ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಾಹ್ಮಣ್ಯ ದಾಟದ ಅನಂತಮೂರ್ತಿ’

ಕಲಾಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ವಿರೋಧ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯು.ಆರ್‌. ಅನಂತ­ಮೂರ್ತಿ ಅವರಂಥ ವೈಚಾರಿಕ ಪ್ರಜ್ಞೆಯ ಸಾಹಿತಿಗೂ ಬ್ರಾಹ್ಮಣ್ಯವನ್ನು ದಾಟಲು ಸಾಧ್ಯವಾಗಲಿಲ್ಲ. ಇದಕ್ಕೆ ಅವರ ಅಂತ್ಯ ಸಂಸ್ಕಾರ ವೈಖರಿಯೇ ಉದಾಹರಣೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಅಭಿಪ್ರಾಯಪಟ್ಟರು.
ನಗರದ ಹೋಟೆಲ್‌ವೊಂದರಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ್ದ ಡಾ.ಯು.­ಆರ್‌.­­ಅನಂತಮೂರ್ತಿ ಅವರಿಗೆ ನುಡಿ­ನಮನ ಸಭೆಯಲ್ಲಿ ಅವರು ಮಾತನಾಡಿದರು.

‘ಸಂಸ್ಕಾರ ಕಾದಂಬರಿಯ ಪ್ರಾಣೇಶಾ­ಚಾರ್ಯ ಕೊನೆಗೂ ಪ್ರಾಣೇಶಾ­ಚಾ­ರ್ಯ­­ನಾ­ಗಿಯೇ ಉಳಿದ. ಗೆರೆ ದಾಟಲು ಸಾಧ್ಯವಾಗಲಿಲ್ಲ. ಒಬ್ಬ ಮಾಧ್ವ ಬ್ರಾಹ್ಮ­ಣ­ನಾಗಿ ಹುಟ್ಟಿ ಅವರ ಅಂತ­ರಂಗದ ಇಚ್ಛೆ ಪ್ರಕಾರವೇ ಒಬ್ಬ ಮಾಧ್ವ ಬ್ರಾಹ್ಮ­-­­­ಣನ ಅಂತ್ಯ ಸಂಸ್ಕಾರ­ವನ್ನು ಅನಂತ­ಮೂರ್ತಿ ಪಡೆದರು’ ಎಂದರು.

ಕಾಂಗ್ರೆಸ್‌ ನಾಯಕ ವಿ.ಆರ್‌. ಸುದರ್ಶನ್‌ ಮಾತನಾಡಿ, ‘ಕಲಾಗ್ರಾಮ­ವನ್ನು ಸ್ಮಶಾನವನ್ನಾಗಿ ಮಾಡಲಾಗುತ್ತಿದೆ ಎಂಬ ವಿವಾದ ಎದ್ದಿದೆ. ಈ ರೀತಿ ಹೇಳು­ವವರು ಹಿಂದೆಯೇ ಸಲಹೆ ನೀಡಬೇಕಿತ್ತು. ನನ್ನ ಪ್ರಕಾರ ಸಾಧಕರ ಹುಟ್ಟೂರಿ­ನಲ್ಲಿಯೇ ಅಂತ್ಯ ಸಂಸ್ಕಾರ ನಡೆಯಬೇಕು. ಆಗ ಗೊಂದಲ ಇರುವುದಿಲ್ಲ. ಈ ಬಗ್ಗೆ ಸರ್ಕಾರ ನೀತಿ ರೂಪಿಸಬೇಕು’ ಎಂದರು.

‘ಅನಂತಮೂರ್ತಿ ಅವರನ್ನು ರಾಜ್ಯ­ಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರೆ ಕನ್ನಡಕ್ಕೆ ಮತ್ತಷ್ಟು ಒಳ್ಳೆಯದಾಗುತ್ತಿತ್ತು. ಆದರೆ, ಈ ಅವಕಾಶವನ್ನು ರಾಜಕೀಯ ಪಕ್ಷಗಳು ಕಳೆದುಕೊಂಡವು’ ಎಂದು ವಿಷಾದ ವ್ಯಕ್ತಪಡಿಸಿದರು.

ಸುದರ್ಶನ್‌ ಅವರ ಮಾತಿಗೆ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಕೂಡ ದನಿಗೂಡಿಸಿ, ‘ವಿದ್ಯಾ ಕೇಂದ್ರವಾದ ಜ್ಞಾನ­ಭಾರತಿ ಆವರಣವನ್ನು ಸ್ಮಶಾನ­ವಾಗಿಸಬಾರದು’ ಎಂದರು.

ಸಾಹಿತಿ ಡಾ.ಆರ್‌.ಕೆ. ನಲ್ಲೂರು ಪ್ರಸಾದ್‌ ಮಾತನಾಡಿ, ‘ಬದುಕಿದ ರೀತಿ ಏನೇ ಇರಬಹುದು. ಆದರೆ, ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ಹಾಗಾಗಿ ಹುಟ್ಟಿದಾಗ, ಸತ್ತಾಗ ಏನು ನಡೆ­ಯಿತು ಎಂಬ ವಿಚಾರ ಬೇಡ. ಬದುಕಿ­ದ್ದಾಗ ಎಷ್ಟು ಮುಖ್ಯವಾಗುತ್ತಾನೋ ಸತ್ತಾಗಲೂ ಅಷ್ಟೇ ಮುಖ್ಯವಾದರೆ ಆತ ನಿಜವಾದ ಮನುಷ್ಯ. ಅನಂತಮೂರ್ತಿ ಅವರು ಮುಖವಾಡ ಹೊತ್ತ ಸಾಹಿತಿ ಆಗಿರಲಿಲ್ಲ’ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.­ಶಂಕರಮೂರ್ತಿ, ಸಾಹಿತಿ ಬರಗೂರು ರಾಮ­ಚಂದ್ರಪ್ಪ ಮಾತನಾಡಿ­ದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಟಿ.ಎ.­ನಾರಾಯಣಗೌಡ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT