ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತಾಂತರದಲ್ಲಿ ಸರ್ಕಾರ, ಬಿಜೆಪಿ ಪಾತ್ರವಿಲ್ಲ’

Last Updated 22 ಡಿಸೆಂಬರ್ 2014, 10:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮತಾಂತರ ವಿವಾದ ಸಂಬಂಧ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿರುವ ಸರ್ಕಾರ ಸೋಮವಾರ ಮೌನ ಮುರಿದಿದೆ.

ಮತಾಂತರದಂಥ ಕೃತ್ಯಗಳಲ್ಲಿ ಸರ್ಕಾರವೂ ತೊಡಗಿಲ್ಲ ಬಿಜೆಪಿಯೂ ತೊಡಗಿಲ್ಲ. ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ಸದಸ್ಯ ಕೆ.ಸಿ.ವೇಣುಗೋಪಾಲ್‌ ಅವರು ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧಪಕ್ಷಗಳ ಬೆಂಬಲದೊಂದಿಗೆ  ಶೂನ್ಯವೇಳೆಯಲ್ಲಿ  ಮತಾಂತರ ವಿಷಯವನ್ನು ಪ್ರಸ್ತಾಪಿಸಿದರು.

ಈ ವೇಳೆ, ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು, ‘ಮತಾಂತರ ಅಥವಾ ಮರುಮತಾಂತರವನ್ನು ಸರ್ಕಾರ ಬೆಂಬಲಿಸುವುದಿಲ್ಲ. ಇಡೀ ದೇಶವು ಶಾಂತಿಯುತವಾಗಿದೆ. ಆದರೆ ಕೆಲವು ಜನರು ಅಸಂತುಷ್ಟರಾಗಿದ್ದಾರೆ. ಇದರಲ್ಲಿ ಸರ್ಕಾರ ಹಾಗೂ  ಪಕ್ಷವನ್ನು (ಬಿಜೆಪಿ) ಎಳೆದು ತರಲಾಗಿದೆ. ಇದನ್ನು ಯಾರೋ ವೈಯಕ್ತಿಕ ವ್ಯಕ್ತಿ ಮಾಡಿದ್ದರೆ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು. ನೀವು  ರಾಜಕೀಯ ಮಾಡುವುದಿದ್ದರೆ ಹೊರಗೆ ಮಾಡಿ. ನೀವು ಹೀಗೆ ಆರೋಪ ಮಾಡಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.

ಕೇರಳದಲ್ಲಿ ಇತ್ತೀಚೆಗೆ ನಡೆದಿರುವ ಮತಾಂತರ ವಿಷಯದ ಬಗ್ಗೆ ವೇಣುಗೋಪಾಲ್‌ ಅವರು ಪ್ರಸ್ತಾಪಿಸಿದಾಗ, ‘ಈ ಸಂಬಂಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಿತ್ತು. ಅಲ್ಲದೇ ಅಲ್ಲಿರುವುದು ವೇಣುಗೋಪಾಲ್ ಅವರ ಪಕ್ಷ  (ಕಾಂಗ್ರೆಸ್‌) ಎಂಬುದು ದುರದೃಷ್ಟಕರ. ಕ್ರಮಕೈಗೊಳ್ಳದಂತೆ ಕಾಂಗ್ರೆಸ್ ಸರ್ಕಾರವನ್ನು ಯಾರು ತಡೆದರು?’ ಎಂದು ಪ್ರಶ್ನಿಸಿದರು.

ಖರ್ಗೆ ಗುಡುಗು: ಇದಕ್ಕೆ ಪ್ರತ್ಯುತ್ತರ ನೀಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ‘ವಿವಿಧ ರಾಜ್ಯಗಳಲ್ಲಿ ‘ಮರಳಿ ಮನೆಗೆ’ (ಘರ್‌ ವಾಪಸಿ) ಎಂಬಂಥ ಘಟನೆಗಳು ನಿತ್ಯವೂ ನಡೆಯುತ್ತಿವೆ. ಸರ್ಕಾರ ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತಿದೆ’ ಎಂದು ಆರೋಪಿಸಿದರು.

ಈ ವೇಳೆ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಸದಸ್ಯರು ತೀವ್ರ ವಾಗ್ದಾಳಿಯಲ್ಲಿ ತೊಡಗಿದರು. ಬಳಿಕ ಉಪಸಭಾಧ್ಯಕ್ಷ ಎಂ.ತಂಬಿದೊರೈ ಅವರು ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT