ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಕ್ಷ್ಮಣ’ರೇಖೆ ಉತ್ಸಾಹದಲ್ಲಿ...

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

‘ಲಕ್ಷ್ಮಣ’ ಚಿತ್ರದ ಅನೂಪ್ ಕನ್ನಡ ಚಿತ್ರರಂಗದ ಪಾಲಿಗೆ ಭರವಸೆಯ ಯುವನಟನಂತೆ ಕಾಣಿಸುತ್ತಿದ್ದಾರೆ. ಅಪ್ಪನ ರಾಜಕೀಯ ಪ್ರಭಾವಳಿಗೆ ಸಿಲುಕದೆ, ಸಿನಿಮಾದಲ್ಲಿ ನೆಲೆ ಕಂಡುಕೊಳ್ಳುವ ಹಂಬಲ ಅವರದು.

‘ಇಲ್ಲ ಇಲ್ಲ... ನಾನು ರಾಜಕೀಯಕ್ಕೆ ಬರಲು ಸಿನಿಮಾ ಕ್ಷೇತ್ರವನ್ನು ಮೆಟ್ಟಿಲಾಗಿ ಬಳಸಿಕೊಳ್ಳುವುದಿಲ್ಲ. ಸಿನಿಮಾ ಒಂದು ಅಪೂರ್ವ ಕಲೆ. ಅದನ್ನೆಲ್ಲ ಹಾಗೆ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು’. ಸಿಕ್ಕಾಪಟ್ಟೆ ಪ್ರಚಾರದೊಂದಿಗೆ ಇಂದು (ಜೂನ್ 24) ತೆರೆ ಕಾಣಲಿರುವ ‘ಲಕ್ಷ್ಮಣ’ ಚಿತ್ರದ ನಾಯಕ ಅನೂಪ್, ರಾಜಕೀಯ ಸೇರಲು ಸಿನಿಮಾ ಕ್ಷೇತ್ರವನ್ನು ಮೆಟ್ಟಿಲಾಗಿ ಬಳಸಿಕೊಳ್ಳಬಾರದು ಎಂದು ಹೀಗೆ ದೃಢವಾಗಿ ಮತ್ತು ಮುಗ್ಧವಾಗಿ ಹೇಳುತ್ತಾರೆ. ಶಾಸಕ ಎಚ್.ಎಂ. ರೇವಣ್ಣ ಅವರ ಪುತ್ರನಾಗಿರುವುದರಿಂದ, ರಾಜಕೀಯ ಪ್ರವೇಶಿಸಲು ಅನೂಪ್ ಸಿನಿಮಾವನ್ನೇ ದಾರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ‘ಚಂದನವನ’ದ ಜತೆ ಮಾತಾಡಿದ ಅನೂಪ್, ಸಿನಿಮಾ ತಮ್ಮ ಪ್ಯಾಶನ್ ಎಂದು ಸ್ಪಷ್ಟಪಡಿಸಿದರು.

ಆರ್‌. ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ‘ಲಕ್ಷ್ಮಣ’ ಅನೂಪ್ ನಟನೆಯ ಮೊದಲ ಚಿತ್ರ. ‘ನನಗೆ ಒಂಚೂರು ಭಯವಾಗುತ್ತಿದೆ’ ಎನ್ನುವ ಅವರು ಅದಕ್ಕೆ ಕಾರಣಗಳನ್ನೂ ಪಟ್ಟಿ ಮಾಡುತ್ತಾರೆ. ಯಾವುದೇ ನಾಯಕ ಅಥವಾ ನಾಯಕಿಗೆ ಮೊದಲ ಸಿನಿಮಾ ಅಂದರೆ ಒಂದಷ್ಟು ನಿರೀಕ್ಷೆ ಹೆಚ್ಚಿಗೇ ಇರುತ್ತದೆ. ತಮ್ಮ ಪಾತ್ರದ ಸ್ವರೂಪ, ಅಭಿನಯ ಹೇಗಿರುತ್ತದೆ? ಜನರು ಸ್ವೀಕರಿಸುತ್ತಾರೆಯೋ ಇಲ್ಲವೋ ಎಂಬ ಆತಂಕ. ಸಿನಿಮಾ ಯಶಸ್ವಿಯಾದರೆ ಮುಂದಿನ ಹೆಜ್ಜೆಗಳು ಹೇಗಿರಬೇಕು? ಇಂಥ ಸಂದೇಹಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ‘ಅದರ ಜತೆಗೆ, ಒಂದಷ್ಟು ಖುಷಿ ಕೂಡ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ನಾನು ನಟನಾಗಲು ಕಾಯುತ್ತಿದ್ದೆ. ಈಗ ಅದು ಸಾಕಾರಗೊಳ್ಳುತ್ತದೆ’ ಎನ್ನುತ್ತಾರೆ.

ಬಣ್ಣದ ಲೋಕಕ್ಕೆ ಅವರು ದಿಢೀರ್ ಆಗಿ ಬಂದವರಲ್ಲ. ಅದಕ್ಕಾಗಿ ಸಾಕಷ್ಟು ತರಬೇತಿ ಪಡೆದಿದ್ದಾರೆ. ಈ ಮೊದಲು ಅವರು ಎರಡು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಅದಾದ ಬಳಿಕ ಚೆನ್ನೈ ಸಮೀಪದ ಕೂತುಪಟ್ರೆ ಎಂಬಲ್ಲಿ ಆರು ತಿಂಗಳ ಕಾಲ ನೃತ್ಯ, ಸಾಹಸ, ಅಭಿನಯವನ್ನು ಕಲಿತರು. ಅದಾದ ಬಳಿಕವೇ ಸಿನಿಮಾಕ್ಕೆ ಪ್ರವೇಶ. ‘ಸಿನಿಮಾ ಒಂದು ಅದ್ಭುತ ಪ್ರಪಂಚ. ಇಲ್ಲಿಗೆ ಬರುವಾಗ ಎಷ್ಟು ಕಲಿತಿದ್ದರೂ ಕಡಿಮೆಯೇ. ಎಲ್ಲ ಕಲಿತಿರುವೆ ಅನ್ನದೇ ಹೋದರೂ ಒಂದು ಹಂತದತನಕ ತಯಾರಿ ಇರಲೇಬೇಕು ಎಂಬ ಅಭಿಮತ ನನ್ನದು. ಇಲ್ಲಿಗೆ ಬಂದ ಮೇಲೆ ಕಲಿತುಕೊಳ್ಳುವ ಬದಲಿಗೆ ಮೊದಲೇ ತಯಾರಿ ಇದ್ದರೆ ಒಳ್ಳೆಯದು ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ.

ಸಿನಿಮಾಕ್ಕೆ ಬರುವ ಆಸೆ ಅನೂಪ್ ಅವರಲ್ಲಿ ಬಾಲ್ಯದಿಂದಲೂ ಇತ್ತಂತೆ. ಆಗಿನಿಂದಲೂ ಅವರಿಗೆ ಆ್ಯಕ್ಷನ್ ಸಿನಿಮಾಗಳೆಂದರೆ ಪಂಚಪ್ರಾಣ. ಅಂಥ ನೂರಾರು ಸಿನಿಮಾಗಳನ್ನು ಅವರು ನೋಡಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿ ಆ್ಯಕ್ಷನ್ ಧಾರಾಳ ಪ್ರಮಾಣದಲ್ಲಿ ಇರುವುದನ್ನು ಅವರು ಖುಷಿಯಿಂದ ಬಣ್ಣಿಸುತ್ತಾರೆ. ಹಾಗೆಂದು ‘ಲಕ್ಷ್ಮಣ’ ಬರೀ ಹೊಡಿ–ಬಡಿ ಸಿನಿಮಾ ಅಲ್ಲ ಎಂದು ಸ್ಪಷ್ಟಪಡಿಸುವ ಅನೂಪ್, ಆ್ಯಕ್ಷನ್ ಜತೆಗೆ ಮನರಂಜನೆಗಾಗಿ ಬೇಕಾಗುವ ಪ್ರೇಮಕಥೆ, ಸೆಂಟಿಮೆಂಟ್, ಕಾಮಿಡಿಯಂಥ ಕಮರ್ಷಿಯಲ್ ಸೂತ್ರಗಳೂ ಬೆರೆತಿವೆ ಎನ್ನುತ್ತಾರೆ.

ನಿರ್ದೇಶಕ ಆರ್. ಚಂದ್ರು ಹಾಗೂ ಎಚ್.ಎಂ. ರೇವಣ್ಣ ಹಳೆಯ ಸ್ನೇಹಿತರು. ಕಥೆಯೊಂದನ್ನು ಸಿದ್ಧಪಡಿಸಿ, ಅದಕ್ಕೆ ಅನೂಪ್ ನಾಯಕನಾದರೆ ಉತ್ತಮ ಎಂದು ರೇವಣ್ಣ ಅವರ ಬಳಿ ಚಂದ್ರು ಹೇಳಿದರಂತೆ. ಅನೂಪ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು. ‘ಅವರೊಬ್ಬ ಪ್ರತಿಭಾವಂತ ನಿರ್ದೇಶಕ. ಕನ್ನಡ–ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅವರು ಈ ಚಿತ್ರಕ್ಕೆ ನಾನೇ ನಾಯಕನಾಗಬೇಕು ಎಂದಾಗ ಬೇರೇನು ಮಾತಾಡಲು ಸಾಧ್ಯ? ನನ್ನನ್ನು ತೆರೆಯ ಮೇಲೆ ಹೇಗೆ ತೋರಿಸಬೇಕು ಅಂತ ಅನಿಸುತ್ತದೆಯೋ ಅದನ್ನು ಮಾಡಿದ್ದಾರೆ. ಅಭಿನಯಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು ಎಂಬುದನ್ನಷ್ಟೇ ಅವರಿಂದ ಕೇಳಿಕೊಳ್ಳುತ್ತಿದ್ದೆ. ಅಷ್ಟನ್ನು ಬಿಟ್ಟರೆ ಬೇರೇನೂ ಮಧ್ಯ ಪ್ರವೇಶಿಸಿಲ್ಲ’ ಎಂದು ಅನೂಪ್ ನೆನಪಿಸಿಕೊಳ್ಳುತ್ತಾರೆ.

‘ಲಕ್ಷ್ಮಣ’ದ ತಾಂತ್ರಿಕ ಕೆಲಸಗಳು ನಡೆಯುತ್ತಿರುವ ಮಧ್ಯೆಯೇ ಮತ್ತೊಂದು ಸಿನಿಮಾಕ್ಕೆ ಅವಕಾಶ ಹುಡುಕಿಕೊಂಡು ಬಂದಿರುವುದು ಅನೂಪ್ ಅವರಿಗೆ ‘ಡಬಲ್ ಬೋನಸ್’ನ ಪುಳಕ ಮೂಡಿಸಿದೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ‘ಪಂಟ’ ಚಿತ್ರದಲ್ಲಿ ಅನೂಪ್ ನಾಯಕ ನಟ. ‘ಇದರ ಕ್ರೆಡಿಟ್ ಚಂದ್ರು ಅವರಿಗೇ ಸೇರುತ್ತದೆ. ಲಕ್ಷ್ಮಣ ಚಿತ್ರಕ್ಕೆ ಸಿಕ್ಕ ಪ್ರಚಾರದಿಂದಲೇ ಈ ಅವಕಾಶ ಪಡೆಯುವಂತಾಗಿದೆ. ಎಸ್. ನಾರಾಯಣ್ ಅವರಂಥ ನಿರ್ದೇಶಕರ ಸಿನಿಮಾದಲ್ಲಿ ನಟಿಸುವುದಕ್ಕಿಂತ ಬೇರೆ ಅದೃಷ್ಟ ಇನ್ನೇನಿದೆ’ ಎಂಬ ಪ್ರಶ್ನೆ ಅವರದು.

ಮಾಜಿ ಸಚಿವರ ಮಗನಾಗಿರುವುದರಿಂದ ರಾಜಕೀಯ ಸೇರಲು ಅನೂಪ್ ಚಿತ್ರರಂಗವನ್ನು ಮೆಟ್ಟಿಲಾಗಿ ಬಳಸಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಆದರೆ ಅವೆಲ್ಲವನ್ನೂ ಅವರು ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ‘ಹತ್ತಾರು ವರ್ಷಗಳಿಂದಲೂ ನನ್ನ ತಂದೆ ರಾಜಕೀಯದಲ್ಲಿ ಇದ್ದಾರೆ. ಅವರ ಮಗನಾಗಿ ನನಗೆ ಆ ಕ್ಷೇತ್ರಕ್ಕೆ ನೇರವಾಗಿ ಹೋಗಲು ಅಂಥ ಕಷ್ಟವೇನೂ ಆಗುವುದಿಲ್ಲ. ಆದರೆ ಅದಕ್ಕಾಗಿ ಸಿನಿಮಾ ಕ್ಷೇತ್ರವನ್ನು ಬಳಸಿಕೊಳ್ಳುವುದು ಖಂಡಿತ ತಪ್ಪು. ಸಿನಿಮಾ ಒಂದು ಕಲೆ. ಅದಕ್ಕೆ ಅದರದೇ ಆದ ಪಾವಿತ್ರ್ಯ ಇದೆ. ನಾನು ಅದನ್ನು ಗೌರವಿಸುತ್ತೇನೆ’ ಎಂದು ಸ್ಪಷ್ಟಮಾತುಗಳಲ್ಲಿ ಅನೂಪ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT