ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಹ್ಮಾಸ್ತ್ರ’ ಸುಮ್ಮನೆ ಪ್ರಯೋಗಿಸುವುದು ಬೇಡ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಡೀ ಭಾರತೀಯ ಸಮಾಜವನ್ನು ಛಿದ್ರ ಛಿದ್ರ­ಗೊಳಿಸಿ ಮನುಷ್ಯ ಮನುಷ್ಯರ ಮಧ್ಯೆ ಗೋಡೆಗಳನ್ನು ಎಬ್ಬಿಸಿರುವ ಜಾತಿ ವ್ಯವಸ್ಥೆ­ಯಿಂದಾ­­ಗಿರುವ ಅನರ್ಥಗಳನ್ನು ಹೇಳಲು ಶಬ್ದ­ಗಳೇ ಇಲ್ಲ.  ಅದಕ್ಕಿಂತಲೂ ಅಮಾನವೀಯ­ವಾದದ್ದು ನಮ್ಮ ಜೊತೆಯಲ್ಲೇ ಬದುಕುತ್ತಿರುವ ನಮ್ಮ ಜನರನ್ನೇ ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡು ಆ ವ್ಯವಸ್ಥೆಯಿಂದಲೂ ಅವರನ್ನು  ಆಚೆ ಇಟ್ಟಿರುವ ಅಸ್ಪೃಶ್ಯತೆಯ ಆಚರಣೆ.

ಇದರಿಂದಾಗಿ ವಿಶ್ವದ ಎದುರು ನಾವು ತಲೆ­ತಗ್ಗಿಸಿ ನಿಲ್ಲಬೇಕಾಗಿದೆ. ಇನ್ನು ಅದಕ್ಕೆ ಗುರಿಯಾದ­ವರು ಪಡುವ ಪಾಡಂತೂ  ಅನುಭವಿಸಿದವರಿಗೇ ಗೊತ್ತು. ದಲಿತರು ಕೂಡ  ಎಲ್ಲ ನಾಗರಿಕರಂತೆ ಸ್ವಾಭಿಮಾನದಿಂದ ಬದುಕುವುದು ಸಾಧ್ಯವಾಗ­ಬೇಕು. ಹಾಗಾದಾಗಲೇ ನಮ್ಮ ಪ್ರಜಾ­ಪ್ರಭುತ್ವಕ್ಕೂ ಒಂದು ಅರ್ಥ ಬರುವುದು. ಇದನ್ನು ಡಾ.ಅಂಬೇಡ್ಕರ್ ಅವರು ಎಂದೋ ನಮಗೆ ತಿಳಿ­ಸಿದ್ದರೂ ನಾವಿನ್ನೂ ಅವರ ವಿವೇಕದ ಮಾತನ್ನು ಮನಸ್ಸಿನ ಒಳಗೆ ತೆಗೆದುಕೊಂಡಿಲ್ಲ.

ಆದರೆ ಶತಮಾನಗಳಿಂದ ದಲಿತರನ್ನು ಕಡೆ­ಗಣಿ­ಸಿರುವ ಸವರ್ಣೀಯ ಸಮಾಜದಲ್ಲಿ ಅಂಥ ಅರಿವು ಅಷ್ಟು ಬೇಗ ಬರುತ್ತದೆಂದು ನಿರೀಕ್ಷಿಸು­ವುದು ಕಷ್ಟವೇ.    ಕೇವಲ ಮನಸ್ಸನ್ನು ಪರಿವ­ರ್ತನೆ ಮಾಡಿ ಜನರನ್ನು ಅ ಅನಿಷ್ಟ ಆಚರಣೆ­ಯಿಂದ  ವಿಮುಖರನ್ನಾಗಿಸಲು ಮಾಡುವ ಪ್ರಯತ್ನ­ಗಳು ಅಷ್ಟು ಬೇಗ ಫಲ ಕೊಡಲಾರವು ಎನಿಸಿದಾಗ ಕಾನೂನಿಂದಾದರೂ ಅವರಿಗೆ ಆಗು­ತ್ತಿ­ರುವ ಅನ್ಯಾಯ, ಶೋಷಣೆ, ದಬ್ಬಾಳಿಕೆಗಳನ್ನು ತಪ್ಪಿಸಲು ಸಂವಿಧಾನದಲ್ಲೇ ಅವಕಾಶ ಮಾಡಿ­ಕೊಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ ಮತ್ತು ಅದು ಸರಿಯಾದದ್ದು ಕೂಡ.

ಅದರ ಪರಿಣಾಮವೇ ಯಾರಾದರೂ ಅವರ ಜಾತಿ ಹೆಸರು ಹೇಳಿ ನಿಂದನೆ ಮಾಡಿದರೆ, ದೂರು ನೀಡಿದ ಕೂಡಲೇ ಅಂಥ ವ್ಯಕ್ತಿಯನ್ನು ಬಂಧಿಸ­ಬಹುದು. ಇದು ಜಾಮೀನುರಹಿತ ಬಂಧನವೂ ಹೌದು. ಒಂದು ರೀತಿಯಲ್ಲಿ ಇದು ಬ್ರಹ್ಮಾಸ್ತ್ರವೇ ಸರಿ. ಬ್ರಹ್ಮಾಸ್ತ್ರವನ್ನು ಯಾವಾಗಲೂ ಸುಮ್ಮ ಸುಮ್ಮನೆ ಪ್ರಯೋಗಿಸುವಂತಿಲ್ಲ. ನಿಜವಾಗಿಯೂ ಅಂಥದ್ದು ನಡೆದಿದ್ದರೆ ಮಾತ್ರ ದೂರು ನೀಡಿದರೆ ಅಂಥ ಕಾನೂನು ಮಾಡಿದ್ದಕ್ಕೆ ಸಾರ್ಥಕ.

ಬೇರೆ ಇನ್ಯಾವುದೋ ಕಾರಣಕ್ಕಾಗಲಿ  ಅಥವಾ ವೈಯಕ್ತಿಕ ದ್ವೇಷದಿಂದ ಆಗಲಿ ಈ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಿದರೆ ಅದು ಕಾನೂನಿನ ದುರುಪಯೋಗವಾಗುತ್ತದೆ. ಅಷ್ಟೇ ಅಲ್ಲ, ನಿಜವಾಗಿಯೂ ನಿರಪರಾಧಿಯಾದವನು ಶಿಕ್ಷೆಗೊಳಗಾಗುತ್ತಾನೆ. ಇದು ಅಷ್ಟಕ್ಕೇ ನಿಲ್ಲುವು­ದಿಲ್ಲ. ಮೊದಲೇ ಒಡೆದು ಹೋಗಿರುವ ನಮ್ಮ ಸಮಾಜದಲ್ಲಿ ದ್ವೇಷದ  ವಾತಾವರಣ ಉಂಟಾ­ಗು­ತ್ತದೆ. ಅಸಹನೆ ಹೆಚ್ಚುತ್ತದೆ. ಅಂತಿಮವಾಗಿ ಅಸ್ಪೃಶ್ಯತೆ ನಿವಾರಿಸುವ  ಹಾಗೂ ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶ ಈಡೇರು­ವುದು ಹೋಗಲಿ, ಅದರ ತದ್ವಿರುದ್ಧವೇ ಆಗಿ­ಬಿ­ಟ್ಟರೆ ಅದಕ್ಕಿಂತ ಘೋರವಾದದ್ದು ಇನ್ನೊಂದಿಲ್ಲ.

ಯಾವುದೇ ಕಾರಣಕ್ಕೂ ಹಾಗಾಗಲು ಯಾರೂ ಅವಕಾಶ ಕೊಡಲೇಬಾರದು. ವಿವೇಕಿ­ಗಳೆನಿ­ಸಿಕೊಂಡವರು  ಈಗ ಮನಸ್ಸುಗಳನ್ನು ಬೆಸೆ­ಯು­ವಂಥ ಕೆಲಸ ಮಾಡಬೇಕೇ ಹೊರತು  ಮನಸ್ಸು­ಗಳನ್ನು ಇನ್ನಷ್ಟು ಒಡೆಯುವುದನ್ನಲ್ಲ. ಅದರಲ್ಲೂ ಜನರಿಂದ ಆಯ್ಕೆಯಾಗಿ ಅವರ ಹಿತ ಕಾಪಾಡುವ, ದೇಶದ ಏಕತೆಯನ್ನು ಸಂರಕ್ಷಿಸುವ ಹೊಣೆಹೊತ್ತು  ಸಂಸತ್ತಿನಲ್ಲಿ ಕುಳಿತು ಕಾನೂನು­ಗಳನ್ನು ಮಾಡುವ ಅಧಿಕಾರ ಹೊಂದಿರುವ ಸಂಸದರು ಹಾಗೂ ರಾಜಕೀಯ ಪಕ್ಷಗಳ ಜವಾಬ್ದಾರಿ ಸ್ಥಾನಗಳಲ್ಲಿ ಇರುವ ಮುಖಂಡರು ಈ ದಿಕ್ಕಿನಲ್ಲಿ ಜನರನ್ನು ಕೆರಳಿಸುವಂಥ ಹೀನ ಕೆಲಸ­ವನ್ನು  ಮಾಡುವುದಿರಲಿ, ಯೋಚಿಸಲೂ ಬಾರದು.

ಆದರೆ ಭಾರತ,  ಸ್ವಾತಂತ್ರ್ಯ ಗಳಿಸಿ ಸಂಸದೀಯ ಪ್ರಜಾಪ್ರಭುತ್ವವನ್ನು ಅಂಗೀಕರಿಸಿ ಮುಕ್ಕಾಲು ಶತ­ಮಾನದ ಹತ್ತಿರಕ್ಕೆ ಬರುತ್ತಿರುವಾಗ ಅದು ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತ ಹೋಗುವುದು ಹಾಗಿರಲಿ ಅದು ಇನ್ನಷ್ಟು ವಿನಾಶದ ಕಡೆಗೇ ಸಾಗುತ್ತಿದೆಯೇನೋ ಎನ್ನುವ ಸಂದೇಹವನ್ನು ಹುಟ್ಟಿಸುವ ಹಾಗಿದೆ  ನಮ್ಮ ನಾಯಕರು ನಡೆದು ಕೊಳ್ಳುತ್ತಿರುವುದು. ಇದನ್ನು ಕಂಡಾಗ ನಿರಾಶೆ­ಯಾಗು­ತ್ತದೆ. ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆ­ಗಳನ್ನೂ ನಾವು  ಹಾಳುಗೆಡಹುತ್ತಿದ್ದೇವೆ.

ಪ್ರಜಾ ಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳ­ಲ್ಲೊಂದಾದ, ಜನರ ಅತ್ಯಂತ ನಂಬುಗೆಯ ಸಂಸ್ಥೆಯೂ ಆದ ನ್ಯಾಯಾಂಗದಿಂದ ತೊಡಗಿ, ದೇಶರಕ್ಷಣೆಯ ಹೊಣೆಹೊತ್ತ ಮಿಲಿಟರಿಯೂ ಸೇರಿದಂತೆ ಪೊಲೀಸ್, ಲೋಕಸೇವಾ ಆಯೋಗ ಹೀಗೆ  ಎಲ್ಲದರತ್ತಲೂ ಇಂದು ರಾಜಕಾರಣಿಗಳು ತಮ್ಮ ಕಬಂಧ ಬಾಹುಗಳನ್ನು ಚಾಚುತ್ತಿರುವು­ದನ್ನು ಕಂಡಾಗ ಈ ದೇಶಕ್ಕೆ ಇನ್ನೂ ಭವಿಷ್ಯ ಉಳಿದಿದೆಯೆ ಎಂದು ಪ್ರಜ್ಞಾವಂತ ನಾಗರಿಕರೂ ಸಾಮಾನ್ಯ ಜನತೆಯೂ ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ.

ಅಂಥದರಲ್ಲಿ ಇದೀಗ ಕೇಂದ್ರದ ಮಾಜಿ ಸಚಿವರೂ ಸದ್ಯ ಎ.ಐ.ಸಿ.ಸಿ ಪ್ರಧಾನ ಕಾರ್ಯ­ದರ್ಶಿಯೂ ಆಗಿರುವ ದಿಗ್ವಿಜಯ ಸಿಂಗ್ ಅವರು ‘ಬ್ಯಾಂಕಿಂಗ್ ಕ್ಷೇತ್ರ ಭ್ರಷ್ಟಾಚಾರದ ಕೂಪವಾ­ಗಿದ್ದು ಬ್ಯಾಂಕ್ ಅಧಿಕಾರಿಗಳು ದಲಿತ ಉದ್ಯಮಿ­ಗಳಿಗೆ ಸಾಲ ನೀಡದೆ ತೊಂದರೆ ಕೊಡುತ್ತಿರುವ ಕಾರಣ ಅಂಥವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಬೇಕಿದೆ’ ಎಂದು ಆಕ್ರೋಶ­ದಿಂದ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಆ. ೨೭). ಈ ನಾಯಕರ ದಲಿತರ ಬಗೆಗಿನ ಕಾಳಜಿ ಕಳಕಳಿಗಳು ಅರ್ಥವಾಗುತ್ತವೆ.

ಆದರೂ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿಯ ಕರೆ ಕೊಡಬಾರದು. ಬ್ಯಾಂಕ್ ಅಧಿಕಾರಿ­ಗಳು ಭ್ರಷ್ಟರಾಗಿದ್ದರೆ ಅವರನ್ನು ಉಗ್ರವಾಗಿ ವಿರೋಧಿಸುವುದು ಹಾಗೂ ಅಂಥವರ ವಿರುದ್ಧ ಬ್ಯಾಂಕ್‌ನಲ್ಲೇ ಘೇರಾವ್ ಮಾಡುವುದೂ ಸೇರಿ­ದಂತೆ ಇನ್ನಿತರ ಎಲ್ಲ ಬಗೆಯ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಮಾರ್ಗಗಳನ್ನು ಹಿಡಿಯಲು ಅವಕಾಶವಿದ್ದೇ ಇದೆ.

ಇದು  ದಲಿತರನ್ನು ಓಲೈ­ಸುವ ಮತ್ತು ತನ್ಮೂಲಕ ತಮ್ಮ ಬಗ್ಗೆ ಮತ್ತು ತಾವು ಪ್ರತಿನಿಧಿಸುತ್ತಿರುವ ಪಕ್ಷದ ಬಗ್ಗೆ ದಲಿತರ ಪ್ರೀತಿ ಅಭಿಮಾನಗಳನ್ನು ಗಳಿಸುವ ಮಾರ್ಗ­ವೆಂದು ಅವರು ಭಾವಿಸಿರಬಹುದೇನೋ. ಆದರೆ ಅದರಿಂದ ಸಮಾಜಕ್ಕೆ ಮತ್ತು ದೇಶಕ್ಕೆ ಒಳಿತಾ­ಗು­ತ್ತದೆ ಎಂದು ಹೇಳಲಾಗುವುದಿಲ್ಲ. ಮೊದಲೇ ನೊಂದಿರುವ ದಲಿತ ಯುವಕರು, ರಾಷ್ಟ್ರೀಯ ಪಕ್ಷವೊಂದರ ಹಿರಿಯ ನಾಯಕರೇ ಹೀಗೆ ಹೇಳಿದ­ಮೇಲೆ  ತಮಗೆ ಅನ್ಯಾಯವಾಗುತ್ತಿರುವಾಗ ಏಕೆ ಹೀಗೆ ಮಾಡಬಾರದೆಂದು ಯೋಚಿಸಿದರೆ ಆಶ್ಚರ್ಯವಿಲ್ಲ.

ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದಿಬ್ಬರು ಪ್ರಿನ್ಸಿಪಾಲರ ವಿರುದ್ಧ ಅವರು ಜಾತಿನಿಂದನೆ ಮಾಡದೆ ಇದ್ದಾಗ್ಯೂ ಬೇರಾವುದೋ ಕಾರಣಕ್ಕೆ  ಈ ಬಗ್ಗೆ ದೂರು ದಾಖಲಿಸಿ ಅವರನ್ನು ಆತಂಕಕ್ಕೆ ಸಿಲುಕಿಸಿ ಅನಂತರ ಮೇಲಧಿಕಾರಿಗಳು ರಾಜಿಮಾಡಿಸಿದ ಮೇಲೆ ದೂರು ಹಿಂತೆಗೆದುಕೊಂಡ ಸಂದರ್ಭ­ಗಳು ನೆನಪಾಗುತ್ತವೆ. ಸಚಿವರ ಈ ರೀತಿಯ ಸಲಹೆ, ಆದಿಕವಿ ಪಂಪನ ಮಾತುಗಳಲ್ಲಿ- ‘ಬಡಿ­ಗಂಡನಿಲ್ಲ ಪಾಲನೆ ಕಂಡಂ’ ಎಂಬಂತೆ. 

ಎಂದರೆ ಮೋಸದ  ಜೂಜಿನಲ್ಲಿ  ದುರ್ಯೋಧನನು ತಕ್ಷಣಕ್ಕೆ ಪಾಂಡವರ ರಾಜ್ಯವನ್ನು ತಾನು ಗೆದ್ದುಕೊಂಡದ್ದನ್ನು ಲೆಕ್ಕಹಾಕಿದನೇ ಹೊರತು  ಮುಂದಿನ ಮಹಾಭಾರತ ಯುದ್ಧದಲ್ಲಿ ಅದಕ್ಕೆ ತೆರಬೇಕಾಗಿ ಬರುವ ಅಪಾರ ಬೆಲೆಯನ್ನು ಲೆಕ್ಕ ಹಾಕಲಿಲ್ಲ-. ಬೆಕ್ಕಿಗೆ ಮುಂದಿರುವ ಹಾಲಿನ ಪಾತ್ರೆ ಮಾತ್ರ ಕಣ್ಣಿಗೆ ಬಿದ್ದು ಅದರ ಹಿಂದೆ ಬಡಿಗೆ ಹಿಡಿದು ನಿಂತಿರುವ ಯಜಮಾನ ಕಾಣಿಸದೇ ಹೋಗುವ ಹಾಗೆ.

ಪ್ರಜಾಪ್ರಭುತ್ವದಲ್ಲಿ ನಾವು ಅನುಸರಿಸಬೇಕಾದದ್ದು ಪ್ರಜಾಸತ್ತಾತ್ಮಕವಾದ ಅತ್ಯುಗ್ರ ಪ್ರತಿಭಟನೆಯ ಮೂಲಕವೇ ಭ್ರಷ್ಟರನ್ನು ಮಣಿಸುವ ಮತ್ತು ಕಿತ್ತೊಗೆಯುವ ಮಾರ್ಗವನ್ನೇ  ಹೊರತು ಜನರ ಹಕ್ಕಿನ ಸಂರಕ್ಷಣೆಯ ಸಲು­ವಾ­ಗಿಯೇ ಮಾಡಿರುವ ಸದುದ್ದೇಶದ ಕಾನೂನು­ಗಳನ್ನು ದುರುಪಯೋಗಪಡಿಸಿಕೊಳ್ಳುವುದಾ­ಗಲಿ  ಅಥವಾ ಮುರಿಯುವುದಾಗಲಿ ಅಲ್ಲ.

ಪ್ರಜಾ­ಪ್ರಭುತ್ವದ ಮಾರ್ಗಗಳನ್ನು ಬಿಟ್ಟು ಕಾನೂ­ನಿನ ಚೌಕಟ್ಟನ್ನು ಮೀರಿ ಹಿಂಸೆಯ ಹಾದಿಯ ಮೂಲಕ ತಮ್ಮ ಉದ್ದೇಶಗಳನ್ನು ಈಡೇರಿಸಿ­ಕೊಳ್ಳಲು ಹೊರಟಿರುವ ನಕ್ಸಲೀಯರು ಮತ್ತು ಭಯೋತ್ಪಾದಕರು  ಇದುವರೆಗೂ ಯಶಸ್ಸು ಕಾಣಲು ಸಾಧ್ಯವಾಗಿಲ್ಲದಿರುವುದು ಹಾಗೂ ಅದು ಜನರ ಸಹಾನುಭೂತಿಯನ್ನು ಗಳಿಸದಿರು­ವುದು ನಮ್ಮ ಕಣ್ಣೆದುರು ಇದ್ದೇ ಇದೆ.

ತಕ್ಷಣದ ಪ್ರಯೋಜನಕ್ಕೆ, ಜನತೆಯ ಹಕ್ಕುಗಳ ಸಂರಕ್ಷ­ಣೆಯ ಸಲುವಾಗಿಯೇ ಇರುವ ಸಂವಿಧಾನಾ­ತ್ಮ­ಕ­ವಾದ ಕಾನೂನುಗಳನ್ನು ದುರುಪಯೋಗ ಮಾಡಿ­ಕೊಳ್ಳುವ ಹಾಗೂ ಮುರಿಯುವ ಕರೆ­ಕೊಡು­ವಂಥ ನಾಯಕರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದಿರುವಷ್ಟು ವಿವೇಕ ನಮಗೆ ಇರಬೇಕು ಎಂಬುದೇ ಎಲ್ಲ ಪ್ರಜಾಪ್ರಭುತ್ವವಾದಿಗಳ ಕಳಕಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT