ಲಂಡನ್ (ಪಿಟಿಐ): ಕಳೆದ ಆರು ವರ್ಷಗಳಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಸರ್ಕಾರಗಳ, ಕಂಪೆನಿಗಳ ಮತ್ತು ಶೈಕ್ಷಣಿಕ ಸಂಸ್ಥೆಗಳ ಸೂಕ್ಷ ಮಾಹಿತಿಗಳನ್ನು ದೋಚುತ್ತಿರುವ ಆಧುನಿಕ ಬೇಹುಗಾರ ತಂತ್ರಾಂಶವೊಂದು (ಸ್ಪೈ ಸಾಫ್ಟ್‌ವೇರ್) ಪತ್ತೆಯಾಗಿದೆ ಎಂದು ಅಮೆರಿಕದ ಭದ್ರತಾ ಕಂಪೆನಿ ಸಿಮ್ಯಾಂಟೆಕ್ ಹೇಳಿದೆ.
‘ರೆಜಿನ್’ ಹೆಸರಿನ ಈ ಬೇಹುಗಾರ ತಂತ್ರಾಂಶವನ್ನು ಯಾವೊದೋ ಒಂದು ದೇಶಕ್ಕಾಗಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಪರಿಣತರು ಸೃಷ್ಟಿಸಿದ್ದಾರೆ ಎಂದು ಸಿಮ್ಯಾಂಟೆಕ್ ವರದಿ ತಿಳಿಸಿದೆ. ಆದರೆ ಇದರ ಹಿಂದೆ ಯಾವ ಸರ್ಕಾರದ ಕೈವಾಡವಿದೆ ಎಂದು ವರಿದಯಲ್ಲಿ ಹೇಳಿಲ್ಲ.
ಕೆಲವೇ ಮಾಲ್‌ವೇರ್‌ಗಳು ಮಾತ್ರ ಬಹಳ ಅಪಾಯಕಾರಿ ಅಥವಾ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇರುವವು. ಇಂತಹ ಮಾಲ್‌ವೇರ್‌ಗಳ ಸಾಲಿಗೆ ಈ ರೆಜಿನ್ ಸೇರಿದ್ದು ಎಂದು ವರದಿ ಮಾಹಿತಿ ನೀಡಿದೆ.
ರಷ್ಯಾ ಗರಿಷ್ಠ ಶೇ28ರಷ್ಟು ‘ರೆಜಿನ್’ ದಾಳಿಗೆ ತುತ್ತಾಗಿದೆ. ಐರ್ಲೆಂಡ್, ಮೆಕ್ಸಿಕೊ, ಇರಾನ್, ಭಾರತ, ಬೆಲ್ಜಿಯಂ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಕೂಡಾ ಈ ವೈರಸ್ ದಾಳಿಗೆ ಒಳಗಾಗಿವೆ.