ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ಕಸ ನಗರಿ’ಗಳೇ ಎಲ್ಲರಿಗೂ ಪ್ರಿಯ!

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ದಿನಗೂಲಿ ನೆಚ್ಚಿಕೊಂಡು ನಗರಗಳಿಗೆ ಗುಳೆ ಬರುತ್ತಿರುವವರಿಗೆ ಕೆಲಸ ಸಿಗಬಹುದು. ಆದರೆ ದಣಿದ ದೇಹಕ್ಕೆ ಸೂರೇ ಸಿಗದಿದ್ದರೆ...?

ಭಾರತ ಹಳ್ಳಿಗಳ ರಾಷ್ಟ್ರ ಎಂಬ ಹೆಗ್ಗಳಿಕೆಯಿಂದ ಮುಕ್ತವಾಗುವ ದಿನಗಳು ಇನ್ನು ದೂರವಿಲ್ಲ! ಹೀಗೆಂದರೆ ದೇಶದ ಎಲ್ಲ ಹಳ್ಳಿಗಳು ಬರುವ ಒಂದೆರಡು ವರ್ಷಗಳಲ್ಲಿ ಸ್ಮಾರ್ಟ್‌ ಸಿಟಿಗಳಾಗಿಬಿಡುತ್ತವೆ ಎಂದಲ್ಲ. ಬದಲಾಗಿ ನಗರವಾಸಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದರ್ಥ.

ಹೌದು ವಿಶ್ವಸಂಸ್ಥೆ ಹೀಗೊಂದು ವರದಿ ಸಿದ್ಧಪಡಿಸಿದೆ. ‘ವಿಶ್ವ ನಗರಗಳ ವರದಿ 2016- ನಗರೀಕರಣ ಮತ್ತು ಅಭಿವೃದ್ಧಿ: ಭವಿಷ್ಯದ ಬೆಳವಣಿಗೆ’ ಕುರಿತ ಅಧ್ಯಯನದಲ್ಲಿ ಈ ಮೇಲಿನ ಅಂಶ ಪ್ರಕಟವಾಗಿದೆ. ಅದರ ಪ್ರಕಾರ 2050ರ ಹೊತ್ತಿಗೆ ದೇಶದ ನಗರವಾಸಿಗಳ ಸಂಖ್ಯೆ ಗಣನೀಯವಾಗಿ ಏರಲಿದೆ.

ಈಗಿರುವ ನಗರ ಜನಸಂಖ್ಯೆಗೆ ಹೆಚ್ಚುವರಿಯಾಗಿ ಇನ್ನೂ ಸುಮಾರು 30 ಕೋಟಿ ಜನ ಸೇರಲಿದ್ದಾರೆ! ಇದು ಭಾರತದ ಪಾಲಿಗೆ ಸಂತಸದ ಸುದ್ದಿಯೇನೂ ಅಲ್ಲ. ಏಕೆಂದರೆ ಈಗಾಗಲೇ ದೇಶದ ಮಹಾನಗರಗಳೂ ಸೇರಿದಂತೆ ಇತರ ನಗರಗಳು ಜನರಿಂದ ತುಂಬಿ ತುಳುಕುತ್ತಿವೆ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಇಲ್ಲಿನ ಜನಸಂಖ್ಯೆ 1 ಕೋಟಿಗೂ ಮೀರಿ ಬೆಳೆದಿದೆ.

ಇದಕ್ಕೆ ಸರಿಸಮವಾಗಿ ವಾಹನಗಳು 65 ಲಕ್ಷಕ್ಕೂ ಮಿಕ್ಕಿವೆ. ಇವುಗಳಿಗೆ ರಸ್ತೆ ಮುಂತಾದ ಸೌಕರ್ಯಗಳನ್ನು ನೀಡಲು ಸರ್ಕಾರಗಳು ಹೆಣಗುತ್ತಿವೆ. ಜನರಿಗೆ ನೀಡಬೇಕಾದ ಕನಿಷ್ಠ ಸವಲತ್ತುಗಳ ಪೂರೈಕೆಯೂ ಸಮರ್ಪಕವಾಗಿ ಆಗುತ್ತಿಲ್ಲ.

ಕಾವೇರಿ ನದಿ 100 ಕಿ.ಮೀ.ಗೂ ಹೆಚ್ಚು ದೂರದಿಂದ ಬೆಂಗಳೂರಿಗೆ ಈಗಾಗಲೇ ಹರಿದು ಬರುತ್ತಿದೆ. ಅದರ ಹರಿವಿನ ಹೆಚ್ಚಳದ ಜೊತೆಗೆ ಶರಾವತಿ ನದಿ ನೀರನ್ನೂ ನಗರಗಳಿಗೆ ಹರಿಸುವ ಬಗ್ಗೆ ಚಿಂತನೆ ನಡೆದಿದೆ.

ಇಷ್ಟು ಸೌಕರ್ಯ ನಗರಿಗರಿಗೆ ಮಾತ್ರ ಏಕೆ ಕೊಡಬೇಕು ಎಂಬುದು ಈಗ ಎದ್ದಿರುವ ಮೂಲ ಪ್ರಶ್ನೆ. ಈಗಾಗಲೆ ಹಳ್ಳಿಗಳಲ್ಲೂ ನೀರಿನ ಕೊರತೆಯಿದೆ. ಅಲ್ಲಿಂದ ನೀರನ್ನು ನಗರಕ್ಕೆ ಎಳೆದುತಂದು ಇಲ್ಲಿನ ಜನ, ಹೋಟೆಲ್‌, ವಾಹನ, ಆಸ್ಪತ್ರೆ ಹೀಗೆ ತೀರಾ ಅಗತ್ಯ ಹಾಗೂ ಅನಗತ್ಯ ಕಾರಣಗಳಿಗೆ ವ್ಯಯಿಸುವುದು ಎಷ್ಟು ವೈಜ್ಞಾನಿಕ ಹಾಗೂ ತಾರ್ಕಿಕ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.

ಎಲ್ಲ ಹಳ್ಳಿಗಳೂ ನಗರಗಳತ್ತ ಮುಖ ಮಾಡಿರುವುದು ನಗರಗಳಲ್ಲಿ ಯಥೇಚ್ಛವಾಗಿ ತೆರೆದುಕೊಳ್ಳುತ್ತಿರುವ ಬದುಕುವ ದಾರಿಗಾಗಿ. ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆ ಇವೆ. ಜೊತೆಗೆ ಕಾಲಕಾಲಕ್ಕೆ ಸರಿಯಾಗಿ ಆಗದ ಮಳೆ ಬೆಳೆಯ ಕಾರಣ ಕೃಷಿ ಸೊರಗುತ್ತಿದೆ.

ಇದರಿಂದ ಬದುಕನ್ನು ಅರಸಿ ನಗರಕ್ಕೆ ವಲಸೆ ಬರುವವರ ಸಂಖ್ಯೆ ಕಳೆದ ದಶಕದಿಂದ ವಿಪರೀತವಾಗಿ ಹೆಚ್ಚಿದೆ. ಈ ವಲಸಿಗರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕೊಡುವಲ್ಲಿ ನಗರಗಳು ವಿಫಲವಾಗುತ್ತಿವೆ.

ಆದರೂ ದುಡಿತಕ್ಕೆ ಹೇರಳವಾದ ಅವಕಾಶಗಳಿದ್ದು ಒಪ್ಪೊತ್ತಿನ ಊಟಕ್ಕೂ ತತ್ವಾರವಾಗುವ ಹಳ್ಳಿಗಳಿಗಿಂತ ನಗರಗಳಲ್ಲಿ ಹೆಚ್ಚು ‘ಸುಖ’ವನ್ನು ಕಾಣುತ್ತಿರುವ ಜನರ ವಲಸೆ ನಿರಂತರವಾಗಿದೆ. ಇತ್ತ ನಗರಗಳಲ್ಲಿ ಅತ್ಯಾಧುನಿಕತೆಯ ಹೆಸರಿನಲ್ಲಿ ಬಹುಮಹಡಿ ಕಟ್ಟಡಗಳು ಎಗ್ಗಿಲ್ಲದೆ ತಲೆ ಎತ್ತುತ್ತಿವೆ.

ಆಧುನಿಕತೆಯ ಹೆಸರಿನಲ್ಲಿ ಮಾಲ್‌ಗಳು ನಿರ್ಮಾಣವಾಗುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮೇಲ್ಸೇತುವೆಗಳು, ಕಾರಿಡಾರ್‌ಗಳು, ಮೆಟ್ರೊ ಇತ್ಯಾದಿಗಳು ನಗರಗಳ ಬೆಡಗು ಬೆರಗನ್ನು ನೂರ್ಮಡಿಗೊಳಿಸುತ್ತಿವೆ.

ಇವುಗಳನ್ನು ನಿರ್ಮಿಸಲು ಬೇಕಾಗುವ ಮಾನವ ಸಂಪನ್ಮೂಲವನ್ನು ಈ ವಲಸಿಗರು ಪೂರೈಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ವ್ಯಯವಾಗುವ ನೀರು, ನಂತರ ಆ ಜನವಸತಿಗೆ ಬೇಕಾದ ನೀರಿನ ಪೂರೈಕೆ ಇತ್ಯಾದಿಗಳ ಲೆಕ್ಕಾಚಾರ ಮಾಡಿದರೆ ಎರಡು ಸುಳಿಗಳು ನಮ್ಮನ್ನು ಸಿಲುಕಿಸುತ್ತವೆ.

ಒಂದು, ಇಷ್ಟೊಂದು ಅಪವ್ಯಯ ಮಾಡಿ ಮಹಾನಗರಗಳನ್ನೇ ಮತ್ತೆ ಅಭಿವೃದ್ಧಿಪಡಿಸಬೇಕೇ ಎನ್ನುವುದು. ಇನ್ನೊಂದು, ಕುಡಿಯುವುದಕ್ಕೂ ನೀರಿಗೆ ಬರವಿರುವಾಗ ಕಟ್ಟಡಗಳಿಗೆ ಈ ಪರಿಯಾಗಿ ಗ್ಯಾಲನ್ನುಗಟ್ಟಲೆ ನೀರು ಸುರಿದು ‘ಸಿರಿವಂತರಿಗೆ ಮಾತ್ರ ಸ್ವರ್ಗ’ ನಿರ್ಮಾಣವಾಗಬೇಕೇ ಎನ್ನುವುದು.

ಕೆರೆ ಕಟ್ಟೆಗಳನ್ನೂ ನುಂಗಿ ನಿಲ್ಲುವ ಈ ಸ್ವರ್ಗದ ಮೇಲೆ ಯಾರು ತಾನೆ ಸುಖವಾಗಿರಲು ಸಾಧ್ಯ  ಎನ್ನುವುದು ಸಿನಿಕತನದ ಮಾತಲ್ಲ. ನಗರಗಳು, ಮಹಾನಗರಗಳಿಗೆ ಇಂದು ತೀರದ ದಾಹವಿದೆ. ಅದಕ್ಕೆ ಎಲ್ಲ ಸಂಪನ್ಮೂಲಗಳೂ ಬಲಿಯಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ನಗರದ ಬದುಕು ಅಸಹನೀಯವಾಗುತ್ತದೆ.

ಇದು ಬಹುತೇಕವಾಗಿ ಅನ್ವಯವಾಗುವುದು ವಲಸಿಗರಿಗೆ. ನೆರಳು, ನೀರು ಎರಡೂ ಇರದ ಅವರು ದಿನಗೂಲಿಯನ್ನು ನೆಚ್ಚಿಕೊಂಡು ನಗರಗಳಿಗೆ ತಂಡೋಪತಂಡವಾಗಿ ಗುಳೆ ಬರುತ್ತಿದ್ದಾರೆ. ಇವರಿಗೆ ಕೆಲಸ ಹಾಗೂ ದಿನದ ಲೆಕ್ಕಕ್ಕೆ ಕೂಲಿ ಸಿಗಬಹುದು. ಆದರೆ ದಣಿದ ಅವರ ದೇಹಕ್ಕೆ ಆರಾಮ ನೀಡಲು ಮೇಲೊಂದು ಸೂರೇ ಇರದ ಬೀದಿ ಬದಿಯ ಬದುಕು ಅವರದಾಗಬಹುದು!

ಇಂದು ನಗರಗಳಿಗೆ ವಲಸೆ ಬರುತ್ತಿರುವವರು ಹೆಚ್ಚಾಗಿ ಕೃಷಿ ಮೂಲದವರು. ಅವರೆಲ್ಲ ಬಹುತೇಕ ಇಲ್ಲಿ ಬದುಕು ಕಂಡುಕೊಳ್ಳುತ್ತಿರುವುದು ಕಟ್ಟಡ ಕಾರ್ಮಿಕರಾಗಿ. ಏರುತ್ತಿರುವ ತಾಪಮಾನ ಹಾಗೂ ಪ್ರವಾಹವನ್ನು ಉಂಟುಮಾಡುವ ಮಳೆ ಎರಡೂ ಅವರ ಜೀವನವನ್ನು ನುಂಗಿ ಹಾಕುವುದು ನಿಶ್ಚಿತ.

ಈ ಹಿನ್ನೆಲೆಯಲ್ಲಿ ನಗರಗಳಿಗೆ ಈ ವರ್ಗದವರ ವಲಸೆಯನ್ನು ನಿಯಂತ್ರಿಸಬೇಕಾದ ಜರೂರಿದೆ. ಅದಕ್ಕೆ ಇರುವ ಏಕೈಕ ಮಾರ್ಗ ಅವರಿಗೆ ಅವರ ಊರುಗಳಲ್ಲಿ ಅಗತ್ಯ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಿ ಕೊಡುವುದು. ನೀರು, ನೆರಳಿನ ಜೊತೆ ಗಳಿಕೆಯ ದಾರಿಯನ್ನು ಅವರಿಗೆ ತೆರೆದರೆ ಅವರ್‍ಯಾರೂ ಈ ರಕ್ಕಸ ನಗರಿಗಳ ಕಡೆ ತಿರುಗಿ ನೋಡುವುದಿಲ್ಲ.

ಅದಕ್ಕೆ ಮೊತ್ತ ಮೊದಲು ನಮ್ಮ ಮಹಾನಗರಗಳಲ್ಲಿ ಆಗಬೇಕಾಗಿರುವುದು ಅವೈಜ್ಞಾನಿಕ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ನಿರ್ಮಾಣಗಳ ನಿಲುಗಡೆ. ಇದಕ್ಕೆ ಆಡಳಿತ ವ್ಯವಸ್ಥೆ ಸಿದ್ಧವಾಗಬೇಕಾದ ತುರ್ತು ಈಗ ಇದೆ.

ಹೆಚ್ಚುತ್ತಿರುವ ಬಂಜರು ಭೂಮಿ, ಬರಡು ಭೂಮಿ, ಕೃಷಿ ನಡೆಯದ ಭೂಮಿ, ಬತ್ತುತ್ತಿರುವ ಕೆರೆ ಕುಂಟೆ, ನದಿಗಳು, ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ, ಕೃಷಿ ಭೂಮಿಯ ಅತಿಕ್ರಮಣ, ನೀರಿನ ಮೂಲಗಳನ್ನೇ ನುಂಗಿ ನಿಲ್ಲುವ ಕಟ್ಟಡಗಳು,

ದಾಖಲೆಗಳಲ್ಲಿ ಮಾತ್ರ ಕಾಣಸಿಗುವ ಕೆರೆ ಕಟ್ಟೆಗಳು ಅಭಿವೃದ್ಧಿಯನ್ನು ಅಣಕಿಸುವಂತಿವೆ. ಇವು ನೇರವಾಗಿ ಪ್ರಭಾವ ಬೀರುವುದು ಒಟ್ಟಾರೆ ಜನಸಮುದಾಯದ ಮೇಲೆ, ಅವರ ಜೀವನ ಮಟ್ಟದ ಮೇಲೆ.

ಕನಿಷ್ಠ ಅಗತ್ಯಗಳೂ ಸಿಗದ ಜನಪ್ರದೇಶ ಅದು ಹೇಗೆ ಅಭಿವೃದ್ಧಿ ಹೊಂದಿದೆ ಎಂದು ಕರೆಸಿಕೊಳ್ಳಬಲ್ಲದು? ಇದನ್ನು ಒಪ್ಪುವುದಾದರೆ ಈಗ ಶರವೇಗದಲ್ಲಿ ಬೆಳೆಯುತ್ತಿರುವ ನಗರಗಳು ಯಾವುವೂ ವಾಸಯೋಗ್ಯವಲ್ಲದ ಊರುಗಳಾಗುತ್ತವೆ. ಅಂತಹ ನೂರಾರು ನಗರಗಳು ನಮ್ಮ ದೇಶದಲ್ಲಿ ಈಗ ಇವೆ.
 
ಇಂತಹ ಅಭಿವೃದ್ಧಿ ನಮಗೆ ಬೇಕೆ ಎಂಬ ಪ್ರಶ್ನೆ ಹಾಕಿಕೊಳ್ಳುತ್ತಲೇ ಇದೀಗ ನಡೆಯುತ್ತಿರುವ ‘ಜಾಣ ನಗರ’ಗಳ ನಿರ್ಮಾಣದ ಮಾತು ಹುಸಿಯಾಗದಿರಲಿ. ಹೊಸ ಕನಸನ್ನು ಈ ವರ್ಗದ ಜನರ ಕಣ್ಣಲ್ಲಿ ಸ್ಥಾಯಿಯಾಗಿಸುತ್ತಿರುವ ಆಡಳಿತಗಳು ನುಡಿದಂತೆ ನಡೆಯಲಿ. ಹಳ್ಳಿಗಳು ಕನಿಷ್ಠ ಸೌಲಭ್ಯಗಳನ್ನು ಹೊಂದಿ ನೆಮ್ಮದಿಯ ಉಸಿರು ಬಿಡುವಂತಾಗಲಿ. ನಗರಿಗರ ಬಿಸಿ ಉಸಿರು ಅವರಿಗೆ ತಟ್ಟದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT