ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಸೆಲ್‌ ದಿಟ್ಟ ಹೋರಾಟಗಾರ’

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ/ಐಎಎನ್‌ಎಸ್‌): ‘ವೆಸ್ಟ್‌ ಇಂಡೀಸ್‌ ತಂಡದ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ದಿಟ್ಟ ಹೋರಾಟಗಾರ. ಅವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಿರ್ಭೀತಿಯಿಂದ ಬ್ಯಾಟ್‌ ಬೀಸುತ್ತಾರೆ’ ಎಂದು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನಾಯಕ ಗೌತಮ್‌ ಗಂಭೀರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಸೆಲ್‌ 36 ಎಸೆತಗಳಲ್ಲಿ 66 ರನ್‌ ಬಾರಿಸಿ ಸೋಲಿನ ಭೀತಿ ಎದುರಿಸಿದ್ದ ಕೆಕೆಆರ್‌ಗೆ ಗೆಲುವಿನ ಸವಿ ಉಣಬಡಿಸಿದ್ದರು.

‘ಐಪಿಎಲ್‌ನಲ್ಲಿ ನಾವು ಹಲವಾರು ಪ್ರತಿಭಾನ್ವಿತ ಆಟಗಾರರನ್ನು ನೋಡುತ್ತಿದ್ದೇವೆ. ಅವರಲ್ಲಿ ರಸೆಲ್‌ ಕೂಡಾ ಒಬ್ಬರು.  ಅವರು ಎಂತಹ ಸಂದಿಗ್ಧ ಸಂದರ್ಭದಲ್ಲೂ ಲೀಲಾಜಾಲವಾಗಿ ರನ್‌ ಪೇರಿಸುವ ಗುಣ ಮೈಗೂಡಿಸಿಕೊಂಡಿದ್ದಾರೆ. ಕಿಂಗ್ಸ್‌ ಇಲೆವೆನ್‌ ವಿರುದ್ಧ ಅವರ ಆಟವನ್ನು ನೋಡಿದವರಿಗೆ ಇದು  ತಿಳಿಯುತ್ತದೆ’ ಎಂದು ಗಂಭೀರ್‌ ತಿಳಿಸಿದ್ದಾರೆ.

‘60 ರನ್‌ ಆಗುವಷ್ಟರಲ್ಲಿ ಪ್ರಮುಖ ಐದು ಮಂದಿ ಔಟ್‌ ಆಗಿದ್ದರಿಂದ ನಾವು  ಒತ್ತಡಕ್ಕೆ ಒಳಗಾಗಿದ್ದು ನಿಜ. ಆದರೆ ಯೂಸುಫ್‌ ಪಠಾಣ್‌ ಮತ್ತು ರಸೆಲ್‌ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವಿನ ಆಸೆ ಕೈಬಿಟ್ಟಿರಲಿಲ್ಲ. ರಸೆಲ್‌ ಅಮೋಘ ಆಟಗಾರ. ಅವರು ಡ್ರೆಸಿಂಗ್‌ ಕೊಠಡಿಯಲ್ಲಿ ಸಹಆಟಗಾರರ ಜತೆ ತುಂಬಾ ಆತ್ಮೀಯವಾಗಿರುತ್ತಾರೆ’ ಎಂದೂ ಗಂಭೀರ್‌ ನುಡಿದಿದ್ದಾರೆ.

ಯೂಸುಫ್‌ ನಮ್ಮ ‘ಟ್ರಂಪ್‌ ಕಾರ್ಡ್‌’: ‘ಸ್ಫೋಟಕ ಬ್ಯಾಟ್ಸ್‌ಮನ್‌ ಯೂಸುಫ್‌ ಪಠಾಣ್‌ ನಮ್ಮ ತಂಡದ ‘ಟ್ರಂಪ್‌ ಕಾರ್ಡ್‌’. ಅವರು ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ಅಬ್ಬರದ ಆಟ ಆಡುವ ಛಾತಿ ಹೊಂದಿದ್ದಾರೆ’ ಎಂದು ಕೆಕೆಆರ್‌ ಬೌಲಿಂಗ್‌ ಕೋಚ್‌ ವಾಸೀಂ ಅಕ್ರಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಯೂಸುಫ್‌ ಅವರಂತಹ ಆಟಗಾರ ನಮ್ಮ ತಂಡದ ಭಾಗವಾಗಿರುವುದು ಸಂತಸದ ವಿಚಾರ. ಅವರು ಬೌಲಿಂಗ್‌, ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌  ಹೀಗೆ ಮೂರೂ ವಿಭಾಗಗಳಲ್ಲೂ ತಂಡಕ್ಕೆ ನೆರವಾಗಬಲ್ಲರು’ ಎಂದರು.

‘ಸುನಿಲ್‌ ನಾರಾಯಣ್‌ ಅವರ ಆಟ ಕಂಡು ಉಲ್ಲಸಿತನಾಗಿದ್ದೇನೆ. ಅವರು ಹೊಸ ಶೈಲಿಗೆ ಹೊಂದಿಕೊಂಡು ಬೌಲಿಂಗ್‌ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ.  ಅವರು ಇನ್ನೂ ಕೆಲವು ಪಂದ್ಯಗಳಲ್ಲಿ ಆಡಬೇಕು. ಆಗ ಅವರ ಆತ್ಮವಿಶ್ವಾಸ ಇಮ್ಮಡಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ವಿಭಾಗಗಳಲ್ಲೂ ಎಡವಿದೆವು: ‘ನಾವು ಚೆನ್ನಾಗಿ ಬ್ಯಾಟಿಂಗ್‌ ಮಾಡಲಿಲ್ಲ. ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲೂ ಎಡವಿದೆವು. ಹೀಗಾಗಿ ನಮಗೆ ಸೋಲು ಎದುರಾಯಿತು’ ಎಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಜಾರ್ಜ್‌ ಬೇಲಿ ನುಡಿದಿದ್ದಾರೆ.

‘ನಾವು ಇನ್ನೂ 20ರನ್‌ ಹೆಚ್ಚು ಗಳಿಸಬೇಕಿತ್ತು. ಜತೆಗೆ ನಮ್ಮ ಫೀಲ್ಡಿಂಗ್‌ ಕೂಡಾ ಪರಿಣಾಮಕಾರಿ ಆಗಿರಲಿಲ್ಲ. ನಮ್ಮ ಆಟಗಾರರು ಕೆಲ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರಲ್ಲದೇ ರನ್‌ಔಟ್‌ ಅವಕಾಶಗಳನ್ನೂ ಹಾಳು ಮಾಡಿದರು’ ಎಂದು ಬೇಲಿ ಪ್ರತಿಕ್ರಿಯಿಸಿದ್ದಾರೆ.

‘ಕೆಕೆಆರ್‌ ತಂಡದ ಯೂಸುಫ್‌ ಪಠಾಣ್‌ ಮತ್ತು ಆ್ಯಂಡ್ರೆ ರಸೆಲ್‌ ಅತ್ಯುತ್ತಮವಾಗಿ ಆಡಿದರು. ಹೀಗಾಗಿ ಎದುರಾಳಿಗಳಿಗೆ
ಸುಲಭವಾಗಿ ಗೆಲುವು ದಕ್ಕಿತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT