ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗು ಬೇಕು, ಅಮ್ಮ ಬೇಡ!’

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ತಮ್ಮ ದೀರ್ಘಕಾಲದ ಗೆಳತಿ ಲೂಲಿಯಾಳ ಜೊತೆ ಇದೇ ಡಿಸೆಂಬರ್‌ನಲ್ಲಿ ಸಲ್ಮಾನ್‌ ಖಾನ್‌ ಮದುವೆಯಾಗಲಿದ್ದಾರೆ ಎಂದು ಮಾಧ್ಯಮಗಳಲ್ಲೆಲ್ಲ ಸುದ್ದಿ ಬಿತ್ತರ ಆಗುತ್ತಿರುವ ಬೆನ್ನಲ್ಲೇ ಇವೆಲ್ಲಾ ಗಾಳಿಸುದ್ದಿ ಎಂದು ಬಾಲಿವುಡ್‌ನ ಮೋಸ್ಟ್‌ ವಾಂಟೆಡ್‌ ಬ್ಯಾಚ್ಯುಲರ್‌ ಸಲ್ಲು ತುಂಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ ಮದುವೆ ಬಗ್ಗೆ ಮೂರನೇ ವ್ಯಕ್ತಿ ಹೇಳುವ ಅವಶ್ಯಕತೆ ಇಲ್ಲ. ಹಾಗೇನಾದರೂ ಮದುವೆ ಫಿಕ್ಸ್ ಆದರೆ ನಾನೇ ಹೇಳಿಬಿಡುತ್ತೇನೆ’ ಎಂದಿದ್ದಾರೆ. ಇದೇ ಬೇಸರದ ನಡುವೆ ಹಾಸ್ಯ ಚಟಾಕಿ ಸಿಡಿಸಿರುವ ಅವರು, ‘ನೋಡಿ.

ನನಗೆ ಮದುವೆ ಬೇಡ, ಆದರೆ ಮಕ್ಕಳೆಂದರೆ ತುಂಬಾ ಇಷ್ಟ. ಮಗು ಬೇಕು. ಆದರೇನು ಮಾಡುವುದು? ಮಗು ಬೇಕು ಎಂದರೆ ಅದರ ಜೊತೆ ಮಗುವಿನ ಅಮ್ಮನೂ ಬಂದುಬಿಡುತ್ತಾಳಲ್ಲ? ಅದಕ್ಕೇನೆ ಸದ್ಯ ಮದುವೆ ಬಗ್ಗೆ ಚಿಂತನೆ ಮಾಡಿಲ್ಲ’ ಎಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. 

‘ಅಷ್ಟಕ್ಕೂ ನನಗೆ ಮಕ್ಕಳು ಬೇಕೇ ಬೇಕು ಎಂದರೆ ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆಯುತ್ತೇನೆ. ನನಗೆ ಮಗು ಕೊಡಲು ಬಹಳ ಜನ ಮುಂದೆ ಬರುತ್ತಾರೆ ಬಿಡಿ.

ಆ ವಿಶ್ವಾಸ ನನಗಿದೆ’ ಎಂದಿರುವ ಸಲ್ಲುಮಿಯಾ, ‘ಇದನ್ನೆಲ್ಲಾ ತಮಾಷೆಗೆ ಹೇಳುತ್ತಿದ್ದೇನೆ ಮತ್ತೆ. ಇದನ್ನೂ ದೊಡ್ಡ ಸುದ್ದಿ ಮಾಡಿಬಿಡಬೇಡಿ’ ಎಂದು ಹೇಳುವುದನ್ನು ಮರೆಯಲಿಲ್ಲ!

ಮದುವೆಯ ಗಾಳಿ ಸುದ್ದಿ ಬಗ್ಗೆ ಮಾತನಾಡಿರುವ ಅವರು ‘ಈ ಸುದ್ದಿ ಹೇಗೆ ಹರಡಿದೆ ಎಂದು ತಿಳಿದಿಲ್ಲ. ಅಷ್ಟಕ್ಕೂ ಮದುವೆಯಾಗಬೇಕೆಂದರೆ ಪತಿಯಾಗಿ ಕೆಲವೊಂದು ಜವಾಬ್ದಾರಿಗಳು ಇರುತ್ತವೆ. ಆದರೆ ದಿನದಲ್ಲಿ 24 ಗಂಟೆ ಸಾಕಾಗಲ್ಲ ಎನ್ನುವವರಲ್ಲಿ ನಾನೂ ಒಬ್ಬ. ನನ್ನ ಕೆಲಸದ ಒತ್ತಡದ ನಡುವೆ ಮನೆಗೆ ಹೋಗುವುದು, ಪತಿಯ ಕರ್ತವ್ಯ ನಿಭಾಯಿಸುವುದು ನನಗೆ ಬಹಳ ಕಷ್ಟ.

ಸದಾ ಚಿತ್ರೀಕರಣದಲ್ಲಿ ಬಿಝಿ ಇರುತ್ತೇನೆ. ಚಿತ್ರೀಕರಣದ ನಡುವೆಯೇ ವೇಳೆ ಹೊಂದಿಸಿಕೊಂಡು ‘ಕಲರ್ಸ್’ ಹಿಂದಿ ವಾಹಿನಿಯಲ್ಲಿ ಶುರುವಾಗಲಿರುವ ಬಿಗ್‌ಬಾಸ್‌ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತೇನೆ. ಅನೇಕ ಜಾಹೀರಾತುಗಳಿಗೂ ಒಪ್ಪಿಕೊಂಡಿರುವ ಕಾರಣ, ಅದರ ಶೂಟಿಂಗ್‌ ಬೇರೆ. ಇವೆಲ್ಲಾ ಇರುವಾಗ ಪತಿಯ ಜವಾಬ್ದಾರಿ ನಿರ್ವಹಿಸಲು ಹೇಗೆ ಸಾಧ್ಯ?’ ಎಂದಿದ್ದಾರೆ ಸಲ್ಲು.

‘ಬೇರೆ ನಟರೂ ಇಷ್ಟೇ ಬಿಝಿ ಇರುತ್ತಾರಲ್ಲ, ಆದರೂ ಅವರೆಲ್ಲಾ ಮದುವೆಯಾಗುತ್ತಿದ್ದಾರಲ್ಲ’ ಎಂಬ ಪತ್ರಕರ್ತರ ಮಾತಿಗೆ ಉತ್ತರಿಸಿರುವ 50ವರ್ಷದ ಸಲ್ಲು, ‘ನೋಡಿ ಅವರೆಲ್ಲ ಯಾವಾಗ ಮದುವೆಯಾಗಬೇಕೋ ಆ ಸಮಯಕ್ಕೆ ಸರಿಯಾಗಿ ಆಗಿದ್ದಾರೆ. ಆದರೆ ಈಗ ನಾನಿರುವ ವಯಸ್ಸಿನಲ್ಲಿ ಇವೆಲ್ಲಾ ರಿಸ್ಕ್ ತೆಗೆದುಕೊಳ್ಳುವುದು ಕಷ್ಟ. 50 ವರ್ಷ ಎಂದರೆ ಕಮ್ಮಿ ಅಲ್ಲ. ಕೊನೆ ಪಕ್ಷ ಭಾರತದಲ್ಲಿ ಅಂತೂ ಇದು ಮದುವೆಯ ವಯಸ್ಸು ಅಲ್ಲ’ ಎಂದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT