ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೀಲಾ’ ವಿಲಾಸ!

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲೀಗ ‘ಹಾರರ್‌’ ಸಮಯ. ಸಿನಿಮಾಗಳ ಸೋಲು, ನಿರ್ಮಾಪಕರು ಕಂಗಾಲು– ಅರ್ಥಾತ್‌, ಕನ್ನಡ ಚಿತ್ರರಂಗದ ಇಂದಿನ ದುಸ್ಥಿತಿಯ ಪ್ರತೀಕವಾದ ‘ಹಾರರ್‌’ ಇದಲ್ಲ.

ಇದು ಸಿನಿಮಾ ಕಥೆಗಳ ವಸ್ತುವಿನ ಕುರಿತಾದುದು. ಪ್ರೇಕ್ಷಕನನ್ನು ಕುರ್ಚಿಯ ಅಂಚಿಗೆ ತಂದು ನಿಲ್ಲಿಸುವ ಭೂತಚೇಷ್ಟೆಯ ಕಥನಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿವೆ ಅಥವಾ ಹಾಗೆಂದು ಗಾಂಧಿನಗರ ನಂಬಿದೆ. ಈ ನಂಬಿಕೆಗೆ ಅನುಗುಣವಾಗಿ ಹಾರರ್‌ – ಥ್ರಿಲ್ಲರ್‌ ಹಣೆಪಟ್ಟಿಯ ಹೆಚ್ಚು ಚಿತ್ರಗಳು ರೂಪುಗೊಳ್ಳುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಲೀಲಾ’.

‘ಲೀಲಾ’ ಬಹುತೇಕ ಹೊಸಬರೇ ಸೇರಿ ನಿರ್ಮಿಸುತ್ತಿರುವ ಸಿನಿಮಾ. ಕಳೆದ ವಾರ ಮುಹೂರ್ತ ನಡೆಸಿದ ‘ಲೀಲಾ’ ಬಳಗ ಈಗ ಚಿತ್ರೀಕರಣದ ಹುಮ್ಮಸ್ಸಿನಲ್ಲಿದೆ. ರೋಹಿತ್‌ ಹಾಗೂ ಅಲ್ಮಾಸ್‌ ‘ಲೀಲಾ’ದ ಜೋಡಿಹಕ್ಕಿಗಳು. ಎಲ್‌.ಎಂ. ಗೌಡ ಚಿತ್ರದ ನಿರ್ದೇಶಕರು. ಈ ಮೊದಲು ‘ಮಂಜಿ ಮದುವೆ ಕರಿಯನ ಜೊತೆ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಗೌಡ ಅವರಿಗಿದು ನಿರ್ದೇಶಕರಾಗಿ ಎರಡನೇ ಸಾಹಸ.

‘ಲೀಲಾ’ ಮಗುವೊಂದು ದುಷ್ಟವ್ಯಕ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯ ಸಿನಿಮಾ. ತನ್ನ ಕುಟುಂಬವನ್ನು ನಾಶ ಮಾಡಿದ ಕೊಲೆಗಾರನ ಮೇಲೆ ಮಗು ಯಾವ ರೀತಿ ಸೇಡು ತೀರಿಸಿಕೊಳ್ಳುತ್ತದೆ ಎನ್ನುವುದು ಕಥೆಯ ವಸ್ತು. ಪ್ರೇತಾತ್ಮದ ಸೇಡಿನ ವಿಲಾಸದ ಜೊತೆಗೆ ಪ್ರೇಮಕಥೆಯ ಒಂದು ಲಹರಿಯೂ ಚಿತ್ರದಲ್ಲಿ ಇದೆಯಂತೆ. ಪ್ರೇಮಕಥೆಗೂ, ಪ್ರೇತಾತ್ಮದ ಆಟಕ್ಕೂ ಇರುವ ಸಂಬಂಧ ಏನೆಂಬುದನ್ನು ಚಿತ್ರದಲ್ಲಿ ನೋಡಿಯೇ ತಿಳಿಯಬೇಕಂತೆ. ‘ಪ್ರೇಕ್ಷಕರಿಗೆ ಭರಪೂರ ರಂಜನೆ ಖಚಿತ’ ಎನ್ನುವುದು ನಿರ್ದೇಶಕರು ನೀಡುವ ಆಶ್ವಾಸನೆ.

ಕೋಲಾರ, ಚಿಕ್ಕಮಗಳೂರು, ಮಡಿಕೇರಿಗಳಲ್ಲಿ ‘ಲೀಲಾ’ ಶೂಟಿಂಗ್‌ ನಡೆಸಲು ಚಿತ್ರತಂಡ ಉದ್ದೇಶಿಸಿದೆ. ಸರ್ದಾರ್ ಷಪಿ ಮತ್ತು ಬೀರಪ್ಪ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀ ಹರ್ಷ ಸಂಗೀತ, ರಾಜು ಶಿರಾ ಛಾಯಾಗ್ರಹಣ, ಇದೆ. ಆಶಿಕ್, ವೆಂಕಟರಮಣಪ್ಪ, ಶೋಭರಾಜ್, ಶಂಕರ್‌ಭಟ್, ಆಶಿನಿ, ಸಂತೋಷ್, ನಾಗೇಂದ್ರ, ತೆಲುಗು ಪ್ರಭಾಕರ್, ಆಲಿಷಾ ಬೀರಪ್ಪ ತಾರಾಬಳಗದಲ್ಲಿರುವ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT