆ ದೇಶಪ್ರೇಮದ ಜಾಗೃತಿ ಮೂಡಿಸುವ ಚಿತ್ರ ಎನ್ನುವುದು ಪ್ರಜ್ವಲ್ ಅನಿಸಿಕೆ.

ಚಿತ್ರದ ನಿರ್ದೇಶಕ ತರುಣ್‌ ಕುರಿತು ಪ್ರಜ್ವಲ್ ಅವರಲ್ಲಿ ಅಭಿಮಾನವಿದೆ. ಸದಾ ಸಿನಿಮಾ ಎಂಬ ಜಪ ಮಾಡುವ ತರುಣ್‌, ಸಿನಿಮಾ ಮಾಡುವುದರಲ್ಲಿ ಉತ್ಸಾಹ ಮಾತ್ರವಲ್ಲ, ಆಳವಾದ ಜ್ಞಾನವನ್ನೂ ಹೊಂದಿದ್ದಾರೆ ಎನ್ನುತ್ತಾರೆ ಅವರು. ತರುಣ್ ಮೇಲಿನ ನಂಬಿಕೆಯಿಂದಲೇ ಕಣ್ಣುಮುಚ್ಚಿಕೊಂಡು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳುತ್ತಾರೆ.

ಇಷ್ಟೊಂದು ತಂತ್ರಜ್ಞರು ಸೇರಿಕೊಂಡು ಸಿನಿಮಾ ಮಾಡುತ್ತಿರುವುದು ನನಗೆ ತಿಳಿದ ಮಟ್ಟಿಗೆ ಇದೇ ಮೊದಲು. ಇದು ಒಳ್ಳೆಯ ಸಿನಿಮಾ ಆಗುವುದರಲ್ಲಿ ಸಂಶಯವಿಲ್ಲ. ಮುಂದೆ 25–30 ವರ್ಷದ ಬಳಿಕ ಹಳೆಯ ಸಿನಿಮಾಗಳತ್ತ ಹೊರಳಿದಾಗ ‘ಚೌಕ’ ಹೆಮ್ಮೆಯ ಚಿತ್ರವಾಗಲಿದೆ ಎನ್ನುತ್ತಾರೆ ಪ್ರಜ್ವಲ್.

ಪ್ರಜ್ವಲ್ ಜನಿಸಿದಾಗ ದೇವರಾಜ್‌ ಅವರು, ದ್ವಾರಕೀಶ್‌ ನಿರ್ಮಾಣದ ‘ಡ್ಯಾನ್ಸ್‌ ರಾಜಾ ಡ್ಯಾನ್ಸ್‌’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ಹೀಗಾಗಿ ಅವರು ಮಗನನ್ನು ನೋಡಲು ಬಂದದ್ದು ಮಾರನೇ ದಿನ. ಈಗ ದ್ವಾರಕೀಶ್‌ ಬ್ಯಾನರ್‌ನ 50ನೇ ಸಿನಿಮಾದ ನಾಯಕರಲ್ಲಿ ಒಬ್ಬನಾಗುವ ಅವಕಾಶ. ಇದು ಅಪೂರ್ವ ಕ್ಷಣ ಎಂದು ಬಣ್ಣಿಸುತ್ತಾರೆ ಅವರು.

‘ಮಾದ ಮತ್ತು ಮಾನಸಿ’ ಚಿತ್ರದ ಬಗ್ಗೆಯೂ ಅವರಲ್ಲಿ ಅಪಾರ ಭರವಸೆ ಇದೆ. ದೀರ್ಘಕಾಲದ ಬಳಿಕ ಒಂದು ಸಂಗೀತಮಯ ಪ್ರೇಮಕಥೆಯ ಚಿತ್ರದಲ್ಲಿ ನಟಿಸುತ್ತಿರುವ ಖುಷಿ ಅವರಲ್ಲಿದೆ. ಇದು ಎಮೋಷನಲ್‌, ಮ್ಯೂಸಿಕಲ್ ಲವ್ ಸ್ಟೋರಿ. ಅದರಲ್ಲೊಂದು ಪ್ರಯಾಣವಿದೆ. ಆ ಪಯಣದಲ್ಲಿ ನೀವೂ ಭಾಗಿಯಾಗುತ್ತೀರಿ ಎಂದು ಚಿತ್ರದ ತೀವ್ರತೆಯನ್ನು ಅವರು ವಿವರಿಸುತ್ತಾರೆ.

ಒಳ್ಳೆಯ ಸಿನಿಮಾಗಳಷ್ಟೇ ಗುರಿ
ಚಿತ್ರರಂಗದಲ್ಲಿ ಹೊಸ ಹರಿವು ಕಾಣಿಸುತ್ತಿದೆ. ಅದು ಸ್ವಾಗತಾರ್ಹ ಎನ್ನುವ ಪ್ರಜ್ವಲ್‌, ಪ್ರಯೋಗಾತ್ಮಕ ಚಿತ್ರಗಳಿಗೆ ತೊಡಗಿಕೊಳ್ಳಲು ಇನ್ನೂ ಸಿದ್ಧರಾಗಿಲ್ಲ ಎಂಬ ಸೂಚನೆಯನ್ನೂ ನೀಡುತ್ತಾರೆ.

ಟಿಪಿಕಲ್ ಕಮರ್ಷಿಯಲ್ ಚಿತ್ರಗಳಿಗಿಂತ ವಿಭಿನ್ನವಾದುದ್ದನ್ನು ನೀಡಿದಾಗ ಜನ ಇಷ್ಟಪಡುತ್ತಾರೆ. ಹಾಗೆಂದು ಕಮರ್ಷಿಯಲ್ ಸಿನಿಮಾಗಳನ್ನು ತಿರಸ್ಕರಿಸುವುದೂ ಇಲ್ಲ. ಜನರು ಯಾವ ಸಿನಿಮಾ ಇಷ್ಟಪಡುತ್ತಾರೆ, ಯಾವುದನ್ನು ತಿರಸ್ಕರಿಸುತ್ತಾರೆ ಎಂದು ಊಹಿಸುವುದು ಕಷ್ಟ. ಕೆಲವು ಹೊಸ ಪ್ರಯತ್ನಗಳು ಆಗುತ್ತವೆ. ಅವು ಗೆದ್ದಾಗ ಇನ್ನಷ್ಟು ಮಂದಿ ಅದೇ ಹಾದಿ ತುಳಿಯುತ್ತಾರೆ.

ಯಾವ ಬಗೆಯ ಸಿನಿಮಾವಾದರೂ ಪ್ರಾಮಾಣಿಕ ಪ್ರಯತ್ನವಾಗಿರಬೇಕು. ದೊಡ್ಡ ಬಜೆಟ್‌ ಚಿತ್ರಗಳಿಗಿಂತ ಒಳ್ಳೆಯ ಕಥೆ ಇದ್ದರೆ ಗೆಲುವು ಸಿಗುತ್ತದೆ ಎನ್ನುವುದಕ್ಕೆ ಉದಾಹರಣೆಗಳು ಇವು ಎನ್ನುತ್ತಾರೆ.

ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಬೇಕು ಎಂದು ಯೋಚನೆ ಮಾಡಿಲ್ಲ. ನನ್ನ ಪ್ರಕಾರ ಒಳ್ಳೆಯ ಸಿನಿಮಾ ಎನ್ನುವುದಷ್ಟೇ ಮುಖ್ಯ.  ಹೀರೊಗಳಿಗಿಂತ ಸಿನಿಮಾಗಳೇ ಮುಖ್ಯ. ನಿರ್ದೇಶಕರು ಹೇಳಿದ್ದನ್ನು ಮಾಡುವವರು ನಾವು. ಸಿನಿಮಾ ಚೆನ್ನಾಗಿದ್ದು ಗೆದ್ದರೆ ಮಾತ್ರ ನಾವು ಮುಖ್ಯವಾಗುತ್ತೇವೆ.

ಸಿನಿಮಾ ಚೆನ್ನಾಗಿಲ್ಲದಿದ್ದರೆ ಅಮಿತಾಭ್, ರಜನಿ ಇದ್ದರೂ ಓಡುವುದಿಲ್ಲ. ಆದರೆ ಕಾಣಿಸುವುದು ನಾವು. ಮೊದಲು ಬೆರಳನ್ನು ತೋರಿಸುವುದೇ ನಮ್ಮ ಕಡೆಗೆ. ಇದು ಮಾನವ ಸಹಜ ಗುಣ. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಈ ಹೆಗ್ಗಳಿಕೆಗಳು ಎಂದು ‘ಸ್ಟಾರ್‌ಗಿರಿ’ ಕಥೆಯ ಮುಂದೆ ನಗಣ್ಯ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT