ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ಯಲ್ಲಿ ಮಂದಹಾಸ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

‘ಇಲ್ಲಿ ನಾನು ಮತ್ತು ಮೋಹನ್‌ ಲಾಲ್ ಅವರು ನಾಯಕರಲ್ಲ. ನಿರ್ದೇಶಕರ ಚಿತ್ರಕಥೆಯೇ ನಾಯಕ. ನಾನೊಂದು ಪುನೀತ್ ರಾಜ್‌ಕುಮಾರ್ ಎನ್ನುವ ಪಾತ್ರ ಅಷ್ಟೇ. ಫೈಟ್‌ ಇಲ್ಲ, ಕಮರ್ಷಿಯಲ್ ಎಂಟರ್‌ಟೇನ್‌ಮೆಂಟ್ ಇರುವುದಿಲ್ಲ. ಆದರೆ ಒಂದು ಅದ್ಭುತವಾದ ಕಥೆ ಇದೆ’ ಪುನೀತ್ ರಾಜ್‌ಕುಮಾರ್ ಹೀಗೆ ಹೇಳಿದ್ದು ಬಿ.ಎಂ. ಗಿರಿರಾಜ್ ನಿರ್ದೇಶನದ ‘ಮೈತ್ರಿ’ ಚಿತ್ರದ ಬಗ್ಗೆ.

ಪುನೀತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಮೈತ್ರಿ’ ಚಿತ್ರದ ಆಡಿಯೊ ಬಿಡುಗಡೆ ಇತ್ತೀಚೆಗೆ ನಡೆಯಿತು. ಅವರ ಮಾತುಗಳಲ್ಲಿ ಹೊಸ ತುಡಿತ ಹೊಮ್ಮುತ್ತಿತ್ತು. ‘ಮೈತ್ರಿ’ ಪಕ್ಕಾ ಕಮರ್ಷಿಯಲ್ ಸೂತ್ರಗಳಿಂದ ಭಿನ್ನವಾದ ವಿಶಿಷ್ಟ ಅನುಭೂತಿ ಕಟ್ಟಿಕೊಡುವ ಚಿತ್ರ ಎನ್ನುವುದನ್ನು ತೆರೆಯ ಮೇಲೆ ಕಾಣಿಸಿದ ಹಾಡುಗಳು ಮತ್ತು ಟ್ರೇಲರ್ ತುಣಕು ದನಿಸಿತ್ತು. ಅಲ್ಲದೆ ಪುನೀತ್ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರ ಜತೆ ಕಾರ್ಯಕ್ರಮದಲ್ಲಿ ಹಾಜರಿದದ್ದು ವಿಶೇಷ.

‘ಮೋಹನ್ ಲಾಲ್ ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು. ಅವರ ಶೈಲಿಯನ್ನೂ ಅನುಕರಿಸಿದ್ದೇನೆ. ಅವರ ಜತೆ ನಟಿಸಲು ಅವಕಾಶ ಸಿಕ್ಕಿತು. ಅದೇ ರೀತಿ ಚಿತ್ರದಲ್ಲಿ ನಟಿಸಿರುವ ಅತುಲ್ ಕುಲಕರ್ಣಿ ಅವರಿಂದಲೂ ನಟನೆ ಮತ್ತು ಸಿನಿಮಾದ ಬಗ್ಗೆ ಸಾಕಷ್ಟು ಕಲಿತುಕೊಂಡೆ.

‘ಮೈತ್ರಿ’ ಹೊಸ ರೀತಿಯ ಬ್ರಿಡ್ಜ್ ಸಿನಿಮಾ. ಈ ಸಿನಿಮಾ ಹೇಗೆ ಹೋಗುತ್ತದೆ ಎನ್ನುವ ಟೆನ್ಷನ್ ನನಗೆ ಇಲ್ಲ. ಖಂಡಿತಾ ಜನರು ಇಷ್ಟಪಟ್ಟೇಪಡುತ್ತಾರೆ. ಕಮರ್ಷಿಯಲ್, ಕಲಾತ್ಮಕ ಎನ್ನುವ ಹಣೆಪಟ್ಟಿಗಿಂತ ದುಡ್ಡುಕೊಟ್ಟು ಸಿನಿಮಾಕ್ಕೆ ಬರುವ ಪ್ರೇಕ್ಷಕನಿಗೆ ಸಿನಿಮಾಗಳು ಖುಷಿ ನೀಡಬೇಕು’ ಎಂದರು ಪುನೀತ್. ಕನ್ನಡ ಚಿತ್ರರಂಗ ಉತ್ತಮ ಹಾದಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು ‘ಮೈತ್ರಿ’ ತೆರೆಗೆ ಬಂದ ನಂತರ ಈ ರೀತಿಯ ಭಿನ್ನವಾದ ಚಿತ್ರಗಳು ಮತ್ತಷ್ಟು ಮೂಡಿಬರುವ ಆಶಾವಾದ ಪುನೀತ್ ಅವರಿಂದ ವ್ಯಕ್ತವಾಯಿತು.

ಕಾರ್ಯಕ್ರಮ ಕಳೆಗಟ್ಟಲು ಮುಖ್ಯ ಕಾರಣಕರ್ತರು ಸಂಗೀತ ನಿರ್ದೇಶಕ ಇಳಯರಾಜ. ಇಳಯರಾಜ ಅವರನ್ನು ಕಾಣುವ ಉದ್ದೇಶಕ್ಕಾಗಿಯೇ ನಿರ್ದೇಶಕ ದುನಿಯಾ ಸೂರಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ಎಂದಿನಂತೆ ಅಚ್ಚ ಶ್ವೇತವಸ್ತ್ರಧಾರಿಯಾಗಿ ನಗುಮೊಗದಲ್ಲಿ ಬಂದ ಇಳಯರಾಜ ಅವರ ಪಾದಮುಟ್ಟಿ ಪುನೀತ್, ಅವರ ಪುತ್ರಿಯರು, ಸೂರಿ ಮತ್ತು ಇಡೀ ಚಿತ್ರತಂಡ ನಮಸ್ಕರಿಸಿತು.

‘ನಾನು ಹೀಗೆ ಮಾಡಿದ್ದೇನೆ, ಹಾಗೆ ಮಾಡಿದ್ದೇನೆ, ಹಾಡು, ಸಂಗೀತ ಹೀಗಿದೆ ಎಂದು ನಾನು ಹೇಳುವುದಲ್ಲ. ಕೇಳುವವರೂ ನೀವು. ಆ ಬಗ್ಗೆ ನೀವು ಮಾತನಾಡಬೇಕು. ಒಟ್ಟಾರೆಯಾಗಿ ನಾವೆಲ್ಲ ಸೇರಿ ಈ ಚಿತ್ರ ಮಾಡಿದ್ದೇವೆ. ಒಬ್ಬ ಕರ್ಮರ್ಷಿಯಲ್ ಸ್ಟಾರ್ ನಟನನ್ನು ಇಟ್ಟುಕೊಂಡು ಅವರಿಗೆ ಹಾಡಿಲ್ಲ, ಫೈಟು, ಡಾನ್ಸ್‌್ ಇಲ್ಲ. ಕಮರ್ಷಿಯಲ್ ಸೂತ್ರಗಳನ್ನು ಬಿಟ್ಟು ಗಿರಿರಾಜ್ ಈ ಚಿತ್ರ ಮಾಡಿದ್ದಾರೆ. ನನ್ನಂತೆಯೇ ಟೇಸ್ಟ್‌ ಪ್ರೇಕ್ಷಕರಿಗೆ ಇದ್ದರೆ ಈ ಚಿತ್ರವನ್ನು ಖಂಡಿತಾ ಇಷ್ಟಪಡುತ್ತಾರೆ’ ಎಂದು ಮುತ್ತಿನಂಥ ನಾಲ್ಕು ನುಡಿಗಳು ಇಳಯರಾಜ ಅವರಿಂದ ಹೊರಬಂದಿತು. 

ಸಿನಿಮಾ ಸ್ವಲ್ಪ ತಡವಾಗಿದ್ದನ್ನು ಒಪ್ಪಿಕೊಂಡರು ಗಿರಿರಾಜ್. ಅವರ ಮಾತಿನಲ್ಲಿ ಸಿನಿಮಾ ಜನರಿಗೆ ತಲುಪುತ್ತದೆ ಎನ್ನುವ ಅಚಲ ವಿಶ್ವಾಸವಿದ್ದರೆ, ಮೊಗದಲ್ಲಿ ಮಹತ್ವದನ್ನು ಪೂರ್ಣಗೊಳಿಸಿದ ಸಂತಸ. ‘ಒಂದು ಸಣ್ಣ ಎಳೆ ಬೆಳೆಸಿಕೊಂಡು ಈ ಸಿನಿಮಾ ಮಾಡಲಾಯಿತು. ಆ ಎಳೆ ಬೆಳೆಯುತ್ತಾ ಹೋದಂತೆ ದಿಗ್ಗಜರು ಇಲ್ಲಿ ಬಂದು ಸೇರಿದರು. ಇಳಯರಾಜ ಅವರ ಅಭಿಮಾನಿ ನಾನು.

ಅವರಿಂದ ಸಂಗೀತ ಸಂಯೋಜಿಸಬೇಕು ಎಂದುಕೊಂಡು ಅವರಿಗೆ ಒಂದು ಲೈನ್‌ ಕಳುಹಿಸಿದೆ. ಇಷ್ಟವಾಗಿ ಅವರು ನಮ್ಮನ್ನು ಕರೆಸಿಕೊಂಡು ಮಾತನಾಡಿದರು. ಒಂದೇ ದಿನದಲ್ಲಿ ಐದು ಟ್ಯೂನ್‌ಗಳನ್ನು ಹಾಕಿದರು’ ಎಂದು ‘ಮೈತ್ರಿ’ ಮೈದಳೆದ ಕ್ಷಣಗಳನ್ನು ನೆನಪಿಸಿಕೊಂಡರು. ಇಳಯರಾಜ ಸಂಗೀತ ಸಂಯೋಜಿಸಿದ್ದು ಮತ್ತು ಸ್ಟಾರ್‌ನಟರಾದ ಪುನೀತ್ ರಾಜ್‌ಕುಮಾರ್ ‘ಮೈತ್ರಿ’ಯಲ್ಲಿ ಸಾಮಾನ್ಯ ನಟನಾಗಿರುವುದು ಗಿರಿರಾಜ್ ಮಾತುಗಳಲ್ಲಿ ಇಣುಕಿತ್ತು. ಪಕ್ಕ ಕಮರ್ಷಿಯಲ್ ಕಥೆಗಳಿಂದ ದೂರವಿರುವ ತಮ್ಮನ್ನು ನಂಬಿ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕ ಎನ್‌.ಎಸ್. ರಾಜ್‌ ಕುಮಾರ್ ಅವರ ನಿಲುವನ್ನು ಅಪಾರವಾಗಿ ಮೆಚ್ಚಿದರು.

ನಿರ್ಮಾಪಕ ಎನ್‌.ಎಸ್. ರಾಜ್‌ಕುಮಾರ್, ಆನಂದ್ ಆಡಿಯೊದ ಮೋಹನ್‌, ನಿರ್ದೇಶಕರಾದ ಶಶಾಂಕ್, ನಾಗಶೇಖರ್, ಸಿನಿಮಾ ವಿತರಕ ಬಾಷಾ, ಛಾಯಾಗ್ರಾಹಕ ಕೃಷ್ಣಕುಮಾರ್ ಸೇರಿದಂತೆ ಹಲವು ಮಂದಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೋಹನ್ ಲಾಲ್‌ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿ ಕಳುಹಿಸಿದ ಸಂದೇಶವನ್ನು ಪರದೆಯಲ್ಲಿ ಪ್ರದರ್ಶಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT