ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರು ಬಾಲಿವುಡ್‌ ಬದಲಾಯಿಸುತ್ತಿದ್ದಾರೆ’

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಇರ್ಫಾನ್‌ ಖಾನ್‌... ಯಾವುದೇ ಗಾಡ್‌ ಪಾದರ್‌ಗಳ ಬಲವಿಲ್ಲದ, ಹಿಂದಿ ಸಿನಿಮಾರಂಗದ ಚರ್ವಿತ ಚರ್ವಣ ‘ಹೀರೊ’ ಪರಿಕಲ್ಪನೆಗಳಿಗೆ ಹೊಂದುವಂತಹ ಕಟ್ಟುಮಸ್ತು ಮೈಕಟ್ಟಾಗಲೀ ಮುದ್ದಾದ ಮುಖವಾಗಲೀ ಇಲ್ಲದ ಇವರು ಇಂದು ಬಿ–ಟೌನ್‌ನಲ್ಲಿ ಬಹುಬೇಡಿಕೆಯಲ್ಲಿರುವ ನಟರಲ್ಲಿ ಒಬ್ಬರು.

ಥಟ್ಟನೆ ನೋಡಿದರೆ ನಾಯಕನಿಂದ ಹೊಡೆತ ತಿಂದು ಓಡುವ ಪುಡಿ ರೌಡಿಯೋ, ಬಡ ನಾಯಕಿಯ ಕುಡುಕ ಅಪ್ಪನ ಪಾತ್ರಕ್ಕೋ ಹೊಂದುವಂತೆ ಕಾಣುವ ಇರ್ಫಾನ್‌, ತಮ್ಮ ಪಕ್ವ ನಟನೆ ಮತ್ತು ವಿಶಿಷ್ಟ ಮ್ಯಾನರಿಸಂ ಬಲದಿಂದಲೇ ಪಾತ್ರಕ್ಕೆ ಜೀವ ತುಂಬಬಲ್ಲ ಬಾಲಿವುಡ್‌ನ ಕೆಲವೇ ಕೆಲವು ಶಕ್ತ ಕಲಾವಿದರಲ್ಲಿ ಒಬ್ಬರು.

ಇತ್ತೀಚೆಗೆ ಬಿಡುಗಡೆಯಾದ ಮೇಘನಾ ಗುಲ್ಜಾರ್‌ ನಿರ್ದೇಶನದ ‘ತಲ್ವಾರ್‌’ ಸಿನಿಮಾದಲ್ಲಿ ಇರ್ಫಾನ್‌ ಮತ್ತೊಮ್ಮೆ ತಮ್ಮ ಅನನ್ಯತೆಯನ್ನು ಸಾಬೀತುಪಡಿಸಿದ್ದಾರೆ. ಸಿಬಿಐ ತನಿಖಾ ಅಧಿಕಾರಿಯ ಪಾತ್ರವನ್ನು ಕಟ್ಟಿಕೊಟ್ಟಿರುವ ರೀತಿಯಿಂದ ಇರ್ಫಾನ್‌, ಬಾಲಿವುಡ್‌ನ ಮಂದಿ ಮತ್ತೊಮ್ಮೆ ತಮ್ಮತ್ತ ಅಚ್ಚರಿಯ ಕಣ್ಣು ಬಿಡುವಂತೆ ಮಾಡಿದ್ದಾರೆ.

ಇಂದು ಯಶಸ್ಸಿನ ಉತ್ತುಂಗದಲ್ಲಿರುವ ಈ ತೀಕ್ಷ್ಣನೋಟದ ನಟ ಹಾದುಬಂದ ದಾರಿ ಹೂವಿನದ್ದೇನೂ ಆಗಿರಲಿಲ್ಲ. ಈ ಹಂತಕ್ಕೆ ಬರುವ ಮುನ್ನ ಅವರು ಪಟ್ಟ ಪಡಿಪಾಟಲು ಕಮ್ಮಿಯೇನಲ್ಲ. ಈ ಬಗ್ಗೆ ಅವರೇ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  ನೆನಪಿಸಿಕೊಂಡಿದ್ದಾರೆ. ಹಾಗೆಯೇ ಇಂದಿನ ಹಿಂದಿ ಚಿತ್ರರಂಗದ ಕುರಿತೂ ಅವರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

48 ವರ್ಷದ ಇರ್ಫಾನ್‌, ಬಾಲಿವುಡ್‌ ಜಗತ್ತಿಗೆ ಪದಾರ್ಪಣೆ ಮಾಡಿದ್ದು 1998ರ ರಾಷ್ಟ್ರಪ್ರಶಸ್ತಿ ವಿಜೇತ ‘ಸಲಾಮ್‌ ಬಾಂಬೆ’ ಸಿನಿಮಾದ ಮೂಲಕ. 2003ರಲ್ಲಿ ತೆರೆಕಂಡ ‘ಹಾಸಿಲ್’ ಚಿತ್ರ ಬಿ–ಟೌನ್‌ನಲ್ಲಿ ಅವರಿಗೆ ಒಂದು ಗುರುತು ಕೊಟ್ಟಿತು. ಆ ಚಿತ್ರದ ಖಳನ ಪಾತ್ರದಲ್ಲಿ ಇರ್ಫಾನ್‌ ಅಭಿನಯ ಸಿನಿಮಂದಿಯ ಗಮನ ಸೆಳೆದಿತ್ತು. ಆದರೆ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದುಮಾಡುವಲ್ಲಿ ಸೋತಿತು.

‘‘ಹಾಸಿಲ್‌’ ಸಿನಿಮಾ ಬಿಡುಗಡೆಯಾದಾಗ ಅಂತಹ ಸಿನಿಮಾಕ್ಕೆ ಪ್ರೇಕ್ಷಕರು ಸಿದ್ಧರಾಗಿರಲಿಲ್ಲ. ಆದರೆ ಆ ಚಿತ್ರವನ್ನು ಇಂದಿಗೂ ಜನರು, ಅದರಲ್ಲಿಯೂ ವಿಶೇಷವಾಗಿ ಯುವಪೀಳಿಗೆಯವರು ನೋಡಿ ಇಷ್ಟಪಡುತ್ತಾರೆ. ಆ ಚಿತ್ರದೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ಇರ್ಫಾನ್‌.

ನಂತರ ಇರ್ಫಾನ್‌ ‘ಮಕ್ಬೂಲ್’, ‘ದ ನೇಮ್‌ ಸೇಕ್‌’ ‘ಲೈಫ್‌ ಇನ್‌ ಎ ಮೆಟ್ರೊ’ಗಳಂತಹ ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಅವರು ಹೀಗೆ ವಿವರಿಸುತ್ತಾರೆ: ‘ನಾನು ಚಿತ್ರರಂಗಕ್ಕೆ ಬಂದಾಗ ಪರಿಸ್ಥಿತಿ ತುಂಬ ಭಿನ್ನವಾಗಿತ್ತು. ಆಗ ಒಂದು ವರ್ಗದ ಪ್ರೇಕ್ಷಕರಿಗಾಗಿ ಮಾತ್ರ ಸಿನಿಮಾಗಳನ್ನು ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಬದಲಾಯಿತು. ಇಂದು ಪ್ರೇಕ್ಷಕರು ಎಲ್ಲ ರೀತಿಯ ಸಿನಿಮಾಗಳನ್ನೂ ನೋಡಲು ಬಯಸುತ್ತಾರೆ. ಯುವಕರು ಬಾಲಿವುಡ್‌ ಅನ್ನು ಬದಲಾಯಿಸುತ್ತಿದ್ದಾರೆ. ಅವರು ಜಾಗತಿಕ ಸಿನಿಮಾಗಳನ್ನು ನೋಡಿದ್ದಾರೆ. ನಮ್ಮ ಸಿನಿಮಾಗಳು ವಾಣಿಜ್ಯಾತ್ಮಕ ಆಗಿದ್ದೂ ಸಮಾಜದ ಕಥನವನ್ನು ಹೇಳುವಂತಿರಬೇಕು ಎಂದು ಬಯಸುತ್ತಿದ್ದಾರೆ’ ಎಂದು ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಇರ್ಫಾನ್‌ ಗುರ್ತಿಸುತ್ತಾರೆ.

ಈ ವರ್ಷ ಇರ್ಫಾನ್‌ ಪಾಲಿಗೆ ಅದೃಷ್ಟದ ವರ್ಷ. ‘ಪೀಕು’ ಚಿತ್ರದಲ್ಲಿನ ವಿಶಿಷ್ಟ ಅಭಿನಯದ ಮೂಲಕ ಗಮನಸೆಳೆದ ಅವರು, ‘ಜುರಾಸಿಕ್‌ ವರ್ಲ್ಡ್‌’ ಸಿನಿಮಾದ ಮೂಲಕ ಹಾಲಿವುಡ್‌ ಅಂಕಣದಲ್ಲಿಯೂ ತಮ್ಮ ಛಾಪನ್ನು ಒತ್ತಿ ಬಂದಿದ್ದಾರೆ. ಕಳೆದ ವಾರವಷ್ಟೇ ತೆರೆಗೆ ಬಂದ, ಅವರು ಅಭಿನಯದ ಆರುಷಿ ತಲ್ವಾರ್‌ ಕೊಲೆ ಪ್ರಕರಣ ಆಧರಿಸಿದ ‘ತಲ್ವಾರ್‌’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ಸಂಜಯ್‌ ಗುಪ್ತಾ ನಿರ್ದೇಶನದ ‘ಜಸ್ಬಾ’ ತೆರೆಗೆ ಬರಲು ಸನ್ನದ್ಧವಾಗಿದೆ. ‘ಜಸ್ಬಾ’ ಚಿತ್ರದಲ್ಲಿ ಇರ್ಫಾನ್‌, ಐಶ್ವರ್ಯಾ ರೈ ಬಚ್ಚನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಪ್ರತಿ ಸಿನಿಮಾದಲ್ಲಿಯೂ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇರ್ಫಾನ್‌, ತಮಗೆ ಸಿಗುತ್ತಿರುವ ಅವಕಾಶಗಳ ಶ್ರೇಯಸ್ಸನ್ನು ಪ್ರೇಕ್ಷಕ ಪ್ರಭುಗಳಿಗೆ ಒಪ್ಪಿಸುತ್ತಾರೆ. ‘‘ಇಂದು ಜನರು ಬೋರಿಂಗ್‌ ಕಥೆಗಳ ಸಾಮಾಜಿಕ ಸಿನಿಮಾಗಳನ್ನು ನೋಡಲು ಇಷ್ಟಪಡುವುದಿಲ್ಲ. ಸಾಮಾಜಿಕ ಸಂಗತಿಗಳನ್ನು ಎತ್ತಿಕೊಂಡೂ ಮನರಂಜನೆಗೆ ಕೊರತೆಯಿಲ್ಲದಂತೆ ರೂಪುಗೊಳ್ಳುತ್ತಿರುವ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇಂದಿನ ಯುವಕರು ತುಂಬ ಬುದ್ಧಿವಂತರು. ಅವರಿಗೆ ಕೈಯಲ್ಲಿ ತುತ್ತು ಹಿಡಿದು ತಿನ್ನಿಸಬೇಕಾಗೇನೂ ಇಲ್ಲ. ‘ತಮ್ಮನ್ನು ಮುಠ್ಠಾಳರು ಎಂದುಕೊಳ್ಳಬೇಡಿ’ ಎಂದು ಅವರೇ ಹೇಳುತ್ತಿದ್ದಾರೆ. ಆದರೆ ನಾವು ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ’’ ಎಂದು ಇರ್ಫಾನ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT