ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಣಿಕ್ಯ’ ಹುಡುಗಿಯ ಹೊಸ ಹೆಜ್ಜೆ

ಪಂಚರಂಗಿ
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

‘ಅಮ್ಮ ನಾನು ನಟಿಯಾಗಬೇಕು!’
ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಮಗಳ ಈ ಬೇಡಿಕೆಯನ್ನು ಅಮ್ಮ ಅಷ್ಟು ಸುಲಭವಾಗಿ ಒಪ್ಪಲಿಲ್ಲ. ಕನಿಷ್ಠ ಪದವಿಯನ್ನಾದರೂ ಪೂರ್ಣಗೊಳಿಸು ಎನ್ನುವ ಪ್ರೀತಿಯ ಸೂಚನೆ ಅವರದು. ‘ಡಿಗ್ರಿ ಮುಗಿಸುವ ವೇಳೆಗೆ ತಡವಾಗುತ್ತದೆ. ಬಹುಶಃ ನೀನು ನನ್ನ ಆಂಟಿ ಪಾತ್ರಕ್ಕೆ ಕಳುಹಿಸುತ್ತೀಯಾ, ಹೀರೋಯಿನ್ ಆಗಿ ಅಲ್ಲ’ ಎನ್ನುವ ಮಗಳ ಮಾತಿಗೆ ಅಮ್ಮನ ಮುಗುಳ್ನಗು.

ಎಂಜಿನಿಯರಿಂಗ್ ಪದವಿಗೆ ಸೇರಿದ ತರುಣಿಗೆ ಪಠ್ಯ ಪುಸ್ತಕದಲ್ಲಿ ಕಂಡಿದ್ದೆಲ್ಲವೂ ಸಿನಿಮಾ ಕನಸುಗಳೇ. ಅಂದಮೇಲೆ ನಾಲ್ಕು ಗೋಡೆಯೊಳಗಿನ ಬೆಂಚಿನ ಮೇಲೆ ಅಧ್ಯಾಪಕರ ಪಾಠ ಕೇಳುತ್ತ ಕುಳಿತುಕೊಳ್ಳಲು ಸಾಧ್ಯವೇ? ಮೂರನೇ ಸೆಮಿಸ್ಟರ್‌ನಲ್ಲಿಯೇ ಪಠ್ಯಕ್ಕೆ ತಿಲಾಂಜಲಿ ಇಟ್ಟು, ಅಭಿನಯ ಕಲಿಯಲು ಮುಂಬೈಗೆ ಹೊರಟರು.ಇದು ನಟಿ ರನ್ಯಾ ಅವರ ನಟನೆಯ ಹಿನ್ನೋಟ.

ಕನ್ನಡದ ಈ ಚೆಲುವೆ ಚಿತ್ರರಸಿಕರ ಗಮನ ಸೆಳೆದಿದ್ದು ‘ಮಾಣಿಕ್ಯ’ ಚಿತ್ರದಿಂದ. ‘ಮಾಣಿಕ್ಯ’ ಸಿನಿಮಾ ಈ ಚೆಲುವೆಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿತಷ್ಟೇ ಅಲ್ಲ, ಅನೇಕ ನಿರ್ದೇಶಕರು ಅವರತ್ತ ತಿರುಗಿ ನೋಡುವಂತೆ ಮಾಡಿತು. ಸದ್ಯ ವಿಕ್ರಮ್ ಪ್ರಭು ನಟನೆಯ, ಕುಮಾರ ವೇಲು ನಿರ್ದೇಶನ ತಮಿಳು ಚಿತ್ರ ‘ವಾಘಾ’ದ ಚಿತ್ರೀಕರಣದಲ್ಲಿ ತೊಡಗಿರುವ ರನ್ಯಾ, ಗಣೇಶ್ ನಟನೆಯ, ಮಂಜು ಸ್ವರಾಜ್ ನಿರ್ದೇಶನದ ‘ಪಟಾಕಿ’ ಚಿತ್ರದಲ್ಲಿಯೂ ನಾಯಕಿಯಾಗುವ ಅವಕಾಶ ದೊರಕಿದೆ.

ಮೂಲತಃ ಚಿಕ್ಕಮಗಳೂರಿನ ರನ್ಯಾ ಹುಟ್ಟಿ ಆಡಿ ಬೆಳೆದ ಅಂಗಳ ಬೆಂಗಳೂರು. ಎಸ್ಸೆಸ್ಸೆಲ್ಸಿವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಪದವಿಪೂರ್ವ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಂಡಿದ್ದು ಕೊಡಗಿನ ಗೋಣಿಕೊಪ್ಪವನ್ನು. ಪಿಯು ಪೂರ್ಣಗೊಳ್ಳುತ್ತಲೇ ಬಣ್ಣದ ಸಖ್ಯ ಬೆಳೆಸಲು ಹಂಬಲಿಸಿದವರನ್ನು ತಾತ್ಕಾಲಿಕವಾಗಿ ತಡೆದದ್ದು ಅವರ ತಾಯಿ.

‘ಮಾಣಿಕ್ಯ ಚಿತ್ರದ ನಂತರ ಅವಕಾಶಗಳು ಬಂದವು. ಅದರಲ್ಲಿ ಒಂದೆರಡು ಸಿನಿಮಾಗಳು ಮಹಿಳಾ ಪ್ರಧಾನ ಚಿತ್ರಗಳು. ಇಷ್ಟು ಬೇಗ ಅಂಥ ಪಾತ್ರಗಳನ್ನು ಒಪ್ಪಿಕೊಳ್ಳುವುದು ಕಷ್ಟ. ಮುಂದಿನ ದಿನಗಳಲ್ಲಿ ಆ ಬಗ್ಗೆ ಆಲೋಚಿಸುತ್ತೇನೆ. ಬಂದ ಕೆಲವು ಪಾತ್ರಗಳು ನನಗೆ ಇಷ್ಟವಾಗಲಿಲ್ಲ. ಸುಖಾಸುಮ್ಮನೆ ಬಂದದ್ದೆಲ್ಲವನ್ನು ಒಪ್ಪಿಕೊಳ್ಳಲು ನನಗೆ ಇಷ್ಟವಿಲ್ಲ. ನಾನು ಯಂಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವೆ’ ಎಂದು ರನ್ಯಾ ಹೇಳುತ್ತಾರೆ.

ಬಾಲ್ಯದಿಂದಲೂ ರನ್ಯಾಗೆ ಬಣ್ಣಗಳೆಂದರೆ ಇಷ್ಟ. ಅವರು ಗ್ಲಾಮರ್‌ ಪ್ರಿಯೆ. ಈ ಸೆಳೆತವೇ ಅವರನ್ನು ಸಿನಿಮಾ ರಂಗಕ್ಕೆ ಕರೆತಂದಿದೆ. ‘ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ಹೆಚ್ಚು ಆಸಕ್ತಿ. ಚಿಕ್ಕಂದಿನಲ್ಲಿ ನಾನು ಶಾಲೆಯಲ್ಲಿ ಸ್ಟೇಜ್ ಶೋ ಕೊಡುತ್ತಿದ್ದರೆ, ಎಷ್ಟು ಮುದ್ದಾಗಿದ್ದಾಳೆ ನಿಮ್ಮ ಮಗಳು. ಚೆನ್ನಾಗಿ ನಟಿಸುತ್ತಾಳೆ ಎಂದು ಶಿಕ್ಷಕರು ಅಪ್ಪ–ಅಮ್ಮನ ಬಳಿ ಹೇಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಗ್ಲಾಮರ್‌ ಜತೆ ಹೋಮ್ಲಿ ಪಾತ್ರಗಳಲ್ಲೂ ತೊಡಗುವ ಉತ್ಸಾಹ ರನ್ಯಾ ಅವರಿಗಿದೆ. ಸುದೀಪ್ ಜತೆ ಅವಕಾಶ ಸಿಕ್ಕಿದ್ದನ್ನು ತಮ್ಮ ವೃತ್ತಿ ಬದುಕಿನ ಗುಡ್ ಲಾಂಚ್ ಎಂದು ಕರೆದುಕೊಳ್ಳುವ ರನ್ಯಾ, ಹಲವು ಕಥೆಗಳನ್ನು ತಿರಸ್ಕರಿಸಿರುವುದೂ ಇದೆ.ರನ್ಯಾ ಪ್ರಸ್ತುತ ತೊಡಗಿಕೊಂಡಿರುವುದು ತಮಿಳಿನ ‘ವಾಘಾ’ ಚಿತ್ರದಲ್ಲಿ. ಮತ್ತೊಂದು ತಮಿಳು ಸಿನಿಮಾದ ಮಾತುಕತೆಯೂ ನಡೆಯುತ್ತಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT