ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಸ್ವಾಧೀನ ಕಾಯ್ದೆಗೆ ಶೀಘ್ರ ನಿಮಯ’

Last Updated 27 ಜೂನ್ 2014, 20:02 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಹೊಸ ಭೂ ಸ್ವಾಧೀನ ಕಾಯ್ದೆ’ಗೆ ಸಂಬಂಧಿಸಿದ ನಿಯಮಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ಅಂತಿಮ­ಗೊಳಿ­ಸ­ಲಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಶುಕ್ರವಾರ ಹೇಳಿದರು.

ಹೊಸ ಭೂ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಅಭಿಪ್ರಾಯ ಪಡೆಯಲು ಗ್ರಾಮೀಣಾ­ಭಿವೃದ್ಧಿ ಸಚಿವ ನಿತಿನ್‌ ಗಡ್ಕರಿ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಶ್ರೀನಿವಾಸ ಪ್ರಸಾದ್ ಪತ್ರಕರ್ತರ ಜತೆ ಮಾತನಾಡಿದರು.

ರಾಜ್ಯ ಸರ್ಕಾರ ಜೂನ್‌ 21ರಂದು ಕರಡು ನಿಯಮಾವಳಿ ಸಿದ್ಧಪಡಿಸಿ ಸಾರ್ವ­ಜನಿಕ ಚರ್ಚೆಗೆ ಬಿಡುಗಡೆ ಮಾಡಿದೆ. ಜನರಿಂದ ಬಂದ ಅಭಿಪ್ರಾಯ­ಗಳನ್ನು ಪರಿ­ಶೀಲಿಸಿದ ಬಳಿಕ ನಿಯಮಾವ­ಳಿಗಳನ್ನು ಅಂತಿಮ­ಗೊಳಿಸಿ ಅಧಿಕೃತವಾಗಿ ಪ್ರಕಟಿಸ­ಲಾಗುವುದು ಎಂದರು.
ಭೂ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದ ನಿಯಾಮವಳಿಗಳು ಈ ವರ್ಷದ ಜನವರಿ ಒಂದರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಸಾರ್ವಜನಿಕ ಹಾಗೂ ಖಾಸಗಿ ಉದ್ದೇಶಗಳಿಗೆ ಜಮೀನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪಾರದ­ರ್ಶಕವಾಗಿ ನಡೆಯಲಿದೆ. ರೈತರಿಗೆ ನ್ಯಾಯ­ಸಮ್ಮತ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದರು.

ಹೊಸ ಕಾಯ್ದೆಗೆ ಅನುಗುಣವಾಗಿ ರಾಜ್ಯದ ಬಿಡಿಎ, ಕೆಎಚ್‌ಬಿ ಹಾಗೂ ಕೆಐಎಡಿಬಿ ಕಾಯ್ದೆಗಳನ್ನು ಮಾರ್ಪಾಡು ಮಾಡಲಾಗುವುದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆ ರೈತರಿಗೆ ಪರಿಹಾರ, ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಅತ್ಯುತ್ತಮ­ವಾಗಿದೆ. ಆದರೆ, ರೈಲ್ವೆ ಹಾಗೂ ಹೆದ್ದಾರಿ ನಿರ್ಮಾಣದಂಥ ಸಾರ್ವಜನಿಕ ಉದ್ದೇಶ­ಗಳಿಗೆ ಭೂಮಿ ವಶಪಡಿಸಿಕೊಳ್ಳಲು ರೈತರ ಅನುಮತಿ ಪಡೆಯಬೇಕೆಂಬ ನಿಬಂಧನೆ­ಗಳನ್ನು ಬದಲಾವಣೆ ಮಾಡ ಬೇಕೆಂದು ರಾಜ್ಯ ಸರ್ಕಾರ   ಸಲಹೆ ಮಾಡಿರು­ವುದಾಗಿ ವಿವರಿಸಿದರು.

ಐದು ನೂರು ಎಕರೆವರೆಗೆ ಜಮೀನು ಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಪುನರ್ವಸತಿ ಯೋಜನೆ ಕಡ್ಡಾಯ ಮಾಡ­ಬಾರದು. ಇದಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಇದನ್ನು ಅನ್ವಯಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಮೀನು ಸ್ವಾಧೀನ ಸಂದರ್ಭಗಳಲ್ಲಿ ಸಾಮಾಜಿಕ ಪರಿಣಾಮ ಕುರಿತು ನಡೆ­ಯುವ ವಿಶ್ಲೇಷಣೆಗೆ ನಿಗದಿಪಡಿಸಿರುವ ಸಮಯವನ್ನು ತಗ್ಗಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯ ಮಾಡಿದೆ ಎಂದು ಶ್ರೀನಿವಾಸ ಪ್ರಸಾದ್‌ ನುಡಿದರು.

ಸ್ವಾಧೀನ ಮಾಡಿಕೊಂಡ ಜಮೀನನ್ನು ನಿಗದಿತ ಅವಧಿಯೊಳಗೆ ನಿರ್ದಿಷ್ಟ ಉದ್ದೇಶಕ್ಕೆ ಬಳಸದಿದ್ದರೆ ಅಂಥ ಭೂಮಿ­ಯನ್ನು ಸರ್ಕಾರದ ಭೂ ಬ್ಯಾಂಕ್‌ಗೆ ಹಿಂತಿರುಗಿಸಲು ಅವಕಾಶ ಇರಬೇಕು. ಮೂಲ ಮಾಲೀಕರಿಗೆ ವಾಪಸ್‌ ಮಾಡ­ಬಾರದು ಎನ್ನುವುದು ರಾಜ್ಯ ಸರ್ಕಾರದ ನಿಲುವಾಗಿದೆ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದರು.

ಭೂ ಸ್ವಾಧೀನ ಕಾಯ್ದೆಯಲ್ಲಿರುವ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸ­ಬೇಕು ಎಂದು ಕರ್ನಾಟಕ, ರಾಜಸ್ತಾನ ಸೇರಿ­ದಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿವೆ. ನಮ್ಮ ಸಲಹೆಗಳನ್ನು ಕೇಳಿರುವ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದು ಸಚಿವ ಶ್ರೀನಿವಾಸ ಪ್ರಸಾದ್‌ ನುಡಿದರು.

ಹಿಂದಿನ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆ ಕುರಿತು ಬಹುತೇಕ ಎಲ್ಲ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಕಂದಾಯ ಸಚಿವರು ಬಣ್ಣಿಸಿದರು. ಕರ್ನಾಟಕ ಭೂ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿತು. ಗುಜರಾತ್‌, ಮಹಾರಾಷ್ಟ್ರ ಹಾಗೂ ತ್ರಿಪುರಾ ಭೂ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಿರುವ ಇತರ ರಾಜ್ಯಗಳು ಎಂದು ಪ್ರಸಾದ್
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT