ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರೆಕ್ಸಿಟ್’ ಬೆಂಬಲಿಸಿದರೂ ಜಾಗತೀಕರಣ ತಪ್ಪದು

ಈ ವಿದ್ಯಮಾನ ಸೃಷ್ಟಿಸಿದ ಗೊಂದಲವು ಇನ್ನಷ್ಟು ಬದಲಾವಣೆ, ಅಸ್ಥಿರತೆಗೆ ಕಾರಣವಾಗಬಹುದು
Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಐರೋಪ್ಯ ಒಕ್ಕೂಟದಿಂದ ಹೊರ ನಡೆಯುವುದರ ಪರ ಬ್ರಿಟನ್ನಿನ ಜನ ಮತ ಚಲಾಯಿಸಿದ್ದರ ಆರ್ಥಿಕ ದುಷ್ಪರಿಣಾಮಗಳು ತಕ್ಷಣವೇ ಕಂಡುಬಂದವು. ಪೌಂಡ್ ಮೌಲ್ಯ ಮೂರು ದಶಕಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಕುಸಿಯಿತು. ಲಂಡನ್ನಿನ ಷೇರು ಮಾರುಕಟ್ಟೆ ಮಾರನೆಯ ದಿನ ವಹಿವಾಟು ಆರಂಭಿಸಿದಾಗ, ಅಲ್ಲಿನ ಮುಂಚೂಣಿ ಸೂಚ್ಯಂಕ ಶೇಕಡ 8ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿಯಿತು. 2008ರ ಆರ್ಥಿಕ ಹಿಂಜರಿತದ ದಿನಗಳಲ್ಲಿ ಕಂಡ ಕುಸಿತದ ನಂತರ, ಒಂದೇ ದಿನದಲ್ಲಿ ಸೂಚ್ಯಂಕ ಈ ಮಟ್ಟಿಗೆ ಕುಸಿದಿದ್ದು ಇದೇ ಮೊದಲು. ಇದನ್ನು ಆರ್ಥಿಕ ತಜ್ಞರು ಊಹಿಸಿದ್ದರು. ಅಲ್ಲದೆ, ಹೀಗಾಗುತ್ತದೆ ಎಂಬುದು ‘ಬ್ರೆಕ್ಸಿಟ್’ ಪರ ಮತ ಚಲಾಯಿಸಿದವರಿಗೆ ಮೊದಲೇ ಗೊತ್ತಿತ್ತು. ಆದರೆ ಅವರ ಕಾಳಜಿಯ ವಿಚಾರಗಳು ಬೇರೆಯದಾಗಿದ್ದವು. ‘ವಲಸೆ’ ಅವರನ್ನು ಬಾಧಿಸಿತ್ತು.

ವಲಸೆಯಿಂದಾಗಿ ಬ್ರಿಟಿಷ್ ಆರ್ಥಿಕತೆಗೆ ಒಳ್ಳೆಯದೇ ಆಗಿದೆ ಎಂಬುದನ್ನು ಹಲವು ಅಧ್ಯಯನಗಳು ಕಂಡುಕೊಂಡಿವೆ. ಆದರೆ ಬ್ರೆಕ್ಸಿಟ್ ಪರ ಮತ ಚಲಾಯಿಸಿದವರು ಬಹುಶಃ ಇದನ್ನು ಒಪ್ಪಲಿಲ್ಲ. ಅಥವಾ, ಇದರಿಂದ ತಮಗೆ ಒಳಿತಾಗಲಿಲ್ಲ ಎಂದು ಭಾವಿಸಿದರು. ವಲಸೆಯ ಪ್ರಯೋಜನಗಳಿಗಿಂತ ಅದರಿಂದಾದ ಸಮಸ್ಯೆಗಳೇ ಹೆಚ್ಚು ಎಂದು ಭಾವಿಸಿದರು. ಬ್ರೆಕ್ಸಿಟ್ ಪರ ಮತ ಚಲಾಯಿಸಿರುವುದಿಂದ ಪೆಟ್ಟು ಬಿದ್ದಿರುವುದು ಬ್ರಿಟಿಷ್ ಅರ್ಥ ವ್ಯವಸ್ಥೆಗೊಂದೇ ಅಲ್ಲ. ಜನ ಸ್ವಹಿತಾಸಕ್ತಿಗಳ ಆಧಾರದಲ್ಲಿ ಮತ ಚಲಾಯಿಸುತ್ತಾರೆ ಎಂಬುದನ್ನು ಇದು ತೋರಿಸಿದೆ. ಇದು ಆಧುನಿಕ ಉದಾರೀಕರಣ ವ್ಯವಸ್ಥೆಯ ನಂಬಿಕೆಗಳಿಗೆ ಬಿದ್ದ ಏಟು. ರಾಷ್ಟ್ರೀಯತೆ, ತಮ್ಮವರಲ್ಲದವರ ವಿರುದ್ಧ ಇರುವ ಸಿಟ್ಟು ಮತ್ತು ಪೂರ್ವಗ್ರಹಗಳ ಹಿಂದಿರುವುದು ತರ್ಕಹೀನ ವಿಚಾರಗಳು.

ಕಾಲ ಮುಂದಕ್ಕೆ ಸಾಗಿದಂತೆಲ್ಲ ಅವು ಸವಕಲಾಗುತ್ತವೆ ಎಂಬ ವಾದವನ್ನು ಕಳೆದ 50 ವರ್ಷಗಳ ಇತಿಹಾಸ, ಅದರಲ್ಲೂ ಯುರೋಪಿನ ಇತಿಹಾಸ, ನಂಬುವಂತೆ ಮಾಡಿದೆ. ಆದರೆ, ಈ ವಾದ ಗಟ್ಟಿಯಾಗಿಲ್ಲ ಎಂಬುದನ್ನು ಕಳೆದ ವಾರ ನಡೆದ ಜನಮತ ಗಣನೆ ಸ್ಪಷ್ಟವಾಗಿ ತೋರಿಸಿದೆ. ಬಹುಪಾಲು ಜನರಿಗೆ ಆರ್ಥಿಕತೆಗಿಂತ ಅಸ್ಮಿತೆಯೇ ಹೆಚ್ಚು ಪ್ರಮುಖವಾಗಿ ಕಂಡಿದೆ. ತಮ್ಮಲ್ಲಿ ‘ಸುರಕ್ಷಿತ, ಶಕ್ತಿಯುತ’ ಎಂಬ ಭಾವನೆ ಮೂಡಿಸುವ ಸಾಮಾಜಿಕ ವ್ಯವಸ್ಥೆ ಕಾಯ್ದುಕೊಳ್ಳುವ ಪರ ನಿಂತಿದ್ದಕ್ಕೆ ಅವರು ದೊಡ್ಡ ಬೆಲೆಯನ್ನೇ (ಈ ಪ್ರಕರಣದಲ್ಲಿ ಇದು ಅಕ್ಷರಶಃ ಸತ್ಯ) ತೆರಬೇಕಾಗುತ್ತದೆ. ಇದು ಬ್ರಿಟನ್ನಿಗೆ ಅಥವಾ ಈಗ ನಡೆದಿರುವ ಜನಮತ ಗಣನೆಗೆ ಮಾತ್ರ ಸೀಮಿತವಲ್ಲ. ಇದು ಈಗ ಜಗತ್ತಿನ ಎಲ್ಲ ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ ಕಂಡುಬರುತ್ತಿದೆ.

ವಲಸೆ ಎಂಬುದು ಎಲ್ಲೆಡೆ ಜನರನ್ನು ಕಾಡುತ್ತಿದೆ. ದೊಡ್ಡ ಸಂಖ್ಯೆಯ ನಾಗರಿಕರು, ಅದರಲ್ಲೂ ಮುಖ್ಯವಾಗಿ ಜಾಗತೀಕರಣದ ಆರ್ಥಿಕ ಒತ್ತಡಗಳಿಂದಾಗಿ ಸಮಸ್ಯೆಗೆ ತುತ್ತಾದವರು, ತಾವು ಅನುಭವಿಸಿದ ಬದಲಾವಣೆಗಳಿಗೆ ತಮ್ಮ ನಡುವಿನ ವಿದೇಶಿಯರೇ ಕಾರಣ ಎನ್ನುತ್ತಿದ್ದಾರೆ. ವಲಸೆಗೆ ತಡೆಯೊಡ್ಡುವುದರಿಂದ ಅವರ ಆರ್ಥಿಕ ಸ್ಥಿತಿ ಬಿಗಡಾಯಿಸುತ್ತದೆಯಾದರೂ, ಹಾಗೆ ಮಾಡುವುದು ತಮ್ಮ ಸಮಸ್ಯೆಗಳಿಗೆ ಪರಿಹಾರ ಎಂದು ಆ ಜನ ಭಾವಿಸುತ್ತಾರೆ. ಇಂಥ ನಂಬಿಕೆ ಯುರೋಪಿನಲ್ಲಿ ಮತ್ತು ವಿಶ್ವದ ಇತರೆಡೆ ಹೆಚ್ಚುತ್ತಿದ್ದರೂ, ಜನರಲ್ಲಿರುವ ಈ ಆತಂಕಕ್ಕೆ ತಮ್ಮ ಬಳಿ ಉತ್ತರ ಇಲ್ಲ ಎಂಬುದನ್ನು ಪ್ರಜಾತಾಂತ್ರಿಕ ಸರ್ಕಾರಗಳು ಮತ್ತೆ ಮತ್ತೆ ಹೇಳುತ್ತಿವೆ. ವಾಸ್ತವಕ್ಕೂ ಭಾವನೆಗಳಿಗೂ ಸ್ಪರ್ಧೆ ಸಾಧ್ಯವಿಲ್ಲವಲ್ಲ!

ವಲಸೆ ಇದೆ ಎಂದಾದರೆ ನೀವು ನಡೆಯುವ ಹಾದಿಯ ಪಕ್ಕದಲ್ಲಿ 1 ಲಕ್ಷ ಕೋಟಿ ಡಾಲರ್‌ (ಸುಮಾರು ₹ 67 ಲಕ್ಷ ಕೋಟಿ) ಇದೆ ಎಂಬುದಾಗಿ ಭಾವಿಸಿ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಮೈಕೇಲ್ ಕ್ಲೆಮೆನ್ಸ್. ವಲಸಿಗರ ಪಾಲಿಗೆ ಆಕರ್ಷಕವಾಗಿರುವ, ವಲಸಿಗರನ್ನು ಸ್ವಾಗತಿಸಲು ಸಿದ್ಧವಿರುವ ದೇಶ ತನ್ನ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಕಾರ್ಮಿಕರ ವಲಸೆಗೆ ನಿರ್ಬಂಧಗಳನ್ನು ಸಡಿಲಿಸುವುದರಿಂದ ಜಾಗತಿಕ ಅರ್ಥ ವ್ಯವಸ್ಥೆಗೆ ಬಲ ಬರುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಇಂಥ ಆಧಾರಗಳನ್ನು ಮತಗಣನೆಯ ವೇಳೆ ಲೆಕ್ಕಕ್ಕೆ ತೆಗೆದುಕೊಳ್ಳಲು ಆಗದು. ಅಲ್ಲಿ, ಜನರ ಮತಗಳು ಮಾತ್ರ ಲೆಕ್ಕಕ್ಕೆ ಬರುತ್ತವೆ. ವಲಸೆಯ ಪ್ರಯೋಜನಗಳು ಬಹುಪಾಲು ಸಂದರ್ಭಗಳಲ್ಲಿ ಗ್ರಹಿಕೆಗೆ ನಿಲುಕುವುದಿಲ್ಲ.

ವಲಸೆಗೆ ತೆರಬೇಕಾದ ಬೆಲೆ, ವಾಸ್ತವಕ್ಕಿಂತ ಹೆಚ್ಚಿನದಾಗಿ ಭಾಸವಾಗುತ್ತದೆ. ‘ವಲಸೆಯಿಂದಾಗಿ ಬ್ರಿಟನ್ ಅರ್ಥ ವ್ಯವಸ್ಥೆಗೆ ಕೆಟ್ಟದ್ದೇ ಆಗಿದೆ’ ಎಂಬ ಮಾತು ‘ಬ್ರೆಕ್ಸಿಟ್’ ಪರ ಮತ ಚಲಾಯಿಸಲು ಸಿದ್ಧರಾಗಿದ್ದ ಶೇಕಡ 47ರಷ್ಟು ಜನರಿಂದ ಬಂದಿತ್ತು. ಇದನ್ನು ಜೂನ್‌ 20ರಂದು ಇಪ್ಸೊಸ್/ಮೋರಿ ನಡೆಸಿದ ಸಮೀಕ್ಷೆ ಕಂಡುಕೊಂಡಿತ್ತು. ಆದರೆ, ವಲಸೆಯು ದೇಶದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಡಿಪಿ) ಹೆಚ್ಚಿಸಿತ್ತು ಎಂಬುದನ್ನು ಬ್ರಿಟನ್ನಿನ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಂಶೋಧನಾ ಸಂಸ್ಥೆಯ ಅಧ್ಯಯನ ಕಂಡುಕೊಂಡಿತ್ತು. ಅಲ್ಲದೆ, ವಲಸೆಯು ಸರ್ಕಾರಿ ಸೇವೆಗಳಾದ ಆರೋಗ್ಯ, ಪಿಂಚಣಿಯ ವೆಚ್ಚವನ್ನೂ ತಗ್ಗಿಸಿತ್ತು.

ಜನ ಪಾವತಿಸಬೇಕಾದ ತೆರಿಗೆ  ಮೊತ್ತ ಕಡಿಮೆಯಾಗಲೂ ಇದು ಕಾರಣವಾಗಿತ್ತು. ವಲಸೆಯು ಇಡೀ ದೇಶಕ್ಕೆ ಪ್ರಯೋಜನಕಾರಿ ಎಂದಮಾತ್ರಕ್ಕೆ, ಅದರಿಂದ ದೇಶದ ನಾಗರಿಕರಿಗೆಲ್ಲರಿಗೂ ಪ್ರಯೋಜನ ಆಗುತ್ತದೆ ಎನ್ನಲಾಗದು. ವಲಸಿಗರು ಕಡಿಮೆ ಸಂಖ್ಯೆಯಲ್ಲಿರುವ, ವೇತನ ಪ್ರಮಾಣ ಕೂಡ ಕಡಿಮೆ ಇರುವ ಪ್ರದೇಶಗಳು ‘ಹೊರಬರಬೇಕು’ ಎಂಬ ವಾದವನ್ನು ಪುರಸ್ಕರಿಸಿವೆ ಎನ್ನುವುದನ್ನು ‘ರೆಸಲ್ಯೂಷನ್ ಪ್ರತಿಷ್ಠಾನ’ದ ಟಾರ್ಸನ್ ಬೆಲ್‌ ಅವರು ನಡೆಸಿದ ಮತದಾನದ ಪ್ರದೇಶವಾರು ವಿಶ್ಲೇಷಣೆ ತೋರಿಸಿಕೊಟ್ಟಿದೆ. ವಿದೇಶಿಯರ ಕಾರಣದಿಂದ ಕೆಲಸ ಕಳೆದುಕೊಂಡಿರದ ಬ್ರಿಟಿಷ್ ಪ್ರಜೆಗಳೂ ತಮ್ಮ ಆರ್ಥಿಕ ಆತಂಕಗಳನ್ನು ‘ವಲಸೆ ವಿರೋಧಿ’ ಭಾವನೆಗಳ ರೂಪದಲ್ಲಿ ವ್ಯಕ್ತಪಡಿಸಿರಬಹುದು ಎಂಬುದನ್ನು ಇದು ಹೇಳುತ್ತದೆ.

‘ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ಜಾಗತಿಕ ಬಿಕ್ಕಟ್ಟುಗಳ ಪರಿಣಾಮಗಳಿಗೆ ಗುರಿಯಾಗಿರುವ ಪ್ರದೇಶಗಳಲ್ಲಿ ವಲಸೆ ವಿರೋಧಿ ಭಾವನೆ ಕಾಣುತ್ತದೆ’ ಎಂದು ಲಂಡನ್ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಫೆಲೊ ಆಗಿರುವ ಅಲೆಕ್ಸಾಂಡ್ರಾ ಸಿರೋನ್ ಹೇಳುತ್ತಾರೆ. ‘ವಾಸ್ತವ ಏನೇ ಇದ್ದರೂ, ಜಾಗತೀಕರಣದ ಸಮಸ್ಯೆಗಳನ್ನು ವಲಸೆಗೆ ಆರೋಪಿಸುವುದರಿಂದ ಮತದಾರರ ಭಾವನೆಗಳನ್ನು ಕೆರಳಿಸಲು ಸಾಧ್ಯ’ ಎಂದು ಅವರು ಹೇಳುತ್ತಾರೆ. ಹಾಗಾದರೆ, ಜನ ತಮ್ಮ ಆರ್ಥಿಕ ಆತಂಕಗಳನ್ನು ವಿದೇಶಿಯರ ಮೇಲೆ ತೋರಿಸುವುದು ಏಕೆ? ಇದಕ್ಕೆ ಸೂಕ್ತ ಉತ್ತರ ಬಹುಶಃ ಸರಳವಾಗಿರಬಹುದು: ವಲಸಿಗರು ತಮ್ಮ ಹೊಸ ದೇಶವನ್ನು ಹಲವು ಸಣ್ಣ ವಿಧಗಳಲ್ಲಿ, ಆದರೆ ಗುರುತಿಸುವ ರೀತಿಯಲ್ಲಿ ಬದಲಾಯಿಸುತ್ತಾರೆ. ಅವರು ಸ್ಥಳೀಯರ ಪಾಲಿನ ಕೆಲಸವನ್ನು ಪಡೆಯದಿರಬಹುದು. ಆದರೆ ಅವರು ತರುವ ಬದಲಾವಣೆಗಳು ಕೆಲವರಲ್ಲಿ ಆತಂಕ ಮೂಡಿಸುತ್ತವೆ.

ಕೆಲವು ಬದಲಾವಣೆಗಳು ಖಂಡಿತವಾಗಿ ಒಳ್ಳೆಯದೇ ಆಗಿರುತ್ತವೆ. ಈ ಸಾಮಾಜಿಕ ಬದಲಾವಣೆಗಳು, ಆರ್ಥಿಕ ಒತ್ತಡಗಳಿಂದ ಅಸ್ಥಿರಗೊಂಡವರ ಮನದಲ್ಲಿ ತಾವೇನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವ ಮೂಡಿಸುತ್ತವೆ. ತಾವು ಬಹುವಾಗಿ ಪ್ರೀತಿಸುತ್ತಿದ್ದ ಮೌಲ್ಯವೊಂದು ದೇಶದಿಂದ ಮರೆಯಾಗುತ್ತಿದೆ, ದೇಶ ತಮಗೆ ಗೊತ್ತಾಗದ ಭವಿಷ್ಯದೆಡೆ ಸಾಗುತ್ತಿದೆ ಎಂಬ ಭಾವವನ್ನೂ ಉದ್ದೀಪಿಸುತ್ತದೆ. ‘ಬ್ರೆಕ್ಸಿಟ್’ ಪರವಾಗಿದ್ದ ಅಭಿಯಾನ ಈ ಆತಂಕಗಳನ್ನು ಉದ್ದೇಶಿಸಿ ಮಾತನಾಡಿತು. ವಲಸೆ ಪ್ರಕ್ರಿಯೆಯು (ವಲಸೆ ಎಂದರೆ ಬಿಳಿಯರಲ್ಲದವರ ವಲಸೆ ಎಂಬ ಅರ್ಥವನ್ನೂ ಕೆಲವು ಸಂದರ್ಭಗಳಲ್ಲಿ ಹೊರ ಹೊಮ್ಮಿಸಿತು) ಬ್ರಿಟನ್ ಪಾಲಿಗೆ ನೋವಿನ ಸಂಗತಿಯಾಗಿ ಪರಿಣಮಿಸಿದೆ ಎಂಬ ವಾದ ಮಂಡಿಸಿತು.

ಅಭಯ ಬೇಡಿ ಬಂದವರು ನಡೆಸಿದ ಅಪರಾಧ ಕೃತ್ಯಗಳನ್ನು ವರದಿ ಮಾಡಿದ ಬ್ರಿಟಿಷ್ ಟ್ಯಾಬ್ಲಾಯ್ಡ್‌ಗಳು, ನಿರಾಶ್ರಿತರು ಕೀಟಗಳ ಗುಂಪಿದ್ದಂತೆ, ಅವರು ದೇಶವನ್ನು ಮುಳುಗಿಸಬಹುದು ಎಂಬ ಎಚ್ಚರಿಕೆ ನೀಡಿದವು. ಈ ವಿದ್ಯಮಾನ ಬ್ರಿಟನ್‌ಗೆ ಮಾತ್ರ ಸೀಮಿತವಲ್ಲ. 2010ರ ನಂತರ ಮೆಕ್ಸಿಕೊದಿಂದ ಅಮೆರಿಕಕ್ಕೆ ವಲಸೆ ಬಂದವರ ಸಂಖ್ಯೆ ಸೊನ್ನೆ. ಆದರೂ, ‘ದಕ್ಷಿಣದ ಗಡಿಯಲ್ಲಿ ಬೇಲಿ ನಿರ್ಮಿಸುವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದಾಗ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಮತದಾರರು ತಮ್ಮ ಸಮಸ್ಯೆಗಳೆಲ್ಲ ಪರಿಹಾರ ಆಗಿಬಿಡುತ್ತವೆ ಎಂಬಂತೆ ಖುಷಿಪಟ್ಟರು. ಟ್ರಂಪ್‌ ಅವರ ಬೆಂಬಲಿಗರಿಗೂ, ಯುನೈಟೆಡ್‌ ಕಿಂಗ್‌ಡಮ್‌ನ ಇಂಡಿಪೆಂಡೆನ್ಸ್‌ ಪಾರ್ಟಿಯ ಬೆಂಬಲಿಗರಿಗೂ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಇನ್ನೊಬ್ಬ ಫೆಲೊ ಬ್ರಯಾನ್ ಕ್ಲಾಸ್ ಹೇಳುತ್ತಾರೆ.

‘ಈ ಎರಡೂ ಗುಂಪುಗಳು ಶ್ರಮಿಕ ವರ್ಗಕ್ಕೆ ಸೇರಿದ್ದಿರಬಹುದು. ಜಾಗತಿಕ ಅರ್ಥವ್ಯವಸ್ಥೆಯಿಂದಾಗಿ ತಾವು ಹಿಂದೆ ಬಿದ್ದಿದ್ದೇವೆ ಎಂದು ಅವರು ಭಾವಿಸಿರಬಹುದು’ ಎಂದು ಕ್ಲಾಸ್ ಹೇಳಿದರು. ಆಸ್ಟ್ರೇಲಿಯಾದಲ್ಲಿ ವಲಸೆ ವಿರೋಧಿ ಭಾವನೆಯು ಆಗ್ನೇಯ ಏಷ್ಯಾದಿಂದ ಬರುವವರನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದೆ. ಅವರನ್ನು ಇಲ್ಲಿ ‘ದೋಣಿ ಮನುಷ್ಯರು’ ಎಂದು ಹೀಗಳೆಯಲಾಗುತ್ತಿದೆ. ಆಸ್ಟ್ರೇಲಿಯಾ ಗಡಿಯೊಳಕ್ಕೆ ವಲಸಿಗರನ್ನು ಬಿಟ್ಟುಕೊಳ್ಳುವ ಬದಲು, ಒತ್ತಡಕ್ಕೆ ಮಣಿದಿರುವ ಅಲ್ಲಿನ ಸರ್ಕಾರ ಕಡಲ ತಡಿಯಿಂದ ತುಸು ದೂರದಲ್ಲಿ ಅವರನ್ನು ಅನಿಶ್ಚಿತ ಕಾಲದವರೆಗೆ ಬಂಧನದಲ್ಲಿ ಇರಿಸುತ್ತಿದೆ. ಬಂಧನದಲ್ಲಿರುವ ವಲಸಿಗರ ಮೇಲೆ ಅತ್ಯಾಚಾರ, ಹಲ್ಲೆ ನಡೆಯುತ್ತಿವೆ ಎಂಬ ಆರೋಪಗಳು ಇವೆ.ವಲಸೆ ವಿರೋಧಿ ಭಾವನೆಗಳು ಹಲವು ರೀತಿಯಲ್ಲಿ ವ್ಯಕ್ತವಾಗಬಹುದು.

ವಲಸಿಗರ ಮೇಲೆ ಹಲ್ಲೆ ನಡೆಯಬಹುದು. ಅವರು ಕಾನೂನಿನ ಸುದೀರ್ಘ ಪ್ರಕ್ರಿಯೆಯಿಂದಾಗಿಯೂ ಸಮಸ್ಯೆಗೆ ಸಿಲುಕಬಹುದು. ಆರ್ಥಿಕ ಸಮಸ್ಯೆಗಳ ಜೊತೆ ರಾಜಕೀಯ ಸವಾಲುಗಳೂ ಎದುರಾಗಬಹುದು. ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಂಕುಶ ಹಾಕಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಹಂಗರಿ ಅಧ್ಯಕ್ಷ ವಿಕ್ಟರ್ ಒರ್ಬನ್ ಅವರ ಜನಪ್ರಿಯತೆಯನ್ನು ಅವರ ವಲಸೆ ವಿರೋಧಿ ನೀತಿಗಳು ಹೆಚ್ಚಿಸಿವೆ. ಅಲ್ಲದೆ, ತೀರಾ ಬಲಪಂಥೀಯ ಜೊಬಿಕ್ ಪಕ್ಷದ ಜನಪ್ರಿಯತೆ ಕೂಡ ಅಲ್ಲಿ ಈ ಕಾರಣಕ್ಕೇ ಹೆಚ್ಚಾಗಿದೆ. ವಿದೇಶಿಯರನ್ನು ವಿರೋಧಿಸಲು ವೇದಿಕೆ ಕಲ್ಪಿಸುವ, ‘ಗ್ರೀಸ್‌ ಇರುವುದು ಗ್ರೀಕರಿಗೆ ಮಾತ್ರ’ ಎಂಬ ಘೋಷಣೆಗಳನ್ನು ಕೂಗುವ ನವ–ಫ್ಯಾಸಿಸ್ಟ್‌ ಗೋಲ್ಡನ್ ಡಾನ್ ಪಕ್ಷವು ಗ್ರೀಸ್‌ ಸಂಸತ್ತಿನಲ್ಲಿ ಮೂರನೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಆ ಪಕ್ಷದ ಬಹುಪಾಲು ನಾಯಕರು ಕೊಲೆ ಆರೋಪದ ಅಡಿ ವಿಚಾರಣೆ ಎದುರಿಸುತ್ತಿದ್ದರೂ, 2015ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಐದು ಲಕ್ಷ ಮತ ಗಿಟ್ಟಿಸಿದೆ. ಸಾಮಾಜಿಕ ಬದಲಾವಣೆಗಳು ಹಾಗೂ ಆರ್ಥಿಕ ಒತ್ತಡಗಳು ವಲಸೆ ವಿರೋಧಿ ಭಾವನೆಗಳನ್ನು ಹೆಚ್ಚಿಸುತ್ತವೆ. ‘ಬ್ರೆಕ್ಸಿಟ್’ ಪರ ನಿಂತ ಸಮುದಾಯಗಳು ಅನುಭವಿಸಿದ್ದು ಇದನ್ನೇ. ಏನೇ ಇರಲಿ, ಜಾಗತೀಕರಣ ಎಂಬುದು ಓಡಿಹೋಗುವುದಿಲ್ಲ. ಅದು ತರುವ ಬದಲಾವಣೆಗಳಿಂದ ತಪ್ಪಿಸಿಕೊಳ್ಳಲೂ ಆಗದು. ವಲಸೆ ಹೆಚ್ಚುವುದನ್ನೂ ನಿಲ್ಲಿಸಲಾಗದು. ಹಣಕಾಸಿನ ಆಟದಲ್ಲಿ ಗೆದ್ದವರು, ಸೋತವರು ಎಂಬ ವಿಭಜನೆ ಕೂಡ ಇದ್ದೇ ಇರುತ್ತದೆ. ಬ್ರೆಕ್ಸಿಟ್‌ ಸೃಷ್ಟಿಸಿದ ಗೊಂದಲವೇ ಇನ್ನಷ್ಟು ಬದಲಾವಣೆ, ಒತ್ತಡ ಹಾಗೂ ಅಸ್ಥಿರತೆಗೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT