ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗ ವಿಶೇಷ’ವೆಂಬ ವಿಶೇಷತೆಯ ಗೂಡು

ಅಂಕದ ಪರದೆ
Last Updated 15 ಜುಲೈ 2015, 19:30 IST
ಅಕ್ಷರ ಗಾತ್ರ

‘ರಂಗ ವಿಶೇಷ’ ಹವ್ಯಾಸಿ ರಂಗ ತಂಡದ ತನ್ನ ಮೂಲ ಉದ್ದೇಶದ ಕಾರಣಕ್ಕಾಗಿಯೇ ಎಲ್ಲರೂ ಮೆಚ್ಚಬಹುದಾದ ತಂಡ. ರಂಗಭೂಮಿ ಬರೀ ಕಣ್ಣಿದ್ದವರಿಗೆ ಮಾತ್ರವಲ್ಲ ಅದು ಅಂಧರಿಗೂ ಸಲ್ಲುವ ಭೂಮಿಕೆ ಎನ್ನುವ ಸದ್ದುದ್ದೇಶದಿಂದ ಅಂಧ ಕಲಾವಿದರ ರಂಗ ಪ್ರತಿಭೆಯನ್ನು ಹೊರತೆಗೆಯುವ ಮೂಲ ಉದ್ದೇಶದಿಂದ ಹುಟ್ಟಿದ್ದು ‘ರಂಗ ವಿಶೇಷ’ ತಂಡ.

2010ರಲ್ಲಿ ಆರಂಭವಾದ ಈ ತಂಡದ ಮೊದಲ ಪ್ರಯೋಗ ‘ದ್ಯುತಿ’. ಇಲ್ಲಿ ಅಭಿನಯಿಸಿದ್ದು 7ಮಂದಿ ಅಂಧ ಕಲಾವಿದರು ಎನ್ನುವುದು ವಿಶೇಷ. ರಾಜು, ಪ್ರದೀಪ, ನವೀನ್, ರಮ್ಯಾವರ್ಶಿಣಿ ಸೇರಿ ಸ್ಥಾಪಿಸಿದ ಈ ರಂಗ ತಂಡ ಈಗ 5 ವರ್ಷ ಪೂರ್ಣಗೊಳಿಸುವ ಹಂತದಲ್ಲಿದೆ. ತಂಡ ಕಟ್ಟುವಲ್ಲಿ ಪ್ರಮುಖವಾಗಿ ಕಾಣುವ ಹೆಸರು ರಮ್ಯಾವರ್ಷಿಣಿ. ಎಲ್ಲ ಕಡೆಗಳಲ್ಲಿ ಕಾಣುವಂತೆ ‘ರಂಗ ವಿಶೇಷ’ದ ಹುಟ್ಟಿಗೆ ಕಾರಣ ಈ ಸಮಾನ ಮನಸ್ಕ ಗೆಳೆಯರು.

ನಾವು ಇಲ್ಲಿ ಉತ್ತಮವಾದ ಮತ್ತು ಸದಭಿರುಚಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ಈ ಗೆಳೆಯರು ಆಸೆ–ಕನಸು. ನಿಜಕ್ಕೂ ಇದು ವಿಶೇಷವಾಗಿ ಗಮನ ಸೆಳೆಯುವುದು ಅಂಧ ಕಲಾವಿದಕರಿಗೆ ವೇದಿಕೆ ಕಲ್ಪಿಸಿರುವುದರಿಂದ. ಲಲಿತ ಕಲಾ ಪ್ರಕಾರದ ಎಲ್ಲಾ ಆಯಾಮಗಳನ್ನು ಅಂಧರಿಗೆ ಕಲಿಸಿ, ಆ ಮೂಲಕ ಅವರಿಗೆ ವೇದಿಕೆ ಕಲ್ಪಿಸಿ ಅವರ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಬೇಕು ಎಂಬ ನಿಲುವು ಇವರಿಗಿದೆ.

‘ರಂಗಭೂಮಿಗೆ ಅಂಧ ಕಲಾವಿದರನ್ನು ಪರಿಚಯಿಸಬೇಕು. ಅಂಧ ಕಲಾವಿದರ ಪ್ರತಿಭೆಯ ಅನಾವರಣಗೊಳಿಸಬೇಕು ಎಂಬ ಆಶಯದಲ್ಲಿ ರಂಗ ಸ್ಥಾಪಿಸಿದೆವು. ತಂಡ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಅಂಧರಿಗಾಗಿ ಒಂದು ಕಾರ್ಯಾಗಾರ ರೂಪಿಸಿದ್ದೆವು. ಅಲ್ಲಿ ನಟನೆ, ಸಂಗೀತ ಮುಂತಾದ ಕಲಾ ಪ್ರಕಾರಗಳಲ್ಲಿ ಆಸಕ್ತಿ ಇರುವ ಅಂಧರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿದ್ದೆವು. ಇದರಿಂದ ಅವರು ಸಮಾಜಮುಖಿಯಾಗಲು ಸಾಧ್ಯವಾಗುತ್ತದೆ.

ಅಂಧರು ಕಲಾಪ್ರಕಾರಗಳಲ್ಲಿ ತೊಡಗಿದ್ದರೂ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದು ಕಡಿಮೆ. ಈ ದಿಸೆಯಲ್ಲಿ ಅವರನ್ನು ಹೆಚ್ಚು ಮಾಡುತ್ತೇವೆ. ನಮ್ಮ ತಂಡದಲ್ಲಿ ಬೆಳವಣಿಗೆಗೆ ದೊಡ್ಡ ಮಟ್ಟದ ವೇದಿಕೆ ಇದೆ. ರಂಗಭೂಮಿಯಲ್ಲಿ ನಟಿಸಲು ಹೊಸ ಕಲಾವಿದರು ಬರ್ತಾನೆ ಇರ್ತಾರೆ. ಅಂತಹ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು’ ಎಂದು ತಂಡದ ಆಶಯ–ಉದ್ದೇಶವನ್ನು ವಿವರಿಸುವರು ರಮ್ಯಾವರ್ಷಿಣಿ.

‘ರಂಗವಿಶೇಷ’ದಲ್ಲಿ ಅಂಧರು ಸೇರಿ 30 ರಿಂದ 40 ಮಂದಿ ಕಲಾವಿದರು ಇದ್ದಾರೆ. ಇವರೆಲ್ಲರೂ ಹವ್ಯಾಸಿ ಕಲಾವಿದರು. ಬಿಡುವಿನ ವೇಳೆಯಲ್ಲಿ ನಾಟಕಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಳಿದಂತೆ ಸಮಾಜದ ಬೇರೆ ಬೇರೆ ವಲಯಗಳಲ್ಲಿ ವೃತ್ತಿ ನಿರತರು. 

ಪ್ರದರ್ಶನಗೊಂಡ ನಾಟಕಗಳು
ಮುಂದೇನು ನೀವೆ ಹೇಳಿ’, ‘ದ್ಯುತಿ’, ‘ನೆನಪು’, ‘ಶುದ್ಧವಂಶ’, ‘ನಾವ್‌ ಹಿಂಗಾ ಇರ್ತೀವಿ’, ‘ಹೋಗ್ಲಿ ಬಿಡಿ ಸಾರ್‌’  ಸೇರಿದಂತೆ ಸಾಮಾಜಿಕ ಮತ್ತು ಹಾಸ್ಯ ನಾಟಕಗಳು ಈ ವೇದಿಕೆಯಲ್ಲಿ ಮೂಡಿವೆ. ಕೆಲವು ನಾಟಕಗಳು ತಂಡದ ಹಾದಿಗೆ ಹೆಸರು ಮತ್ತು ಬಲವನ್ನು ತಂದುಕೊಟ್ಟಿದ್ದು ಸುಳ್ಳಲ್ಲ. ತನ್ನ ಉದ್ದೇಶಗಳ ಮೂಲಕ ಗಮನ ಸೆಳೆದಿರುವ ತಂಡದ ಬುಡದಿಂದ ಸಾಕಷ್ಟು ಮಂದಿ ಪ್ರತಿಭೆಗಳು ಹೊರ ನಡೆದಿವೆ. ಕಿರುತೆರೆ–ಹಿರಿತೆರೆಯಲ್ಲಿ ಸಕ್ರಿಯವಾಗಿರುವ ಕಲಾವಿದರು ಇದ್ದಾರೆ.

ಇಲ್ಲಿ ಕೆಲಸದಲ್ಲಿ ತೊಡಗಿರುವ ಬಹುತೇಕ ತಂತ್ರಜ್ಞರಿಗೆ ಸಂಗೀತ ನಿರ್ದೇಶಕರಾಗುವ ಹಂಬಲ ಹೆಚ್ಚಿದೆ. ಇಲ್ಲಿ ಕೆಲಸ ಮಾಡುತ್ತಿರುವ ಕಿರಣ್‌ ಸಿನಿಮಾ ಸಹ ನಿರ್ದೇಶಕರಾಗಿ ಕಾರ್ಯನಿವರ್ಹಿಸುತ್ತಿದ್ದಾರೆ. ನಾಟಕವಲ್ಲದೇ ಸಂಗೀತ, ತಬಲಾ, ಕಂಸಾಳೆ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ  ಕಲಾವಿದರು ತಂಡದಲ್ಲಿದ್ದಾರೆ.

ಆದಾಯದ ಮೂಲ
ಸ್ನೇಹಿತರ ಬಳಗ ಸೇರಿ ಆರಂಭಿಸಿದ ಈ ತಂಡಕ್ಕೆ ಆದಾಯದ ಮೂಲ ಕೂಡ ಸ್ನೇಹಿತರೇ. ‘ಸ್ನೇಹಿತರು ನೀಡುವ ಹಣದಿಂದಲೇ ತಂಡವನ್ನು ಮುನ್ನೆಡೆಸುತ್ತಿದ್ದೇವೆ. ತಂಡಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸರಕಾರದ ನೆರವು ಪಡೆಯುವ ಆಲೋಚನೆ ಇದೆ’ ಎನ್ನುವ ತಂಡದ ಪ್ರಮುಖರು ಭವಿಷ್ಯದಲ್ಲಿ ದೊಡ್ಡ ಆಲೋಚನೆಗಳನ್ನೇ ಹೊಂದಿದ್ದಾರೆ. ಇಲ್ಲಿನ  ಕಲಾವಿದರಲ್ಲಿ ಹಲವರಿಗೆ ಚಲನಚಿತ್ರದಲ್ಲಿ ನಟಿಸಲು ಹಾಗೂ ನಿರ್ದೇಶಿಸಲು ಆಸಕ್ತಿ ಇದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಕಾರ್ಯಾಗಾರ ಇಲ್ಲವೆ ಅನುಭವ ಎನ್ನುವಂತೆ ತಂಡದಿಂದ ಚಿತ್ರವೊಂದನ್ನು ತೆರೆಗೆ ತರಬೇಕು ಎಂಬ ಆಸೆ ರಮ್ಯಾವರ್ಶಿಣಿ ಅವರದ್ದು.

ಸಾಮಾಜಿಕ ಕಾರ್ಯಗಳು
‘ರಂಗವಿಶೇಷ’ದ ಮೂಲ ಆಶಯವೇ ಅಂಧ ಪ್ರತಿಭೆಗಳನ್ನು ವೇದಿಕೆಗೆ ಏರಿಸುವುದು. ಇದರ ಜತೆಗೆ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಗರದ ಸರಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಸಂವಿಧಾನದ ವಿಷಯವಾಗಿ ಜಾಗೃತಿ ಮೂಡಿಸುವಂತಹ ಕಾರ್ಯಾಗಾರಗಳನ್ನು ಭವಿಷ್ಯದಲ್ಲಿ ನಡೆಸುವ ಚಿಂತನೆ ಇದೆ. ಬೆಂಗಳೂರಿನಲ್ಲಿರುವ ಉದ್ಯಾನಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಕಾವ್ಯ ಕೃತಿ ರಚನೆ ಹಾಗೂ ನಾಟಕಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ‘ಕಾವ್ಯ ಕೃಷಿ’ ಎಂಬ ಕಾರ್ಯಾಗಾರವನ್ನು ನಡೆಸಲು ಈ ತಂಡದ ಮುಂದಾಗಿದೆ.
*
ರಮ್ಯಾ ರಂಗಯಾನ

ರಮ್ಯಾವರ್ಷಿಣಿ ಮೂಲತಃ ಮಂಡ್ಯ ಜಿಲ್ಲೆಯವರು. ಬಿ.ಎಸ್ಸಿ ಪದವೀಧರೆ. ಖಾಸಗಿ ವಾಹಿನಿಯೊಂದರಲ್ಲಿ ವರದಿಗಾರಗಳಾಗಿ ಕೆಲಸ ಮಾಡುತ್ತಿದ್ದ ಅವರು ಸ್ವಯಂ ನಿವೃತ್ತಿ ಪಡೆದು ಪೂರ್ಣ ಪ್ರಮಾಣದಲ್ಲಿ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪದವಿ ಓದುತ್ತಿದ್ದ ದಿನಗಳಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರು ಆ ದಿನಗಳಿಂದಲೂ  ನಾಟಕ ಹಾಗೂ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರು. ಆ ಒಲವಿಗೆ ಜೀವ ತುಂಬಿದ್ದು ಸಾಣಿಹಳ್ಳಿಯ ಶಿವಕುಮಾರ ರಂಗ ಶಾಲೆ. ಅಲ್ಲಿ ಒಂದು ವರ್ಷಗಳ ಕಾಲ ರಂಗ ತರಬೇತಿ ಪಡೆದುಕೊಂಡಿದ್ದಾರೆ    ರಮ್ಯಾವರ್ಷಿಣಿ.

‘ರಂಗಭೂಮಿ ಬಯಸಿ ಬಂದವರಿಗೆ ಬದುಕು ಕಟ್ಟಿಕೊಡುವ ನೆಲೆ. ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ತುಡಿತ ಇರುವ ಅದೆಷ್ಟೋ ಮಂದಿ ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ರಂಗಭೂಮಿ ಒಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ಬೆಳೆಸುತ್ತದೆ. ಇಲ್ಲಿ ಏಕಾಗ್ರತೆ, ತಲ್ಲೀನತೆ ಬೆಳಿಸಿಕೊಳ್ಳಲು ಸಾಧ್ಯ.  ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಒಂದು ಉತ್ತಮ ವೇದಿಕೆ’ ಎನ್ನುವುದು ಅವರ ಅನುಭವದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT