ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಕವಿ’ ಅಲ್ಲ ‘ವಿಶ್ವಕವಿ’!

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

‘ರಾ ಷ್ಟ್ರಕವಿ’ ಪಟ್ಟ ಕಟ್ಟುವುದಕ್ಕಾಗಿ ಮತ್ತೊಮ್ಮೆ  ಹುಡುಕಾಟ ಆರಂಭ­ವಾಗಿದೆ. ಈ ಸಂದರ್ಭದಲ್ಲಿ, ಹಿಂದೆ ‘ರಾಷ್ಟ್ರಕವಿ’ ಆಯ್ಕೆಗಾಗಿ ಪ್ರಯತ್ನಗಳು ನಡೆದಾಗ ಕಾಡಿ­ದಂತಹ ಸಂದೇಹಗಳು ಈಗಲೂ ಕಾಡುತ್ತಿವೆ.

ನಮ್ಮಲ್ಲಿ ಅನೇಕ ಜಗದ್ಗುರುಗಳಿದ್ದಾರೆ. ಆದರೆ ಇರುವುದು ಒಂದೇ ಜಗತ್ತು. ಹೀಗಾಗಿ ಅವರು ಯಾವ ಜಗತ್ತಿನ ಗುರುಗಳು ಎಂದು ಕವಿ­ಯೊಬ್ಬರು ಗೇಲಿ ಮಾಡಿದ್ದರು. ಹಾಗೆಯೇ, ಆಯ್ಕೆಯಾಗುವ ಕನ್ನಡದ ಕವಿ ಯಾವ ರಾಷ್ಟ್ರದ ಕವಿ ಎನಿಸಿಕೊಳ್ಳುತ್ತಾರೆ? ಆಯ್ಕೆಯಾದವರು, ಆಗುವವರು ಕರ್ನಾಟಕದ ‘ರಾಷ್ಟ್ರಕವಿ’ಯೇ? ಸಾಮಾನ್ಯವಾಗಿ ರಾಷ್ಟ್ರ ಎಂಬ ಪದವನ್ನು nation ಎಂಬ ಅರ್ಥದಲ್ಲಿ ಭಾರತವನ್ನು ಸೂಚಿಸಲು ಬಳಸುತ್ತಿದ್ದೇವೆ; ರಾಷ್ಟ್ರಗೀತೆ, ರಾಷ್ಟ್ರಪಿತ, ರಾಷ್ಟ್ರೀಯ ಇತ್ಯಾದಿ ರೂಪಗಳನ್ನು ನೋಡ­ಬಹುದು;
ಕರ್ನಾಟಕದಂತಹ ಘಟಕ­ವನ್ನು ರಾಜ್ಯ ಎಂದು ಗುರುತಿಸಲಾಗುತ್ತದೆ. ಈ ಪ್ರಶಸ್ತಿಯನ್ನು ನೀಡುತ್ತಿರುವುದು ಕರ್ನಾಟಕ ಸರ್ಕಾರ; ಹೀಗಾಗಿ ಸಾಂಪ್ರದಾಯಿಕ ಅರ್ಥದಲ್ಲಿ ತೆಗೆದುಕೊಂಡರೆ ಅದು ಇಡೀ ರಾಷ್ಟ್ರವ್ಯಾಪ್ತಿಯ ಪ್ರಶಸ್ತಿಯನ್ನು ನೀಡಬಹುದೇ ಅಥವಾ ನಮ್ಮ ಸರ್ಕಾರ­ವೇನಾ­ದರೂ ‘ಕರ್ನಾಟಕವೇ ನಿಜವಾದ ಅರ್ಥದಲ್ಲಿ ರಾಷ್ಟ್ರ (nation), ಭಾರತ­ವೇನಿ­ದ್ದರೂ ಅಂಥ ಹಲವಾರು ರಾಷ್ಟ್ರಗಳ ಒಂದು ಒಕ್ಕೂಟ’ (federation) ಮಾತ್ರ ಎಂದು ಪರಿಭಾವಿಸಿ ಈ ಕಾರ್ಯ ಮಾಡುತ್ತಿದೆಯೇ? ಇಲ್ಲದಿದ್ದರೆ ಆ ಕವಿಗೆ ‘ರಾಜ್ಯಕವಿ’ ಎನ್ನಬೇಕಾಗಿತ್ತು ಅಥವಾ ನಾಡಗೀತೆ ಎಂಬಂತೆ ‘ನಾಡಕವಿ’ ಎನ್ನಬೇಕಾಗಿತ್ತು.

ನಮ್ಮ ಕವಿಯು ಇಡೀ ಭಾರತ ವ್ಯಾಪ್ತಿಯ ದರ್ಜೆಯವರು, ಔನ್ನತ್ಯ ಇರುವವರು ಎಂಬ ಅಭಿಮಾನವನ್ನು ಇದು ಸೂಚಿಸಿದರೆ, ‘ರಾಷ್ಟ್ರಕವಿ’ ಎಂದೇಕೆ, ‘ವಿಶ್ವಕವಿ’ ಎಂದೇ ಕರೆಯಬಹುದಲ್ಲ?  ಕನ್ನಡ ಜಗತ್ತು ಎಂಬುದು ಸುಂದರ ಕಲ್ಪನೆ; ಆದ್ದರಿಂದ ‘ಜಗತ್ಕವಿ’ ಎಂದೂ ಕರೆಯ­ಬಹುದು. ರವೀಂದ್ರನಾಥ ಟ್ಯಾಗೋರರನ್ನು ‘ವಿಶ್ವಕವಿ’ ಎಂದು ಕರೆದುದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ, ಅಂದರೆ ಜಾಗತಿಕ ಮಟ್ಟದ ಪ್ರಶಸ್ತಿ ಬಂದುದು ಕಾರಣವಾದಂತೆ, ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದ ಕವಿ ‘ರಾಷ್ಟ್ರಕವಿ’ ಆಗುವುದಿಲ್ಲವೇ? ಹಾಗಾದರೆ ರಾಷ್ಟ್ರ ಮಟ್ಟದಲ್ಲಿ ನೀಡಲಾಗುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿಗಳೆಲ್ಲ ‘ರಾಷ್ಟ್ರಕವಿ’ಗಳೇ ಅಲ್ಲವೇ? ಅಂತಹ ಸಾಹಿತಿಗಳು, ರಾಷ್ಟ್ರ ಸಾಹಿತಿಗಳಲ್ಲವೇ?

ಕೇಂದ್ರ ಸರ್ಕಾರ ಕೊಡಮಾಡುವ ‘ಭಾರತ ರತ್ನ’ದಂತೆ ಹಿಂದೆ ಕರ್ನಾಟಕ ಸರ್ಕಾರ ತನ್ನ ಪರಿಧಿಯಲ್ಲಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿತ್ತು. ಹಾಗೆಯೇ  ‘ರಾಷ್ಟ್ರಕವಿ’ ಎಂಬುದರ ಬದಲು ‘ಕರ್ನಾಟಕ ಕವಿ’ ಎಂಬ ಶಬ್ದ  ಸೂಕ್ತವಾಗ­ಬಹುದೇ?

ಇನ್ನೊಂದು ಸಮಸ್ಯೆ. ‘ರಾಷ್ಟ್ರಕವಿ’ಯನ್ನು ಆಯ್ಕೆ ಮಾಡುವುದು ಪದ್ಯ ಬರೆಯುವವರ ಪೈಕಿ ಮಾತ್ರವೇ? ಅತ್ಯಂತ ಶಕ್ತಿಶಾಲಿ ಗದ್ಯ ಬರೆದ ಸಾಹಿತಿಯೂ ಇದಕ್ಕೆ ಅರ್ಹನಾಗುವುದಿಲ್ಲವೇ? ‘ಗದ್ಯಂ ಕವೀನಾಂ ನಿಕಷಂ ವದಂತಿ’ ಎಂಬ ಮಾತಿದೆ; ಗದ್ಯವು ಕವಿಯ ಯೋಗ್ಯತೆಯನ್ನು ಪರೀಕ್ಷಿಸುವ ಒರೆಗಲ್ಲು ಎಂಬುದು ಇದರರ್ಥ. ಅಂದರೆ ಗದ್ಯವೂ ಕಾವ್ಯವೇ; ಗದ್ಯ ಬರೆದವನೂ ಕವಿಯೇ. ಹಾಗೆಯೇ ನಾಟಕಕಾರರೂ; ನಾಟಕ­ವನ್ನು ದೃಶ್ಯಕಾವ್ಯ ಎನ್ನುತ್ತಿ­ದ್ದ­ರಲ್ಲ. ಅಂದರೆ ಹಿಂದೆ ಕವಿ ಎಂಬುದು ಪದ್ಯ, ಗದ್ಯ, ನಾಟಕ - ಈ ಮೂರನ್ನು ಬರೆದವರನ್ನೂ ಒಳಗೊಳ್ಳುತ್ತಿತ್ತು. ಹಾಗಾಗಿ ಗದ್ಯ,- ನಾಟಕಗಳನ್ನು ಬರೆದ­ವ­ರನ್ನು ಪ್ರಶಸ್ತಿಯ ವ್ಯಾಪ್ತಿಯಿಂದ ಹೊರಗಿರಿಸು­ವುದು ಸರಿಯೇ ಅಥವಾ ಗದ್ಯ ಲೇಖಕರನ್ನೂ ನಾಟಕ­ಕಾರ­ರನ್ನೂ ‘ರಾಷ್ಟ್ರಕವಿ’ ಪ್ರಶಸ್ತಿಗೆ ಸೂಚಿಸಿ­ದರೆ ಅದನ್ನು ಪರಿಗಣಿಸಲಾಗುತ್ತ­ದೆಯೇ? ಅವರೂ ಅರ್ಹತೆ ಪಡೆಯಲು ಒಂದ­ಷ್ಟಾದರೂ ಪದ್ಯ ಬರೆದಿರಬೇಕು ಎಂದು ನಿರೀಕ್ಷಿಸ­ಲಾಗು­ತ್ತದೆಯೇ? ಹೆಸರು ‘ರಾಷ್ಟ್ರಕವಿ’ ಯಾದರೂ ಒಟ್ಟಾರೆ ಶ್ರೇಷ್ಠ ಸಾಹಿತ್ಯ ರಚಿಸಿ­ದವರನ್ನು ಈ ಪಟ್ಟಕ್ಕೆ ಆಯ್ಕೆ ಮಾಡಲಾಗು­ತ್ತದೆಯೇ? ಆಗ ಅಂಥವರು ‘ರಾಷ್ಟ್ರಕವಿ’ ಆಗು­ವುದರ ಬದಲು ‘ರಾಷ್ಟ್ರ ಲೇಖಕ’ರಾಗುತ್ತಾ­ರೇನೋ? ಈಗ ಆಯ್ಕೆ ಸಮಿತಿ ಇರಿಸಿಕೊಂಡಿರುವ ಮಾನದಂಡಗಳನ್ನು ಸರ್ಕಾರ ಸೂಚಿಸಿದೆಯೋ ಅಥವಾ ಸಮಿತಿಯೇ ಆ ಬಗ್ಗೆ ನಿರ್ಧಾರಗಳನ್ನು ಕೈಗೊಂಡಿದೆಯೋ?

‘ರಾಷ್ಟ್ರಕವಿ’ ಆಗುವವರು ಸರ್ಕಾರದ ಕವಿಗಳಾಗುತ್ತಾರೆಯೇ? ಹಿಂದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಎನ್‌ಟಿಆರ್ ಮುಖ್ಯಮಂತ್ರಿ­ಯಾಗಿದ್ದಾಗ ಕೆಲವು ಸಾಹಿತಿಗಳು, ಕಲಾವಿದರಿಗೆ ‘ಆಸ್ಥಾನ ವಿದ್ವಾನ್’ ಪಟ್ಟ ಕಟ್ಟಲಾಗುತ್ತಿತ್ತು; ಈಗಲೂ ಆ ಪದ್ಧತಿ  ಅಲ್ಲಿ ಇದೆಯೋ ಇಲ್ಲವೋ ತಿಳಿಯದು. ಸಿನಿಮಾಗಳಲ್ಲಿ ರಾಜನ ಪಾರ್ಟು ಮಾಡಿ ಮಾಡಿ ತಮಗೆ ಪರಿಚಿತವಾಗಿದ್ದ ಆ ಪರಿಕಲ್ಪನೆಯನ್ನು ಎನ್‌ಟಿಆರ್ ಮುಖ್ಯಮಂತ್ರಿ­ಯಾಗಿ ಜಾರಿಗೆ ತಂದಿದ್ದಿರಬಹುದು! ಆ ವಿದ್ವಾಂಸರನ್ನು ತಮ್ಮ ಆಸ್ಥಾನದವರು ಎಂದು ತಿಳಿಯುವ ಮನೋಭಾವವೂ ಅವರದಾಗಿದ್ದಂತೆ ಕಾಣುತ್ತದೆ. 

ನಮ್ಮ ಪಂಪನಂತಹ ಕವಿಯೂ ರಾಜನ ಆಸ್ಥಾನದಲ್ಲಿದ್ದು ಅವನಿಂದ ಅಗ್ರಹಾರ ಪಡೆದು ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿ­ಸಿದ. ಪಂಪನಿಂದಾಗಿ ಅರಿಕೇಸರಿ ಅಜ­ರಾಮ­ರ­ನಾದ. ಸರ್ಕಾರದ ‘ರಾಷ್ಟ್ರಕವಿ’ ಪಟ್ಟ ಪಡೆಯು­ವವರು ಹೀಗೆಯೇ ಸರ್ಕಾರವನ್ನು ಸದಾ ಬೆಂಬ­ಲಿಸುತ್ತಲೂ, ವೈಭವೀಕರಿಸುತ್ತಲೂ ಇರ­ಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆಯೇ? ಅಂದರೆ ಈ ಪಟ್ಟಕ್ಕೆ ಬಂದ ಕವಿ ಸರ್ಕಾರದ ಕವಿಯಾಗು­ತ್ತಾರೆಯೇ? ಅವರು ಸರ್ಕಾರವನ್ನು ಟೀಕಿಸುವ ಅಧಿಕಾರವನ್ನು (ಹೊಂದಿದ್ದರೆ) ಮುಂದೆಯೂ ಉಳಿಸಿಕೊಳ್ಳ­ಬಹುದೇ ಅಥವಾ ಟೀಕಿಸುವ ಜಾಯಮಾನ ಇಲ್ಲದವರನ್ನೇ ಅದಕ್ಕೆ ಆಯ­ಬೇಕೆಂಬ ಸೂಚನೆ­ಯೇನಾದರೂ ಇದೆಯೇ? ಅಲ್ಲದೆ, ಇಂತಹ ನಿರೀಕ್ಷೆಗಳಿದ್ದರೆ ಬೇರೊಂದು ಪಕ್ಷದ ಸರ್ಕಾರ ಬಂದಾಗ ಅವರ ನೀತಿ ಹೇಗಿರಬೇಕು?

ಇತರ ಪ್ರಶಸ್ತಿಗಳಂತೆ ‘ರಾಷ್ಟ್ರಕವಿ’ ಪಟ್ಟಕ್ಕೆ ಕೃತಿಯೊಂದು ಆಧಾರವಾಗದೆ ಒಬ್ಬ ಸಾಹಿತಿಯ ಸಮಗ್ರ ಸಾಧನೆ ಅಳತೆಗೋಲಾಗಬೇಕಾಗುತ್ತದೆ. ಈಗ ಜನಗಳಿಂದ ಬರುವ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಜವಾಬ್ದಾರಿ ಮಾತ್ರ ಆಯ್ಕೆ ಸಮಿತಿಯದಾಗಿರುತ್ತದೇನೋ.

ಈವರೆಗೆ ಬದುಕಿರುವವರಿಗೆ ಮಾತ್ರ ಈ ಪ್ರಶಸ್ತಿ ನೀಡುವ ಸಂಪ್ರದಾಯವಿದೆ; ಅರ್ಹರು ಸಿಗದಿದ್ದರೆ ಪ್ರಶಸ್ತಿ ಕೊಡದಿರುವ ನಿರ್ಧಾರವನ್ನೂ ತೆಗೆದು­ಕೊಳ್ಳಬಹುದೆಂದು ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ. ಹಾಗಾದಾಗ ಮತ್ತೆ ನಮ್ಮ ನಾಡಿನ ಸಾಹಿತ್ಯ ವಲಯದಲ್ಲಿ ಶೂನ್ಯತೆ ಆವರಿಸಿಬಿಡ­ಬಹುದು. ಆದ್ದರಿಂದ ಮುಂದೆ ಮರಣೋತ್ತರ­ವಾಗಿಯೂ ನೀಡಬಹುದೆಂಬ ನಿರ್ಧಾರಕ್ಕೆ ಸಮಿತಿ ಬರಬಹುದೇ?

ಸರ್ಕಾರವೇ ಕೊಡುವ ಪಂಪ ಪ್ರಶಸ್ತಿಗೆ ಇದುವರೆಗೆ ಕೆಲವರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಹಾಗೆಯೇ ಮಾಡುವ ಅವಕಾಶವಿದ್ದರೆ ಮೊದಲ ಪ್ರಶಸ್ತಿ­ಯನ್ನು ನಮ್ಮ ‘ಆದಿಕವಿ’ಯಾದ ಪಂಪನಿಗೇ ಕೊಡಬೇಕೆಂದು ನಾನು ಸಮಿತಿಗೆ ನಮ್ರನಾಗಿ ಸಲಹೆ ನೀಡಬಯಸುತ್ತೇನೆ (ಪಂಪ ಪ್ರಶಸ್ತಿ­ಯನ್ನೂ ಮೊದಲು ಅವನಿಗೇ ಕೊಡಬೇಕಾಗಿತ್ತು ಎಂಬುದು ನನ್ನ ಅಭಿಮತ).
ಈ ಪಟ್ಟವನ್ನು ಇನ್ನು ಮುಂದೆ ಸದರಿ ‘ರಾಷ್ಟ್ರಕವಿ’ಯು ತೀರಿಕೊಂಡ ದುರದೃಷ್ಟಕರ ಪ್ರಸಂಗದಲ್ಲಿ ಇಂತಿಷ್ಟು ಅವಧಿಯೊಳಗಾಗಿ ನೀಡುವ ನಿರ್ಧಾರವನ್ನೇನಾದರೂ ಸರ್ಕಾರ ಮಾಡಿದೆಯೇ, ಸಮಿತಿ ಆ ಕುರಿತೂ ಸಲಹೆ ನೀಡಬಹುದಲ್ಲವೇ?

ಟಿ.ವಿ. ವಾಹಿನಿಯೊಂದು ಹಿಂದೆ ‘ವರ್ಷದ ಕನ್ನಡಿಗ’ನನ್ನು ಆರಿಸಲು ನಡೆಸಿದ ಮಾದರಿ­ಯಲ್ಲೇ ವಾಹಿನಿಗಳ ಮೂಲಕ ಇದಕ್ಕೂ ಜನಾಭಿಪ್ರಾಯ ಸಂಗ್ರಹ ಮಾಡಿದ್ದರೆ ಆಗುತ್ತಿ­ತ್ತೇನೋ. ಈ ಪಟ್ಟಕ್ಕೆ ತಮಗೆ ಅರ್ಹತೆ ಇದೆ­ಯೆಂದು ಭಾವಿಸುವ ಅಭ್ಯರ್ಥಿಗಳು ಜನರ ಮುಂದೆ  ತಮ್ಮ ಸಾಧನೆಯ ಬಗ್ಗೆ ಒಂದಷ್ಟು ವಿವರಿಸಿ ಹೇಳುವ ಅವಕಾಶ ಇರುತ್ತಿತ್ತು! ಈ ಬಾರಿ ಆಯ್ಕೆಯಾಗದವರು ಮುಂದಿನ ಬಾರಿ­ಯಾದರೂ ಪಟ್ಟ ಸಿಕ್ಕೀತೇನೋ ಎಂದು ಆಸೆ ಹೊಂದಿರಬಹುದಾಗಿತ್ತು. ಒಟ್ಟಿನಲ್ಲಿ ಈ ವಿಷಯ ಬಹುತೇಕರಿಗೆ ಗೊಂದಲಮಯವಾಗಿ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT