ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅಗತ್ಯ’

ಜಾನಪದ ವಿವಿಯಲ್ಲಿ ವಿದೇಶಿ ಕೃಷಿ ಸಂವಾದ ಕಾರ್ಯಕ್ರಮ
Last Updated 2 ಆಗಸ್ಟ್ 2014, 6:21 IST
ಅಕ್ಷರ ಗಾತ್ರ

ಶಿಗ್ಗಾವಿ : ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿದರೆ ಮಾತ್ರ ಕೃಷಿ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಸಂಶೋಧಕಿ ಕ್ಯಾಮಿಲ್ಲ್ ಹೇಳಿದರು.

ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ವಿದೇಶಿ ಕೃಷಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ದೇಶೀಕೃಷಿ ಪದ್ಧತಿ ಸರ್ವಶ್ರೇಷ್ಠವಾಗಿದ್ದು, ಆಹಾರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಇಂದು ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಭೂಮಿಯ ಫಲವತ್ತತೆಗೆ ಧಕ್ಕೆಯುಂಟು ಮಾಡುತ್ತಿದೆ. ಅಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದ ಅವರು, ಈ ಸಮಸ್ಯೆಯನ್ನು ಬಗೆಹರಿಸಲು ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ವಿಧಾನಗಳನ್ನು ಅನುಸರಿಸುವುದು ಅಗತ್ಯ ಎಂದರು.

ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಸಂಶೋಧಕ ತಿಮೋತಿ ಲೋರ್ನಡೇಲ್ ಮಾತನಾಡಿ, ಸಂಸ್ಕೃತ ಮತ್ತು ಕನ್ನಡ ಚಂಪೂ ಕಾವ್ಯಗಳ ತೌಲನಿಕ ಅಧ್ಯಯನ ನಡೆಸುತ್ತಿರುವುದಾಗಿ ತಿಳಿಸಿದ ಅವರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಸಮೃದ್ಧವಾಗಿದೆ.

ಕನ್ನಡ ಮತ್ತು ಸಂಸ್ಕೃತ ವಿಷಯಗಳು ಭಾರತೀಯ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಒಳಗೊಂಡಿರುವ ಕಾರಣಕ್ಕಾಗಿ ಸಂಶೋಧನೆ ಕೈಗೊಂಡಿದ್ದೇನೆ. ಕನ್ನಡದ ನೆಲದಲ್ಲಿ ಈ ಅಧ್ಯಯನ ಕೈಗೊಂಡಿರುವುದಕ್ಕೆ ವಿಶೇಷ ಹೆಮ್ಮೆಯಿದೆ ಎಂದ ಅವರು  ಕವಿ ಕಾಳಿದಾಸನ 'ಮೇಘಧೂತ', ಹೇಮಚಂದ್ರನ 'ಕಾವ್ಯಾನುಶಾಸನ' ಸಂಸ್ಕೃತ ಕೃತಿಗಳ ಕೆಲವು ಶ್ಲೋಕಗಳನ್ನು ಗಮಕಶೈಲಿಯಲ್ಲಿ ಹಾಡಿ ಅದರ ಅರ್ಥವನ್ನು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಆರ್‌.ವಿ.ಎಸ್‌ ಸುಂದರಂ ಅವರು ಮಾತನಾಡಿ, ಚರ್ಚೆ-ಸಂವಾದಗಳ ಮೂಲಕ ಪರಸ್ಪರ ಜ್ಞಾನ ವಿನಿಮಯ ಸಾಧ್ಯವಾಗುತ್ತದೆ. ಜ್ಞಾನ ಸಮೃದ್ಧಿಗೆ ಇಂತಹ ಸಂವಾದ ಅಗತ್ಯ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾಲಯವು 'ದಕ್ಷಿಣ ಭಾರತೀಯ ದೇಶೀಕೃಷಿ ವಿಜ್ಞಾನ ಕೋಶ'ದ ಎರಡು ಸಂಪುಟಗಳನ್ನು ಇಂಗ್ಲಿಷ್ ಭಾಷಾಂತರ ಮಾಡಲಾಗುವುದು. ಇಂಗ್ಲಿಷ್ ಭಾಷೆ ಜ್ಞಾನವನ್ನು ಕನ್ನಡಕ್ಕೆ ಹಾಗೂ ನಮ್ಮ ನೆಲಮೂಲಜ್ಞಾನ ಪರಂಪರೆಯನ್ನು ಬೇರೆ ಭಾಷೆಗಳಿಗೆ ಅನುವಾದ ಕೈಗೆತ್ತಿಕೊಳ್ಳಲಾಗುತ್ತಿದೆ.

ಅದರಿಂದ ಭಾಷಾಸಾಹಿತ್ಯ ಸಮೃದ್ಧಗೊಳ್ಳಲು ಸಾಧ್ಯ ಎಂದ ಅವರು, ಪಾಶ್ಚಿಮಾತ್ಯ ವಿದ್ಯಾರ್ಥಿಗಳು ಸಂಶೋಧನೆಯಲ ಆಸಕ್ತಿಯಿಂದ ತಮ್ಮನ್ನು  ತೊಡಗಿಸಿಕೊಳ್ಳುತ್ತಾರೆ. ಅಂತಹ  ಆಸಕ್ತಿ ನಮ್ಮ ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳಿಗೆ ಮಾದರಿಯಾಗಿದೆ. ದೇಶೀಜ್ಞಾನ ಪರಂಪರೆಗಳಂತಹ ಕ್ಲಿಷ್ಟ ವಿಷಯಗಳನ್ನು ಕುರಿತು ಸಂಶೋಧನೆ ನಡೆಸುತ್ತಿರುವ ಸಂಶೋಧಕರ ಪ್ರಯತ್ನಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಉಪಸ್ಥಿತರಿದ್ದರು.  ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಕುಲಸಚಿವ ಪ್ರೊ. ಡಿ.ಬಿ. ನಾಯಕ ಸ್ವಾಗತಿಸಿದರು.   ಪ್ರಾಧ್ಯಾಪಕಿ ಎಂ.ಬಿ.ಶ್ವೇತಾ ನಿರೂಪಿಸಿದರು,  ಡಾ. ವಿಜಯಲಕ್ಷ್ಮೀ  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT