ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುದ್ಧ ಅರ್ಧ ಗೆದ್ದಾಗಿದೆ...

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಪ್ರವೇಶ ವಿಳಂಬ ಆಯಿತಲ್ಲವೇ?
ಹೌದು. ನಾನು ಕನ್ನಡಕ್ಕೆ ಬರುತ್ತೇನೆಂದು ತುಂಬ ಹಿಂದಿನಿಂದಲೂ ಸುದ್ದಿಯಾಗುತ್ತಲೇ ಇತ್ತು. ಅದು ‘ಪವರ್ ಸ್ಟಾರ್’ ಮೂಲಕ ಈಡೇರಿದೆ. ನಾನು ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಹೆಚ್ಚು ಇಷ್ಟಪಡುವವಳು. ಅಂತಹ ಚಿತ್ರ ‘ಪವರ್ ಸ್ಟಾರ್’. ಒಂದು ಇಂಡಸ್ಟ್ರಿಗೆ ಕಾಲಿಡುವಾಗ ಗೆಲುವು ತರುವ ಚಿತ್ರದ ಮೂಲಕ ಗುರ್ತಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯದು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ಹೀಗಾಗಿ ಕನ್ನಡಕ್ಕೆ ಬರುವುದು ತಡವಾಗಿರಬಹುದು.

ವೃತ್ತಿ ಜೀವನ ಆರಂಭಿಸಿ ಹನ್ನೆರಡು ವರ್ಷಗಳೇ ಕಳೆದವು. ಕನ್ನಡಕ್ಕೆ ಬರಲು ತಡವಾಗಿರುವುದು ನಿಜ. ಕಾರಣ ಇಷ್ಟೇ; ತಮಿಳು, ತೆಲುಗು ಚಿತ್ರಗಳನ್ನು ತೂಗಿಸಿಕೊಳ್ಳುವುದರಲ್ಲಿ ಇತ್ತ ಗಮನ ಹರಿಸಲಾಗಲಿಲ್ಲ. ‘ಪವರ್ ಸ್ಟಾರ್’ ಚಿತ್ರೀಕರಣದ ವೇಳೆ ಕೆಲ ನಿರ್ದೇಶಕರು ಆಫರ್ ನೀಡಿದ್ದಾರೆ. ಚಿತ್ರ ಬಿಡುಗಡೆಯಾದ ಮೇಲೆ ಇನ್ನೂ ಹೆಚ್ಚಿನ ಅವಕಾಶಗಳು ಬರಬಹುದು.

ಬಿಡುಗಡೆಗೂ ಮುನ್ನವೇ ‘ಪವರ್ ಸ್ಟಾರ್’ ತುಂಬಾ ಸದ್ದು ಮಾಡಿದೆಯಲ್ಲ?
ಇದು ನನಗೆ ಮತ್ತು ನಮ್ಮ ತಂಡಕ್ಕೆ ಸಂತಸದ ಸಂಗತಿ. ಕನ್ನಡದಲ್ಲಿ ಪುನೀತ್‌ಗೆ ಇರುವ ಅಭಿಮಾನಿಗಳ ಸಂಖ್ಯೆ ದೊಡ್ಡದು. ಹಾಡುಗಳು ಈಗಾಗಲೇ ಭರ್ಜರಿ ಹಿಟ್ ಆಗಿವೆ. ಅಂದರೆ ಶೇ 50ರಷ್ಟು ಯುದ್ಧ ಗೆದ್ದಿದ್ದೇವೆ ಎಂದೇ ಅರ್ಥ. ಹೀಗಾಗಿ ಕೊಂಚ ಭಯವಿದ್ದರೂ ಜನರ ನಿರೀಕ್ಷೆಯನ್ನು ತಲುಪುವ ವಿಶ್ವಾಸವಿದೆ.

ಕನ್ನಡದಲ್ಲಿ ಸ್ಟಾರ್‌ ನಟರ ಜತೆ ಮಾತ್ರ ತೆರೆ ಹಂಚಿಕೊಳ್ಳುತ್ತೀರಾ?
ಹಾಗೇನಿಲ್ಲ. ಆಫ್ ಬೀಟ್ ಚಿತ್ರಗಳಲ್ಲಿಯೂ ನನ್ನನ್ನು ಕಾಣಬಹುದು.

ಎಂತಹ ಪಾತ್ರಗಳ ನಿರೀಕ್ಷೆ ಇದೆ?
ಹಾಗೆ ನೋಡಿದರೆ ನಾನು ಇದುವರೆಗೆ ಚಿತ್ರರಂಗದ ಕೇವಲ 20 ಪ್ರತಿಶತ ಪಾತ್ರಗಳನ್ನು ಮಾಡಿದ್ದೇನೆ ಅನ್ನಿಸುತ್ತದೆ. ಐತಿಹಾಸಿಕ ಚಿತ್ರಗಳು, ಸಾಹಸ ಪ್ರಧಾನ ಪಾತ್ರಗಳು ಹಾಗೂ ಸಂಪೂರ್ಣ ನಾಯಕಿ ಕೇಂದ್ರಿತ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಿನ್ನೂ ಬಾಕಿ ಇದೆ.

ಪುನೀತ್ ಬಗ್ಗೆ ಹೇಳಿ?
ಪುನೀತ್ ತೀರಾ ಸರಳ ವ್ಯಕ್ತಿ. ಸ್ಟಾರ್‌ಗಿರಿ ಹಚ್ಚಿಕೊಂಡಿಲ್ಲ. ಅವರ ಹಿಂದೆ ಚಿತ್ರರಂಗದ ಇತಿಹಾಸವೇ ಇದೆ. ಅವರು ಊಟ–ಉಸಿರಾಟದಲ್ಲೂ ಸಿನಿಮಾವನ್ನೇ ಕನವರಿಸಿದ್ದಾರೆ. ಚಿತ್ರಕ್ಕಾಗಿ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಎಲ್ಲರೊಂದಿಗೆ ಬೇಗ ಬೆರೆಯುತ್ತಾರೆ. ಸೂಪರ್ ಸ್ಟಾರ್ ಆಗುವುದೆಂದರೆ ಸುಲಭದ ಮಾತಲ್ಲ. ಅವರು ಅತ್ಯುತ್ತಮ ನಟ, ಗಾಯಕ. ಅಷ್ಟೇ ಮನಮೋಹಕವಾಗಿ ನೃತ್ಯ ಕೂಡ ಮಾಡುತ್ತಾರೆ. ನಾನು ಈವರೆಗೆ ಕೆಲಸ ಮಾಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಪುನೀತ್ ಕೂಡ ಒಬ್ಬರು.

ಬಾಲಿವುಡ್ ದಾರಿ ತುಳಿವ ಬಗ್ಗೆ?
ಹಿಂದಿಯಲ್ಲಿ ‘ಖಟ್ಟಾ ಮೀಟಾ’ ಚಿತ್ರ ಮಾಡಿದ್ದೇನೆ. ಆದರೆ ಬಾಲಿವುಡ್ ಜಗತ್ತು ಸಂಪೂರ್ಣ ಭಿನ್ನ. ಅಲ್ಲಿ ನೆಲೆಯೂರಬೇಕಾದರೆ ಕೆಲಕಾಲವಾದರೂ ಮುಂಬೈನಲ್ಲಿ ತಳ ಊರಬೇಕಾಗುತ್ತದೆ. ಹೊರಗಿದ್ದುಕೊಂಡು ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವುದು ಕಷ್ಟ. ಹೀಗಾಗಿ ಅಲ್ಲಿ ನಾನಿನ್ನೂ ಪೂರ್ಣವಾಗಿ ತೊಡಗಿಸಿಕೊಂಡಿಲ್ಲ.

ಮದುವೆ ಬಗ್ಗೆ?
ಕಳೆದ ಎರಡು ವರ್ಷಗಳಲ್ಲಿ ನನ್ನ ಮದುವೆ ಕುರಿತಾಗಿ ಆರು ಸಲ ಗಾಸಿಪ್ ಹಬ್ಬಿದೆ. ಆದರೆ ನಾನಿನ್ನೂ ಮದುವೆ ಕುರಿತು ನಿರ್ಧಾರ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT