ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರು ಮತಾಂತರವೊಂದನ್ನೇ ನಿಷೇಧಿಸಲಾಗದು’

Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಮತಾಂತರ ಇರುವಲ್ಲಿ ಮರು ಮತಾಂತರ ಕೂಡ ಇದ್ದೇ ಇರುತ್ತದೆ. ಮರು ಮತಾಂತರವನ್ನು ಮಾತ್ರ ಕಾನೂನಿನ ಮೂಲಕ ನಿಷೇಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಅಂಗವಾಗಿ ಬಿಜೆಪಿ ರಾಜ್ಯ ಘಟಕ ಬೆಂಗಳೂರಿನಲ್ಲಿ ಗುರುವಾರ ಆಯೋಜಿ­ಸಿದ್ದ ‘ಉತ್ತಮ ಆಡಳಿತ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮತಾಂತರ ನಡೆಯುತ್ತಿ­ರುವುದು ಇದೇ ಮೊದಲಲ್ಲ, ನೂರಾರು ವರ್ಷ­ಗಳಿಂದ ದೇಶದಲ್ಲಿ ಮತಾಂತರ ನಡೆಯುತ್ತಿದೆ. ಮತಾಂತರಕ್ಕೆಂದು ನೂರಾರು ಕೋಟಿ ರೂಪಾಯಿ ಬಳಸಲಾಗಿದೆ ಎಂದರು.

ಸಂಘ ಪರಿವಾರದ ಕೆಲವು ಸಂಘಟನೆಗಳು ‘ಘರ್ ವಾಪಸಿ’ (ಮರಳಿ ಮನೆಗೆ) ಹೆಸರಿನ ಕಾರ್ಯ­ಕ್ರಮದ ಮೂಲಕ ಕ್ರೈಸ್ತರು ಮತ್ತು ಮಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂಬ ವಿರೋಧ ಪಕ್ಷಗಳ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಮೂಲ ಧರ್ಮಕ್ಕೆ ಮರಳುವ ಇಚ್ಛೆಯನ್ನು ಯಾರಾದರೂ ವ್ಯಕ್ತಪಡಿಸಿದರೆ ಅದನ್ನು ವಿರೋಧಿ­ಸುವ ಹಕ್ಕು ಇತರರಿಗೆ ಇಲ್ಲ’ ಎಂದು  ಹೇಳಿದರು.

ಮಠ ಲಗಾಮು:  ಮಠಗಳಿಗೆ ಆಡಳಿತ ಅಧಿಕಾರಿ ನೇಮಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಯ್ಡು, ‘ದೇಶದ ಎಲ್ಲ ಕಡೆಗಳಲ್ಲೂ ಇರುವ ಹಿಂದೂ ಮಠಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಲುವನ್ನು ಕಾಂಗ್ರೆಸ್ ಹೊಂದಿದೆಯೇ? ಈ ಕುರಿತು ಕಾಂಗ್ರೆಸ್ಸಿನ ವರಿಷ್ಠರು ಪ್ರತಿಕ್ರಿಯೆ ನೀಡುತ್ತಾರೆಯೇ?’ ಎಂದು ಪ್ರಶ್ನಿಸಿದರು.

‘ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತ­ರಾಗಿ­ರುವ ಕಾರಣ, ಇತರ ಎಲ್ಲ ಧರ್ಮಗಳನ್ನು ಗೌರವದಿಂದ ಕಾಣಲಾಗುತ್ತಿದೆ. ಆದರೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಇಂಥ ಸ್ಥಿತಿ ಇಲ್ಲ. ಹಿಂದುತ್ವ ಎಂಬುದು ಪೂರ್ವಿಕರಿಂದ ಬಂದಿರುವ ಜೀವನ ಪದ್ಧತಿ. ನಿಮ್ಮ ಧರ್ಮದ ಅನುಸಾರ ಜೀವಿಸಿ. ಆದರೆ ಭಾರತವನ್ನು ಪ್ರೀತಿಸಿ ಎಂಬುದು ನಮ್ಮ ತತ್ವ’ ಎಂದು ಹೇಳಿದರು.

ಹಿಂದೂಗಳಿಗೂ ಹಕ್ಕಿದೆ
ಇತರ ಧರ್ಮಗಳಿಗೆ ಸೇರಿದವರು ಹಿಂದೂ­ಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂದಾ­ದರೆ, ಮರು ಮತಾಂತರದ ಹಕ್ಕು ಹಿಂದೂ­ಗಳಿಗೂ ಇದೆ. ಆದರೆ ಮತಾಂತರ ಮತ್ತು ಮರು ಮತಾಂತರ ಎರಡನ್ನೂ ಬೆಂಬಲಿಸದೆ ಇರಲು ಎನ್‌ಡಿಎ ಸರ್ಕಾರ ಬದ್ಧ.
- ಕೇಂದ್ರ ಸಚಿವ ವೆಂಕಯ್ಯ ನಾಯ್ಡು
* * *

ಮರು ಮತಾಂತರ ಅಪಾಯಕಾರಿ: ದೇವೇಗೌಡ
ಭಟ್ಕಳ: ಮರು ಮತಾಂತರ ಸೂಕ್ಷ್ಮ ವಿಷಯ­ವಾಗಿದ್ದು, ಇದು ದೇಶದಲ್ಲಿ ದೊಡ್ಡ ಗೊಂದಲ ಹಾಗೂ ಅಪಾಯ ಸೃಷ್ಟಿಸಲಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇ­ಗೌಡ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ತಂಝೀಮ್‌ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸ್ವಯಂ ಪ್ರೇರಿತ ಮತಾಂತರ ಎಂಬುದು ಎಲ್ಲಿದೆ’ ಎಂದು ಪ್ರಶ್ನಿಸಿದ ಅವರು, ‘ಕ್ರಿಶ್ಚಿಯನ್ನರು ಮಾಡಿದ್ದು ಸ್ವಯಂ ಪ್ರೇರಿತ ಮತಾಂತರವೇ? ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಈಚೆಗೆ ಮರು ಮತಾಂತರ ನಡೆಯಿ­ತಲ್ಲಾ ಅದು ಸ್ವಯಂ ಪ್ರೇರಿತವೇ?’ ಎಂದು ಯಾವುದೇ ಸಂಘಟನೆಯ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆಯನ್ನು ವಾಪಸ್‌ ಪಡೆಯುವಂತೆ ಅವರ ಪಕ್ಷದ ಹೈಕಮಾಂಡ್‌ ಸೂಚಿಸಿದೆ. ಅದಕ್ಕೆ ಸಂತೋಷ ಪಡೋಣ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಭಟ್ಕಳವು ದೇಶಕ್ಕೆ ಆಘಾತಕಾರಿ ಎನ್ನುವ ರೀತಿಯಲ್ಲಿ ಮಾಧ್ಯಮಗಳು ವೈಭವೀಕರಿಸುತ್ತಿದೆ. ಇದರಿಂದ ಭಟ್ಕಳಕ್ಕೆ ತುಂಬಾ ಕೆಟ್ಟ ಹೆಸರು ಬಂದಿದೆ ಹಾಗೂ ಭಟ್ಕಳ ಎಂದರೆ ಜನರು ಹೆದ­ರುತ್ತಾರೆ. ಆದ್ದರಿಂದ ಕೆಟ್ಟದ್ದಾಗಿ ವೈಭವೀಕ­ರಿಸು­ವು­ದನ್ನು ನಿಲ್ಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT